More

    ಕ್ಷೇತ್ರದ ಅಭಿವೃದ್ಧಿಗೆ ಆದ್ಯತೆ ಸಿಗಲಿದೆ

    ಕೆ.ಆರ್.ನಗರ: ನಾನು ಇಲ್ಲಿಯವರೆಗೆ ಯಾವುದೇ ಜಾತಿ ರಾಜಕಾರಣ ಮಾಡಿಲ್ಲ. ಎಲ್ಲರೂ ನನ್ನ ಸಮಾಜದವರೆಂದೇ ಭಾವಿಸಿದ್ದು, ಮುಂದೆಯೂ ಜಾತ್ಯತೀತವಾಗಿ ನಡೆದುಕೊಂಡು ಕ್ಷೇತ್ರಾಭಿವೃದ್ಧಿ ಮೂಲಕ ನಿಮ್ಮ ಋಣ ತೀರಿಸುತ್ತೇನೆ ಎಂದು ಶಾಸಕ ಡಿ.ರವಿಶಂಕರ್ ಹೇಳಿದರು.

    ತಾಲೂಕಿನ ಹೆಬ್ಬಾಳು ಗ್ರಾಮದಲ್ಲಿ ಶನಿವಾರ ಆಯೋಜಿಸಿದ್ದ ಕೃತಜ್ಞತಾ ಸಭೆಯಲ್ಲಿ ಮಾತನಾಡಿದರು. ನಾನು ಎಲ್ಲ ಸಮಾಜವನ್ನು ಪ್ರೀತಿಸಿ ಗೌರವಿಸುವುದನ್ನು ಅರಿತು ಮತದಾರರು ನನ್ನನ್ನು ಶಾಸಕನಾಗಿ ಆಯ್ಕೆ ಮಾಡಿ ಹೆಚ್ಚಿನ ಜವಾಬ್ದಾರಿ ನೀಡಿದ್ದಾರೆ. ಈಗ ನಾನು ಎಲ್ಲ ಗ್ರಾಮಗಳಿಗೂ ತೆರಳಿ ಕೃತಜ್ಞತೆ ಸಲ್ಲಿಸುತ್ತಿದ್ದು, ಮುಂದಿನ ದಿನಗಳಲ್ಲಿ ಅಧಿಕಾರಿಗಳನ್ನು ನಿಮ್ಮ ಗ್ರಾಮಗಳಿಗೆ ಕರೆತಂದು ಸಮಸ್ಯೆಗಳನ್ನು ಸ್ಥಳದಲ್ಲೇ ಬಗೆಹರಿಯುವಂತೆ ಕೆಲಸ ಮಾಡುತ್ತೇನೆ ಎಂದು ಭರವಸೆ ನೀಡಿದರು.

    ಇತಿಹಾಸ ಪ್ರಸಿದ್ಧ ಶ್ರೀ ಕಪ್ಪಡಿ ಕ್ಷೇತ್ರದ ಪಕ್ಕದಲ್ಲಿರುವ ಕಾವೇರಿ ನದಿಗೆ ಗಂಧನಹಳ್ಳಿ ಭಾಗದಿಂದ ಸಂಪರ್ಕ ಕಲ್ಪಿಸಲು ಸೇತುವೆ ನಿರ್ಮಾಣಕ್ಕೆ ಸಿಎಂ ಬಳಿ ಮನವಿ ಮಾಡಿದ್ದೇನೆ. ಶೀಘ್ರ ಸೇತುವೆ ನಿರ್ಮಾಣ ಮತ್ತು ರಸ್ತೆ ಅಭಿವೃದ್ಧಿ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

    ಹೆಬ್ಬಾಳು ಗ್ರಾಮಗಳಲ್ಲಿ ವಾಲ್ಮೀಕಿ , ವಿಶ್ವಕರ್ಮ ಸಮುದಾಯ ಭವನಕ್ಕೆ ನಿವೇಶನ ಹಾಗೂ ಹೆಬ್ಬಾಳು ಬಡಾವಣೆಯಲ್ಲಿ ಅಲ್ಪಸಂಖ್ಯಾತರ ಮನವಿ ಮೇರೆಗೆ ಮಸೀದಿ ನಿರ್ಮಾಣಕ್ಕೆ ಸರ್ಕಾರಿ ಜಾಗ ಗುರುತಿಸಿಕೊಡಲಾಗುವುದು. ಜತೆಗೆ, ಪರಿಶಿಷ್ಟ ಸಮುದಾಯವರಿಗೆ ಮಾರಿಗುಡಿ ನಿರ್ಮಾಣಕ್ಕೆ ಅನುದಾನ ಒದಗಿಸಲಾಗುವುದು ಎಂದು ಶಾಸಕರು ತಿಳಿಸಿದರು.

    ಬಟ್ಲರ್ ಕೊಪ್ಪಲು ಸೇರಿದಂತೆ ಕೆಲವು ರಸ್ತೆಗಳು ಅಭಿವೃದ್ಧಿ ಆಗಬೇಕಾಗಿದ್ದು ತಕ್ಷಣ ಅದಕ್ಕೆ ಕ್ರಮ ಕೈಗೊಳ್ಳುತ್ತೇನೆ. ಅಲ್ಲದೆ, ಹೆಬ್ಬಾಳು ಗ್ರಾಮದ ಜನರ ಹಾಗೂ ಬೇಡಿಕೆಗೆ ಅನುಸಾರವಾಗಿ ಎಲ್ಲ ಸಮಸ್ಯೆಗಳಿಗೂ ಹಂತ ಹಂತವಾಗಿ ಪರಿಹರಿಸುವ ಜತೆಗೆ ಸವಾರ್ಂಗೀಣ ಅಭಿವೃದ್ಧಿಗೆ ಸೂಕ್ತ ಕ್ರಮ ಕೈಗೊಳ್ಳುತ್ತೇನೆ ಎಂದು ಭರವಸೆ ನೀಡಿದರು.

    ತಾಪಂ ಮಾಜಿ ಅಧ್ಯಕ್ಷ ಬೋರೆ ನಾಗರಾಜ್, ಕಾಂಗ್ರೆಸ್ ಮುಖಂಡ ವೇಣುಗೋಪಾಲ್ ಮಾತನಾಡಿದರು. ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ತೆರೆದ ವಾಹನದಲ್ಲಿ ಶಾಸಕ ಡಿ.ರವಿಶಂಕರ್ ಹೆಬ್ಬಾಳು ಗ್ರಾಮದ ಪ್ರಮುಖ ರಸ್ತೆಗಳಲ್ಲಿ ರೋಡ್ ಶೋ ಮೂಲಕ ಮತದಾರರಿಗೆ ಕೃತಜ್ಞತೆ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಜಿಪಂ ಮಾಜಿ ಸದಸ್ಯ ಜಯರಾಮೇಗೌಡ, ತಾಪಂ ಮಾಜಿ ಸದಸ್ಯ ಗೋವಿಂದೇಗೌಡ ಎಪಿಎಂಸಿ ಮಾಜಿ ಉಪಾಧ್ಯಕ್ಷ ಎಚ್.ಎಚ್.ನಾಗೇಂದ್ರ, ಮಾಜಿ ನಿರ್ದೇಶಕ ರಾಜಶೇಖರ್, ಗ್ರಾಪಂ ಉಪಾಧ್ಯಕ್ಷ ನಾಗೇಶ, ಸದಸ್ಯ ವೆಂಕಟರಾಮು, ಮಾಜಿ ಸದಸ್ಯರಾದ ಎಚ್.ಎಂ.ಮಂಜು, ವಿಷಕಂಠ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಂ.ಎಸ್.ಮಹದೇವ್, ಉದಯಶಂಕರ್, ನಗರಾಧ್ಯಕ್ಷ ರಮೇಶ್, ಮುಖಂಡರಾದ ಎಚ್.ಪಿ.ಗೋಪಾಲ್, ಪರಶುರಾಮ್, ಹೆಬ್ಬಾಳುಸ್ವಾಮಿ, ಚೀರ‌್ನಹಳ್ಳಿಶಿವಣ್ಣ, ಚೀರ‌್ನಹಳ್ಳಿಶಂಕರ್, ರವಿಪೂಜಾರಿ, ಎಂ.ಎ.ನಾಗೇಂದ್ರ, ಪಂಟೆ ಜಗದೀಶ, ನರಸಿಂಹ, ಜಂಗ್ಲಿ ವೆಂಕಟೇಶ್ ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts