More

    ಹೊಸನಗರ: 4 ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳೇ ಇಲ್ಲ

    ರವಿ ಬಿದನೂರು ಹೊಸನಗರ
    ತಾಲೂಕಿನ ಬಹುತೇಕ ಅಂಗನವಾಡಿಗಳಲ್ಲಿ ಎಲ್ಲವೂ ಇದೆ. ಆದರೆ ಸಮರ್ಪಕವಾಗಿಲ್ಲ ಎಂಬ ಕೂಗು ಇದೆ. 40ಕ್ಕೂ ಹೆಚ್ಚು ಅಂಗನವಾಡಿಗಳಿಗೆ ನೆಟ್‌ವರ್ಕ್ ಸಮಸ್ಯೆ ಕಾಡುತ್ತಿದ್ದು ಸಂಪರ್ಕವೇ ದೊಡ್ಡ ತಲೆನೋವಾಗಿದೆ.

    ಮಕ್ಕಳು, ಬಾಣಂತಿಯರ ಆರೋಗ್ಯ ಹಾಗೂ ಮಕ್ಕಳ ಕಲಿಕೆಗೆ ಸೀಮಿತವಾಗಬೇಕಿದ್ದ ಕಾರ್ಯಕರ್ತೆಯರಿಗೆ ಗಣತಿ, ಸಮೀಕ್ಷೆ, ಬಿಎಲ್‌ಒ ಸೇರಿದಂತೆ ಬೇರೆ ಕೆಲಸಗಳಿಗೆ ಸರ್ಕಾರ ನಿಯೋಜನೆ ಮಾಡುತ್ತಿದೆ. ಇದರಿಂದ ಕಾರ್ಯಕರ್ತೆಯರ ನೇಮಕದ ಮೂಲ ಉದ್ದೇಶಕ್ಕೆ ತೊಡಕುಂಟಾಗಿದೆ.
    ತಾಲೂಕಿನಲ್ಲಿ ಒಟ್ಟು 346 ಅಂಗನವಾಡಿಗಳಿವೆ. ಅದರಲ್ಲಿ 298 ಅಂಗನವಾಡಿ ಕಟ್ಟಡಗಳು ಕಲಿಕೆಗೆ ಬಳಕೆಯಾಗುತ್ತಿವೆ. ಉಳಿದಂತೆ 48 ಕೇಂದ್ರಗಳನ್ನು ಶಿಥಿಲಾವಸ್ಥೆಯ ಕಾರಣ ಶಾಲೆ ಸೇರಿದಂತೆ ಇತರ ಕಟ್ಟಡಗಳಿಗೆ ಸ್ಥಳಾಂತರಿಸಲಾಗಿದೆ. ತಾಲೂಕಿನಲ್ಲಿ ಒಟ್ಟು 338 ಕಾರ್ಯಕರ್ತೆಯರು ಮತ್ತು 192 ಸಹಾಯಕಿಯರು ಕಾರ್ಯನಿರ್ವಹಿಸುತ್ತಿದ್ದಾರೆ. 8 ಕಾರ್ಯಕರ್ತೆಯರು ಮತ್ತು 29 ಸಹಾಯಕಿಯರ ಕೊರತೆ ಕಂಡು ಬಂದಿದೆ. ಸದರಿ ಅಂಗನವಾಡಿ ಕಟ್ಟಡಗಳಲ್ಲಿ ಕೊಠಡಿ, ಪಾಠೋಪಕರಣ ಮತ್ತು ಪೀಠೋಪಕರಣ ಸೌಲಭ್ಯ ಪರವಾಗಿಲ್ಲ ಎಂಬಂತಿದೆ.
    ತಾಲೂಕಿನ ಬೆಳ್ಳೂರು ಗ್ರಾಪಂ ವ್ಯಾಪ್ತಿಯ ವಾಟೆಸರ, ಹೆದ್ದಾರಿಪುರ ಗ್ರಾಪಂ ವ್ಯಾಪ್ತಿಯ ಗೋಣಿಕೆರೆ, ಪುರ್ಲಿಬಿಂಬ, ಮೂಡುಗೊಪ್ಪ ಗ್ರಾಪಂ ವ್ಯಾಪ್ತಿಯ ಚಕ್ಕಾರು ಮಿನಿ ಅಂಗನವಾಡಿಯಲ್ಲಿ ಒಂದೇ ಒಂದು ಮಕ್ಕಳು ಇರದೆ ಖಾಲಿ ಹೊಡೆಯುತ್ತಿವೆ. ಕಾರ್ಯಕರ್ತೆ ಅಂಗನವಾಡಿ ಭೇಟಿ ಕೊಟ್ಟು ಮನೆಗೆ ಹೋಗುವುದಕ್ಕೆ ಮಾತ್ರ ಸೀಮಿತವಾಗಿದೆ. ಆದರೆ ಚಕ್ಕಾರು ವ್ಯಾಪ್ತಿಯಲ್ಲಿ 3 ವರ್ಷಕ್ಕಿಂತ ಕಡಿಮೆ ಇರುವ ಮೂರು ಮಕ್ಕಳಿದ್ದು ಆ ಕುಟುಂಬಗಳಿಗೆ ಫುಡ್ ಒದಗಿಸುವುದಕ್ಕೆ ಮಾತ್ರ ಅಂಗನವಾಡಿ ಸೀಮಿತವಾಗಿದೆ.
    ಈಗಾಗಲೇ 10 ಅಂಗನವಾಡಿ ಕಟ್ಟಡಗಳಿಗೆ ಅನುದಾನ ಬಂದಿದ್ದು ದುರಸ್ತಿ ಕಾರ್ಯ ನಡೆಯುತ್ತಿದೆ. ಇನ್ನು 70 ಅಂಗನವಾಡಿಗಳ ಪಟ್ಟಿ ಕಳುಹಿಸಲಾಗಿದ್ದು ದುರಸ್ತಿಗಾಗಿ ಅನುದಾನ ಬೇಕಾಗಿದೆ. ತಾಲೂಕಿನ ಸಾಕಷ್ಟು ಅಂಗನವಾಡಿಗಳಲ್ಲಿ ಶೌಚಗೃಹ ಸೇರಿದಂತೆ ಮೂಲ ಸೌಕರ್ಯಗಳಿದ್ದರೂ ದುರಸ್ತಿಗಾಗಿ ಕಾಯುತ್ತಿವೆ.
    ಒಟ್ಟಾರೆ ಅರಾಣ್ಯ ಪ್ರದೇಶಗಳನ್ನೇ ಆಶ್ರಯಿಸಿಕೊಂಡಿರುವ ಹೊಸನಗರ ತಾಲೂಕಿನ ಅಂಗನವಾಡಿ ನಿರ್ವಹಣೆಯೇ ಒಂದು ಸವಾಲು, ಮೂಲ ಸೌಕರ್ಯಗಳ ಕೊರತೆ, ನೆಟ್‌ವರ್ಕ್ ಸಮಸ್ಯೆ, ಕಾರ್ಯಕರ್ತೆಯರ ಸಾಲು ಸಾಲು ಅಹವಾಲುಗಳ ನಡುವೆ ಇಲ್ಲಿಯ ಅಂಗನವಾಡಿಗಳ ಅಭಿವೃದ್ಧಿಗೆ ಸರ್ಕಾರ ವಿಶೇಷ ಗಮನ ಹರಿಸಬೇಕಿದೆ.
    ದೂರಸಂಪರ್ಕ ತಲೆನೋವು: ತಾಲೂಕಿನಲ್ಲಿರುವ 346 ಅಂಗನವಾಡಿಗಳಲ್ಲಿ 40ಕ್ಕೂ ಹೆಚ್ಚು ಅಂಗನವಾಡಿಗಳು ನೆಟ್‌ವರ್ಕ್ ಸಮಸ್ಯೆಯಿಂದ ತತ್ತರಿಸಿವೆ. ಯಾವುದೇ ಸಂಪರ್ಕ ಸಿಗದೆ ಕಾರ್ಯನಿರ್ವಹಿಸಬೇಕಾದ ಅನಿವಾರ್ಯ ಸ್ಥಿತಿ ಇಲ್ಲಿದೆ. ನಗರ, ಹುಂಚಾ, ಕೆರೆಹಳ್ಳಿ ಮತ್ತು ಕಸಬಾ ಹೋಬಳಿಯಲ್ಲೂ ಈ ಸಮಸ್ಯೆ ಕಂಡು ಬಂದಿದೆ. ಪ್ರತಿಯೊಂದು ಅಗತ್ಯ ಮಾಹಿತಿ, ಸಮಸ್ಯೆ ಬಗ್ಗೆ ಅರಿಯಲು ಮನೆ ಇಲ್ಲವೇ ಕಚೇರಿಗೆ ಭೇಟಿ ಕೊಡುವುದು ಅನಿವಾರ್ಯವಾಗಿದೆ. ಅದರಲ್ಲೂ ನಗರ ಹೋಬಳಿಯ ನಿಟ್ಟೂರು, ಸಂಪೇಕಟ್ಟೆ, ಹೊಸೂರು, ಮತ್ತಿಮನೆ, ಕೆ.ಬಿ.ಸರ್ಕಲ್ ಸೇರಿದಂತೆ 20ಕ್ಕೂ ಹೆಚ್ಚು ಅಂಗನವಾಡಿಗಳು ನೆಟ್‌ವರ್ಕ್ ಸಮಸ್ಯೆಯನ್ನು ಸವಾಲಾಗಿ ಎದುರಿಸುತ್ತಿವೆ.
    ಒಂದು ದಿನಕ್ಕೆ ಡಿಎ 30 ರೂ. ಮಾತ್ರ: ಕಾರ್ಯಕರ್ತೆಯರು ಮತ್ತು ಸಹಾಯಕಿಯರು ವಿವಿಧ ಸಮಸ್ಯೆಯಿಂದ ಬಳಲುತ್ತಿದ್ದು ಅದು ಅಂಗನವಾಡಿಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿರುವುದು ಕಂಡು ಬಂದಿದೆ. ತಾಲೂಕು ಕೇಂದ್ರ ಇಲ್ಲವೇ ಬೇರೆಡೆ ನಡೆಯುವ ಮೀಟಿಂಗ್‌ಗೆ ತೆರಳುವ ಕಾರ್ಯಕರ್ತೆಯರಿಗೆ ಟಿಎ ಮತ್ತು ಡಿಎ ನೀಡಲಾಗುತ್ತಿದೆ. ದೂರ ಗಮನಿಸಿ ಕಿಲೋಮೀಟರ್ ಆಧಾರದ ಮೇಲೆ ಟಿಎ ನೀಡಲಾಗುತ್ತಿದೆ. ಆದರೆ ಡಿಎ ಮಾತ್ರ 30 ರೂ. ನೀಡಲಾಗುತ್ತಿದೆ. ಇದರಿಂದ ಊಟ ಮಾಡುವ ಮಾತು ಹಾಗಿರಲಿ ಟೀ-ಕಾಫಿ ಕುಡಿಯಲೇ ಸಾಕಾಗುವುದಿಲ್ಲ. ಇನ್ನು ಮೀಟಿಂಗ್ ತಡವಾದರೆ ಇಡೀ ದಿನ ಅಲ್ಲಿಯೇ ಕೊಳೆಯಬೇಕು ಈ ಬಗ್ಗೆ ಗಮನಹರಿಸುತ್ತಿಲ್ಲ ಎಂಬ ಕೂಗಿದೆ.
    ಪೋಷಣ ಟ್ರಾೃಕರ್ ಸ್ಥಗಿತ: ಈ ಹಿಂದೆ ಅಂಗನವಾಡಿ ವ್ಯಾಪ್ತಿಗೆ ಬರುವ ಎಲ್ಲ ಫಲಾನುಭವಿ, ಯೋಜನೆಗಳ ವಿವರವನ್ನು ಕೈಬರಹದ ಮೂಲಕ ದಾಖಲಿಸಲಾಗುತ್ತಿತ್ತು. ಆದರೆ ಈಗ ಸರ್ಕಾರ ಪೋಷಣ್ ಟ್ರಾೃಕರ್ ಎಂಬ ಹೊಸ ಯೋಜನೆ ಜಾರಿಗೆ ತಂದಿದ್ದು, ಕಾರ್ಯಕರ್ತೆಯರಿಗೆ ನೀಡಲಾದ ಮೊಬೈಲ್‌ನಲ್ಲೇ ಎಲ್ಲವನ್ನು ದಾಖಲಿಸಬೇಕಿದೆ. ಇದಕ್ಕೆ ಬಹುದೊಡ್ಡ ತೊಡಕಾಗಿರುವುದು ನೆಟ್‌ವರ್ಕ್ ಸಮಸ್ಯೆ. ಹತ್ತಿರದ ಗ್ರಾಪಂಗೆ ತೆರಳಿ ಅಲ್ಲಿಯ ವೈಫೈ ಬಳಸಿಕೊಂಡು ಎಂಟ್ರಿ ಮಾಡಬೇಕು. ಕಾರ್ಯಕರ್ತೆಯರ ಕೆಲಸದ ಸಮಯ ಬೆಳಗ್ಗೆ 9.30ರಿಂದ ಸಂಜೆ 4ರವರೆಗೆ. ಆದರೆ ಇಲ್ಲಿಯ ಸಮಸ್ಯೆಗಳಿಂದಾಗಿ ದಿನಪೂರ್ತಿ ಅದರಲ್ಲೇ ಮುಳುಗಬೇಕಿದೆ. ಈ ನಡುವೆ ಕಳೆದ 6 ತಿಂಗಳಿಂದ ಮೊಬೈಲ್‌ಗೆ ಕರೆನ್ಸಿ ಹಾಕದ ಕಾರಣ ಪೋಷಣ ಟ್ರಾೃಕರ್ ಸ್ಥಗಿತಗೊಂಡಿದೆ. ಇದು ಅಂಗನವಾಡಿ ಬೆಳವಣಿಗೆಯನ್ನು ಕುಂಠಿತಗೊಳಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts