More

    ಎನ್‌ಎಂಎಂಎಸ್ ಪರೀಕ್ಷೆಯಲ್ಲಿ ಸಹನಾ ಟಾಪರ್: ಜಿಲ್ಲೆಯಲ್ಲಿ ಮತ್ತೆ ಪ್ರಾಬಲ್ಯ ಮೆರೆದ ಮಳವಳ್ಳಿ ತಾಲೂಕು

    ಮಂಡ್ಯ: ಡಿಎಸ್‌ಇಆರ್‌ಟಿ ವತಿಯಿಂದ ನಡೆಸಿದ ಎನ್‌ಎಂಎಂಎಸ್(ನ್ಯಾಷನಲ್ ಮಿನ್ ಕಂ ಮೆರಿಟ್ ಸ್ಕಾಲರ್‌ಶಿಫ್) 2023-24ನೇ ಸಾಲಿನ ಪರೀಕ್ಷಾ ಫಲಿತಾಂಶ ಪ್ರಕಟವಾಗಿದೆ. ಈ ಬಾರಿಯೂ ಜಿಲ್ಲೆಯಲ್ಲಿ ಮಳವಳ್ಳಿ ತಾಲೂಕು ಪ್ರಾಬಲ್ಯ ಮೆರೆದಿದೆ. ಅಂತೆಯೇ ಮಳವಳ್ಳಿ ತಾಲೂಕು ಮಾರಗೌಡನಹಳ್ಳಿ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ಎಂ.ಸಿ.ಸಹನಾ 131 ಅಂಕದೊಂದಿಗೆ ಜಿಲ್ಲೆಗೆ ಟಾಪರ್ ಆಗಿದ್ದಾಳೆ.
    ರಾಜ್ಯದಲ್ಲಿ ಒಂದು ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಅದರಂತೆ ಜಿಲ್ಲೆಯಲ್ಲಿ 6090 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 175 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಈ ಪೈಕಿ ಮಳವಳ್ಳಿ ತಾಲೂಕಿನ 105 ವಿದ್ಯಾರ್ಥಿಗಳೇ ಆಗಿದ್ದಾರೆ. ಇದರಲ್ಲಿ ಮಾರಗೌಡನಹಳ್ಳಿ ಶಾಲೆಯ 38 ವಿದ್ಯಾರ್ಥಿಗಳಿದ್ದಾರೆ.
    ಏನಿದು ಪರೀಕ್ಷೆ: ಇದು ರಾಷ್ಟ್ರಮಟ್ಟದ ಪರೀಕ್ಷೆಯಾಗಿದ್ದು, ಮಕ್ಕಳ ಕಲಿಕೆಗೆ ಇನ್ನಷ್ಟು ಪ್ರೋತ್ಸಾಹ ನೀಡಲು ಮತ್ತು ಕಲಿಕೆಯಲ್ಲಿ ಮುಂದಿರುವ ಮಕ್ಕಳಿಗೆ ಪ್ರೋತ್ಸಾಹ ಧನ ನೀಡುವ ಉದ್ದೇಶದಿಂದ ಎನ್‌ಎಂಎಂಎಸ್ ಪರೀಕ್ಷೆ ಆಯೋಜಿಸಲಾಗುತ್ತದೆ. ಕುಟುಂಬದ ವಾರ್ಷಿಕ ವರಮಾನ ಒಂದೂವರೆ ಲಕ್ಷ ರೂ ಒಳಗಿರುವ ಎಂಟನೇ ತರಗತಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಅರ್ಹರಾಗಿರುತ್ತಾರೆ. ಅಂತೆಯೇ, ಸರ್ಕಾರಿ ಮತ್ತು ಅನುದಾನಿತ ಶಾಲೆಯ ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶವಿರುತ್ತದೆ. ಇನ್ನು ಜಿಲ್ಲಾಮಟ್ಟದಲ್ಲಿ ಇದರ ನೇತೃತ್ವವನ್ನು ಡಯಟ್ ನೋಡಿಕೊಳ್ಳುತ್ತದೆ. ಪ್ರತಿ ಬಾರಿಯೂ ವಿದ್ಯಾರ್ಥಿಗಳು ಆಸಕ್ತಿಯಿಂದ ಪರೀಕ್ಷೆ ಬರೆಯುತ್ತಾರೆ. ಜಿಲ್ಲೆಯ ವಿದ್ಯಾರ್ಥಿಗಳಿಗೆ ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿ ನೀಡಲಾಗುತ್ತದೆ.
    ಆಯಾಯಾ ತಾಲೂಕು ಕೇಂದ್ರದಲ್ಲಿ ಪರೀಕ್ಷೆ ಬರೆಯಲಾಗುತ್ತದೆ. ಸಾಮಾನ್ಯ ಬೌದ್ಧಿಕ ಸಾಮರ್ಥ್ಯ ಪರೀಕ್ಷೆ ಮತ್ತು ವ್ಯಾಸಂಗಿಕ ಪ್ರೌವೃತ್ತಿ ಸಾಮರ್ಥ್ಯ ಪರೀಕ್ಷೆ ಎಂಬ ಎರಡು ವಿಷಯದ ಮೇಲೆ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಪ್ರತಿ ವಿಷಯಕ್ಕೆ 90 ರಂತೆ 180 ಅಂಕಕ್ಕೆ ಪರೀಕ್ಷೆ ನಡೆಯುತ್ತದೆ. ಇದೀಗ ಪ್ರಕಟವಾಗಿರುವ ಫಲಿತಾಂಶದಲ್ಲಿ ಜಿಲ್ಲೆಯ 175 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ತಾಲೂಕುವಾರು ಮಾಹಿತಿಯಂತೆ ಮಳವಳ್ಳಿ ತಾಲೂಕಿನಲ್ಲಿ 105, ಮಂಡ್ಯ ದಕ್ಷಿಣ ವಲಯ 24, ಪಾಂಡವಪುರ 16, ಮದ್ದೂರು 13, ಶ್ರೀರಂಗಪಟ್ಟಣ 7, ನಾಗಮಂಗಲ 5, ಮಂಡ್ಯ ಉತ್ತರ ವಲಯ 3 ಹಾಗೂ ಕೆ.ಆರ್.ಪೇಟೆಯ ಇಬ್ಬರು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
    ಇನ್ನು ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ನಾಲ್ಕು ವರ್ಷದ ವ್ಯಾಸಂಗಕ್ಕೆ ಪ್ರೋತ್ಸಾಹ ಧನ ನೀಡಲಾಗುತ್ತದೆ. ಪ್ರತಿ ತಿಂಗಳು 1 ಸಾವಿರ ರೂನಂತೆ ವರ್ಷಕ್ಕೆ 12 ಸಾವಿರ ರೂ ವಿದ್ಯಾರ್ಥಿಗಳ ಖಾತೆಗೆ ಜಮೆಯಾಗಲಿದೆ. ಆದರೆ ಇವರು ಸರ್ಕಾರಿ ಶಿಕ್ಷಣ ಸಂಸ್ಥೆಯಲ್ಲಿಯೇ ವ್ಯಾಸಂಗ ಮಾಡಬೇಕೆಂಬ ಕಡ್ಡಾಯ ನಿಯಮವಿದೆ. ಜತೆಗೆ ತಾಂತ್ರಿಕ ಕೋರ್ಸ್‌ಗೆ ಸೇರುವಂತಿಲ್ಲ.

    ಎನ್‌ಎಂಎಂಎಸ್ ಪರೀಕ್ಷೆಯಲ್ಲಿ ಸಹನಾ ಟಾಪರ್: ಜಿಲ್ಲೆಯಲ್ಲಿ ಮತ್ತೆ ಪ್ರಾಬಲ್ಯ ಮೆರೆದ ಮಳವಳ್ಳಿ ತಾಲೂಕು

    ಮಾರಗೌಡನಹಳ್ಳಿ ಸಾಧನೆ: ಜಿಲ್ಲೆಯಲ್ಲಿ ಮಾದರಿ ಎನ್ನಿಸಿಕೊಂಡಿರುವ ಮಳವಳ್ಳಿ ತಾಲೂಕು ಮಾರಗೌಡನಹಳ್ಳಿ ಸರ್ಕಾರಿ ಪ್ರೌಢಶಾಲೆಗೆ ಮತ್ತೊಂದು ಸಾಧನೆ ಸೇರ್ಪಡೆಗೊಂಡಿದೆ. ಈ ಶಾಲೆಯ 38 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಗ್ರಾಮೀಣ ಮಕ್ಕಳು ಶಿಕ್ಷಣದಲ್ಲಿಯೂ ಮುಂದೆ ಎನ್ನುವುದನ್ನು ತೋರಿಸಿದ್ದಾರೆ. ರೈತ ಚಿಕ್ಕಲಿಂಗಯ್ಯ ಹಾಗೂ ಲಕ್ಷ್ಮೀ ದಂಪತಿಯ ಸಹನಾ ಟಾಪರ್ ಆಗಿ ಹೊರಹೊಮ್ಮಿದ್ದಾಳೆ. ಸಾಧನೆ ಮಾಡಿದ ವಿದ್ಯಾರ್ಥಿನಿಯನ್ನು ಮುಖ್ಯಶಿಕ್ಷಕಿ ಶಂಕುತಲಾ, ಎಸ್‌ಡಿಎಂಸಿ ಸದಸ್ಯರು, ಶಿಕ್ಷಕರು ಅಭಿನಂದಿಸಿದ್ದಾರೆ.
    ಇನ್ನು ಮಂಡ್ಯ ದಕ್ಷಿಣ ವಲಯದಲ್ಲಿ 24 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಈ ಪೈಕಿ ತಾಲೂಕಿನ ಉಮ್ಮಡಹಳ್ಳಿ ಸರ್ಕಾರಿ ಪ್ರೌಢಶಾಲೆಯ ನಾಲ್ವರು ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದು, ಗ್ರಾಮದ ಬಸವರಾಜು ಹಾಗೂ ಗಂಗಾಮಣಿ ದಂಪತಿಯ ಮಗ ಬಿ.ಕುಶಾಲ್‌ರಾಜ್ 106 ಅಂಕದೊಂದಿಗೆ ಮಂಡ್ಯ ತಾಲೂಕಿಗೆ ಟಾಪರ್ ಆಗಿದ್ದಾನೆಂದು ಮುಖ್ಯಶಿಕ್ಷಕ ನಾಗರಾಜು ತಿಳಿಸಿದ್ದಾರೆ.

    ಎನ್‌ಎಂಎಂಎಸ್ ಪರೀಕ್ಷೆಯಲ್ಲಿ ಸಹನಾ ಟಾಪರ್: ಜಿಲ್ಲೆಯಲ್ಲಿ ಮತ್ತೆ ಪ್ರಾಬಲ್ಯ ಮೆರೆದ ಮಳವಳ್ಳಿ ತಾಲೂಕು

    ವಿದ್ಯಾರ್ಥಿಗಳಿಗೆ ಕಲಿಕೆಯಲ್ಲಿ ಪ್ರೋತ್ಸಾಹ ನೀಡುವ ಉದ್ದೇಶದಿಂದ ಎನ್‌ಎಂಎಂಎಸ್ ಪರೀಕ್ಷೆ ನಡೆಸಲಾಗುತ್ತದೆ. ಜಿಲ್ಲೆಯಲ್ಲಿ ಈ ಬಾರಿ 175 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಪರೀಕ್ಷೆ ತೆಗೆದುಕೊಳ್ಳುವ ವಿದ್ಯಾರ್ಥಿಗಳಿಗೆ ಡಯಟ್‌ನಿಂದ ತರಬೇತಿ ನೀಡಲಾಗುತ್ತದೆ. ಸಂಪನ್ಮೂಲ ವ್ಯಕ್ತಿಗಳಿಂದ ಪಾಠ ಬೋಧನೆ ಮಾಡಲಾಗುತ್ತದೆ. ವಿದ್ಯಾರ್ಥಿಗಳು ಇಂತಹ ಅವಕಾಶವನ್ನು ಬಳಸಿಕೊಳ್ಳಬೇಕು.
    ವಿ.ಸಿ.ಬಸವರಾಜೇಗೌಡ
    ಡಯಟ್ ಪ್ರಾಂಶುಪಾಲ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts