More

    ಸಿಬ್ಬಂದಿ, ಅಧಿಕಾರಿಗಳಿಗೆ ರಜೆ ರದ್ದು

    ಉಡುಪಿ ಜಿಲ್ಲೆಯಲ್ಲಿ ಕರೊನಾ ನಿಯಂತ್ರಣಕ್ಕೆ ರಾಜ್ಯ ಸರ್ಕಾರದ ಸೂಚನೆಯಂತೆ ಹಲವು ಕ್ರಮಗಳನ್ನು ಕೈಗೊಂಡಿದ್ದು, ಜಿಲ್ಲೆಯ ಯಾವುದೇ ಅಧಿಕಾರಿ, ಸಿಬ್ಬಂದಿಗೆ ಪರಿಸ್ಥಿತಿ ಸುಧಾರಿಸುವವರೆಗೆ ರಜೆ ಮಂಜೂರು ಮಾಡುವುದಿಲ್ಲ. ಅಧಿಕಾರಿಗಳು ಅನುಮತಿ ಇಲ್ಲದೆ ಕೇಂದ್ರಸ್ಥಾನ ಬಿಟ್ಟು ತೆರಳಿದರೆ ವಿಪತ್ತು ನಿರ್ವಹಣಾ ಕಾಯ್ದೆ ಪ್ರಕಾರ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದರು.

    ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ಕರೊನ ನಿಯಂತ್ರಣ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲೆಯ ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿನ ಲಾಡ್ಜ್‌ಗಳಲ್ಲಿರುವ ಪ್ರವಾಸಿಗರ ವಿವರ ಪಡೆಯುವಂತೆ ಮತ್ತು ಫ್ಲಾಟ್‌ಗಳಿಗೆ ಹೊಸದಾಗಿ ಬರುವವರ ಮಾಹಿತಿ ಪಡೆದು ಅವರ ಸ್ವ-ಹೇಳಿಕೆ ಪಡೆಯುವಂತೆ ಎಲ್ಲ ನಗರ ಸ್ಥಳೀಯ ಸಂಸ್ಥೆಗಳ ಮುಖ್ಯಸ್ಥರಿಗೆ ಮತ್ತು ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗಳಿಗೆ ಜಿಲ್ಲಾಧಿಕಾರಿ ಜಿ.ಜಗದೀಶ್ ಸೂಚಿಸಿದರು.

    ಜಿಲ್ಲೆಯಲ್ಲಿ ಮಾಸ್ಕ್‌ಗಳ ಕೊರತೆ ಸೃಷ್ಟಿಸುವುದು, ಹೆಚ್ಚು ಬೆಲೆಗೆ ಮಾರಾಟ ಮಾಡುವುದು ಕಂಡುಬಂದಲ್ಲಿ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ ಜಿಲ್ಲಾಧಿಕಾರಿ, ಎಲ್ಲ ಖಾಸಗಿ ಆಸ್ಪತ್ರೆ ಹಾಗೂ ತಾಲೂಕು ಸರ್ಕಾರಿ ಆಸ್ಪತ್ರೆಗಳಲ್ಲಿ ಕರೊನಾ ರೋಗಿಗಳಿಗಾಗಿ ಎರಡು ಬೆಡ್ ಕಾಯ್ದಿರಿಸಬೇಕು. ಖಾಸಗಿ ವೈದ್ಯರು, ಖಾಸಗಿ ಆಸ್ಪತ್ರೆಗಳು, ನರ್ಸಿಂಗ್ ಹೋಂಗಳು, ವಿದೇಶದಿಂದ ಬಂದ ರೋಗಿಗಳಿದ್ದಲ್ಲಿ ಜಿಲ್ಲಾ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು ಎಂದು ತಿಳಿಸಿದರು.

    ಜಿಪಂ ಸಿಇಒ ಪ್ರೀತಿ ಗೆಹ್ಲೋಟ್, ಎಸ್‌ಪಿ ಎನ್.ವಿಷ್ಣುವರ್ಧನ್, ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಡಿಎಚ್‌ಒ ಡಾ.ಸುಧೀರ್‌ಚಂದ್ರ ಸೂಡ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

    ಬೇಸಿಗೆ ಶಿಬಿರಗಳು ಬೇಡ: ಶಾಲೆ -ಕಾಲೇಜುಗಳಿಗೆ ರಜೆ ನೀಡಿದ್ದು, ಬೇಸಿಗೆ ಶಿಬಿರಗಳನ್ನು ಆಯೋಜಿಸದಂತೆ ಮತ್ತು ಶಾಲೆಗಳು, ಕಾಲೇಜುಗಳು, ವಿಶ್ವವಿದ್ಯಾಲಯಗಳು, ವಾಣಿಜ್ಯ ಶಾಲೆಗಳು, ಟ್ಯುಟೋರಿಯಲ್ಸ್ ಮತ್ತು ಕೋಚಿಂಗ್ ಕ್ಲಾಸ್‌ಗಳನ್ನು ಕಡ್ಡಾಯವಾಗಿ ಮುಚ್ಚಬೇಕು. ಜನರು ಹೆಚ್ಚಾಗಿ ಬಳಸುವ ಈಜುಕೊಳ, ಜಿಮ್, ಫಿಟ್‌ನೆಸ್ ಸೆಂಟರ್ ಇತ್ಯಾದಿಗಳನ್ನು ಮುಚ್ಚುವಂತೆ ಜಿಲ್ಲಾಧಿಕಾರಿ ಜಿ.ಜಗದೀಶ್ ಸೂಚಿಸಿದರು.

    ಮಾಲ್ ಮುಚ್ಚಿ, ದಿನಸಿ ತರಕಾರಿ ಇರಲಿ: ಸಿನಿಮಾ ಮಂದಿರಗಳು, ಮಲ್ಟಿಫ್ಲೆಕ್ಸ್, ನಾಟಕಗಳು, ಯಕ್ಷಗಾನ, ರಂಗಮಂದಿರ, ಪಬ್ -ಕ್ಲಬ್‌ಗಳು ಹಾಗೂ ನೈಟ್ ಕ್ಲಬ್‌ಗಳನ್ನು ಸಂಪೂರ್ಣವಾಗಿ ಮುಚ್ಚಲು ಅಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಸೂಚಿಸಿದರು. ಉಡುಪಿ ನಗರದ ಮೂರು ಮಾಲ್‌ಗಳನ್ನು ಮುಚ್ಚುವಂತೆ ಸೂಚಿಸಿ, ಈ ಪೈಕಿ ಬಿಗ್ ಬಜಾರ್‌ನ ದಿನಸಿ, ತರಕಾರಿ ವಿಭಾಗ ಹಾಗೂ ಸಿಟಿ ಸೆಂಟರ್‌ನ ದಿನಸಿ ಮಳಿಗೆ ಹಾಗೂ ಕೆಳಗಿನ ಮಹಡಿಯಲ್ಲಿನ ಗ್ಯಾಸ್ ಏಜೆನ್ಸಿ ಹಾಗೂ ಅದರೊಂದಿಗಿನ ಐದು ಪ್ರತ್ಯೇಕ ಅಂಗಡಿಗಳನ್ನು ಮಾತ್ರ ತೆರೆಯುವಂತೆ ಸೂಚಿಸಿದರು.

    ಮೇಳಗಳು ಹರಕೆ ಆಟ ಆಡುವಂತಿಲ್ಲ?: ಮದುವೆ, ನಿಶ್ಚಿತಾರ್ಥ ಇತ್ಯಾದಿ ಕಾರ್ಯಕ್ರಮಗಳು ಪೂರ್ವ ನಿಗದಿಯಾಗಿದ್ದಲ್ಲಿ ಅಂಥ ಕಾರ್ಯಕ್ರಮಗಳಲ್ಲಿ 100ಕ್ಕಿಂತ ಹೆಚ್ಚು ಜಾಸ್ತಿ ಜನ ಸೇರದಂತೆ ಅಗತ್ಯ ಕ್ರಮ ಕೈಗೊಳ್ಳಬೇಕು. ಹೊಸದಾಗಿ ಮದುವೆ ನಿಶ್ಚಿತಾರ್ಥ ಇತ್ಯಾದಿ ಕಾರ್ಯಕ್ರಮಗಳಿಗೆ ಹಾಲ್‌ಗಳನ್ನು ಕಾಯ್ದಿರಿಸದಂತೆ ನೋಡಿಕೊಳ್ಳಬೇಕು ಎಂದು ಸಂಬಂಧಿತ ಅಧಿಕಾರಿಗಳಿಗೆ ಡಿಸಿ ಜಗದೀಶ್ ತಿಳಿಸಿದರು. ಧಾರ್ಮಿಕ ಕೇಂದ್ರಗಳಲ್ಲಿ ಧಾರ್ಮಿಕ ಕಾರ್ಯಕ್ರಮಗಳು ಮಾತ್ರ ನಡೆಯಬೇಕು. ಹೆಚ್ಚು ಜನ ಸೇರುವ ಜಾತ್ರೆ, ಉತ್ಸವ ಇತ್ಯಾದಿ ಕಾರ್ಯಕ್ರಮ ನಡೆಸಬಾರದು. ದೇವಸ್ಥಾನಗಳ ಯಕ್ಷಗಾನ ಮೇಳಗಳು ಹರಕೆ ಆಟಗಳನ್ನು ನಡೆಸುವಂತಿಲ್ಲ. ಈ ಬಗ್ಗೆ ಸಂಬಂಧಿಸಿದ ದೇವಾಲಯಗಳಿಗೆ ಪತ್ರ ಬರೆಯುವಂತೆ ಧಾರ್ಮಿಕ ದತ್ತಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು. ಕ್ರಿಕೆಟ್, ಫುಟ್‌ಬಾಲ್, ವಾಲಿಬಾಲ್, ಹಾಕಿ, ಬ್ಯಾಡ್ಮಿಂಟನ್, ಬಾಸ್ಕೆಟ್ ಬಾಲ್ ಟೂರ್ನಿಗಳನ್ನು ಆಯೋಜಿಸದಂತೆ ಮತ್ತು ಇವುಗಳ ಆಯೋಜನೆಗೆ ಅನುಮತಿ ನೀಡದಂತೆ ಕ್ರೀಡಾ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

     

    ಮೀನಿನ ಬೇಡಿಕೆ ಕುಂದಿಲ್ಲ: ಕರೊನ ವೈರಸ್ ಸಂಬಂಧಿಸಿ ಮಾರುಕಟ್ಟೆಯಲ್ಲಿ ಕೋಳಿ, ಮಾಂಸಾಹಾರಗಳು ಬೇಡಿಕೆ ಕಳೆದುಕೊಂಡಿದ್ದರೂ ಮೀನಿಗೆ ಬೇಡಿಕೆ ಕುಂದಿಲ್ಲ. ಸದ್ಯ ಮಾರುಕಟ್ಟೆಯಲ್ಲಿ ಮೀನಿಗೆ ಉತ್ತಮ ಬೇಡಿಕೆ ಇದ್ದು, ದರವೂ ಏರಿಕೆ ಕಂಡಿದೆ. ಆದರೆ ಮೀನುಗಾರಿಕೆ ಇಳುವರಿ ಇಲ್ಲದೆ ನಷ್ಟದಲ್ಲಿ ಸಾಗುತ್ತಿದೆ ಎಂದು ಮಂಗಳವಾರ ಸುದ್ದಿಗಾರರೊಂದಿಗೆ ಜತೆ ಮಾತನಾಡಿದ ಮಲ್ಪೆ ಮೀನುಗಾರ ಸಂಘ ಅಧ್ಯಕ್ಷ ಕೃಷ್ಣ ಎಸ್.ಸುವರ್ಣ ತಿಳಿಸಿದರು.
    ಮೀನು ಮತ್ತು ಕರೊನಕ್ಕೆ ಸಂಬಂಧವಿಲ್ಲ. ಕೆಲವು ದಿನಗಳಿಂದ ಕಿಡಿಗೇಡಿಗಳು ಸಾಮಾಜಿಕ ಜಾಲತಾಣದಲ್ಲಿ ಮೀನಿಗೆ ಕರೊನ ವೈರಸ್ ಎಂದು ಬಿಂಬಿಸಿ, ಮೀನಿನ ಚಿತ್ರ ಎಡಿಟ್ ಮಾಡಿ ಹರಿಯಬಿಟ್ಟಿದ್ದರು. ಇಂಥ ವದಂತಿ, ಸುಳ್ಳು ಸುದ್ದಿಗೆ ಕಿವಿಗೊಡಬಾರದು. ಕೇರಳ ಸಮುದ್ರ ಸಮೀಪ ಮೀನುಗಾರಿಕೆ ನಡೆಸುವವರಿಗೆ ಆ ರಾಜ್ಯದ ಮೀನುಗಾರರು, ಜನ ಸಮೂಹದಿಂದ ಅಂತರ ಕಾಪಾಡಿಕೊಳ್ಳುವಂತೆ, ಬಂದರು ಪ್ರವೇಶಿಸದಂತೆ ಸಲಹೆ, ಸೂಚನೆ ನೀಡಲಾಗಿದೆ ಎಂದರು.

    ಶೇ.80ರಷ್ಟು ಪ್ರಮಾಣ ಕುಂಠಿತ: ಸಮುದ್ರದಲ್ಲಿ ಮೀನು ಇಳುವರಿ ಇಲ್ಲದೆ ಮೀನುಗಾರಿಕೆ ಶೇ.80ರಷ್ಟು ಕುಂಠಿತಗೊಂಡಿದೆ ಎಂದು ಕೃಷ್ಣ ಎಸ್ ಸುವರ್ಣ ತಿಳಿಸಿದರು. ಮಲ್ಪೆ ಬಂದರು ಕೇಂದ್ರೀಕರಿಸಿ ಆಳ ಸಮುದ್ರ, 370, ಸಣ್ಣ ಬೋಟುಗಳು, ಪರ್ಸೀನ್ ಸೇರಿದಂತೆ ಎರಡು ಸಾವಿರಕ್ಕೂ ಅಧಿಕ ಬೋಟುಗಳಿವೆ. ಸದ್ಯ ಮೀನುಗಾರಿಕೆ ನಷ್ಟದಲ್ಲಿರುವ ಕಾರಣ ಶೇ.35ರಷ್ಟು ಬೋಟುಗಳು ಬಂದರಿನಲ್ಲಿ ಲಂಗರು ಹಾಕಿವೆ. ಅಂತಾರಾಷ್ಟ್ರೀಯ ಕಚ್ಚಾತೈಲ ಬೆಲೆ ಇಳಿಕೆಯಾಗಿದ್ದರೂ, ನಮಗೆ ಮಾತ್ರ ಬೆಲೆಯಲ್ಲಿ ವ್ಯತ್ಯಾಸ ಆಗಿಲ್ಲ. ಸರ್ಕಾರ ಈ ಬಗ್ಗೆ ಸೂಕ್ತ ತೀರ್ಮಾನ ತೆಗೆದುಕೊಳ್ಳಬೇಕು ಎಂದರು.

    ಕಾರ್ಕಳದ ಯಾತ್ರಾಸ್ಥಳಗಳಿಗೆ ಬೀಗ: ರೊನಾ ಭೀತಿ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮ ಅಂಗವಾಗಿ ಕಾರ್ಕಳ ಪುರಸಭೆ ಮಂಗಳವಾರ ನಗರದ ಪ್ರಮುಖ ಯಾತ್ರಾಸ್ಥಳಗಳಿಗೆ ಬೀಗ ಜಡಿದಿದೆ.
    ಐತಿಹಾಸಿಕ ಗೊಮ್ಮಟ ಬೆಟ್ಟ, ಚತುರ್ಮುಖ ಬಸದಿ, ಆನೆಕೆರೆ ಪಾರ್ಕ್, ಕೋಟಿ ಚೆನ್ನಯ ಥೀಂ ಪಾರ್ಕ್, ಈಜುಕೊಳಗಳಿಗೆ ಪುರಸಭೆ ಮುಖ್ಯಾಧಿಕಾರಿ ರೇಖಾ ಶೆಟ್ಟಿ ನೇತೃತ್ವದ ತಂಡ ಬೀಗ ಜಡಿದಿದೆ. ಕಾರ್ಕಳ ನಗರ ವ್ಯಾಪ್ತಿಯ ಚಿತ್ರಮಂದಿರಗಳಿಗೆ ಹಾಗೂ ಕಲ್ಯಾಣ ಮಂಟಪಗಳ ಮಾಲೀಕರ ಜತೆ ಸಮಾಲೋಚನೆ ನಡೆಸಿ ಪ್ರದರ್ಶನ ಮತ್ತು ಸಭೆ, ಮದುವೆ ಹಾಗೂ ಇನ್ನಿತರ ಶುಭ ಕಾರ್ಯ ನಡೆಸಲು ಅವಕಾಶ ನೀಡದಂತೆ ತಿಳಿಸಿದರು.
    ರಸ್ತೆ ಬದಿ ಸಾರ್ವಜನಿಕ ಸ್ಥಳದಲ್ಲಿ ಬಹಿರಂಗವಾಗಿ ತಿಂಡಿ-ತಿನಸು, ಚೈನೀಸ್ ಫಾಸ್ಟ್‌ಫುಡ್, ಸಸ್ಯಾಹಾರಿ ಮತ್ತು ಮಾಂಸಾಹಾರಿ ಖಾದ್ಯ ಪದಾರ್ಥ ಹಾಗೂ ಶನಿವಾರ ಸಂತೆ ನಡೆಸದಂತೆ ಸ್ಪಷ್ಟ ಸೂಚನೆ ನೀಡಲಾಗಿದೆ. ಮುಂದಿನ ಅದೇಶ ಬರುವವರೆಗೆ ಮೇಲಿನ ಆದೇಶ ಕಟ್ಟುನಿಟ್ಟಿನಿಂದ ನಗರದಲ್ಲಿ ಜಾರಿಯಲ್ಲಿ ಇರುತ್ತದೆ ಎಂದರು.
    ಪರಿಸರ ಅಭಿಯಂತ ಮದನ್, ಕಂದಾಯ ಪರಿವೀಕ್ಷಕ ಸಂತೋಷ್, ಆರ್ಥಿಕ ವಿಭಾಗ ಮೇಲ್ವಿಚಾರಕ ಶಿವಕುಮಾರ್ ಮತ್ತಿತರರು ಜತೆಗಿದ್ದರು.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts