More

    ಸಹಜ ಸ್ಥಿತಿಗೆ ಬಾರದ ಬಸ್ ಉದ್ಯಮ

    ಮಂಗಳೂರು/ಉಡುಪಿ: ಕೋವಿಡ್- 19 ಅನ್‌ಲಾಕ್ ಆರಂಭಗೊಂಡು ಅರ್ಧ ವರ್ಷವೇ ಪೂರ್ಣಗೊಂಡರೂ, ಸಾರ್ವಜನಿಕ ಸಾರಿಗೆ ಬಸ್ ಉದ್ಯಮ ಸಹಜ ಸ್ಥಿತಿಗೆ ಮರಳಿಲ್ಲ. ಶೀಘ್ರ ಚೇತರಿಕೆಯ ಲಕ್ಷಣವೂ ಗೋಚರಿಸುತ್ತಿಲ್ಲ. ಇತ್ತೀಚೆಗೆ ಓಡಾಡುವ ಬಸ್‌ಗಳ ಸಂಖ್ಯೆ ಅಧಿಕವಾಗಿದ್ದರೂ ಮಾಲೀಕರು ಉದ್ಯಮ ನಿರ್ವಹಣೆ ವೆಚ್ಚವನ್ನು ಭರಿಸಲು ಪೇಚಾಡುತ್ತಿದ್ದಾರೆ.

    ಸಭೆ, ಸಮಾರಂಭ, ಕೌಟುಂಬಿಕ ಕಾರ್ಯಕ್ರಮಗಳು, ಜಾತ್ರೆ, ಉತ್ಸವಗಳು ಪೂರ್ಣಪ್ರಮಾಣದಲ್ಲಿ ನಡೆಯದಿರುವುದು, ಶಿಕ್ಷಣ ಸಂಸ್ಥೆಗಳು ತೆರೆಯದಿರುವುದು, ಕರೊನಾ ಎರಡನೇ ಅಲೆ ಬಗ್ಗೆ ಹಬ್ಬುತ್ತಿರುವ ಸುದ್ದಿ, ದೂರವಾಗದ ಕರೊನಾ ಆತಂಕ, ಸ್ವಂತ ವಾಹನಗಳ ಬಳಕೆ ಸಾರ್ವಜನಿಕರು ಬಸ್ ಬಳಕೆ ಕಡಿಮೆ ಮಾಡಲು ಮುಖ್ಯ ಕಾರಣ ಎಂದು ವಿಶ್ಲೇಷಿಸಲಾಗಿದೆ.

    ಕೆಲವು ಬಸ್‌ಗಳು ರಸ್ತೆಗೆ ಇಳಿದಿಲ್ಲ. ಇಳಿದಿರುವ ಕೆಲ ಬಸ್‌ಗಳು ಟ್ರಿಪ್ ಕಡಿತಗೊಳಿಸಿವೆ. ಅಧಿಕೃತ ಮೂಲಗಳ ಪ್ರಕಾರ ಖಾಸಗಿ ಎಕ್ಸ್‌ಪ್ರೆಸ್ ಮತ್ತು ಕೆಎಸ್ಸಾರ್ಟಿಸಿ ತಲಾ ಶೇ.70 ಬಸ್‌ಗಳಷ್ಟೇ ರಸ್ತೆಗೆ ಇಳಿದಿವೆ. ಮಂಗಳೂರಿನಲ್ಲಿ ಶೇ.60ರಷ್ಟು ಖಾಸಗಿ ಸಿಟಿ ಬಸ್‌ಗಳು ಸಂಚರಿಸುತ್ತಿವೆ. ಉದ್ಯೋಗಕ್ಕೆ ತೆರಳುವ ಮತ್ತು ಮರಳುವ ಬೆಳಗ್ಗೆ ಮತ್ತು ಸಾಯಂಕಾಲ ಮಾತ್ರ ಹೆಚ್ಚಿನ ಪ್ರಯಾಣಿಕರು ಕಾಣಿಸಿಕೊಳ್ಳುತ್ತಿದ್ದರೂ, ಉಳಿದ ಸಮಯ ಬಹುಪಾಲು ಬಸ್‌ಗಳು ಖಾಲಿ ಓಡುತ್ತಿವೆ.

    ಉಡುಪಿಯಲ್ಲಿ ಸಿಟಿ ಮತ್ತು ಸರ್ವೀಸ್ ಬಸ್‌ಗಳ ಪೈಕಿ ಶೇ.60ರಿಂದ 70 ಮಾತ್ರ ಸಂಚರಿಸುತ್ತಿವೆ. ಹೊರ ಜಿಲ್ಲೆಗಳಿಗೂ ಪೂರ್ಣಪ್ರಮಾಣದಲ್ಲಿ ಬಸ್‌ಗಳ ಓಡಾಟ ಆರಂಭಗೊಂಡಿಲ್ಲ. ನಿರೀಕ್ಷಿತ ಮಟ್ಟದಲ್ಲಿ ಕಲೆಕ್ಷನ್ ಇಲ್ಲದೆ ಸಮಸ್ಯೆಯಾಗಿದೆ. ಬಸ್‌ಗಳ ಆದಾಯ ಶೇ.50ರಿಂದ 60ರಷ್ಟು ಮಾತ್ರ ಇದೆ. ಬೆಳಗ್ಗೆ ಮತ್ತು ಸಾಯಂಕಾಲ ಉತ್ತಮ ಸ್ಪಂದನೆ ಇದ್ದರೂ, ಉಳಿದ ಅವಧಿಯಲ್ಲಿ ಖಾಲಿ ಬಸ್‌ಗಳು ಓಡುತ್ತಿವೆ ಎಂದು ಉಡುಪಿ ಬಸ್ ಮಾಲೀಕರ ಸಂಘದ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಪ್ರತಿಕ್ರಿಯಿಸಿದ್ದಾರೆ.
    ಕೆಎಸ್ಸಾರ್ಟಿಸಿ ಬಸ್ ಸೇವೆ ನಗರ ಪ್ರದೇಶದಲ್ಲಿ ಶೇ.30 ಹಾಗೂ ಗ್ರಾಮೀಣ ಪ್ರದೇಶದಲ್ಲಿ ಶೇ.20 ಬಾಕಿ ಇದೆ. ಎಸಿ ಬಸ್‌ಗಳನ್ನು ಬಳಸುತ್ತಿರುವ ಪ್ರಯಾಣಿಕರ ಸಂಖ್ಯೆ ಕಡಿಮೆಯಾಗಿದೆ. ಸಹಜ ಪರಿಸ್ಥಿತಿಗೆ ಮರಳಲು ಈ ವಿಭಾಗ ಸ್ವಲ್ಪ ಹೆಚ್ಚು ಸಮಯ ತೆಗೆದುಕೊಳ್ಳಬಹುದು ಎಂದು ಕೆಎಸ್ಸಾರ್ಟಿಸಿ (ಮಂಗಳೂರು) ವಿಭಾಗೀಯ ನಿಯಂತ್ರಣಾಧಿಕಾರಿ ಎಚ್.ಎಸ್.ಅರುಣ್ ತಿಳಿಸಿದ್ದಾರೆ.

    ಕೋವಿಡ್ ಬಗ್ಗೆ ಜನರ ಭಯ ಇನ್ನೂ ದೂರವಾಗಿಲ್ಲ. ಸಾರ್ವಜನಿಕ ಸಾರಿಗೆಯನ್ನು ಬಳಸಲು ಜನರು ಇನ್ನೂ ಹಿಂಜರಿಯುತ್ತಿದ್ದಾರೆ. ಆದರೆ ರಾಜ್ಯದ ಇತರ ಪ್ರದೇಶಗಳಿಗೆ ಹೋಲಿಸಿದರೆ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳ ಪರಿಸ್ಥಿತಿ ಸುಧಾರಿಸಿದೆ. ಹೆಚ್ಚಿನ ಬಸ್‌ಗಳು ಓಡುತ್ತಿವೆಯಾದರೂ ಯಾವ ಮಾಲೀಕರಿಗೂ ಆದಾಯವಿಲ್ಲ. ತೆರಿಗೆ ಕಟ್ಟಲು ಕಷ್ಟಪಡುವ ಪರಿಸ್ಥಿತಿಯಲ್ಲಿದ್ದಾರೆ.
    – ಕೆ.ರಾಜವರ್ಮ ಬಲ್ಲಾಳ್, ಅಧ್ಯಕ್ಷ, ಕರ್ನಾಟಕ ಬಸ್ ಮಾಲೀಕರ ಒಕ್ಕೂಟ

    ಬಸ್‌ಗಳಿಗೆ ಪ್ರಯಾಣಿಕರ ಸಂಖ್ಯೆ ಕಡಿಮೆ ಇದೆ. ನಿರೀಕ್ಷಿತ ಮಟ್ಟದಲ್ಲಿ ಕಲೆಕ್ಷನ್ ಇಲ್ಲದಿದ್ದರೂ, ಬಸ್ಸುಗಳು ಓಡಾಟ ನಡೆಸುತ್ತಿವೆ. ಬಸ್ಸು ಮಾಲೀಕರು, ಕಾರ್ಮಿಕ ವರ್ಗದ ಸಂಕಷ್ಟಕ್ಕೆ ಸ್ಪಂದಿಸಲು ಮುಖ್ಯಮಂತ್ರಿ ಸಕಾರಾತ್ಮಕವಾಗಿ ಸ್ಪಂದಿಸಿದ್ದರೂ, ಒಂದು ಬೇಡಿಕೆಯೂ ಈವರೆಗೆ ಈಡೇರಿಕೆಯಾಗಿಲ್ಲ.
    – ಸದಾನಂದ ಛಾತ್ರ, ರಾಜ್ಯ ಬಸ್ ಮಾಲೀಕರ ಸಂಘದ ಪ್ರಧಾನ ಕಾರ್ಯದರ್ಶಿ

    ಸಿಟಿ ಬಸ್ ಮಾಲೀಕರ ಪೈಕಿ ಹೆಚ್ಚಿನವರು ಒಂದೇ ಬಸ್‌ನ ಮಾಲೀಕರು. ಆದ್ದರಿಂದ ನಷ್ಟವಾಗುತ್ತಿದ್ದರೂ ಬಸ್ ಓಡಿಸುತ್ತಿದ್ದಾರೆ. ಓಡಿಸದಿದ್ದರೆ ನಷ್ಟದ ಪ್ರಮಾಣ ಇನ್ನಷ್ಟು ಹೆಚ್ಚುತ್ತದೆ. ಉದ್ಯಮ ಬೇಗನೆ ಸಹಜ ಸ್ಥಿತಿಗೆ ಮರಳುವ ಲಕ್ಷಣ ಕಾಣುತ್ತಿಲ್ಲ.
    – ದಿಲ್‌ರಾಜ್ ಆಳ್ವ, ಅಧ್ಯಕ್ಷ, ಸಿಟಿ ಬಸ್ ಮಾಲೀಕರ ಸಂಘ, ಮಂಗಳೂರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts