More

    ಕೊರಗರ ಸ್ವಾಭಿಮಾನಿ ಬದುಕಿಗೆ ತಣ್ಣೀರು

    ಶ್ರೀಪತಿ ಹೆಗಡೆ ಹಕ್ಲಾಡಿ ಕುಂದಾಪುರ
    ಕುಂಭಾಶಿ ಅಂಬೇಡ್ಕರ್ ನಗರದ ಮಹಿಳೆಯರು ಮನೆಯಲ್ಲಿ ಬುಟ್ಟಿ ಸುತ್ತಿದರೆ ಗಂಡಸರು ಬೀಳು ತಂದುಕೊಡುತ್ತಾರೆ. ಬುಟ್ಟಿಗೆ ಪರಿಕರ ಒದಗಸಿದ ನಂತರ ಗಂಡಸರು ಕೆಲಸಕ್ಕೆ ಹೋದರೆ, ಮಹಿಳೆಯರು ಬುಟ್ಟಿ ನೇಯ್ಗೆ ಜತೆ ಕೂಲಿ ಕೆಲಸಕ್ಕೂ ಹೋಗುತ್ತಾರೆ. ಆದರೆ ಪ್ರಸ್ತುತ ಕರೊನಾ ವೈರಸ್ ಇವರೆಲ್ಲರ ಶ್ರಮಕ್ಕೂ ಆತಂಕ ತಂದೊಡ್ಡಿದೆ. ಹೆಣೆದ ಬುಟ್ಟಿ ಮಾರುಕಟ್ಟೆಯಲ್ಲಿ ಬಿಕರಿ ಆಗುತ್ತಿಲ್ಲ.

    ಇವರು ಹೆಚ್ಚಾಗಿ ಹಣ್ಣುಕಾಯಿ ಬುಟ್ಟಿ, ಹೆಡಿಗೆ, ಕುಕ್ಕೆ, ಕಲ್ಲಿ, ಗೆರ್ಸಿ ಇಂಥ ಮನೆಗೆ ಪೂರಕ ವಸ್ತುಗಳನ್ನು ಸಿದ್ಧಪಡಿಸುತ್ತಿದ್ದರು. ಪ್ರಸಕ್ತ ದೇವಸ್ಥಾನ ಬಂದ್ ಆಗಿದ್ದರಿಂದ ಹಣ್ಣುಕಾಯಿ ಬುಟ್ಟಿ ಕೊಳ್ಳುವವರಿಲ್ಲ. ಬುಟ್ಟಿ, ಹೆಡಿಗೆ ಮನೆ ಮನೆಗೆ ಮಹಿಳೆಯರು ಕೊಂಡು ಹೋದರೂ ಕೊಳ್ಳೋರಿಲ್ಲ. ಇದರಿಂದ ಆದಾಯವಿಲ್ಲದಂತಾಗಿದೆ. ಬುಟ್ಟಿಗಳನ್ನು ಐಟಿಡಿಪಿ ವಿಕ್ರಯಿಸಿ, ಮಹಿಳೆಯರ ಸ್ವಾಭಿಮಾನದ ಕೂಗಿಗೆ ಧ್ವನಿಯಾಗಬೇಕು.

    ವಿಜಯವಾಣಿ ವರದಿ ನಂತರ ಬದಲಾದ ಕಾಲನಿ: ಕುಂಭಾಶಿ ಅಂಬೇಡ್ಕರ್ ಕಾಲನಿಯಲ್ಲಿ ಹಿಂದೆ ಇಕ್ಕಟ್ಟು ಮನೆಯಲ್ಲಿ ಹತ್ತಾರು ಮಂದಿ ವಾಸ ಮಾಡುವ ಶೋಚನೀಯ ಸ್ಥಿತಿಯಿತ್ತು. 2012 ಅಂಬೇಡ್ಕರ್ ಜಯಂತಿ ದಿನ ವಿಜಯವಾಣಿ ಅಂಬೇಡ್ಕರ್ ಕಾಲನಿ ಯಥಾವತ್ ಚಿತ್ರಣ ಸಮಾಜದ ಮುಂದಿಟ್ಟಿತು. ಬಳಿಕ ಕಾಲನಿ ಚಿತ್ರಣ ಬದಲಾಗಿದೆ. ಆರ್‌ಸಿಸಿ ಕಟ್ಟಡಗಳು ತಲೆ ಎತ್ತಿದ್ದು, ಸರ್ವಋತು ರಸ್ತೆ, ನೀರಿನ ಟ್ಯಾಂಕ್, ಬಾವಿ ನಿರ್ಮಾಣವಾಗಿವೆ. ಕಾಲನಿಗೆ ತಾಗಿಕೊಂಡು ಮಕ್ಕಳ ಮನೆ ತಲೆ ಎತ್ತಿದೆ. ಹತ್ತಾರು ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಕೊರಗ ಮಕ್ಕಳು ಕೇವಲ ವಿದ್ಯಾಭ್ಯಾಸಕ್ಕೆ ಸೀಮಿತವಾಗಿರದೆ ಮೂಲನಿವಾಸಿಗಳ ಆಚಾರ, ವಿಚಾರ, ಸಂಸ್ಕಾರ, ಸಂಸ್ಕೃತಿ ಕೆಲಸದ ಜತೆ ಮಕ್ಕಳ ಆಸಕ್ತಿ ಗಮನಿಸಿ ಅವರ ಪ್ರೋತ್ಸಾಹಿಸುವ ಕೆಲಸವೂ ಆಗುತ್ತಿದೆ.

    ಕಾಲನಿ ಮಹಿಳೆಯರು ಬುಟ್ಟಿ ನೇಯ್ದು ತಮ್ಮ ಕಾಲ ಮೇಲೆ ನಿಲ್ಲುವ ಮೂಲಕ ಸ್ವಾಭಿಮಾನದ ಬದುಕು ಕಟ್ಟಿಕೊಳ್ಳುತ್ತಿರುವುದು ನಮ್ಮ ಸಮಾಜದ ಹೆಮ್ಮೆ. ಐಟಿಡಿಪಿ ಅಧಿಕಾರಿಗಳು ಬುಟ್ಟಿ ಇನ್ನಿತರ ವಸ್ತುಗಳನ್ನು ವಿಕ್ರಿಯಿಸುವ ಮೂಲಕ ಸಹಕಾರ ನೀಡಬೇಕು. ಸಮಾಜ ಕಲ್ಯಾಣ ಇಲಾಖೆ ಮಹಿಳೆಯರ ಕಸುಬಿಗೆ ಮಾರುಕಟ್ಟೆ ವ್ಯವಸ್ಥೆ ಮಾಡಬೇಕು.
    ಗಣೇಶ್ ಕೊರಗ ಅಧ್ಯಕ್ಷ, ಕೊರಗ ಶ್ರೇಯೋಭಿವೃದ್ಧಿ ಸಂಘ ಕುಂದಾಪುರ

    ಕಾಲನಿ ಪಕ್ಕದಲ್ಲಿ ದೇವಸ್ಥಾನಗಳ ಸಮುಚ್ಚಯವಿದ್ದು, ನಾವು ಹಣ್ಣುಕಾಯಿ ಬುಟ್ಟಿಗಳನ್ನೇ ಹೆಚ್ಚು ಮಾಡುತ್ತೇವೆ. ದೇವಸ್ಥಾನ ಬಂದಾಗಿದ್ದರಿಂದ ಬುಟ್ಟಿ ಕೊಳ್ಳುವವರಿಲ್ಲ. ನಾವು ಬುಟ್ಟಿ ಇನ್ನಿತರ ನೇಯ್ಗೆ ಮೂಲಕ ದಿನಕ್ಕೆ 100-200 ರೂ. ದುಡಿಯುತ್ತಿದ್ದು, ಬುಟ್ಟಿ ಕೊಳ್ಳುವವರಿಲ್ಲದೆ ಮಾಡಿನಲ್ಲಿ ತೂಗು ಹಾಕಿದ್ದೇವೆ. ನಮಗೆ ಮಾರುಕಟ್ಟೆ ವ್ಯವಸ್ಥೆ ಆಗಬೇಕು.
    ರಾಜಶ್ರೀ ಹಣ್ಣುಕಾಯಿ ಬುಟ್ಟಿ ನೇಯುವ ಮಹಿಳೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts