More

    ಡಿಜಿಟಲೈಸ್ ಆಗದ ಜಿಲ್ಲಾ ಪೊಲೀಸ್ ಇಲಾಖೆ, ದಂಡ ವಿಧಿಸಲು ಇನ್ನೂ ರಸೀದಿ ಬಳಕೆ

    ಗಂಗಾಧರ್ ಬೈರಾಪಟ್ಟಣ ರಾಮನಗರ
    ಹೊಸ ಆವಿಷ್ಕಾರದೊಂದಿಗೆ ಪೊಲೀಸ್ ಇಲಾಖೆ ಜನಸ್ನೇಹಿಯಾಗುವತ್ತ ಹೆಜ್ಜೆಯಿಟ್ಟಿದೆ. ಇತ್ತೀಚಿನ ದಿನಗಳಲ್ಲಿ ಸೈಬರ್ ಕ್ರೈಂಗಳು ಹೆಚ್ಚುತ್ತಿದ್ದು, ಸಂಚಾರ ನಿಯಮ ಉಲ್ಲಂಸುವವರ ಸಂಖ್ಯೆಯೂ ಕಡಿಮೆ ಇಲ್ಲ. ಆದರೆ, ಸಂಚಾರ ನಿಯಮ ಉಲ್ಲಂಘಿಸಿದವರಿಗೆ ದಂಡ ವಿಧಿಸುವ ಪ್ರಕ್ರಿಯೆ ಮಾತ್ರ ಇನ್ನೂ ಕಾಗದ ಬಿಟ್ಟು ಹೊರ ಬಂದಿಲ್ಲ.
    ಹೌದು, ರಾಮನಗರ ಜಿಲ್ಲೆ ಐಟಿ ಹಬ್, ಸಿಲಿಕಾನ್ ಸಿಟಿ ಬೆಂಗಳೂರಿಗೆ ಹೊಂದಿಕೊಂಡಿರುವ ಜಿಲ್ಲೆ. ಆದರೆ ಸಂಚಾರ ನಿಯಮ ಉಲ್ಲಂಘಿಸಿದವರಿಗೆ ದಂಡ ವಿಧಿಸುವ ವ್ಯವಸ್ಥೆ ಪೆನ್ನು ಪ್ಯಾಡ್ ಮೂಲಕವೇ ನಡೆಯುತ್ತಿದ್ದು, ಪೊಲೀಸರು ಮತ್ತು ತಪ್ಪು ಮಾಡಿದವರು ಇಬ್ಬರೂ ತೊಂದರೆ ಅನುಭವಿಸುವಂತಾಗಿದೆ.
    ಸ್ಥಳದಲ್ಲೇ ಹಣ ಕಟ್ಟಿ: ಜಿಲ್ಲೆಯಲ್ಲಿ 23 ಠಾಣೆಗಳಿದ್ದು, ಪ್ರತಿದಿನ ನೂರಾರು ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳು ದಾಖಲಾಗುತ್ತಲೇ ಇರುತ್ತವೆ. ಅಲ್ಲದೆ, ಪ್ರತಿ ಸಿಗ್ನಲ್ ಮತ್ತು ವಾಹನ ದಟ್ಟಣೆ ಹೆಚ್ಚಿರುವ ಹೆದ್ದಾರಿಗಳಲ್ಲಿ ಪೊಲೀಸರು ಸಂಚಾರ ನಿಯಮ ಉಲ್ಲಂಸುವವರ ವಿರುದ್ಧ ಪ್ರಕರಣ ದಾಖಲಿಸಲು ಕಾಯುತ್ತಲೇ ಇರುತ್ತಾರೆ. ನಿಯಮ ಉಲ್ಲಂಘನೆ ಮಾಡಿದ ವಾಹನ ಚಾಲಕ ಸ್ಥಳದಲ್ಲಿಯೇ ದಂಡ ಕಟ್ಟಬೇಕು, ಆದರೆ ಕೆಲವು ಕಾರಣಗಳಿಗಾಗಿ ವಾಹನ ಸವಾರ ಹಣ ಕಟ್ಟದಿದ್ದರೆ, ವಾಹನ ಸೀಜ್ ಮಾಡುವ ಹಂತದವರೆಗೂ ಪೊಲೀಸರು ಹೋಗಬೇಕಾದ ಅನಿವಾರ್ಯತೆ ನಿರ್ಮಾಣವಾಗಿದೆ. ಇದರಿಂದ ಕೆಲವೊಮ್ಮೆ ಪೊಲೀಸರು ಮತ್ತು ವಾಹನ ಸವಾರರ ನಡುವೆ ಮಾತಿನ ಚಕಮಕಿ ನಡೆದಿರುವುದೂ ಉಂಟು. ವಾಹನ ಸೀಜ್ ಮಾಡಿದರೆ ಕೋರ್ಟ್‌ನಲ್ಲಿಯೇ ದಂಡ ವಸೂಲಿ ಮಾಡಬೇಕಿದೆ.
    ವಾಹನ ಮಾಹಿತಿ ಲಭ್ಯವಾಗಲ್ಲ: ಪೇಪರ್ ರಸೀದಿಯಲ್ಲಿ ವಾಹನ ಸವಾರನಿಂದ ದಂಡ ಕಟ್ಟಿಸಿಕೊಂಡರೆ ಆತನ ಸಂಚಾರ ನಿಯಮ ಉಲ್ಲಂಘನೆಯ ಪೂರ್ವ ಇತಿಹಾಸ ಲಭ್ಯವಾಗುವುದಿಲ್ಲ. ಬೆಂಗಳೂರಿನಲ್ಲಿ ಬಿ-ಟ್ರಾೃಕ್ ಸೌಲಭ್ಯವಿದ್ದು, ಇದರಿಂದಾಗಿ ಪ್ರಾದೇಶಿಕ ಸಾರಿಗೆ ಕಚೇರಿಗಳೊಂದಿಗೆ ಸಂಪೂರ್ಣ ಡಿಜಿಟಲೀಕರಣವಾಗಿದ್ದು, ಯಾವುದೇ ಠಾಣೆ ವ್ಯಾಪ್ತಿಯಲ್ಲಿ ವಾಹನ ಸವಾರ ನಿಯಮ ಉಲ್ಲಂಘನೆ ಮಾಡಿದ್ದರೆ ಆತನ ನಿವಾಸಕ್ಕೆ ನೋಟಿಸ್ ರವಾನೆ ಆಗುತ್ತದೆ. ಇದರಿಂದ ವಾಹನದ ಸಂಪೂರ್ಣ ಮಾಹಿತಿ ಪೊಲೀಸರಿಗೆ ಲಭ್ಯವಾಗುತ್ತದೆ. ಈ ವ್ಯವಸ್ಥೆ ಜಿಲ್ಲೆಗೂ ಬರಬೇಕು ಎನ್ನುವುದು ಸಾರ್ವಜನಿಕರ ಆಶಯ.
    ಆನ್‌ಲೈನ್ ಹಣ ಬೇಡವಂತೆ
    ಸಂಚಾರ ನಿಯಮ ಉಲ್ಲಂಘನೆ ಮಾಡಿದ ವ್ಯಕ್ತಿ ಬಳಿ ಕೆಲವೊಮ್ಮೆ ಹಣ ಇರುವುದಿಲ್ಲ. ಆದರೆ ಪೊಲೀಸರು ಸ್ಥಳದಲ್ಲಿಯೇ ಹಣ ಕಟ್ಟಬೇಕು ಎಂದು ತಾಕೀತು ಮಾಡುತ್ತಾರೆ. ಇಂತಹ ಸಂದರ್ಭದಲ್ಲಿ ಯುಪಿಐ ಆ್ಯಪ್ ಮೂಲಕ ಹಣ ಪಾವತಿ ಮಾಡುತ್ತೇನೆ ಎಂದು ಸವಾರ ಹೇಳಿದರೂ, ಇಲಾಖೆಯಲ್ಲಿ ಇದಕ್ಕೆ ಅವಕಾಶ ಇಲ್ಲದ ಕಾರಣ ಪೊಲೀಸರು ನಿರಾಕರಿಸುತ್ತಾರೆ. ಒಂದು ವೇಳೆ ಹಣ ತೆಗೆದುಕೊಂಡು ಬರುತ್ತೇನೆ ಎಂದರೂ ಡಿಎಲ್, ಆರ್‌ಸಿ ಪುಸ್ತಕ ಕೊಟ್ಟು ಹೋಗುವಂತೆ ತಾಕೀತು ಮಾಡುತ್ತಾರೆ. ಆದರೆ ಇಂತಹ ಅವ್ಯವಸ್ಥೆ ಹೊರಬರಬೇಕಾದರೆ ಡಿಜಿಟಲ್ ತಂತ್ರಜ್ಞಾನದ ಮೂಲಕ ಹಣ ಪಾವತಿಗೆ ಅವಕಾಶ ಮಾಡಿಕೊಡಬೇಕು ಎನ್ನುವ ಕೂಗು ಜಿಲ್ಲೆಯಲ್ಲಿ ಎದ್ದಿದೆ.

    ಡಿಜಿಟಲೀಕರಣದ ಅಗತ್ಯವಿದೆ. ಆದರೆ ಇದು ಸರ್ಕಾರ ಮಟ್ಟದಲ್ಲಿಯೇ ಆಗಬೇಕು. ಈಗಾಗಲೇ ನಮ್ಮ ಇಲಾಖೆಯಲ್ಲಿ ಕಮಿಷನರೇಟ್ ವ್ಯಾಪ್ತಿಯಲ್ಲಿ ಡಿಜಿಟಲೀಕರಣ ಆಗಿದೆ. ಮುಂದೆ ರಾಮನಗರಕ್ಕೂ ಈ ವ್ಯವಸ್ಥೆ ಬರಲಿ.
    ಎಸ್.ಗಿರೀಶ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ

    ಸಂಚಾರ ನಿಯಮ ಉಲ್ಲಂಘನೆ ಮಾಡಿದ ಕಾರಣ ಪೊಲೀಸರು ಅಡ್ಡಗಟ್ಟಿ ಫೈನ್ ಹಾಕಿದರು. ನನ್ನ ಬಳಿ ಹಣ ಇರಲಿಲ್ಲ. ಆ್ಯಪ್ ಮೂಲಕ ದಂಡ ಕಟ್ಟುತ್ತೇನೆ ಎಂದರೂ ಒಪ್ಪಲಿಲ್ಲ. ಕ್ಯಾಷ್‌ಲೆಸ್ ಪಾವತಿಯ ಸಂದರ್ಭದಲ್ಲಿ ಪೊಲೀಸ್ ಇಲಾಖೆ ಡಿಜಿಟಲೀಕರಣಗೊಂಡರೆ ಉತ್ತಮ.
    ಕಿರಣ್ ಶಿವಲಿಂಗಯ್ಯ ಖಾಸಗಿ ಸಂಸ್ಥೆ ಉದ್ಯೋಗಿ, ಚನ್ನಪಟ್ಟಣ

    ———————————————————————–

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts