More

    ಸಂಪಾದಕೀಯ: ವಾಮಮಾರ್ಗ ಬೇಡ

    ಚುನಾವಣಾ ಅಕ್ರಮದ ಬೆನ್ನತ್ತಿ ಭರ್ಜರಿ ಬೇಟೆ ಮುಂದುವರಿಸಿರುವ ಭಾರತೀಯ ಚುನಾವಣಾ ಆಯೋಗ ದೇಶಾದ್ಯಂತ ಈವರೆಗೆ 4650 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ನಗದು, ಮದ್ಯ, ಮಾದಕ ದ್ರವ್ಯ ಮತ್ತು ಉಡುಗೊರೆ ವಸ್ತುಗಳನ್ನು ಜಪ್ತಿ ಮಾಡಿದೆ. ಇದು ಕಳೆದ 75 ವರ್ಷಗಳ ಲೋಕಸಭಾ ಚುನಾವಣೆ ಇತಿಹಾಸದಲ್ಲಿ ವಶಪಡಿಸಿಕೊಂಡ ಅತ್ಯಧಿಕ ಮೊತ್ತ ಎಂಬ ದಾಖಲೆ ಬರೆದಿದೆ. ಪಾರದರ್ಶಕತೆ, ಸಮಯ, ವೆಚ್ಚ ಉಳಿಕೆಗಾಗಿ ಒಂದು ದೇಶ, ಒಂದು ಚುನಾವಣೆ ಜಾರಿಗೊಳಿಸುವ ಚಿಂತನೆ ಗರಿಗೆದರಿರುವ ಹೊತ್ತಲ್ಲೇ ಭಾರತದ ಲೋಕಸಭಾ ಚುನಾವಣಾ ಕಣದಲ್ಲಿ ಕುರುಡು ಕಾಂಚಾಣದ ಕುಣಿತ ಹೆಚ್ಚಿರುವುದು ವಿಷಾದನೀಯ.

    ಪ್ರತಿ ಚುನಾವಣೆಯಲ್ಲೂ ಆಯೋಗ ವಶಪಡಿಸಿಕೊಳ್ಳುತ್ತಿರುವ ಹಣ, ಮದ್ಯ, ಡ್ರಗ್ಸ್, ಉಡುಗೊರೆಗಳ ಪ್ರಮಾಣ ಹೆಚ್ಚಾಗುತ್ತಿರುವುದು ಚುನಾವಣೆ ವ್ಯವಸ್ಥೆ ವಾಮಮಾರ್ಗದತ್ತ ಸಾಗುತ್ತಿರುವುದಕ್ಕೆ ಸಾಕ್ಷಿ. ಈ ಪ್ರಮಾಣದಲ್ಲಿ ಹಣವನ್ನು ಅಕ್ರಮವಾಗಿ ಸಾಗಿಸುತ್ತಿರುವುದನ್ನು ನೋಡಿದರೆ ರಾಜಕೀಯ ಪಕ್ಷಗಳಿಗೆ ಕಾನೂನಿನ, ನೈತಿಕತೆಯ ಭಯ ಇಲ್ಲವೇ ಎಂಬ ಸಂದೇಹ ಕಾಡದಿರದು. ಪ್ರಜಾತಂತ್ರ ಸ್ವಾಸ್ಥ್ಯದ ಹಿತದೃಷ್ಟಿಯಿಂದ ಈ ಬೆಳವಣಿಗೆಗಳು ಖಂಡಿತವಾಗಿಯೂ ಒಳ್ಳೆಯ ಲಕ್ಷಣಗಳಲ್ಲ. ಮತದಾರರನ್ನು ಓಲೈಸಲು ರಾಜಕಾರಣಿಗಳು ಬಳಸುವ ಇಂತಹ ವಾಮಮಾರ್ಗಗಳು ಅಂತಿಮವಾಗಿ ಇಡೀ ಪ್ರಜಾಪ್ರಭುತ್ವವನ್ನೇ ವಿಫಲಗೊಳಿಸುತ್ತವೆ ಎಂಬುದನ್ನು ಮರೆಯುವಂತಿಲ್ಲ.

    2019ರ ಲೋಕಸಭಾ ಚುನಾವಣೆ ಸಂದರ್ಭದಲ್ಲಿ 3,475 ಕೋಟಿ ಮೌಲ್ಯದ ನಗದು, ಮತ್ತಿತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಈ ಬಾರಿ ಮೊದಲ ಹಂತದ ಮತದಾನಕ್ಕೂ ಮುನ್ನವೇ ದೇಶಾದ್ಯಂತ ಒಟ್ಟು 4,658.16 ಕೋಟಿ ನಗದು, ವಸ್ತುಗಳನ್ನು ಜಪ್ತಿ ಮಾಡಿರುವುದು ಚುನಾವಣೆ ಅಕ್ರಮದ ಅಗಾಧತೆಗೆ ಸಾಕ್ಷಿ ಆಗಿದೆ.

    ಚುನಾವಣೆ ವ್ಯವಸ್ಥೆ ಭ್ರಷ್ಟವಾಗುತ್ತಿರುವ ವಿಷಯದಲ್ಲಿ ರಾಜಕಾರಣಿಗಳನ್ನು ಮಾತ್ರ ತಪ್ಪಿತಸ್ಥರ ಸ್ಥಾನದಲ್ಲಿ ನಿಲ್ಲಿಸಲು ಸಾಧ್ಯವಿಲ್ಲ. ಆಮಿಷಗಳಿಗೆ ಬಲಿಯಾಗುವ ಮತದಾರರು ಇರುವುದರಿಂದಲೇ ಈ ಪಿಡುಗು ಇಷ್ಟು ದೊಡ್ಡ ಪ್ರಮಾಣದಲ್ಲಿ ಬೆಳೆಯುತ್ತಿದೆ ಎಂಬುದು ನಿರ್ವಿವಾದ. ದಾಳಿ-ತಪಾಸಣೆ ನಡೆಸಿ ವಶಪಡಿಸಿಕೊಳ್ಳುವುದಷ್ಟೇ ಆಯೋಗದ ಕರ್ತವ್ಯ ಅಲ್ಲ. ರಾಜಕಾರಣಿಗಳು ಮತ್ತು ಮತದಾರರು ಈ ಪಿಡುಗಿನಿಂದ ದೂರ ಇರುವಂತೆ ಪ್ರೇರೇಪಿಸಲು ಅಗತ್ಯವಿರುವ ಅರಿವು ಕಾರ್ಯಕ್ರಮಗಳನ್ನು ಜಾರಿಗೆ ತರಬೇಕು ಮತ್ತು ದಂಡನಾರ್ಹ ಕ್ರಮಗಳನ್ನು ಪ್ರಯೋಗಿಸಬೇಕು. ಅಲ್ಲದೆ, ದೊಡ್ಡ ದೊಡ್ಡ ಭರವಸೆಗಳನ್ನು ನೀಡುವ, ಅಭಿವೃದ್ಧಿಯ ಕನಸು ಬಿತ್ತುವ ರಾಜಕೀಯ ಪಕ್ಷಗಳು ಮೊದಲು ಚುನಾವಣೆಯನ್ನು ನೈತಿಕ ಮಾರ್ಗದಲ್ಲಿ ಎದುರಿಸುವ ಸಂಕಲ್ಪ ಮಾಡಬೇಕು. ಜನಸಾಮಾನ್ಯರು ಸಹ ಮತದಾನದ ಮಹತ್ವವನ್ನು ಅರಿತು ಯಾವುದೇ ಆಮಿಷಗಳಿಗೆ ಬಲಿಯಾಗದೆ ತಮ್ಮ ಹಕ್ಕು ಚಲಾಯಿಸಬೇಕು. ಪ್ರಜಾಪ್ರಭುತ್ವದ ಮೌಲ್ಯಗಳು ಸಶಕ್ತಗೊಳ್ಳಬೇಕಾದರೆ ಇಂಥ ಅಪಸವ್ಯಗಳನ್ನು ನಿವಾರಿಸಲೇ ಬೇಕು. ಇಲ್ಲದಿದ್ದಲ್ಲಿ ಚುನಾವಣೆ ಅಕ್ರಮಗಳು ಹೆಚ್ಚುತ್ತಲೇ ಹೋಗುತ್ತವೆ.

    ನಟ ಶಿವರಾಜ್​ಕುಮಾರ್​ ಆಸ್ತಿ ಮೊತ್ತ ಇಷ್ಟೊಂದಾ? ಸ್ಟಾರ್ ನಟನ ಆಸ್ತಿ ಮೌಲ್ಯ, ಸಾಲದ ಬಗ್ಗೆ ಇಲ್ಲಿದೆ ಮಾಹಿತಿ..

    ಲೋಕಸಮರ: ಚುನಾವಣಾ ಆಯೋಗದಿಂದ ಈವರೆಗೆ ಒಟ್ಟು 4,650 ರೂ. ಕೋಟಿಗೂ ಅಧಿಕ ನಗದು, ವಸ್ತುಗಳು ಜಪ್ತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts