More

    ಮಾಂಸ ಪ್ರಿಯರಿಗೆ ಫುಲ್‌ ಶಾಕ್‌! ಶತಮಾನ ಪೂರೈಸಿರುವ ‘ಟುಂಡೆ ಕಬಾಬ್‌’ ಈ ರಂಜಾನ್‌ನಲ್ಲಿ ಕ್ಲೋಸ್‌!

    ಲಖನೌ: ಇನ್ನೇನು ರಂಜಾನ್‌ ಹೊಸ್ತಿಲಲ್ಲಿ ಬಂದು ನಿಂತಿದೆ. ಈಗ ಮಾಂಸ ವ್ಯಾಪಾರ ಬಲು ಜೋರಾಗಿ ನಡೆಯುವ ಕಾಲ. ಆದರೆ ಲಾಕ್‌ಡೌನ್‌ನಿಂದ ಈ ಬಾರಿ ಎಲ್ಲವೂ ಡಲ್‌. ಬಹುತೇಕ ವ್ಯಾಪಾರ, ವಹಿವಾಟುಗಳಿಗೆ ಭಾರಿ ಧಕ್ಕೆ ತಂದಿರುವ ಕರೊನಾ ವೈರಸ್‌ ಮಾಂಸದ ವ್ಯಾಪಾರಿಗಳನ್ನೂ ಸಂಕಷ್ಟದಲ್ಲಿ ಸಿಲುಕಿಸಿದೆ.

    ಕರೊನಾ ವೈರಸ್‌ ಭೀತಿಯಿಂದ ಅಂಗಡಿ ತೆರೆಯಲು ಇಲ್ಲಿಯವರೆಗೆ ಅನುಮತಿ ಇಲ್ಲದಿದ್ದ ಕಾರಣ, ಮಾಂಸ ವ್ಯಾಪಾರ ಸ್ಥಗಿತಗೊಂಡಿದ್ದು ಒಂದೆಡೆಯಾದರೆ, ಈಗ ಸರ್ಕಾರ ಅನುಮತಿ ನೀಡಿದರೂ, ಬಹುತೇಕ ಕೆಲಸಗಾರರು ತಂತಮ್ಮ ಊರುಗಳಿಗೆ ವಾಪಸಾಗಿರುವ ಕಾರಣ, ಅನೇಕ ವ್ಯಾಪಾರಿಗಳನ್ನು ಚಿಂತೆಗೀಡು ಮಾಡಿದೆ.

    ಒಟ್ಟಿನಲ್ಲಿ ಕರೊನಾ ವೈರಸ್‌ ಹಾಗೂ ಲಾಕ್‌ಡೌನ್‌ ಇದೀಗ ಲಖನೌದ ವಿಶ್ವ ಪ್ರಸಿದ್ಧ ‘ಟುಂಡೆ ಕಬಾಬ್‌’ಗೂ ಧಕ್ಕೆ ತಂದಿದೆ. ರಂಜಾನ್‌ ಸಮಯದಲ್ಲಿ ಭರಪೂರ ಬೇಡಿಕೆ ಇರುವ ಟುಂಡೆ ಕಬಾಬ್‌ ಅನ್ನು ಈ ವರ್ಷ ಮಾರಾಟ ಮಾಡುವುದಿಲ್ಲ ಎಂದು ಲಖನೌ ವ್ಯಾಪಾರಿಗಳು ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ, 115 ವರ್ಷ ಇರುವ ಈ ಕಬಾಬ್‌ ಇದೇ ಮೊದಲ ಬಾರಿಗೆ ರಂಜಾನ್‌ ಸಮಯದಲ್ಲಿ ವ್ಯಾಪಾರ ಆಗುತ್ತಿಲ್ಲ.

    ‘ಎಮ್ಮೆಯ ಮಾಂಸ’ ಎಂದೂ ಕರೆಯಲ್ಪಡುವ ಟುಂಡೆ ಕಬಾಬ್‌ ಅನ್ನು ರಂಜಾನ್‌ ಸಮಯದಲ್ಲಿ ಲಖನೌ ಮಾತ್ರವಲ್ಲದೇ ಅನೇಕ ಊರುಗಳ ರೆಸ್ಟೋರೆಂಟ್‌ಗಳಲ್ಲಿ ತಯಾರು ಮಾಡಲಾಗುತ್ತದೆ. ಈ ಮಾಂಸವನ್ನು ಸವಿಯುವುದಕ್ಕಾಗಿಯೇ ಅನೇಕ ಊರುಗಳಿಂದ ಲಖನೌ ರೆಸ್ಟೋರೆಂಟ್‌ಗಳಿಗೆ ಭಾರಿ ಪ್ರಮಾಣದಲ್ಲಿ ರಂಜಾನ್‌ ಮಾಸದಲ್ಲಿ ಜನರು ಬರುತ್ತಿದ್ದರು. ಆದರೆ ಅವರಿಗೆಲ್ಲಾ ಈಗ ನಿರಾಸೆಯಾಗಿದೆ.

    ‘ಟುಂಡೆ ಕಬಾಬ್‌ಗೆ ಎಷ್ಟು ಬೇಡಿಕೆ ಇದೆ ಎಂದರೆ ನಮ್ಮ ಎಂಟು ರೆಸ್ಟೋರೆಂಟ್‌ಗಳಲ್ಲಿ ಮಾಮೂಲು ದಿನಗಳಲ್ಲಿ 60 ಕೆ.ಜಿಯಷ್ಟು ಮಾಂಸ ಬೇಕಿತ್ತು. ರಂಜಾನ್‌ ಅವಧಿಯಲ್ಲಿ ಪ್ರತಿದಿನವೂ 100 ಕೆ.ಜಿಗಿಂತಲೂ ಅಧಿಕ ಮಾಂಸ ಖರ್ಚಾಗುತ್ತಿತ್ತು. ಆದರೆ ಈ ಬಾರಿ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಇದನ್ನು ತಯಾರು ಮಾಡುವ ಎಲ್ಲಾ ಕೆಲಸಗಾರರು ಊರಿಗೆ ವಾಪಸಾಗಿದ್ದಾರೆ. ಜತೆಗೆ, ಸಾರಿಗೆ ವ್ಯವಸ್ಥೆ ಇಲ್ಲದಿರುವ ಕಾರಣ, ಬೇರೆ ಊರುಗಳಿಂದಲೂ ಜನರು ಬರಲು ಆಗುವುದಿಲ್ಲ. ಅಷ್ಟೇ ಅಲ್ಲದೇ, ಮಾಂಸ ಮಾರಾಟದ ಮೇಲೆ ನಿಬಂಧನೆ ಇರುವ ಕಾರಣ, ಇದರ ತಯಾರಿಕೆಗೆ ಬೇಕಾದ ಮಾಂಸವೂ ಸಿಗುವುದಿಲ್ಲ. ಆದ್ದರಿಂದ 115 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಮಾರಾಟ ಮಾಡದೇ ಇರಲು ನಿರ್ಧರಿಸಿದ್ದೇವೆ’ ಎಂದು ಲಖನೌನ ಖ್ಯಾತ ಆಹಾರ ತಯಾರಕ ಮುಹಮ್ಮದ್‌ ಉಸ್ಮಾನ್‌ ಹೇಳಿದ್ದಾರೆ. ಇವರ ಕುಟುಂಬ ಟುಂಡೆ ಕಬಾಬ್‌ ತಯಾರಿಕೆ ಮಾಡುವಲ್ಲಿ ಪ್ರಸಿದ್ಧಿ ಪಡೆದಿದೆ. (ಏಜೆನ್ಸೀಸ್‌)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts