More

    ವಿಮಾನವಿಲ್ಲದೆ ನೌಕರಿಗೆ ಕುತ್ತು: ಅರಬ್ ರಾಷ್ಟ್ರಗಳಿಗೆ ಹೋಗಲಾರದೆ ಕರಾವಳಿಗರ ಸಂಕಷ್ಟ

    ಹರೀಶ್ ಮೋಟುಕಾನ, ಮಂಗಳೂರು
    ಕೋವಿಡ್ ಹಿನ್ನೆಲೆಯಲ್ಲಿ ಭಾರತದಿಂದ ಅರಬ್ ರಾಷ್ಟ್ರಗಳಿಗೆ ಹೋಗುವ ವಿಮಾನ ಯಾನ ನಿರ್ಬಂಧ ಮೂರು ತಿಂಗಳಿನಿಂದ ತೆರವಾಗಿಲ್ಲ. ಅಲ್ಲಿ ಉದ್ಯೋಗದಲ್ಲಿದ್ದು, ಕೋವಿಡ್ ಕಾಲದಲ್ಲಿ ಊರಿಗೆ ಬಂದಿರುವ ಕರಾವಳಿಯ ಸಾವಿರಾರು ಮಂದಿ ರಜೆ ಮುಗಿಸಿ ತೆರಳಲು ಸಾಧ್ಯವಾಗದೆ ಉದ್ಯೋಗ ಕಳೆದುಕೊಳ್ಳುತ್ತಿದ್ದಾರೆ.

    ಯುಎಇ ಜನರಲ್ ಸಿವಿಲ್ ಏವಿಯೇಷನ್ ಅಥಾರಿಟಿ ಭಾರತದಿಂದ ದುಬಾಗೆ ಏ.24ರಿಂದ ಆ.1ರ ತನಕ ವಿಮಾನ ಯಾನ ನಿರ್ಬಂಧಿಸಿದೆ. ಸೌದಿ ಅರೇಬಿಯಾಯಕ್ಕೆ ಕರೊನಾ ಮೊದಲ ಅಲೆಯ ಲಾಕ್‌ಡೌನ್ ಬಳಿಕ ಭಾರತದಿಂದ ವಿಮಾನ ಹಾರಾಟ ನಡೆಸಿಲ್ಲ. ಆದರೆ ಅರಬ್ ರಾಷ್ಟ್ರಗಳಿಂದ ಭಾರತಕ್ಕೆ ಬರಲು ಅವಕಾಶ ನೀಡಿರುವುದರಿಂದ ಊರಿಗೆ ಬರುವ ಪ್ರಯಾಣಿಕರಿಗೆ ಸಮಸ್ಯೆಯಾಗಿಲ್ಲ.
    ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಭಾಗದ ಹೆಚ್ಚಿನ ಸಂಖ್ಯೆಯ ಮಂದಿ ಅರಬ್ ರಾಷ್ಟ್ರಗಳಲ್ಲಿ ವಿವಿಧ ಕ್ಷೇತ್ರಗಳಲ್ಲಿ ಉದ್ಯೋಗ ಮಾಡುತ್ತಿದ್ದಾರೆ. ಅಲ್ಲಿ ಸಮಯಕ್ಕೆ ಸರಿಯಾಗಿ ಕೆಲಸಕ್ಕೆ ಹಾಜರಾಗದಿದ್ದರೆ ಉದ್ಯೋಗ ಕಳೆದುಕೊಳ್ಳುವುದು ಖಂಡಿತ. ಆ ನೌಕರಿಗೆ ಬೇರೆ ಅಭ್ಯರ್ಥಿಗಳನ್ನು ಅಲ್ಲಿ ಆಯ್ಕೆ ಮಾಡಲಾಗುತ್ತದೆ. ಕರಾವಳಿಯ ಹಲವು ಮಂದಿ ಏಪ್ರಿಲ್‌ಗಿಂತ ಮುಂಚಿತವಾಗಿ ಹಾಗೂ ನಂತರ ಒಂದು ತಿಂಗಳ ರಜೆಯಲ್ಲಿ ಬಂದವರು ಹಿಂದಿರುಗಲಾರದೆ ನೌಕರಿ ಕಳೆದುಕೊಳ್ಳುವ ಆತಂಕದ ಸ್ಥಿತಿಯಲ್ಲಿ ದಿನ ಕಳೆಯುತ್ತಿದ್ದಾರೆ.

    ಕಂಪನಿಗಳಲ್ಲಿ ಬದಲಿ ವ್ಯವಸ್ಥೆ!: ದುಬೈಯಲ್ಲಿ ಕಳೆದ 8 ವರ್ಷಗಳಿಂದ ಇನ್ಸೂರೆನ್ಸ್ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದು, ಏಪ್ರಿಲ್‌ನಲ್ಲಿ ಒಂದು ತಿಂಗಳ ರಜೆಯಲ್ಲಿ ಊರಿಗೆ ಬಂದಿದ್ದೆ ಎನ್ನುತ್ತಾರೆ ಸುಳ್ಯ ನಿವಾಸಿ ಪ್ರಸಾದ್. ಮೇ ಮೊದಲ ವಾರದಲ್ಲಿ ಮತ್ತೆ ಕರ್ತವ್ಯಕ್ಕೆ ಹಾಜರಾಗಬೇಕಿತ್ತು. ರಜೆ ಮುಗಿಯುವ ಮುನ್ನವೇ ಕರೊನಾ ಸೋಂಕು ಹೆಚ್ಚಾಗಿ ವಿಮಾನ ಯಾನ ಸ್ಥಗಿತಗೊಂಡಿತು. ಈಗ ಹೆಚ್ಚುವರಿಯಾಗಿ ಮೂರು ತಿಂಗಳು ರಜೆಯಲ್ಲಿ ಕಳೆದಿದ್ದೇನೆ. ನನ್ನ ಹುದ್ದೆಗೆ ಬೇರೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಂಡಿರುವ ಮಾಹಿತಿ ನೀಡಿದ್ದಾರೆ ಎಂದು ಪ್ರಸಾದ್ ತಿಳಿಸಿದ್ದಾರೆ. ಬೆಳ್ತಂ ಗಡಿಯ ಮಹಿಳೆಯೊಬ್ಬರು ತಾಯಿ ಮೃತಪಟ್ಟ ಹಿನ್ನೆಲೆಯಲ್ಲಿ ದುಬಾಯಿಂದ ಊರಿಗೆ ಬಂದಿದ್ದರು. ಕಾರ್ಯಕ್ರಮ ಮುಗಿಸಿ ಹಿಂತಿರುಗಬೇಕಾಗಿದ್ದ ಅವರು ವಿಮಾನ ವ್ಯವಸ್ಥೆ ಸ್ಥಗಿತಗೊಂಡ ಕಾರಣ ಊರಿನಲ್ಲೇ ಬಾಕಿಯಾಗಿದ್ದಾರೆ. ಅವರ ಕಂಪನಿಯಲ್ಲೂ ಅವರ ಸ್ಥಾನಕ್ಕೆ ಬೇರೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಂಡಿದ್ದಾರೆ.

    ಮತ್ತೆ ಉದ್ಯೋಗ ಸಿಗುವ ಭರವಸೆ ಹುಸಿ: ಮಂಗಳೂರಿನ ಸಂತೋಷ್ ಪಿಂಟೋ ಅದೇ ಕಂಪನಿಯಲ್ಲಿ ಮತ್ತೆ ನೌಕರಿ ಸಿಗುವ ಭರವಸೆ ಕಳೆದುಕೊಂಡಿದ್ದಾರೆ. ಮಾ.29ರಂದು ಈಸ್ಟರ್ ಹಬ್ಬಕ್ಕಾಗಿ ಕುವೈಟ್‌ನಿಂದ ಊರಿಗೆ ಬಂದಿದ್ದೆ. ಮೇ ತಿಂಗಳಿನಲ್ಲಿ ಕಂಪನಿ ಕರ್ತವ್ಯಕ್ಕೆ ಹಾಜರಾಗಬೇಕಿತ್ತು. ಆದರೆ ಹೋಗಲಾಗದೆ ಇಂದಿನ ತನಕ ಇಲ್ಲಿಯೇ ಬಾಕಿಯಾಗಿದ್ದೇನೆ. ಅದೇ ಕಂಪನಿಯಲ್ಲಿ ಉದ್ಯೋಗ ಕೊಡುತ್ತಾರೆ ಎನ್ನುವ ಭರವಸೆ ಇಲ್ಲ. ಪರ್ಯಾಯ ಉದ್ಯೋಗ ಹುಡುಕಿದ ಬಳಿಕವೇ ಕುವೈತ್‌ಗೆ ಹೋಗುವ ಬಗ್ಗೆ ಚಿಂತಿಸಿದ್ದೇನೆ ಎನ್ನುತ್ತಾರೆ.

    ಬದಲಿ ದಾರಿ ಬಲು ದುಬಾರಿ: ಬೇರೆ ದೇಶಗಳ ಮೂಲಕ ಅರಬ್ ರಾಷ್ಟ್ರಗಳಿಗೆ ಹೋಗುವ ಅವಕಾಶವಿದೆ. ಆದರೆ ಅದು ದುಬಾರಿ ಎಂದು ಟ್ರಾವೆಲ್ ಏಜೆನ್ಸಿಯವರು ಮಾಹಿತಿ ನೀಡಿದ್ದಾರೆ. ಕಡ್ಡಾಯವಾಗಿ ಎರಡು ಲಸಿಕೆ ಪಡೆದಿರಬೇಕು. 14 ದಿನ ಕಳೆದಿರಬೇಕು. ಇನ್ನೊಂದು ದೇಶದಲ್ಲಿ 15 ದಿನ ವಾಸ ಮಾಡಿರಬೇಕು. ತೆರಳಲಿರುವ ದೇಶದ ಸರ್ಕಾರದ ವೆಬ್‌ಸೈಟ್‌ನಲ್ಲಿ ನೋಂದಣಿ ಮಾಡಬೇಕು. ಇಂತಹ ಕಠಿಣ ನಿಯಮಾವಳಿಗಳಿವೆ. ಈ ನಿಯಮ ಆಗಾಗ ಬದಲಾಗುತ್ತಿರುತ್ತವೆ ಎಂದವರು ಹೇಳಿದ್ದಾರೆ.

    ಅರಬ್ ರಾಷ್ಟ್ರಗಳಿಗೆ ವಿಮಾನ ಹಾರಾಟ ನಿರ್ಬಂಧ ಕಾರಣ, ಪ್ರಯಾಣಿಕರಿಗೆ ಸಮಸ್ಯೆಯಾಗಿದೆ. ಟಿಕೆಟ್ ಬುಕ್ ಮಾಡಿ ಜೀವನ ನಡೆಸುತ್ತಿದ್ದ ಏಜೆನ್ಸಿಯವರಿಗೂ ತೊಂದರೆಯಾಗಿದೆ. ಸೌದಿ ಅರೇಬಿಯ, ದುಬಾ, ಕುವೈತ್, ದಮಾಮ್, ಮಸ್ಕತ್, ಅಬುದಾಭಿ, ದೋಹಾಕ್ಕೆ ವಿಮಾನ ಇಲ್ಲ. ಬಹರೇನ್‌ಗೆ ತಿಂಗಳಿಗೊಂದು ವಿಮಾನ ಇದೆ. ಪ್ರಯಾಣಿಕರು ಪ್ರತೀ ದಿನ ಕರೆ ಮಾಡಿ ವಿಚಾರಿಸುತ್ತಲೇ ಇರುತ್ತಾರೆ.
     ಅರ್ಶದ್ ಮಂಗಳೂರು ನಜತ್ ಟ್ರಾವೆಲ್ಸ್ ಏಜೆನ್ಸಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts