More

    ‘ಕೈ’ ಜಾರಲಿದೆಯೇ ಕಾಪು ತಾಪಂ ?

    ಉಡುಪಿ: ರಾಜ್ಯ ಸರ್ಕಾರ 2019 ಅಕ್ಟೋಬರ್‌ನಲ್ಲಿ ಹೊಸದಾಗಿ ತಾಲೂಕು ಪಂಚಾಯಿತಿಗಳನ್ನು ರಚಿಸಿ ಅಧಿಸೂಚನೆ ಹೊರಡಿಸಿದ್ದು, ಜೂನ್ 17ರಂದು ಅಧ್ಯಕ್ಷ- ಉಪಾಧ್ಯಕ್ಷ ಹುದ್ದೆಗೆ ಮೀಸಲಾತಿಯನ್ನೂ ಪ್ರಕಟಿಸಿದೆ. ಈ ಹಿನ್ನೆಲೆಯಲ್ಲಿ ಉಡುಪಿ ತಾಪಂ ಮೂರು ತಾಪಂಗಳಾಗಿ ವಿಂಗಡಣೆಯಾಗಿದ್ದು, ಬ್ರಹ್ಮಾವರ ಮತ್ತು ಕಾಪು ತಾಪಂಗಳು ಅಸ್ತಿತ್ವಕ್ಕೆ ಬಂದಿವೆ. ಉಡುಪಿ ಮತ್ತು ಬ್ರಹ್ಮಾವರ ತಾಪಂನಲ್ಲಿ ಬಿಜೆಪಿ, ಕಾಪುವಿನಲ್ಲಿ ಕಾಂಗ್ರೆಸ್ ಬಹುಮತ ಪಡೆದಿದೆ. ಆದರೆ ಮೀಸಲಾತಿಯಿಂದಾಗಿ ಕಾಪುವಿನಲ್ಲಿಯೂ ಅಧ್ಯಕ್ಷ ಸ್ಥಾನ ಬಿಜೆಪಿ ಪಾಲಾಗುವ ಸಾಧ್ಯತೆ ದಟ್ಟವಾಗಿದೆ.

    ಅಧಿಸೂಚನೆ ಪ್ರಕಾರ ಬ್ರಹ್ಮಾವರ ತಾಪಂ ಅಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ (ಮಹಿಳೆ), ಉಪಾಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ವರ್ಗಕ್ಕೆ ಮೀಸಲಾಗಿದೆ. ಕಾಪು ಅಧ್ಯಕ್ಷ ಸ್ಥಾನಕ್ಕೆ ಹಿಂದುಳಿದ ವರ್ಗ ಪ್ರವರ್ಗ-ಬಿ (ಮಹಿಳೆ) ಹಾಗೂ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮೀಸಲಾತಿ ಕಲ್ಪಿಸಲಾಗಿದೆ. ಅವಿಭಜಿತ ಉಡುಪಿ ತಾಪಂನಲ್ಲಿ 41 ಸದಸ್ಯರಿದ್ದು, ಪ್ರಸ್ತುತ 13ಕ್ಕೆ ಇಳಿಕೆಯಾಗಿದೆ. ಇದರಲ್ಲಿ 4 ಮಂದಿ ಕಾಂಗ್ರೆಸ್ ಹಾಗೂ 9 ಮಂದಿ ಬಿಜೆಪಿ ಸದಸ್ಯರಿದ್ದಾರೆ. ಬ್ರಹ್ಮಾವರ ತಾಪಂ 16ರಲ್ಲಿ 13 ಮಂದಿ ಬಿಜೆಪಿ ಮತ್ತು 3 ಮಂದಿ ಕಾಂಗ್ರೆಸ್ ಸದಸ್ಯರಿದ್ದಾರೆ. ಕಾಪುವಿನಲ್ಲಿ 7 ಮಂದಿ ಕಾಂಗ್ರೆಸ್, 5 ಮಂದಿ ಬಿಜೆಪಿ ಸದಸ್ಯರಿದ್ದಾರೆ. ಕಾಂಗ್ರೆಸ್ ಬಹುಮತ ಪಡೆದಿದ್ದರೂ ಅಧ್ಯಕ್ಷ ಸ್ಥಾನ ಹಿಂದುಳಿದ ವರ್ಗ ಪ್ರವರ್ಗ-ಬಿ(ಮಹಿಳೆ) ಮೀಸಲಾಗಿರುವ ಕಾರಣ ಕಾಂಗ್ರೆಸ್‌ನಲ್ಲಿ ಈ ವರ್ಗಕ್ಕೆ ಸೇರಿದ ಸದಸ್ಯರಿಲ್ಲದೆ ಸಮಸ್ಯೆ ಎದುರಾಗಿದೆ. ಉಪಾಧ್ಯಕ್ಷ ಸ್ಥಾನ ಸುಲಭದಲ್ಲಿ ಕೈವಶವಾಗಲಿದೆ. ಉಡುಪಿ ತಾಪಂನಲ್ಲಿ ಮೀಸಲಾತಿ ಯಥಾಸ್ಥಿತಿ ಮುಂದುವರಿಯಲಿದ್ದು, ಸದ್ಯ ಹಂಗಾಮಿ ಅಧ್ಯಕ್ಷರಾಗಿ ಶರತ್ ಬೈಲಕೆರೆ ಆಯ್ಕೆಯಾಗಿದ್ದಾರೆ.

    10 ತಿಂಗಳಲ್ಲಿ ಅಧಿಕಾರ ಹೋಯ್ತು: ಉಡುಪಿ ತಾ.ಪಂ. ಮೊದಲ ಅವಧಿಗೆ ನಳಿನ್ ಪ್ರದೀಪ್ ರಾವ್ ಅಧ್ಯಕ್ಷೆಯಾಗಿದ್ದು, ನಂತರ ಅಧ್ಯಕ್ಷೆಯಾಗಿ ನೀತಾ ಗುರುರಾಜ್ ಆಗಸ್ಟ್ 2019ರಲ್ಲಿ ಅಧಿಕಾರ ವಹಿಸಿಕೊಂಡಿದ್ದರು. ಆದರೆ ಅವರ ಕ್ಷೇತ್ರ ಕಾಪು ತಾಪಂ ವ್ಯಾಪ್ತಿಗೆ ಒಳಪಟ್ಟ ಕಾರಣ ನಿಯಮದಂತೆ 10 ತಿಂಗಳಲ್ಲಿ ಅಧ್ಯಕ್ಷ ಸ್ಥಾನವನ್ನು ಕಳೆದುಕೊಳ್ಳುವಂತಾಯಿತು. ಮುಂದಿನ ಮೇ ತಿಂಗಳವರೆಗೆ ಅವರ ಅಧಿಕಾ ಅವಧಿ ಇತ್ತು. ಹೊಸ ತಾಪಂಗಳಲ್ಲಿ ಮೀಸಲಾತಿಯಂತೆ ಹೊಸ ಅಧ್ಯಕ್ಷರ ಆಯ್ಕೆ ನಡೆಯಲಿದೆ.

    ದಿನಾಂಕ ನಿಗದಿ ಬಾಕಿ: ಸರ್ಕಾರ ಹೊಸ ತಾ.ಪಂ.ಗಳಿಗೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ನಿಗದಿ ಮಾಡಿದೆ. ಆಯ್ಕೆ ಪ್ರಕ್ರಿಯೆ ದಿನಾಂಕ ಇನ್ನಷ್ಟೇ ಘೋಷಣೆಯಾಗಬೇಕಿದೆ. ಉಡುಪಿ ತಾಪಂಗೆ ಹಳೇ ಮೀಸಲಾತಿ ಮುಂದುವರಿಯುವ ಸಾಧ್ಯತೆ ಇದೆ.
    ಮೋಹನ್‌ರಾಜ್ ಕಾರ್ಯನಿರ್ವಹಣಾಧಿಕಾರಿ, ಉಡುಪಿ ತಾ.ಪಂ.

    ಹೊಸ ತಾಪಂಗಳ ಅವಧಿ ಮೇ 2021ಕ್ಕೆ ಮುಕ್ತಾಯವಾಗಲಿದೆ. 3 ಸಾಮಾನ್ಯ ಸಭೆ ನಡೆಸಬಹುದು. ಸದಸ್ಯರಿಗೆ 10 ತಿಂಗಳ ಅಲ್ಪಕಾಲಾವಕಾಶವನ್ನು ತಾಪಂ ವ್ಯವಸ್ಥಿತವಾಗಿ ರೂಪಿಸಲು ಬಳಸಿಕೊಳ್ಳಬಹುದು. ಬ್ರಹ್ಮಾವರ ತಾಪಂಗೆ ಹಳೇ ಸರ್ಕಾರಿ ಆಸ್ಪತ್ರೆ ಕಟ್ಟಡ ಹಾಗೂ ಕಾಪು ತಾಪಂಗೆ ಉಳಿಯಾರು ಗೋಳಿ ಗ್ರಾಪಂ ಕಟ್ಟಡ ಗುರುತಿಸಲಾಗಿದೆ.
    ನಳಿನಿ ಪ್ರದೀಪ್ ರಾವ್ ಮಾಜಿ ಅಧ್ಯಕ್ಷೆ, ಉಡುಪಿ ತಾಪಂ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts