More

    ಅಭಿವೃದ್ಧಿಯಾಗದ ಗಂಗೊಳ್ಳಿ ಬಂದರು

    ಗಂಗೊಳ್ಳಿ ಮೀನುಗಾರಿಕಾ ಬಂದರು ಕರಾವಳಿ ಜಿಲ್ಲೆಗಳ ಪೈಕಿ ಅತ್ಯಂತ ಹೆಚ್ಚು ನಿರ್ಲಕ್ಷೃಕ್ಕೆ ಒಳಗಾಗಿದ್ದು, ಕಳಪೆ ಕಾಮಗಾರಿಯಿಂದ ಅಭಿವೃದ್ಧಿಗೆ ಹಿನ್ನಡೆಯಾಗಿದೆ. ಈ ಕುರಿತು ಬೆಳಕು ಚೆಲ್ಲುವ ವಿಶೇಷ ವರದಿ ಇಲ್ಲಿದೆ.

    ವಿಜಯವಾಣಿ ಸುದ್ದಿಜಾಲ ಗಂಗೊಳ್ಳಿ

    ಗಂಗೊಳ್ಳಿ ಮೀನುಗಾರಿಕಾ ಬಂದರು ಕರಾವಳಿ ಜಿಲ್ಲೆಗಳ ಪೈಕಿ ಅತ್ಯಂತ ಹೆಚ್ಚು ನಿರ್ಲಕ್ಷ್ಯಕ್ಕೆ ಒಳಗಾದ ಬಂದರು. ಬಂದರು ಅಭಿವೃದ್ಧಿಯಾಗಬೇಕು ಎನ್ನುವ ಕೂಗು ಕೇಳಿ ಬರುತ್ತಿದ್ದರೂ, ಬಂದರಿನಲ್ಲಿ ನಡೆದ ಕಳಪೆ ಕಾಮಗಾರಿಯಿಂದ ಅಭಿವೃದ್ಧಿಗೆ ಹಿನ್ನಡೆಯಾಗಿದೆ.

    ಉಡುಪಿ ಜಿಲ್ಲೆಯ ಎರಡನೇ ಬೃಹತ್ ಮೀನುಗಾರಿಕಾ ಬಂದರು ಆಗಿರುವ ಗಂಗೊಳ್ಳಿ ಅಭಿವೃದ್ಧಿಯಾಗದೆ ಮೀನುಗಾರರು ನಿತ್ಯ ಸಂಕಟ ಅನುಭವಿಸುತ್ತಿದ್ದಾರೆ. ಮೊದಲ ಹಂತದ ಕಾಮಗಾರಿ ಮುಗಿದು 15 ವರ್ಷಗಳಾಗಿದ್ದು, ಸುಮಾರು 12 ಕೋಟಿ. ರೂ. ಜೆಟ್ಟಿ ಪುನರ್ ನಿರ್ಮಾಣ ಕಾಮಗಾರಿ ಬಿಟ್ಟರೆ ಯಾವುದೇ ದೊಡ್ಡ ಮಟ್ಟದ ಕಾಮಗಾರಿ ನಡೆದಿಲ್ಲ. ಗಂಗೊಳ್ಳಿ ಮೀನುಗಾರಿಕಾ ಬಂದರು ಸಮಸ್ಯೆಗಳ ಸರಮಾಲೆ ಸುತ್ತಿಕೊಂಡಿದೆ. ಮೀನುಗಾರಿಕಾ ಋತು ಅಂತ್ಯಗೊಳ್ಳುವ ಸಮಯದಲ್ಲಿ ಇದ್ದ ಸಮಸ್ಯೆಗಳು ಮೀನುಗಾರಿಕಾ ಋತು ಆರಂಭದ ಸಮಯದಲ್ಲೂ ಇದೆ. ಹೀಗಾಗಿ ಮೀನುಗಾರರು ಪ್ರತಿವರ್ಷ ಸಮಸ್ಯೆಗಳ ನಡುವೆ ಕಡಲಿಗಿಳಿಯಬೇಕಾದ ಪರಿಸ್ಥಿತಿ ಬಂದೊದಗಿದೆ.

    ಬಂದರು ಪುನರ್ ನಿರ್ಮಾಣ

    ಮೀನುಗಾರಿಕಾ ಬಂದರಿನ ಜೆಟ್ಟಿ ಪುನರ್ ನಿರ್ಮಾಣ ಕಾರ್ಯ ಆರಂಭವಾಗಿದ್ದರೂ, ಹಳೆ ಜೆಟ್ಟಿಯ ಡಯಾಪ್ರಾಮ್ ವಾಲ್ ಕುಸಿದು ಬಿದ್ದ ಪರಿಣಾಮ ಜೆಟ್ಟಿ ಪುನರ್ ನಿರ್ಮಾಣ ಕಾರ್ಯಕ್ಕೆ ಹಿನ್ನಡೆಯಾಗಿದೆ. ಕಳಪೆ ಕಾಮಗಾರಿ ಅರೋಪದ ಹಿನ್ನೆಲೆಯಲ್ಲಿ ಸುಮಾರು 150 ಮೀಟರ್ ಜೆಟ್ಟಿ ಪುನರ್ ನಿರ್ಮಾಣ ಕಾರ್ಯ ಸ್ಥಗಿತಗೊಂಡಿದೆ. *ಹೂಳೆತ್ತಿಲ್ಲ : ಸುಮಾರು 400 ಮೀಟರ್ ಉದ್ದದ ಮೀನುಗಾರಿಕಾ ಜೆಟ್ಟಿ ಪ್ರದೇಶದಲ್ಲಿ ಹಾಗೂ ಹಳೇ ಜೆಟ್ಟಿ ಪ್ರದೇಶದಲ್ಲಿ ಹೂಳು ತುಂಬಿಕೊಂಡಿದ್ದು, ಬೋಟು ಮತ್ತು ದೋಣಿಗಳ ನಿಲುಗಡೆಗೆ ಕಷ್ಟವಾಗುತ್ತಿದೆ. ಹೀಗಾಗಿ ಜೆಟ್ಟಿ ಪ್ರದೇಶದಲ್ಲಿ ಡ್ರೆಜ್ಜಿಂಗ್ ಮಾಡುವಂತೆ ಮೀನುಗಾರರು ಕಳೆದ ಅನೇಕ ವರ್ಷಗಳಿಂದ ಆಗ್ರಹಿಸುತ್ತಿದ್ದರೂ ಈ ವರೆಗೆ ಇದಕ್ಕೆ ಸ್ಪಂದನೆ ದೊರೆತಿಲ್ಲ.

    Gangolli Bandaru 2

    ಶೌಚಗೃಹವಿಲ್ಲ

    ಪ್ರತಿ ವರ್ಷ ಕೋಟ್ಯಾಂತರ ರೂ. ವ್ಯವಹಾರ ನಡೆಸುತ್ತಿರುವ ಗಂಗೊಳ್ಳಿ ಮೀನುಗಾರಿಕಾ ಬಂದರಿನಲ್ಲಿ ಮಹಿಳೆಯರಿಗೆ ಹಾಗೂ ಪುರುಷರಿಗೆ ಶೌಚಗೃಹದ ವ್ಯವಸ್ಥೆಯಿಲ್ಲ. ಹೀಗಾಗಿ ವ್ಯವಹಾರ ನಿಮಿತ್ತ ಬಂದರಿಗೆ ಬರುವ ಮೀನುಗಾರ ಮಹಿಳೆಯರು ಹಾಗೂ ಪುರುಷರು ತೊಂದರೆ ಅನುಭವಿಸುತ್ತಿದ್ದಾರೆ. ಸುಸಜ್ಜಿತ ಶೌಚಗೃಹ ನಿರ್ಮಿಸುವಂತೆ ಅನೇಕ ವರ್ಷಗಳಿಂದ ಆಗ್ರಹಿಸುತ್ತಾ ಬಂದಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಕ್ರಮಕೈಗೊಂಡಿಲ್ಲ ಎಂದು ಮೀನುಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ವಿಶ್ರಾಂತಿ ಗೃಹಗಳಿಲ್ಲ

    ಪ್ರತಿನಿತ್ಯ ಗಂಗೊಳ್ಳಿ ಬಂದರಿಗೆ ಆಗಮಿಸುತ್ತಿರುವ ಮೀನುಗಾರ ಮಹಿಳೆಯರಿಗೆ ತಂಗಲು ಬಂದರಿನಲ್ಲಿ ವಿಶ್ರಾಂತಿ ಗೃಹವಿಲ್ಲ. ಮೀನುಗಾರ ಮಹಿಳೆಯರು ಹರಾಜು ಪ್ರಾಂಗಣ ಅಥವಾ ಸಣ್ಣಪುಟ್ಟ ಶೆಡ್‌ಗಳಲ್ಲಿ ವಿಶ್ರಾಂತಿ ಪಡೆದುಕೊಳ್ಳುತ್ತಿದ್ದಾರೆ. ಬಂದರಿನಲ್ಲಿ ಮಹಿಳೆಯರಿಗೆ ವಿಶ್ರಾಂತಿ ಗೃಹ ನಿರ್ಮಿಸಿಕೊಡುವಂತೆ ಬೇಡಿಕೆ ಸಲ್ಲಿಸಿದ್ದರೂ ಈ ವರೆಗೆ ಯಾವುದೇ ಪ್ರಯೋಜನವಾಗಿಲ್ಲ ಎಂದು ಮೀನುಗಾರ ಮಹಿಳೆಯರು ಆರೋಪಿಸಿದ್ದಾರೆ.

    ಭದ್ರತೆ ಇಲ್ಲ

    ಉಗ್ರರು ಸಮುದ್ರ ತೀರದ ಮೂಲಕ ನುಸುಳುವ ಸಂಚು ರೂಪಿಸಿರುವುದರಿಂದ ಬಂದರುಗಳಿಗೆ ಭದ್ರತೆ ಕೈಗೊಳ್ಳಬೇಕಾಗಿದೆ. ಆದರೆ ಗಂಗೊಳ್ಳಿ ಮೀನುಗಾರಿಕಾ ಬಂದರಿನಲ್ಲಿ ಭದ್ರತಾ ವ್ಯವಸ್ಥೆ ಕಲ್ಪಿಸಿಲ್ಲ. ಬಂದರು ಪ್ರದೇಶದ ಸುತ್ತಲೂ ಗೋಡೆ ನಿರ್ಮಿಸಿಲ್ಲ. ಬಂದರು ವಠಾರದಲ್ಲಿ ಸಿಸಿ ಕ್ಯಾಮರಾ ಅಳವಡಿಸಿಲ್ಲ. ವಾಚ್‌ಮ್ಯಾನ್ ನೇಮಕವೂ ಆಗಿಲ್ಲ. ಒಟ್ಟಿನಲ್ಲಿ ಭದ್ರತೆ ದೃಷ್ಟಿಯಲ್ಲಿ ಗಂಗೊಳ್ಳಿ ಮೀನುಗಾರಿಕಾ ಬಂದರು ಬಹಳಷ್ಟು ಹಿಂದೆ ಬಿದ್ದಿದೆ.

    ಕುಡಿವ ನೀರಿಲ್ಲ

    ಐದು ನದಿಗಳ ಸಂಗಮ ತಾಣವಾಗಿರುವ ಗಂಗೊಳ್ಳಿಯಲ್ಲಿ ಕುಡಿಯುವ ನೀರಿಗೆ ಬರ ಇಲ್ಲದಿದ್ದರೂ, ಮೀನುಗಾರಿಕಾ ಬಂದರಿನಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಹೀಗಾಗಿ ಮೀನುಗಾರರು ಬಾಟಲಿ ನೀರನ್ನು ಬಳಸಬೇಕಾಗಿದ್ದು, ಬಂದರಿನಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವಂತೆ ಮಾಡಿದ ಮನವಿಗೆ ಸಕಾರಾತ್ಮಕ ಸ್ಪಂದನೆ ದೊರೆತಿಲ್ಲ.

    ಕಳೆದ ಅನೇಕ ವರ್ಷಗಳಿಂದ ಅಭಿವೃದ್ಧಿಯಲ್ಲಿ ಹಿನ್ನಡೆ ಅನುಭವಿಸುತ್ತಿರುವ ಗಂಗೊಳ್ಳಿ ಮೀನುಗಾರಿಕಾ ಬಂದರಿನಲ್ಲಿ ಅನೇಕ ಅಭಿವೃದ್ಧಿ ಕಾಮಗಾರಿಗಳು ನಡೆಯಬೇಕಿದೆ. ಬಂದರಿನ ವಾರ್ಫ್‌ನಲ್ಲಿ ಜೆಟ್ಟಿ ಪುನರ್ ನಿರ್ಮಾಣ ಕಾರ್ಯ ಆರಂಭಿಸುವುದು, ಮಹಿಳೆಯರಿಗೆ ವಿಶ್ರಾಂತಿ ಗೃಹ ನಿರ್ಮಿಸುವುದು, ಸುಸಜ್ಜಿತ ಶೌಚಾಲಯ ನಿರ್ಮಾಣ, ಬಂದರಿನ ಸುತ್ತಲೂ ಆವರಣ ಗೋಡೆ ನಿರ್ಮಾಣ, ವಾಹನ ನಿಲುಗಡೆಗೆ ತಂಗುದಾಣ ನಿರ್ಮಾಣ, ಕುಡಿಯುವ ನೀರಿನ ವ್ಯವಸ್ಥೆ, ಜೆಟ್ಟಿ ಪ್ರದೇಶದಲ್ಲಿ ಹೂಳೆತ್ತುವುದು, ಮೀನುಗಾರಿಕಾ ಧಕ್ಕೆಯ ಪಾರ್ಕಿಂಗ್ ಪ್ರದೇಶದ ಕಾಂಕ್ರೀಟಿಕರಣ ಮೊದಲಾದವುಗಳ ಬಗ್ಗೆ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗುತ್ತಿದ್ದರೂ, ಸರ್ಕಾರ ಗಂಗೊಳ್ಳಿ ಮೀನುಗಾರಿಕಾ ಬಂದರಿನ ಬೇಡಿಕೆಗಳಿಗೆ ಅಸ್ತು ಎನ್ನುತ್ತಿಲ್ಲ.

    ಬಂದರಿನ ಮೊದಲ ಹಂತದ ಕಾಮಗಾರಿ ಮುಗಿದು 15 ವರ್ಷ ಕಳೆದರೂ ಇನ್ನೂ ಮೀನುಗಾರಿಕಾ ಇಲಾಖೆಯಿಂದ ಎರಡನೇ ಹಂತದ ಕಾಮಗಾರಿಗೆ ಪ್ರಸ್ತಾವನೆಯೇ ಹೋಗಿಲ್ಲ. ಜೆಟ್ಟಿ ಪುನರ್ ನಿರ್ಮಾಣ ಕಾರ್ಯ ಅರ್ಧಕ್ಕೆ ನಿಂತಿದೆ. ಬಂದರು ವಿಸ್ತರಣೆಗೆ ಎರಡನೇ ಹಂತದ ಕಾಮಗಾರಿ ಕೈಗೆತ್ತಿಕೊಂಡರೆ ಸಾಕಷ್ಟು ಪ್ರಯೋಜನವಾಗಲಿದೆ.
    -ರಾಮಪ್ಪ ಖಾರ್ವಿ, ಮೀನುಗಾರ ಮುಖಂಡ, ಗಂಗೊಳ್ಳಿ

    ಗಂಗೊಳ್ಳಿ ಬಂದರು ಅಭಿವೃದ್ಧಿಗೆ ಪಟ್ಟಿ ಸಿದ್ಧಪಡಿಸಿ ಇಲಾಖೆಯ ಮೇಲಧಿಕಾರಿಗಳಿಗೆ ಕಳುಹಿಸಲಾಗಿದೆ. ಮಹಿಳೆಯರಿಗೆ ವಿಶ್ರಾಂತಿ ಗೃಹ, ಸುಸಜ್ಜಿತ ಶೌಚಾಲಯ, ಬಂದರಿನ ಸುತ್ತ ಆವರಣ ಗೋಡೆ ನಿರ್ಮಾಣ ಸಹಿತ ಅನೇಕ ಯೋಜನೆ ಕೈಗೊಳ್ಳಲು ಪ್ರಸ್ತಾವನೆ ಸಲ್ಲಿಸಲಾಗಿದೆ. ಇಲಾಖೆ ಈ ನಿಟ್ಟಿನಲ್ಲಿ ಸ್ಪಂದಿಸುವ ನಿರೀಕ್ಷೆ ಇದೆ.
    -ಕುಮಾರಸ್ವಾಮಿ, ಮೀನುಗಾರಿಕಾ ಸಹಾಯಕ ನಿರ್ದೇಶಕರು, ಗಂಗೊಳ್ಳಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts