More

    ರತಿ-ಮನ್ಮಥರ ಮೂರ್ತಿಗಳಿಗಿಲ್ಲ ಬೇಡಿಕೆ

    ಮಲ್ಲು ಕಳಸಾಪುರ ಲಕ್ಷ್ಮೇಶ್ವರ

    ಕರೊನಾ ಎರಡನೇ ಅಲೆಯ ನಿಯಂತ್ರಣಕ್ಕಾಗಿ ಸರ್ಕಾರ ಹೋಳಿ ಹಬ್ಬದ ಸಾರ್ವಜನಿಕ ಆಚರಣೆ, ಕಾಮರತಿ ಮೂರ್ತಿ ಪ್ರತಿಷ್ಠಾಪನೆಗೆ ಕಡಿವಾಣ ಹಾಕಿದೆ. ಇದರಿಂದ, ತಿಂಗಳುಗಳ ಮೊದಲೇ ಕಾಮರತಿ ಮೂರ್ತಿ ತಯಾರಿಸಿದ ಕಲಾವಿದರು ಸಂಕಷ್ಟಕ್ಕೆ ಸಿಲುಕಿದಂತಾಗಿದೆ.

    ಕಳೆದ ವರ್ಷದ ಹೋಳಿ ಹಬ್ಬ ಕರೊನಾ ಭೀತಿಯ ನಡುವೆಯೂ ಸಂಪ್ರದಾಯದಂತೆ ನಡೆದು ಹೋಗಿತ್ತು. ಸಿದ್ಧಗೊಂಡಿದ್ದ ಕಾಮರತಿ ಮೂರ್ತಿಗಳು ಮಾರಾಟವಾಗಿದ್ದವು. ಆದರೆ, ಗಣೇಶನ ಹಬ್ಬದ ವೇಳೆ ಕರೊನಾ ಕಾಮೋಡ ಆವರಿಸಿತ್ತು. ಸಾರ್ವಜನಿಕ ಗಣೇಶ ಮೂರ್ತಿ ಪ್ರತಿಷ್ಠಾಪನೆ ನಿಷೇಧಿಸಿದ್ದರಿಂದ ಕಲಾವಿದರ ಬದುಕಿಗೆ ವಿಘ್ನವುಂಟಾಗಿತ್ತು. ಹಬ್ಬದ ಬಳಿಕ ಕರೊನಾದ ಹಾವಳಿ ಕಡಿಮೆಯಾಗುತ್ತ ಜನಜೀವನ ಯಥಾಸ್ಥಿತಿಗೆ ಬಂದಿತು. ಹೀಗಾಗಿ, ಕಲಾವಿದರು ಕೊಂಚ ನೆಮ್ಮದಿಯ ನಿಟ್ಟುಸಿರು ಬಿಟ್ಟು ಮತ್ತೆ ಹೋಳಿ ಹಬ್ಬಕ್ಕೆ ಕಾಮರತಿಯರ ಮೂರ್ತಿ ಸಿದ್ಧಪಡಿಸಿದರು. ಇದೀಗ, ಮತ್ತೆ ಕರೊನಾ ಭೂತ ವಕ್ಕರಿಸಿದ್ದು ಮೂರ್ತಿ ಕಲಾವಿದರನ್ನು ಸಂಕಷ್ಟಕ್ಕೆ ತಳ್ಳಿದೆ.

    ಸೋಂಕು ನಿಯಂತ್ರಕ್ಕಾಗಿ ಹೋಳಿ ಸೇರಿ ಹಬ್ಬಗಳ ಸಾರ್ವಜನಿಕ ಆಚರಣೆಗೆ ನಿರ್ಬಂಧ ವಿಧಿಸಿ ಸಾರ್ವಜನಿಕವಾಗಿ ಕಾಮರತಿ ಮೂರ್ತಿ ಪ್ರತಿಷ್ಠಾಪಿಸಿ ಹಬ್ಬ ಆಚರಿಸುವಂತಿಲ್ಲ. ನಿಯಮ ಉಲ್ಲಂಘಿಸಿದರೆ ಸಂಘಟಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂಬ ಎಚ್ಚರಿಕೆ ನೀಡಲಾಗಿದೆ. ಹೀಗಾಗಿ ಸಾರ್ವಜನಿಕ ಸಂಘ-ಸಂಸ್ಥೆಗಳು, ಕಮಿಟಿಗಳು ಹಿಂದೆ ಸರಿದಿದ್ದು, ನೂರಾರು ಮೂರ್ತಿಗಳು ಮಾರಾಟವಾಗದೆ ಉಳಿದಿವೆ.

    ತಾಲೂಕು ಸೇರಿ ನೆರೆಯ ಕುಂದಗೋಳ, ಸವಣೂರ, ಶಿಗ್ಗಾಂವಿ, ಶಿರಹಟ್ಟಿ ತಾಲೂಕಿನ ಹಳ್ಳಿಗಳಿಗಳಿಗೆ ಲಕ್ಷ್ಮೇಶ್ವರದ ಕಲಾವಿದರೇ ಮೂರ್ತಿಗಳನ್ನು ಸಿದ್ಧಪಡಿಸುತ್ತ ಬಂದಿದ್ದಾರೆ. ಪಟ್ಟಣದಲ್ಲಿ 20 ಕ್ಕೂ ಹೆಚ್ಚು ಕಲಾವಿದ ಕುಟುಂಬಗಳು ಮೂರ್ತಿ ತಯಾರಿಕೆಯ ಕಾಯಕದಲ್ಲಿ ತೊಡಗಿವೆ. ಪ್ರತಿಯೊಬ್ಬರೂ 30 ರಿಂದ 40 ಮೂರ್ತಿ ತಯಾರಿಸಿ, ಆಕಾರಗಳ ಆಧಾರದ ಮೇಲೆ 500 ರಿಂದ 2000 ರೂಪಾಯಿವರೆಗೆ ಮಾರಾಟ ಮಾಡುತ್ತಾರೆ. ಮಂಡಳಿಗಳ ಬೇಡಿಕೆಯಂತೆ ತಿಂಗಳ ಮೊದಲೇ ಮನೆ ಮಂದಿಯೆಲ್ಲ ಸೇರಿ ತಯಾರಿಸಿದ ಮೂರ್ತಿಗಳನ್ನು ಕೇಳುವವರೇ ಇಲ್ಲದಂತಾಗಿದೆ. ಮಣ್ಣು, ಬಣ್ಣ, ಅಲಂಕಾರಿಕ ಉಪಕರಣಗಳ ವೆಚ್ಚ ಸೇರಿ ಸಾವಿರಾರು ರೂಪಾಯಿ ಬಂಡವಾಳ ಹಾಕಿ ಸಿದ್ಧಪಡಿಸಿದ ಮೂರ್ತಿಗಳು ಮೂಲೆಗುಂಪಾಗುವ ಪರಿಸ್ಥಿತಿ ಉಂಟಾಗಿದೆ.

    ಕೋವಿಡ್ ಸೋಂಕು ನಿಯಂತ್ರಣಕ್ಕಾಗಿ ಸಾರ್ವಜನಿಕ ಸ್ಥಳದಲ್ಲಿ ಮೂರ್ತಿ ಪ್ರತಿಷ್ಠಾಪನೆ, ಉತ್ಸವ, ಮೆರವಣಿಗೆ ನಿರ್ಬಂಧಿಸಿದೆ. ಈ ಆದೇಶ ಪಾಲನೆಗಾಗಿ ಸಾರ್ವಜನಿಕ ಪ್ರಕಟಣೆ, ಪ್ರಚಾರ ಮಾಡಲಾಗಿದೆ.

    | ಶಂಕರ ಹುಲ್ಲಮ್ಮನವರ ಲಕ್ಷ್ಮೇಶ್ವರ ಪುರಸಭೆ ಮುಖ್ಯಾಧಿಕಾರಿ

    ಕರೊನಾ ಹಿನ್ನೆಲೆಯಲ್ಲಿ ಕಳೆದ ವರ್ಷ ಸಿದ್ಧಪಡಿಸಿದ ಗಣೇಶ ಮೂರ್ತಿಗಳು ಮತ್ತು ಈಗ ಕಾಮರತಿ ಮೂರ್ತಿಗಳೂ ಮಾರಾಟವಾಗಲಿಲ್ಲ. ಇದರಿಂದ ಸಾಲ ಮಾಡಿ ಹಾಕಿದ ಬಂಡವಾಳಕ್ಕೆ ಕೊಕ್ಕೆ ಬಿದ್ದಿದೆ. ಹಿರಿಯರ ಕಾಲದಿಂದಲೂ ಮೂರ್ತಿ ತಯಾರಿಕೆ ಕೆಲಸದಿಂದಲೇ ಬದುಕು ಕಟ್ಟಿಕೊಂಡಿರುವ ನಮ್ಮಂತಹ ಅನೇಕ ಕುಟುಂಬಗಳಿಗೆ ದಿಕ್ಕುತೋಚದಂತಾಗಿದೆ. ಎರಡು ಹೊತ್ತಿನ ಊಟಕ್ಕೂ ಕಷ್ಟಪಡಬೇಕಾದ ಕಲಾವಿದರಿಗೆ ಸರ್ಕಾರ ನೆರವಾಗಬೇಕು.

    | ಪ್ರವೀಣ ಗಾಯಕರ ಪ್ರಕಾಶ ಕುಂಬಾರ ಕಲಾವಿದರು ಲಕ್ಷ್ಮೇಶ್ವರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts