More

    ನಾಯಕತ್ವ ಬದಲಾಗಲ್ಲ, ಸಂಪುಟ ವಿಸ್ತರಿಸಲ್ಲ: ಸಿಎಂ-ರಾಜ್ಯಾಧ್ಯಕ್ಷ ಸ್ಥಾನ ಸೇರಿ ಎಲ್ಲವೂ ಯಥಾಸ್ಥಿತಿ..

    ಬೆಂಗಳೂರು: ಮುಂದಿನ ವಿಧಾನಸಭಾ ಚುನಾವಣೆಯ ತನಕ ಸರ್ಕಾರ ಹಾಗೂ ಪಕ್ಷದ ನಾಯಕತ್ವದಲ್ಲಿ ಯಾವುದೇ ಬದಲಾವಣೆ ಮಾಡದಿರಲು ಬಿಜೆಪಿ ವರಿಷ್ಠರು ನಿರ್ಧರಿಸಿದ್ದು, ಅಪಸ್ವರ ಎತ್ತುವವರ ಬಾಯಿಗೆ ಬೀಗ ಹಾಕಿದ್ದಾರೆ. ಹೈದರಾಬಾದ್​ನಲ್ಲಿ ನಡೆದ ರಾಷ್ಟ್ರೀಯ ಕಾರ್ಯಕಾರಿಣಿ ಯಲ್ಲಿ ಪಾಲ್ಗೊಂಡಿದ್ದ ರಾಜ್ಯದ ಮುಖಂಡರ ಜತೆ ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಸಭೆ ನಡೆಸಿ ಈ ಸ್ಪಷ್ಟ ಸಂದೇಶ ನೀಡಿದ್ದಾರೆ. ಜತೆಗೆ ಸರ್ಕಾರ ಹಾಗೂ ಪಕ್ಷ ಚುರುಕಾಗಬೇಕೆಂಬ ಎಚ್ಚರಿಕೆ ಯನ್ನೂ ನೀಡಿದ್ದಾರೆ. ನಾಯಕತ್ವ ಬದಲಾವಣೆ ವಿಚಾರದಿಂದಾಗಿ ಸಿಎಂ ಬಸವರಾಜ ಬೊಮ್ಮಾಯಿ ಒಂದು ವರ್ಷ ಪೂರೈಸಿದರೂ ಸರ್ಕಾರ ಟೇಕಾಫ್ ಆಗಿಲ್ಲ. ಬಿದ್ದು ಹೋಗುವ ಸರ್ಕಾರವೆಂದೇ ಅಧಿಕಾರಿಗಳು ಮಾತನಾಡುತ್ತಿರುವುದರಿಂದ ಇಮೇಜ್ ವೃದ್ಧಿಯಾಗಿಲ್ಲ ಎಂಬ ಮಾತುಗಳಿವೆ.

    ಆದ್ದರಿಂದಲೇ ವರಿಷ್ಠರು ಖಡಕ್ ಸ್ಪಷ್ಟನೆಯೊಂದಿಗೆ ಸರ್ಕಾರ ಹಾಗೂ ಪಕ್ಷಕ್ಕೂ ಚಾಟಿ ಬೀಸಿ ಕಳುಹಿಸಿದ್ದಾರೆ. ಮುಖ್ಯಮಂತ್ರಿ ಹಾಗೂ ಪಕ್ಷದ ರಾಜ್ಯಾಧ್ಯಕ್ಷರನ್ನು ಮುಂದಿನ ಚುನಾವಣೆ ತನಕ ಬದಲಾವಣೆ ಮಾಡುವ ಪ್ರಶ್ನೆಯೇ ಇಲ್ಲ. ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ ಎದುರಿಸಲಾಗುತ್ತದೆ. ಅದಕ್ಕೆ ಎಲ್ಲರೂ ಸಜ್ಜಾಗುವಂತೆ ನಡ್ಡಾ ತಿಳಿಸಿದ್ದಾರೆ.

    ಪಕ್ಷದ ರಾಜ್ಯಾಧ್ಯಕ್ಷರ ಹುದ್ದೆ ಆಗಸ್ಟ್​ನಲ್ಲಿ ಬದಲಾವಣೆ ಆಗಬೇಕಾಗಿತ್ತು. ಆದರೆ, ಚುನಾವಣೆ ವರ್ಷ ಆಗಿರುವುದರಿಂದ ಸದ್ಯಕ್ಕೆ ಅವರೇ ಮುಂದುವರಿಯಲಿದ್ದಾರೆಂದು ಸ್ಪಷ್ಟಪಡಿಸಿದ್ದಾರೆಂದು ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯರೊಬ್ಬರು ಸ್ಪಷ್ಟಪಡಿಸಿದರು. ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ದಕ್ಷಿಣದಲ್ಲಿರುವ ಏಕೈಕ ರಾಜ್ಯವನ್ನು ಕಳೆದುಕೊಳ್ಳಲು ಸಾಧ್ಯವಿಲ್ಲ. ಕರ್ನಾಟಕದಲ್ಲಿ ಅಧಿಕಾರದಲ್ಲಿದ್ದುಕೊಂಡೆ ಮುಂದಿನ ದಿನಗಳಲ್ಲಿ ತೆಲಂಗಾಣ ಮತ್ತು ಆಂಧ್ರಪ್ರದೇಶ ಗೆಲ್ಲಬೇಕಾಗಿದೆ. ಆದ್ದರಿಂದ ಸರ್ಕಾರ ಹಾಗೂ ಪಕ್ಷದ ಸಂಘಟನೆಗೆ ಏನೇನು ಮಾಡಬೇಕಾಗಿದೆ ಎಂಬ ಮಾಹಿತಿಯೊಂದಿಗೆ ವರಿಷ್ಠರು ರೂಪಿಸಿರುವ ಕಾರ್ಯತಂತ್ರವನ್ನು ವಿವರಿಸಿ ಕಳುಹಿಸಿದ್ದಾರೆ.

    ವಿಸ್ತರಣೆ, ಪುನಾರಚನೆ ಇಲ್ಲ: ಎಲ್ಲರೂ ಚುನಾವಣೆಯತ್ತ ಗಮನ ಹರಿಸಬೇಕಾಗಿರುವ ಕಾರಣ ಸಚಿವ ಸಂಪುಟ ಪುನಾರಚನೆ ಅಥವಾ ವಿಸ್ತರಣೆ ಯಾವುದೂ ಇಲ್ಲ. ಸಚಿವ ಸ್ಥಾನದ ಆಕಾಂಕ್ಷಿಗಳಿಗೆ ಮುಂದಿನ ಸರ್ಕಾರದಲ್ಲಿ ಅವಕಾಶ ನೀಡುವ ಬಗ್ಗೆ ಗಮನ ಹರಿಸಲಾಗುತ್ತದೆ ಎಂದು ವರಿಷ್ಠರು ಸ್ಪಷ್ಟಪಡಿಸಿದ್ದಾರೆ. ಆದ್ದರಿಂದ ಒಂಭತ್ತು ತಿಂಗಳಾದರೂ ಸಂಪುಟದಲ್ಲಿರುವ ಆಸೆ ಹೊಂದಿದ್ದವರಿಗೆ ನಿರಾಸೆಯಾಗಿದೆ.

    ವರಿಷ್ಠರದ್ದೇ ನಾಯಕತ್ವ: ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಷಾ ಅವರೇ ನೇತೃತ್ವ ವಹಿಸಿಕೊಂಡು ಚುನಾವಣೆ ನಡೆಸಲಿದ್ದಾರೆ. ಗುಜರಾತ್ ಚುನಾವಣೆ ಮುಗಿದ ಕೂಡಲೇ ಇಡೀ ಕೇಂದ್ರ ಸಂಪುಟವೇ ಕರ್ನಾಟಕದತ್ತ ಮುಖ  ಮಾಡಲಿದೆ ಎಂಬ ಮಾಹಿತಿಯನ್ನು ನಡ್ಡಾ ನೀಡಿದ್ದಾರೆಂದು ಮೂಲಗಳು ಹೇಳಿವೆ.

    ವರಿಷ್ಠರ ತಂತ್ರಗಾರಿಕೆ

    • ಗುಜರಾತ್ ಚುನಾವಣೆ ಡಿಸೆಂಬರ್​ನಲ್ಲಿ ಮುಗಿದ ಕೂಡಲೇ ಮೋದಿ ಟೀಮ್ ರಾಜ್ಯಕ್ಕೆ ಆಗಮನ
    • ಮತದಾರರ ಮನವೊಲಿಸಲು ಕೇಂದ್ರ ಮಂತ್ರಿಗಳಿಂದ ಜಿಲ್ಲಾವಾರು ಪ್ರವಾಸ
    • ತಳ ಸಮುದಾಯಗಳನ್ನು ಸೆಳೆದು ಕಾಂಗ್ರೆಸ್ ಅಭದ್ರಗೊಳಿಸುವುದು
    • ದಶಕಗಳಿಂದ ನಿರ್ಲಕ್ಷಿತರಾಗಿರುವ ವರ್ಗಗಳನ್ನು ಸೆಳೆದು ಪಕ್ಷದ ಹೊಸ ಶಕ್ತಿಯನ್ನಾಗಿ ಮಾಡುವುದು
    • ಬೆಸ್ತ, ಗಂಗಾಮತಸ್ಥ, ಕೋಲಿ ಸಮಾಜದ ಹೆಸರಿನಲ್ಲಿ ಗುರುತಿಸಿಕೊಳ್ಳುವ ಸಮುದಾಯಗಳ ಅಭಿವೃದ್ಧಿಗೆ ಸಹಕಾರಿ ಸಂಘಗಳ ಸ್ಥಾಪನೆ
    • ಕೆಲಸ ಬೂತ್​ವುಟ್ಟದ ಸೈನಿಕರು, ಶಿಕ್ಷಕರು ಮತ್ತು ವೈದ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದು, ಆಯಾ ದಿನಾಚರಣೆಯಂದು ಗುರುತಿಸಿ ಸನ್ಮಾನಿಸುವುದು
    • ಎದುರಾಳಿ ಪಕ್ಷದವರನ್ನು ಸೆಳೆದು ಪ್ರತಿಪಕ್ಷಗಳನ್ನು ದುರ್ಬಲಗೊಳಿಸುವುದು

    ಯಡಿಯೂರಪ್ಪರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಿ: ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರನ್ನು ವಿಶ್ವಾಸಕ್ಕೆ ತೆಗೆದು ಕೊಳ್ಳಬೇಕು. ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಮಾಡಬಾರದು. ಪ್ರತಿಯೊಂದು ಕಾರ್ಯಕ್ರಮದಲ್ಲೂ ಅವರು ಇರುವಂತೆ ನೋಡಿಕೊಳ್ಳಬೇಕು. ಯಡಿಯೂರಪ್ಪ ನಿರ್ಲಕ್ಷ್ಯಕ್ಕೆ ಒಳಗಾಗಿದ್ದಾರೆ ಎಂಬ ಮಾಹಿತಿ ರವಾನೆಯಾದರೆ ಪರಿಸ್ಥಿತಿ ಕಷ್ಟವಾಗುತ್ತದೆ ಎಂಬ ಸೂಚನೆ ನೀಡಿದ್ದಾರೆ.

    ಸರ್ಕಾರಕ್ಕೆ ಸೂಚನೆ ಏನೇನು?

    • ಸರ್ಕಾರದ ಎಲ್ಲ ಯೋಜನೆಗಳ ಅರಿವನ್ನು ಮನೆ ಮನೆಗೆ ತಲುಪಿಸಬೇಕು
    • ಎಲ್ಲ ವರ್ಗಗಳನ್ನು ಒಳಗೊಳ್ಳುವ ರೀತಿ ಯೋಜನೆಗಳನ್ನು ರೂಪಿಸಬೇಕು
    • ಸಿಎಂ, ಸಚಿವರು ಸತತವಾಗಿ ಪ್ರವಾಸ ಮಾಡಬೇಕು
    • ಪಕ್ಷದೊಂದಿಗೆ ನಿರಂತರ ಸಂಪರ್ಕವನ್ನು ಇಟ್ಟುಕೊಳ್ಳಬೇಕು
    • ಆಡಳಿತ ಇನ್ನಷ್ಟು ಚುರುಕಾಗುವಂತೆ ನೋಡಿಕೊಳ್ಳಬೇಕು

    ಪಕ್ಷಕ್ಕೆ ಸಲಹೆಗಳು

    • ದುರ್ಬಲವಾಗಿರುವಲ್ಲಿ ಬಲಗೊಳಿಸುವುದು
    • ಬೂತ್ ಮಟ್ಟದಲ್ಲಿ ಪಕ್ಷ ಸಂಘಟನೆ ಬಲಗೊಳಿಸುವ ಹೊಣೆ ಸಂಸದರಿಗೆ
    • ಬೇರೆ ಪಕ್ಷದ ಪ್ರಭಾವಿಗಳನ್ನು ಸೆಳೆಯುವುದು
    • ನೆಲೆ ಕುಸಿಯುತ್ತಿರುವ ಮುಂಬೈ ಕರ್ನಾಟಕದಲ್ಲಿ ಆದ್ಯತೆ ನೀಡುವುದು
    • ಹಳೆಯ ಮೈಸೂರು ಭಾಗದಲ್ಲಿ ಸಂಘಟನೆ ತೀವ್ರಗೊಳ್ಳಬೇಕು

    ಸಮುದ್ರದೊಳಕ್ಕೇ ಹೊಕ್ಕಿದ್ದ ಕಾರು; ನಾಪತ್ತೆಯಾಗಿದ್ದವನ ಶವ ಇಂದು ಪತ್ತೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts