More

    ವಂದೇ ಭಾರತ್ ಕನ್ನಡಿಗರಿಗೆ ಅನ್ಯಾಯ

    ಮಂಗಳೂರು: ಕೇಂದ್ರ ಸರ್ಕಾರದ ವಂದೇ ಭಾರತ್ ಮಿಷನ್ ಯೋಜನೆಯ ವಿಮಾನ ಯಾನದ ಹೊಸ ಪಟ್ಟಿ ಬಿಡುಗಡೆಯಾಗಿದ್ದು, ಇದರಲ್ಲಿ ಬೆಂಗಳೂರು, ಮಂಗಳೂರು ಅಥವಾ ಕರ್ನಾಟಕದ ಯಾವುದೇ ಭಾಗಕ್ಕೆ ವಿಮಾನ ಲಭ್ಯವಾಗಿಲ್ಲ. ಇದನ್ನೇ ಬಂಡವಾಳವನ್ನಾಗಿ ಮಾಡಿಕೊಂಡಿರುವ ಕೆಲವು ಪ್ರಾಯೋಜಕರು ಬಾಡಿಗೆ ವಿಮಾನಗಳ ಮೂಲಕ ಕನ್ನಡಿಗರನ್ನು ಶೋಷಿಸುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

    ಈಗಾಗಲೇ ವಿದೇಶಗಳಲ್ಲಿ ಕಷ್ಟದಲ್ಲಿರುವ ರಾಜ್ಯದ ನಿವಾಸಿಗಳನ್ನು ವಂದೇ ಭಾರತ್ ಯೋಜನೆಯಡಿ 40 ವಿಮಾನಗಳಲ್ಲಿ ಕರೆಸಿಕೊಂಡಿರುವ ಕೇರಳ ಹೊಸ ಪಟ್ಟಿಯಲ್ಲೂ ಸಿಂಹಪಾಲು (38 ವಿಮಾನ) ಪಡೆದಿದೆ. ಇದರಿಂದಾಗಿ ಕೊಲ್ಲಿ ರಾಷ್ಟ್ರಗಳಲ್ಲಿರುವ ಅನಿವಾಸಿ ಕನ್ನಡಿಗರು ಪ್ರಾಯೋಜಕರು ಹಾಗೂ ಜನಪ್ರತಿನಿಧಿಗಳನ್ನು ಕಾಡಿ ಬೇಡಿ ಖಾಸಗಿ ವ್ಯವಸ್ಥೆಯ ಚಾರ್ಟರ್ ವಿಮಾನಗಳಲ್ಲಿ ದುಪ್ಪಟ್ಟು ಪ್ರಯಾಣ ದರ ತೆತ್ತು ಊರಿಗೆ ಮರಳುತ್ತಿದ್ದಾರೆ.

    ಪರೋಕ್ಷ ಬೆಂಬಲ: ಚಾರ್ಟರ್ ವಿಮಾನವನ್ನು ಸುಮಾರು 25 ಲಕ್ಷ ರೂ.ಗೆ ಬುಕ್ ಮಾಡಿ ಕೊಲ್ಲಿ ರಾಷ್ಟ್ರಗಳಲ್ಲಿ ಕಷ್ಟದಲ್ಲಿರುವ ಬಡಪಾಯಿಗಳಿಂದ ದುಪ್ಪಟ್ಟು ಹಣ ವಸೂಲಿ ಮಾಡಿ ಕೆಲವು ಪ್ರಾಯೋಜಕರು 45 ಲಕ್ಷ ರೂ. ತನಕ ಗಳಿಸುತ್ತಾರೆ ಎಂದು ಅಧಿಕಾರಿಯೋರ್ವರು ಪ್ರತಿಕ್ರಿಯಿಸಿದ್ದಾರೆ.
    ಚಾರ್ಟರ್ ವಿಮಾನದಲ್ಲಿ ಬರುವ ಪ್ರಯಾಣಿಕರು ಪ್ರಾಯೋಜಕರು ಸೂಚಿಸುವ ದಿನಕ್ಕೆ 1500 ರೂ.ನಿಂದ 5000 ರೂ. ತನಕ ಬಾಡಿಗೆ ಇರುವ ದುಬಾರಿ ಹೊಟೇಲ್ಗಳಲ್ಲೇ ಕ್ವಾರಂಟೈನ್‌ನಲ್ಲಿ ಇರುವಂತೆ ಒತ್ತಾಯಿಸಲಾಗುತ್ತದೆ. ಕೆಲವರು ಇದನ್ನೇ ಉದ್ಯಮವಾಗಿ ಮಾಡಿಕೊಂಡಿದ್ದಾರೆ. ಸರ್ಕಾರ ಕೂಡ ವಂದೇ ಭಾರತ್ ಯೋಜನೆಯಡಿ ಕರ್ನಾಟಕಕ್ಕೆ ಪ್ರಾತಿನಿಧ್ಯ ನೀಡದೆ ಪರೋಕ್ಷ ಬೆಂಬಲ ನೀಡುತ್ತಿದೆ ಎಂದು ದೂರಲಾಗುತ್ತಿದೆ.

     ಕೇಂದ್ರ ಹಾಗೂ ಕರ್ನಾಟಕದಲ್ಲಿ ಒಂದೇ ಪಕ್ಷ ಆಡಳಿತ ನಡೆಸುತ್ತಿದೆ. ಕೇಂದ್ರ ಈ ವಿಷಯದಲ್ಲಿ ಪೂರ್ಣ ನಿರ್ಲಕ್ಷ್ಯ ವಹಿಸಿದೆ. ಕರ್ನಾಟಕ ಸರ್ಕಾರ ಕೂಡ ಆಸಕ್ತಿ ವಹಿಸಿಲ್ಲ. ರಾಜ್ಯವನ್ನು ಪ್ರತಿನಿಧಿಸುವ ಆಡಳಿತ ಪಕ್ಷದ ಗರಿಷ್ಠ ಸಂಸದರು ಇದ್ದರೂ ಪ್ರಯೋಜನವಾಗಿಲ್ಲ.
    – ಮಂಜುನಾಥ, ಯುಎಇ ಕನ್ನಡಿಗರ ಸಂಘದ ಸದಸ್ಯ

    ಮಂಗಳೂರಿಗೆ 3 ವಿಮಾನ ಆಗಮನ
    ಮಂಗಳೂರು: ಲಾಕ್‌ಡೌನ್ ಬಳಿಕ ಕೊಲ್ಲಿ ರಾಷ್ಟ್ರಗಳಲ್ಲಿ ಬಾಕಿಯಾಗಿದ್ದ 400ರಷ್ಟು ಪ್ರಯಾಣಿಕರನ್ನು ಹೊತ್ತ ಮೂರು ವಿಮಾನಗಳು ಶನಿವಾರ ರಾತ್ರಿ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದಿವೆ.
    ದುಬೈಯಿಂದ ವಂದೇ ಭಾರತ್ ಮಿಷನ್ ಯೋಜನೆಯಡಿ ಹೊರಟ ಸ್ಪೈಸ್ ಜೆಟ್ ವಿಮಾನ ಗೋವಾದಲ್ಲಿ ಇಳಿದು ಬಳಿಕ ರಾತ್ರಿ 9.30ಕ್ಕೆ ಮಂಗಳೂರು ವಿಮಾನ ನಿಲ್ದಾಣ ತಲುಪಿದ್ದು, 60 ಪ್ರಯಾಣಿಕರು ಇಳಿದಿದ್ದಾರೆ.

    ದುಬೈಯಿಂದ ಹೊರಟ ಫ್ಲೈ ದುಬೈ ಚಾರ್ಟರ್ ವಿಮಾನ ರಾತ್ರಿ ಒಂಬತ್ತು ಗಂಟೆಗೆ ಮಂಗಳೂರು ತಲುಪಿದೆ. ಕುವೈತ್‌ನಿಂದ ಸಾಯಂಕಾಲ ಹೊರಟ ಇಂಡಿಗೊ ಚಾರ್ಟರ್ ವಿಮಾನ ರಾತ್ರಿ 8.55ಕ್ಕೆ ಮಂಗಳೂರು ತಲುಪಿದೆ. ಈ ಎರಡು ವಿಮಾನಗಳಲ್ಲಿ ತಲಾ 170ರಷ್ಟು ಪ್ರಯಾಣಿಕರಿದ್ದರು.
    ಕುವೈತ್ ವಿಮಾನ ನಿಲ್ದಾಣದಲ್ಲಿ ಮಧ್ಯಾಹ್ನ ಸ್ವದೇಶಕ್ಕೆ ಹೊರಟು ನಿಂತ ಅನಿವಾಸಿ ಕನ್ನಡಿಗರು ವಿಮಾನ ಪ್ರಯಾಣಕ್ಕೆ ಎದುರಾದ ಅಡ್ಡಿ ನಿವಾರಣೆಗೆ ಶ್ರಮಿಸಿದ ಸಂಸದೆ ಶೋಭಾ ಕರಂದ್ಲಾಜೆ, ವಿಧಾನಪರಿಷತ್ ಮಾಜಿ ಸದಸ್ಯ ಕ್ಯಾ.ಗಣೇಶ್ ಕಾರ್ಣಿಕ್ ಮತ್ತು ಮಂಜೇಶ್ವರ ಮೋಹನ್‌ದಾಸ್ ಕಾಮತ್ ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts