More

    ಸಿಎಂ ಯಡಿಯೂರಪ್ಪ ವಿರುದ್ಧ ಯಾರೂ ದೂರು ಕೊಟ್ಟಿಲ್ಲ: ಅರುಣ್​ ಸಿಂಗ್​ ಸ್ಪಷ್ಟೋಕ್ತಿ

    | ರಾಘವ ಶರ್ಮ ನಿಡ್ಲೆ ನವದೆಹಲಿ

    ‘ಬಿಎಸ್​ವೈ ಸರ್ಕಾರದ ಕಾರ್ಯಸಾಧನೆ ಬಗ್ಗೆ ನನಗಷ್ಟೇ ಅಲ್ಲ, ರಾಜ್ಯದ ಜನರಿಗೂ ತೃಪ್ತಿಯಿದೆ. ಸಿಎಂ ವಿರುದ್ಧ ನನಗೆ ಯಾರೂ ದೂರುಕೊಟ್ಟಿಲ್ಲ. ದೆಹಲಿಯಲ್ಲಿ ಸಚಿವರೊಂದಿಗೆ ನಡೆದಿದ್ದು ಸೌಹಾರ್ದ ಮಾತುಕತೆಯೇ ಹೊರತು ನಾಯಕತ್ವ ಬದಲಾವಣೆ ಕುರಿತಲ್ಲ’- ಇದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಹಾಗೂ ಕರ್ನಾಟಕ ಬಿಜೆಪಿ ಉಸ್ತುವಾರಿ ಹುದ್ದೆಗೆ ನೇಮಕಗೊಂಡಿರುವ ಅರುಣ್ ಸಿಂಗ್ ಸ್ಪಷ್ಟೋಕ್ತಿ. ಉತ್ತರ ಪ್ರದೇಶದ ಮಿರ್ಜಾಪುರ ಮೂಲದ ಸಿಂಗ್ ಈ ಹಿಂದೆ ಒಡಿಶಾ ಉಸ್ತುವಾರಿಯಾಗಿ ಪಕ್ಷ ಸಂಘಟನೆ ವೃದ್ಧಿಸುವಲ್ಲೂ ಮಹತ್ವದ ಪಾತ್ರವಹಿಸಿದ್ದರು. ಆರ್​ಎಸ್​ಎಸ್ ಹಿನ್ನೆಲೆಯ ಅವರು ಎರಡನೇ ಅವಧಿಗೆ ರಾಜ್ಯಸಭೆ ಸದಸ್ಯರಾಗಿದ್ದು, 25 ವರ್ಷಗಳ ಕಾಲ ಚಾರ್ಟರ್ಡ್ ಅಕೌಂಟೆಂಟ್ ಆಗಿಯೂ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಶುಕ್ರವಾರದಿಂದ 3 ದಿನ ರಾಜ್ಯ ಪ್ರವಾಸ ಕೈಗೊಳ್ಳಲಿರುವ ಅವರು ಕರ್ನಾಟಕ ರಾಜಕಾರಣ ವಿಚಾರವಾಗಿ ವಿಜಯವಾಣಿ ಜತೆ ಅನೇಕ ವಿಚಾರ ಗಳನ್ನು ಹಂಚಿಕೊಂಡಿದ್ದಾರೆ. ಸಂದರ್ಶನದ ಪೂರ್ಣ ವಿವರ ಇಲ್ಲಿದೆ.

    ಕೆಲ ದಿನಗಳ ಹಿಂದೆ ಬಿಜೆಪಿ ಮುಖಂಡರು ಮತ್ತು ಡಿಸಿಎಂ ಲಕ್ಷ್ಮಣ ಸವದಿ ಸೇರಿ ಕೆಲ ಸಚಿವರು ನಿಮ್ಮನ್ನು ದೆಹಲಿಯಲ್ಲಿ ಭೇಟಿ ಮಾಡಿದ್ದರು. ಸಿಎಂ ವಿರುದ್ಧ ನಿಮಗೆ ದೂರು ನೀಡಿ, ನಾಯಕತ್ವ ಬದಲಾವ ಣೆಗೆ ಒತ್ತಾಯಿಸಿದ್ದರು ಎಂಬ ವದಂತಿಗಳು ಹರಿದಾಡುತ್ತಿವೆ. ಇದು ನಿಜವೇ?

    – ಸಿಎಂ ಯಡಿಯೂರಪ್ಪ ವಿರುದ್ಧ ನನಗೆ ಯಾರೂ ದೂರು ಕೊಟ್ಟಿಲ್ಲ. ದೆಹಲಿಯಲ್ಲಿ ಸಿ.ಟಿ. ರವಿಯವರ ಕಚೇರಿ ಪೂಜೆಗೆ ಬಂದಿದ್ದ ಕೆಲವರು ನನ್ನನ್ನು ಭೇಟಿ ಮಾಡಿದ್ದು ನಿಜ. ಆದರೆ ಅದೊಂದು ಸೌಹಾರ್ದ ಮಾತುಕತೆಯಾಗಿತ್ತಷ್ಟೇ. ಅಲ್ಲಿ ನಾಯಕತ್ವ ಬದಲಾವಣೆ ಅಥವಾ ಮತ್ತೊಬ್ಬರ ವಿರುದ್ಧ ದೂರು ಕೊಡುವ/ಸ್ವೀಕರಿಸುವ ಪ್ರಕ್ರಿಯೆ ನಡೆದೇ ಇಲ್ಲ. ಇಂತಹ ವದಂತಿಗಳಿಗೆಲ್ಲ ಕಿವಿಗೊಡಬಾರದು.

    ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದು ಒಂದೂವರೆ ವರ್ಷ ಪೂರ್ಣಗೊಳ್ಳುವ ಹಂತದಲ್ಲಿದೆ. ರಾಜ್ಯ ನಾಯಕತ್ವ ಹಾಗೂ ಆಡಳಿತದ ಬಗ್ಗೆ ನಿಮಗೆ ತೃಪ್ತಿ ಇದೆಯೇ?

    – ನನಗೆ ಮಾತ್ರವಲ್ಲ, ರಾಜ್ಯದ ಜನರಿಗೂ ಸರ್ಕಾರದ ಕಾರ್ಯಸಾಧನೆ ಬಗ್ಗೆ ತೃಪ್ತಿಯಿದೆ ಎಂಬ ಭಾವನೆ ನನ್ನದು. ರಾಜ್ಯದ ಮುಖ್ಯಮಂತ್ರಿಯಾಗಿ ಯಡಿಯೂರಪ್ಪ ಅತ್ಯುತ್ತಮ ಸಾಧನೆ ಮಾಡುತ್ತಿದ್ದಾರೆ ಮತ್ತು ಅವರು ಜನಪ್ರಿಯ ನಾಯಕ ಎನ್ನುವುದರಲ್ಲಿ ಅನುಮಾನವೇ ಇಲ್ಲ. ಸಾಮೂಹಿಕ ನಾಯಕತ್ವದಲ್ಲೂ ನಂಬಿಕೆ ಇಟ್ಟುಕೊಂಡಿರುವ ಪಕ್ಷ ನಮ್ಮದು. ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡುತ್ತಿದ್ದೇವೆ. ಮೇಲಾಗಿ, ಮುಂದಿನ ದಿನಗಳಲ್ಲಿ ನಾನೇ ಖುದ್ದಾಗಿ ರಾಜ್ಯದ ಎಲ್ಲ ಜಿಲ್ಲೆಗಳ ಪ್ರವಾಸ ಕೈಗೊಳ್ಳಲಿದ್ದೇನೆ. ಜನರ ಏಳಿಗೆಗಾಗಿ ಸ್ಥಳೀಯ ಸರ್ಕಾರ ಜಾರಿ ಮಾಡಿರುವ ಯೋಜನೆಗಳನ್ನು ಜನಪ್ರಿಯಗೊಳಿಸುವ ಕೆಲಸವನ್ನು ಪಕ್ಷ ಸಂಘಟನಾತ್ಮಕವಾಗಿ ಮಾಡಲಿದೆ.

    ರಾಜಕೀಯವಾಗಿ  ಕರ್ನಾಟಕ ಬಿಜೆಪಿಗೆ ದಕ್ಷಿಣ ಭಾರತದ ಹೆಬ್ಬಾಗಿಲು. ಪಕ್ಷದ ಹೊಸ ಉಸ್ತುವಾರಿಯಾಗಿ ಸಂಘಟನೆ ಬಲಗೊಳಿಸಲು ನಿಮ್ಮ ಯೋಜನೆಗಳೇನು?

    – ಕರ್ನಾಟಕದಲ್ಲಿ ಬಿಜೆಪಿ ಸಂಘಟನಾತ್ಮಕವಾಗಿ ಬಲಗೊಂಡಿದೆ. ಇದನ್ನು ಮತ್ತಷ್ಟು ಬಲಪಡಿಸಲು ಮೇಲುಹಂತದ ನಾಯಕರಿಂದ ಹಿಡಿದು ಕೆಳಹಂತದವರೆಗಿನ ಕಾರ್ಯಕರ್ತರು ಸೇರಿ ಶ್ರಮಿಸುತ್ತಿದ್ದಾರೆ. ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳ ಪ್ರತಿಯೊಂದು ಯೋಜನೆಯನ್ನು ರಾಜ್ಯದ ಮೂಲೆಮೂಲೆಗೆ ಕಾರ್ಯಕರ್ತರ ಮೂಲಕ ತಲುಪಿಸುವ ಕೆಲಸಕ್ಕೆ ಮತ್ತಷ್ಟು ವೇಗ ನೀಡುವುದು ನನ್ನ ಆದ್ಯತೆ. ಪ್ರಧಾನಿ ನರೇಂದ್ರ ಮೋದಿ ದೇಶದ ಹಿಂದುಳಿದ, ಶೋಷಿತ ವರ್ಗಗಳನ್ನು ಮುಖ್ಯವಾಹಿನಿಗೆ ತರುವ ಸಲುವಾಗಿ ಅನೇಕ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿದ್ದಾರೆ. ಅದೇ ಕಾರಣಕ್ಕಾಗಿ ಜನಮನ ಗೆದ್ದಿದ್ದಾರೆ. ಕೇಂದ್ರ ಸರ್ಕಾರದ ಆಶಯ, ಉದ್ದೇಶ ಈಡೇರಿಸುವ ನಿಟ್ಟಿನಲ್ಲಿ ಪಕ್ಷದ ಕಾರ್ಯಕರ್ತರು ಮತ್ತು ಮುಖಂಡರನ್ನು ಮತ್ತಷ್ಟು ಸಕ್ರಿಯಗೊಳಿಸಲಾಗುವುದು.

    ಕಾಂಗ್ರೆಸ್​ನಲ್ಲಿದ್ದ ಮತ್ತು ಪಕ್ಷೇತರರಾಗಿದ್ದ ಒಟ್ಟು 17 ಶಾಸಕರು ರಾಜೀನಾಮೆ ನೀಡಿ ಬಿಜೆಪಿ ಸೇರಿದ ಪರಿಣಾಮ ನೀವು ರಾಜ್ಯದಲ್ಲಿ ಅಧಿಕಾರಕ್ಕೆ ಬರುವಂತಾಯಿತು. ಅವರಲ್ಲಿ ಕೆಲವರು ಈಗಾಗಲೇ ಮಂತ್ರಿಗಳಾಗಿದ್ದಾರೆ. ಮಂತ್ರಿಸ್ಥಾನ ಸಿಗದವರು ಅಸಮಾಧಾನ ಗೊಂಡಿರುವುದು ನಿಮ್ಮ ಗಮನಕ್ಕೆ ಬಂದಿಲ್ಲವೇ?

    – ಯಾರು ಮಂತ್ರಿ ಸ್ಥಾನ ಕೇಳುತ್ತಿದ್ದಾರೆ, ಯಾರ ನಿರೀಕ್ಷೆ ಏನಿದೆ ಎಂಬ ಬಗ್ಗೆ ನಾನು ಇನ್ನೂ ತಿಳಿದುಕೊಳ್ಳಬೇಕಷ್ಟೇ. ಪ್ರಭಾರಿಯಾಗಿ ಮೊದಲ ಬಾರಿ ಕರ್ನಾಟಕಕ್ಕೆ ಶುಕ್ರವಾರದಂದು ಬರುತ್ತಿದ್ದೇನೆ. ಸಂಬಂಧಪಟ್ಟವರೊಂದಿಗೆ ಮಾತುಕತೆ ನಡೆಸುತ್ತೇನೆ.

    ಅತಿವೃಷ್ಟಿ, ಅನಾವೃಷ್ಟಿ ಕರ್ನಾಟಕಕ್ಕೆ ಶಾಪವಾಗಿಬಿಟ್ಟಿದೆ. ಕೇಂದ್ರದಿಂದ ಸೂಕ್ತ ಅನುದಾನ ಬರುವುದಿಲ್ಲ ಎಂಬ ಅಸಮಾಧಾನ ಹೆಚ್ಚುತ್ತಿದೆ. ಇದನ್ನು ಸರಿಪಡಿಸುವಲ್ಲಿ ನಿಮ್ಮ ಪಾತ್ರವೇನು?

    – ಈ ವಿಚಾರದಲ್ಲಿ ಕರ್ನಾಟಕದ ಮತ್ತು ಮುಖ್ಯವಾಗಿ ಉತ್ತರ ಕರ್ನಾಟಕದ ಜನರಿಗೆ ಅನ್ಯಾಯವಾಗಲು ನಾನು ಬಿಡುವುದಿಲ್ಲ. ಅಗತ್ಯ ಸಂದರ್ಭಗಳಲ್ಲಿ ಕೇಂದ್ರ ಸರ್ಕಾರದ ಪ್ರಮುಖರೊಂದಿಗೆ ಮಾತುಕತೆ ನಡೆಸಿ, ಸೂಕ್ತ ಅನುದಾನ, ಪರಿಹಾರ ತಲುಪಿಸುವಂತೆ ಶ್ರಮಿಸಲಿದ್ದೇನೆ.

    ಪಕ್ಷದ ಕೆಲವು ಶಾಸಕರು, ಮುಖಂಡರ ವಲಯದಲ್ಲಿ ನಾಯಕತ್ವ ಬದಲಾವಣೆ ಬಗ್ಗೆ ಆಂತರಿಕ ಚರ್ಚೆಗಳಾಗುತ್ತಿವೆ. ಅಂದರೆ, ಮುಂದಿನ ವರ್ಷಾರಂಭದ ವೇಳೆ ಹೊಸ ನಾಯಕತ್ವ ಬರಲಿದೆಯೇ?

    – ಇಂತಹ ಚರ್ಚೆಗಳ ಬಗ್ಗೆ ನನಗೆ ಮಾಹಿತಿಯೇ ಇಲ್ಲ. ಯಡಿಯೂರಪ್ಪನವರ ನಾಯಕತ್ವದಲ್ಲಿ ಸರ್ಕಾರವಿದ್ದು, ಒಗ್ಗಟ್ಟಿನಿಂದ ಬಹಳ ಚೆನ್ನಾಗಿ ಕೆಲಸ ಮಾಡುತ್ತಿದ್ದೇವೆ. ಹೀಗಿರುವಾಗ, ನಾಯಕತ್ವ ಬದಲಾವಣೆ ವಿಚಾರ ಏಕೆ ಪ್ರಸ್ತಾಪವಾಗಬೇಕು?

    ವೀರಶೈವ-ಲಿಂಗಾಯತ ಸಮುದಾಯದ ಅಭಿವೃದ್ಧಿಗೆಂದು ಪ್ರತ್ಯೇಕ ನಿಗಮ ಮಾಡಿದ್ದರ ಬಗ್ಗೆ ಅಸಮಾಧಾಗಳೆದ್ದಿವೆಯಲ್ಲ?

    – ನಾನಿನ್ನೂ ರಾಜ್ಯಕ್ಕೆ ಭೇಟಿ ನೀಡದ ಕಾರಣ ಇವೆಲ್ಲದರ ಬಗ್ಗೆ ನನಗೆ ಪೂರ್ಣ ಮಾಹಿತಿ ಇಲ್ಲ. ಶುಕ್ರವಾರದಿಂದ 3 ದಿನಗಳ ಕಾಲ ಕರ್ನಾಟಕದಲ್ಲಿರಲಿದ್ದೇನೆ. ನಂತರವಷ್ಟೇ ಸೂಕ್ತ ಉತ್ತರ ನೀಡಬಲ್ಲೆ.

    ಸಿಎಂ ತಮ್ಮ ಪುತ್ರ, ಪಕ್ಷದ ಉಪಾಧ್ಯಕ್ಷ ವಿಜಯೇಂದ್ರರಿಗೆ ಪ್ರಾಧಾನ್ಯತೆ ನೀಡುತ್ತಿದ್ದಾರೆ ಮತ್ತು ವಿಜಯೇಂದ್ರ ಸರ್ಕಾರದ ಆಡಳಿತದಲ್ಲಿ ಹೆಚ್ಚು ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂಬ ಅಸಮಾಧಾನ ಪಕ್ಷದ ನಡುಮನೆಯಲ್ಲೇ ಕೇಳುತ್ತಿದೆ. ಇದಕ್ಕೇನು ಹೇಳುತ್ತೀರಿ?

    – ನಿಮಗೆ ಈ ಬಗ್ಗೆ ಯಾರು ಹೇಳಿದರೋ ನನಗೆ ಗೊತ್ತಿಲ್ಲ. ನನಗಂತೂ ವಿಜಯೇಂದ್ರರು ಹಸ್ತಕ್ಷೇಪ ಮಾಡುತ್ತಾರೆಂದು ಯಾರೂ ದೂರು ಕೊಟ್ಟಿಲ್ಲ, ಅತೃಪ್ತಿ ಹೊರಹಾಕಿಲ್ಲ. ಹೀಗಿದ್ದಾಗ, ಈ ಪ್ರಶ್ನೆಗೆ ನನ್ನಲ್ಲಿ ಉತ್ತರವಿಲ್ಲ.

    ಸಚಿವ ಸಂಪುಟ ವಿಸ್ತರಿಸುವ ಸಂಬಂಧ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾರನ್ನು ಸಿಎಂ ಯಡಿಯೂರಪ್ಪ ದೆಹಲಿಯಲ್ಲಿ ಭೇಟಿ ಮಾಡಿದ್ದರು. ಮೂರ್ನಾಲ್ಕು ದಿನಗಳಲ್ಲಿ ವಿಸ್ತರಣೆ ಆಗಲಿದೆ ಎಂದು ಸಿಎಂ ಹೇಳಿ 2 ವಾರ ಕಳೆದಿದೆ…ಇದು ಏಕೆ ಹೀಗೆ?

    – ಜೆ.ಪಿ. ನಡ್ಡಾರೊಂದಿಗೆ ಯಡಿಯೂರಪ್ಪನವರು ಏನು ಮಾತನಾಡಿದರೋ ನನಗೆ ಗೊತ್ತಿಲ್ಲ. ನಾನು ಕರ್ನಾಟಕಕ್ಕೆ ಬರುತ್ತಿರುವುದರಿಂದ ಸಿಎಂ ಭೇಟಿ ಮಾಡಿ ಸಮಾಲೋಚಿಸುತ್ತೇನೆ. ಬಳಿಕ ನಮ್ಮ ನಿರ್ಧಾರ ಏನೆಂಬುದನ್ನು ಪ್ರಕಟಿಸುತ್ತೇವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts