More

    ಸೋಮೇಶ್ವರ ಬೀಚ್‌ಗಿಲ್ಲ ಮೂಲ ಸೌಕರ್ಯ

    ಭರತ್ ಶೆಟ್ಟಿಗಾರ್ ಮಂಗಳೂರು

    ಜಿಲ್ಲೆಯ ಪ್ರಮುಖ ಬೀಚ್‌ಗಳಲ್ಲಿ ಒಂದಾಗಿರುವ ಸೋಮೇಶ್ವರ ಬೀಚ್ ಪ್ರಸ್ತುತ ನಿರ್ವಹಣೆ ಇಲ್ಲದೆ, ಪ್ರಮುಖ ಮೂಲ ಸೌಕರ್ಯದಿಂದ ವಂಚಿತವಾಗಿದೆ. ಪಿಂಡ ಪ್ರದಾನದಂತಹ ಧಾರ್ಮಿಕ ಕಾರ್ಯಕ್ರಮಕ್ಕೆ, ವಿಹಾರಕ್ಕಾಗಿ ಕಡಲ ತೀರಕ್ಕೆ ಬರುವವರು ಪರಿತಪಿಸುವಂತಾಗಿದೆ.

    ಪುರಾತನ ಶ್ರೀ ಸೋಮನಾಥ ದೇವಸ್ಥಾನವೂ ಪಕ್ಕದಲ್ಲೇ ಇರುವುದರಿಂದ ಧಾರ್ಮಿಕ ಪ್ರವಾಸೋದ್ಯಮ ತಾಣವೂ ಆಗಿರುವ ಬೀಚ್‌ಗೆ ಪ್ರತಿದಿನ ಸಾವಿರಾರು ಮಂದಿ ಭೇಟಿ ನೀಡುತ್ತಾರೆ. ಮುಂಜಾನೆ ವೇಳೆ ಪಿಂಡ ಪ್ರದಾನ ವಿಚಾರವಾಗಿಯೇ ನೂರಾರು ಮಂದಿ ಇಲ್ಲಿಗೆ ಬರುತ್ತಾರೆ. ಇಂತಹ ಸ್ಥಳದಲ್ಲಿ ಮೂಲ ಸೌಕರ್ಯ ಕಲ್ಪಿಸುವುದು ಪ್ರಮುಖ ಆದ್ಯತೆಯಾಗಿದೆ. ಆದರೆ ಇತರ ಬೀಚ್‌ಗಳಿಗೆ ಹೋಲಿಸಿದರೆ ಸೋಮೇಶ್ವರದಲ್ಲಿ ಪ್ರವಾಸಿಗರಿಗೆ ಅಷ್ಟೇನೂ ಸೌಕರ್ಯ ಹೊಂದಿಲ್ಲ ಎನ್ನಬಹುದು.

    ಬೀಚ್‌ನಲ್ಲಿ ಸಾರ್ವಜನಿಕರ ಉಪಯೋಗಕ್ಕಾಗಿ ಶೌಚಗೃಹ ನಿರ್ಮಿಸಲಾಗಿದೆ. ಆದರೆ ನಿರ್ವಹಣೆ ಇಲ್ಲದೆ ಅದಕ್ಕೆ ಹೋಗಲು ಸಾಧ್ಯವಾಗದ ಸ್ಥಿತಿ ಇದೆ. ಪುರುಷರ ಹಾಗೂ ಮಹಿಳೆಯರ ಎರಡೂ ಶೌಚಗೃಹಗಳೂ ಇದೇ ದುಸ್ಥಿತಿಯಲ್ಲಿದೆ. ಇನ್ನು ಬೀಚ್‌ನಲ್ಲಿ ಕುಳಿತುಕೊಳ್ಳಲು ಬೆಂಚ್‌ಗಳನ್ನೂ ಅಳವಡಿಸಿಲ್ಲ. ಮರಳಿನಲ್ಲಿ ಕುಳಿತುಕೊಳ್ಳಬಹುದಾದರೂ, ಕಾಲು ನೋವು ಇರುವಂತಹವರಿಗೆ ಬೆಂಚ್ ಅನುಕೂಲ. ಮಳೆ ಕಡಿಮೆಯಾದಾಗ ಇಂತಹ ಬೆಂಚ್‌ಗಳನ್ನು ಅಳವಡಿಸಿ, ಮಳೆಗಾಲದಲ್ಲಿ ತೆಗೆದು ಇಡುವುದರಿಂದ ಹಾನಿಯಾಗುವುದನ್ನೂ ತಪ್ಪಿಸಬಹುದು ಎನ್ನುವುದು ಬೀಚ್‌ಗೆ ಭೇಟಿ ನೀಡುವವರ ಮಾತಾಗಿದೆ.

    ಬೀಚ್‌ನಲ್ಲಿ ಒಂದು ಹೈಮಾಸ್ಟ್ ದೀಪ ಕಂಬ ನೆಪಕ್ಕೆ ಮಾತ್ರ ಇದೆ. ಅದರಲ್ಲಿ ದೀಪವೇ ಬೆಳಗುವುದಿಲ್ಲ. ಬಲ್ಬ್ ಅಳವಡಿಸುವ ಬ್ರಾಕೆಟ್ ಕಂಬದ ಬುಡದಲ್ಲಿ ಬಿದ್ದು, ತುಕ್ಕು ಹಿಡಿಯುತ್ತಿದೆ. ಕಂಬದ ತುದಿಯಲ್ಲಿ ಏನೂ ಇಲ್ಲ. ಸರಿಯಾದ ದೀಪದ ವ್ಯವಸ್ಥೆ ಇಲ್ಲದೆ, ಬೀಚ್ ಅಪಾಯಕಾರಿಯಾಗಿದ್ದು, ಅನೈತಿಕ ಚಟುವಟಿಕೆಗಳಿಗೆ ಆಸ್ಪದ ನೀಡಿದಂತಾಗಿದೆ. ಮುಂಜಾನೆ ಬೇಗ ಬಂದು ಧಾರ್ಮಿಕ ವಿಧಿ ವಿಧಾನಗಳನ್ನೂ ಮಾಡುವವರಿಗೂ ಇದರಿಂದ ಸಮಸ್ಯೆಯಾಗುತ್ತಿದೆ.

    ಇತ್ತೀಚೆಗೆ ನಾವು ಸಂಬಂಧಿಕರೊಬ್ಬರ ಪಿಂಡ ಪ್ರದಾನ ಕಾರ್ಯಕ್ರಮ ಹಿನ್ನೆಲೆಯಲ್ಲಿ ಸೋಮೇಶ್ವರ ಕಡಲ ತೀರಕ್ಕೆ ಭೇಟಿ ನೀಡಿದ್ದೆವು. ಆದರೆ ಅಲ್ಲಿನ ಮೂಲಸೌಕರ್ಯದ ಕೊರತೆ ನಮ್ಮನ್ನು ಅಲೆದಾಡುವಂತೆ ಮಾಡಿದೆ. ಶೌಚಗೃಹ ಸುಸಜ್ಜಿತವಾಗಿದೆಯಾದರೂ ನಿರ್ವಹಣೆ ಇಲ್ಲದೆ ಉಪಯೋಗಿಸಲು ಸಾಧ್ಯವಾಗುತ್ತಿಲ್ಲ. ಹೈಮಾಸ್ಟ್ ಕಂಬದಲ್ಲಿ ದೀಪಗಳೇ ಇಲ್ಲದೆ ರಾತ್ರಿ ಅಪಾಯಕಾರಿಯಾಗಿ ಪರಿಣಮಿಸಿದೆ. ಸಂಬಂಧಪಟ್ಟವರು ಈ ಬಗ್ಗೆ ಗಮನ ಹರಿಸಬೇಕು.

    ಪಾಂಡುರಂಗ ಕುಕ್ಯಾನ್, ಕೋಡಿಕಲ್, ಸಾಮಾಜಿಕ ಕಾರ್ಯಕರ್ತ

    ಬೀಚ್‌ಗಳ ಅಭಿವೃದ್ಧಿ ನಿರ್ವಹಣೆ ಕುರಿತಂತೆ ಈಗಾಗಲೇ ಜಿಲ್ಲಾಡಳಿತದ ಸಭೆ ನಡೆದಿದ್ದು, ಪಣಂಬೂರು, ತಣ್ಣೀರುಬಾವಿ ಬೀಚ್‌ಗಳ ಮಾದರಿಯಲ್ಲಿ ಎಲ್ಲ ಬೀಚ್‌ಗಳನ್ನು ಖಾಸಗಿಯವರಿಗೆ ವಹಿಸಲು ಉದ್ದೇಶಿಸಲಾಗಿದೆ. ಶೀಘ್ರ ಈ ಕುರಿತು ಅಂತಿಮ ನಿರ್ಧಾರಕ್ಕೆ ಬರಲಾಗುವುದು. ಇದರಿಂದ ಬೀಚ್‌ನ ಬಹುತೇಕ ಸಮಸ್ಯೆಗಳು ದೂರವಾಗಲಿದೆ.

    ಯು.ಟಿ.ಖಾದರ್, ಶಾಸಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts