More

    ಬಿಕರ್ನಕಟ್ಟೆ, ಮರೋಳಿ, ಪಡೀಲ್ ರೂಟ್, ಎರಡು ವರ್ಷದಿಂದ ಸಂಚರಿಸುತ್ತಿಲ್ಲ ಬಸ್

    ಮಂಗಳೂರು: ನಗರದ ವ್ಯಾಪ್ತಿಯ ಸ್ಟೇಟ್‌ಬ್ಯಾಂಕ್‌ನಿಂದ ನಂತೂರು, ಬಿಕರ್ನಕಟ್ಟೆ, ಮರೋಳಿಯಾಗಿ ಪಡೀಲ್, ಅಡ್ಯಾರ್ ಕಡೆಗೆ ಸಂಚರಿಸುತ್ತಿದ್ದ ಸಿಟಿಬಸ್‌ಗಳು ಸಂಚಾರ ನಿಲ್ಲಿಸಿ ಸುಮಾರು ಎರಡು ವರ್ಷವಾಗಿದೆ. ಲಾಕ್‌ಡೌನ್ ಬಳಿಕ ಎಲ್ಲ ಮಾರ್ಗದಲ್ಲಿ ಬಸ್ ಸಂಚಾರ ಆರಂಭವಾದರೂ, ಈ ರೂಟ್‌ನಲ್ಲಿ ಮಾತ್ರ ಬಸ್ ಇಲ್ಲದ ಸಾರ್ವಜನಿಕರು ಅದರಲ್ಲೂ ಮುಖ್ಯವಾಗಿ ವಿದ್ಯಾರ್ಥಿಗಳು, ಹಿರಿಯ ನಾಗರಿಕರು ಸಂಕಷ್ಟ ಅನುಭವಿಸುವಂತಾಗಿದೆ.

    ಸುಮಾರು 40 ವರ್ಷಗಳಿಂದ ಈ ರೂಟ್‌ನಲ್ಲಿ 30, 30ಬಿ., 37 ನಂಬರ್‌ನ ಒಟ್ಟು 5 ಬಸ್‌ಗಳು ಸಂಚರಿಸುತ್ತಿದ್ದವು. ಆದರೆ 2019ರಿಂದ ಒಂದೊಂದೇ ಬಸ್ ಸಂಚಾರ ಸ್ಥಗಿತಗೊಳಿಸಲು ಆರಂಭಿಸಿದ್ದು, ಕೊನೆಗೆ 2 ಬಸ್ ಮಾತ್ರ ಓಡುತ್ತಿತ್ತು. ಕೋವಿಡ್ ಬಳಿಕ ಆ ಬಸ್‌ಗಳೂ ಈ ರೂಟ್‌ನಲ್ಲಿ ಬರುತ್ತಿಲ್ಲ. ಸಂಚಾರದ ಪರವಾನಗಿ ಇದ್ದರೂ, ಬಸ್ ಓಡಿಸದೇ ಇರುವ ಮಾಲೀಕರ ನಿರ್ಧಾರದ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದು, ತಕ್ಷಣ ಬಸ್ ಓಡಾಟಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಖಾಸಗಿಯವರು ಮುಂದಾಗದಿದ್ದರೆ, ಕೆಎಸ್‌ಆರ್‌ಟಿಸಿ ಬಸ್‌ಗಳನ್ನು ಪಡೀಲ್‌ನಿಂದ ಸ್ಟೇಟ್‌ಬ್ಯಾಂಕ್ ವರೆಗೆ ಇದೇ ಮಾರ್ಗದಲ್ಲಿ ಓಡಿಸಬೇಕು ಎಂದು ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.

    ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಬಿಕರ್ನಕಟ್ಟೆ ಕೈಕಂಬ (ಫ್ಲೈ ಓವರ್) ವರೆಗೆ ಪಿಲಿಕುಳ, ನೀರುಮಾರ್ಗ, ವಾಮಂಜೂರು ಕಡೆಗೆ ಸಾಗುವ ಬಸ್‌ಗಳು ಇವೆ. ಆ ಬಳಿಕ ಮರೋಳಿ, ಕೆಂಬಾರ್, ಪಡೀಲ್ ಕಡೆಗೆ ಬಸ್ ಇಲ್ಲ. ಆ ಭಾಗದ ಸಾರ್ವಜನಿಕರು ಬಿರ್ಕನಕಟ್ಟೆಯಲ್ಲಿ ಇಳಿದು ಅಲ್ಲಿಂದ ನಡೆದು, ಆಟೋದಲ್ಲಿ ಸಂಚರಿಸಬೇಕು ಅಥವಾ ಪಂಪ್‌ವೆಲ್ ಮೂಲಕ ಪಡೀಲ್‌ಗೆ ಬಂದು ಅಲ್ಲಿಂದ ಆಟೋ, ಕಾಲ್ನಡಿಗೆಯಲ್ಲಿ ಮರೋಳಿ ಸುತ್ತಮುತ್ತಲಿನ ಪ್ರದೇಶಕ್ಕೆ ತಲುಪಬೇಕಿದೆ. ನಗರ ವ್ಯಾಪ್ತಿಯಲ್ಲೇ ಇಂತಹದೊಂದು ಸಂಕಷ್ಟ ಎದುರಾಗಿದೆ ಎಂದು ಸಾರ್ವಕನಿಕರು ಅಕ್ರೋಶ ವ್ಯಕ್ತಪಡಿಸಿದ್ದಾರೆ.

    ರೂಟ್‌ನಲ್ಲಿ ಖಾಸಗಿ ಬಸ್ ಓಡಿಸಲು ಜಿಲ್ಲಾಧಿಕಾರಿಯವರು ಈಗಾಗಲೇ ಸೂಚನೆ ನೀಡಿದ್ದಾರೆ. ಒಂದು ವೇಳೆ ಸಾಧ್ಯವಾಗದಿದ್ದರೆ, ಕೆಎಸ್‌ಆರ್‌ಟಿಸಿಗೆ ಪರವಾನಗಿ ಹಸ್ತಾಂತರಿಸುವಂತೆ ತಿಳಿಸಿದ್ದಾರೆ. ಸದ್ಯ ಬಸ್ ಮಾಲೀಕರು ಬಸ್ ಓಡಿಸುವ ಪರಿಸ್ಥಿತಿಯಲ್ಲಿ ಇದ್ದಂತಿಲ್ಲ. ಜಿಲ್ಲಾಡಳಿತದ ತೀರ್ಮಾನ ಅಂತಿಮವಾಗಬಹುದು.
    ಜಯಶೀಲ ಅಡ್ಯಂತಾಯ
    ದ.ಕ ಸಿಟಿ ಬಸ್ ಮಾಲೀಕರ ಸಂಘದ ಅಧ್ಯಕ್ಷ

    ಎರಡು ವರ್ಷಗಳಿಂದ ಈ ಮಾರ್ಗದಲ್ಲಿ ಬಸ್ ಸಂಚರಿಸದೆ ಸಾರ್ವಜನಿಕರು, ಹಿರಿಯ ನಾಗರಿಕರು, ವಿದ್ಯಾರ್ಥಿಗಳು ಸಂಕಷ್ಟ ಅನುಭವಿಸುವಂತಾಗಿದೆ. ದುಬಾರಿ ಬೆಲೆ ತೆತ್ತು ಇತರ ವ್ಯವಸ್ಥೆ ಮಾಡಿಕೊಳ್ಳಬೇಕಿದೆ. ಜಿಲ್ಲಾಡಳಿತ ಈಗಾಗಲೇ ಬಸ್ ಓಡಿಸುವ ಕುರಿತಂತೆ ಭರವಸೆ ನೀಡಿದೆ. ಅದರ ನಿರೀಕ್ಷೆಯಲಿದ್ದೇವೆ.
    ಎಡ್ವರ್ಡ್ ಡಿಸಿಲ್ವ
    ಸ್ಥಳೀಯ ಪ್ರಮುಖರು

    ಪರವಾನಗಿ ಪಡೆದು ಅದರಂತೆ ಸಂಚಾರ ನಡೆಸದೆ ಇರುವ ಬಸ್‌ಗಳ ವಿವರ ನೀಡುವಂತೆ ಈಗಾಗಲೇ ಸೂಚನೆ ನೀಡಲಾಗಿದೆ. ಸಾರ್ವಜನಿಕರು ಆರ್‌ಟಿಒ ಕಚೇರಿಗೆ ಈ ಕುರಿತು ದೂರು ನೀಡಬಹುದು. ಅದನ್ನು ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು.
    ಡಾ.ರಾಜೇಂದ್ರ ಕೆ.ವಿ
    ಜಿಲ್ಲಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts