More

    ಬಿಜೆಪಿಯಲ್ಲಿ ಮೂಡಿಲ್ಲ ಒಮ್ಮತ

    ರಾಣೆಬೆನ್ನೂರ: ನಗರಸಭೆ ಅಧ್ಯಕ್ಷರ ಆಯ್ಕೆ ಚುನಾವಣೆ ದಿನಾಂಕ ನ. 1ರಂದು ನಿಗದಿಯಾಗುತ್ತಿದ್ದಂತೆ ರಾಜಕೀಯ ಚಟುವಟಿಕೆ ಚುರುಕುಗೊಂಡಿದೆ.

    ನಗರಸಭೆಯು 35 ಸದಸ್ಯರ ಬಲ ಹೊಂದಿದೆ. ಈ ಪೈಕಿ ಬಿಜೆಪಿಯ 15, ಕಾಂಗ್ರೆಸ್​ನ 9, ಕೆಪಿಜೆಪಿಯ 9 ಹಾಗೂ ಇಬ್ಬರು ಪಕ್ಷೇತರ ಸದಸ್ಯರಿದ್ದಾರೆ. ಸಂಸದ, ಶಾಸಕ, ವಿಧಾನ ಪರಿಷತ್ ಸದಸ್ಯರ ಮತ ಸೇರಿದರೆ ಒಟ್ಟು ಸಂಖ್ಯಾಬಲ 38ಕ್ಕೇರುತ್ತದೆ. ಆಗ ನಗರಸಭೆ ಅಧ್ಯಕ್ಷರ ಆಯ್ಕೆಗೆ 20 ಮತಗಳು ಬೇಕು. ಅಧ್ಯಕ್ಷ ಸ್ಥಾನ ‘ಹಿಂದುಳಿದ ಅ ವರ್ಗ ಮಹಿಳೆ’, ಉಪಾಧ್ಯಕ್ಷ ಸ್ಥಾನ ‘ಸಾಮಾನ್ಯ ಮಹಿಳೆ’ಗೆ ಮೀಸಲಾಗಿದೆ.

    ಬಹುಮತವಿದ್ದರೂ ಮುಸುಕಿನ ಗುದ್ದಾಟ: ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೇರಲು 15 ಸದಸ್ಯರನ್ನು ಹೊಂದಿರುವ ಬಿಜೆಪಿಗೆ ಈಗಾಗಲೇ ಕೆಪಿಜೆಪಿಯ ಒಬ್ಬ ಹಾಗೂ ಪಕ್ಷೇತರ ಒಬ್ಬ ಸದಸ್ಯ ಸೇರ್ಪಡೆಯಾಗಿದ್ದಾರೆ. ಇದರಿಂದ 17 ಸದಸ್ಯರು ಬಿಜೆಪಿ ಪರ ಇದ್ದಾರೆ. ಶಾಸಕ, ಸಂಸದ, ವಿಧಾನ ಪರಿಷತ್ ಸದಸ್ಯರು- ಈ ಮೂವರೂ ಬಿಜೆಪಿಯವರೇ ಇರುವುದರಿಂದ ಬಿಜೆಪಿಗೆ ಸ್ಪಷ್ಟವಾಗಿ 20 ಮತಗಳು ಬರುತ್ತವೆ. ಹೀಗಾಗಿ, ನಗರಸಭೆ ಅಧಿಕಾರ ಈ ಬಾರಿ ಬಿಜೆಪಿ ಪಾಲಾಗಲಿದೆ ಎನ್ನಲಾಗುತ್ತಿದೆ.

    ಅಧ್ಯಕ್ಷ ಸ್ಥಾನಕ್ಕೆ 1ನೇ ವಾರ್ಡ್ ಸದಸ್ಯೆ ರೂಪಾ ಚಿನ್ನಿಕಟ್ಟಿ ಹಾಗೂ 17ನೇ ವಾರ್ಡ್​ನ ಸದಸ್ಯೆ ಕವಿತಾ ಹೆದ್ದೇರಿ ಪ್ರಬಲ ಆಕಾಂಕ್ಷಿಗಳು. ಕೆಲವರು ಕವಿತಾ ಹೆದ್ದೇರಿ ಪರ, ಇನ್ನು ಕೆಲವರು ರೂಪಾ ಚಿನ್ನಿಕಟ್ಟಿ ಪರವಿದ್ದಾರೆ. ಇದರಿಂದಾಗಿ ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿಯಲ್ಲೇ ಮುಸುಕಿನ ಗುದ್ದಾಟ ಶುರುವಾಗಿದೆ. ಶಾಸಕ ಅರುಣಕುಮಾರ ಪೂಜಾರ ನೇತೃತ್ವದಲ್ಲಿ ಸಭೆ ನಡೆಸಲಾಗಿದ್ದರೂ, ಒಮ್ಮತ ಮೂಡಿಲ್ಲ ಎನ್ನಲಾಗುತ್ತಿದೆ.

    ಕಾಂಗ್ರೆಸ್​ಗೆ ತನ್ನ 9 ಸದಸ್ಯರ ಜತೆಗೆ ಕೆಪಿಜೆಪಿಯ 5 ಸದಸ್ಯರ ಬೆಂಬಲವಿದೆ. ಆದರೂ ಬಹುಮತಕ್ಕೆ 6 ಸದಸ್ಯರ ಕೊರತೆಯಿದೆ. ಇನ್ನುಳಿದ ಕೆಪಿಜೆಪಿ ಹಾಗೂ ಪಕ್ಷೇತರ ಸದಸ್ಯರಿಗೆ ಗಾಳ ಹಾಕಿದೆ. ಅಲ್ಲದೆ, ಬಿಜೆಪಿಯಲ್ಲಿನ ಮುಸುಕಿನ ಗುದ್ದಾಟದ ಲಾಭ ಪಡೆದುಕೊಳ್ಳಲು ಮುಂದಾಗಿದೆ. ಬಿಜೆಪಿಯಲ್ಲಿ ಅಧ್ಯಕ್ಷ ಸ್ಥಾನದಿಂದ ವಂಚಿತವಾದ ಸದಸ್ಯರನ್ನು ಚುನಾವಣೆಗೆ ಗೈರುಗೊಳಿಸಿದರೆ ತಮ್ಮ ಗೆಲುವು ನಿಶ್ಚಿತವಾಗಲಿದೆ ಎಂಬುದು ಕಾಂಗ್ರೆಸ್ಸಿಗರ ಲೆಕ್ಕಾಚಾರ. ಅಲ್ಲದೆ, ಕಾಂಗ್ರೆಸ್​ನಲ್ಲಿ 3ನೇ ವಾರ್ಡ್​ನ ಸದಸ್ಯೆ ಚಂಪಕ ಬಿಸಲಹಳ್ಳಿ ಒಬ್ಬರೇ ಆಕಾಂಕ್ಷಿಯಾಗಿರುವುದರಿಂದ ಹೆಚ್ಚಿನ ಪೈಪೋಟಿ ಇಲ್ಲ.

    ಸದಸ್ಯರ ನಡೆ ಮೇಲೆ ಶಂಕರ ಭವಿಷ್ಯ

    ನಗರಸಭೆ ಅಧ್ಯಕ್ಷರ ಆಯ್ಕೆ ಚುನಾವಣೆಯಲ್ಲಿ ಆರ್. ಶಂಕರ ಬೆಂಬಲಿತ ಕೆಪಿಜೆಪಿ 9 ಸದಸ್ಯರ ಪಾತ್ರವೂ ಮುಖ್ಯವಾಗಲಿದೆ. ಕಳೆದ ವಿಧಾನಸಭೆ ಉಪಚುನಾವಣೆಯಲ್ಲಿ 5 ಸದಸ್ಯರು ಕಾಂಗ್ರೆಸ್ ಬೆಂಬಲಿಸಿದ್ದಾರೆ. ಇನ್ನುಳಿದ ನಾಲ್ವರಿಗೂ ಕಾಂಗ್ರೆಸ್ ಗಾಳ ಹಾಕಿದೆ. ಹೀಗಾಗಿ, ಬಿಜೆಪಿ ಹೈಕಮಾಂಡ್, ಕೆಪಿಜೆಪಿ ಸದಸ್ಯರನ್ನು ಬಿಜೆಪಿಗೆ ಕರೆತರುವ ಜವಾಬ್ದಾರಿಯನ್ನು ಆರ್. ಶಂಕರಗೆ ವಹಿಸಿದ್ದಾರೆ ಎಂಬ ಮಾತುಗಳು ಹರಿದಾಡುತ್ತಿವೆ. ಮಂತ್ರಿ ಸ್ಥಾನದ ಕನಸು ಕಾಣುತ್ತಿರುವ ಶಂಕರಗೆ ಬಿಜೆಪಿ ಹೈಕಮಾಂಡ್ ಮಾತು ಕೇಳಬೇಕಾದ ಅನಿವಾರ್ಯತೆಯಿದೆ. ಆದರೆ, ಕಾಂಗ್ರೆಸ್​ನತ್ತ ಆಸಕ್ತಿ ಇರುವ ಕೆಪಿಜೆಪಿ ಸದಸ್ಯರು ಶಂಕರರನ್ನು ತಿರುಗಿ ನೋಡುತ್ತಿಲ್ಲ. ಒಬ್ಬ ಸದಸ್ಯ ನಾಪತ್ತೆ ಆಗಿದ್ದಾರೆ ಎನ್ನಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕೆಪಿಜೆಪಿಯ 9 ಸದಸ್ಯರ ನಡೆ ಮೇಲೆ ಆರ್. ಶಂಕರ ಮಂತ್ರಿ ಸ್ಥಾನದ ಭವಿಷ್ಯ ನಿರ್ಧಾರವಾಗಲಿದೆ ಎಂಬ ಮಾತುಗಳು ಹರಿದಾಡುತ್ತಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts