More

    ಇಂಜಿನಿಯರ್‌ಗಳಿಗೂ ಸಂಗೀತ ಕಲಿಕೆ ಅವಕಾಶ, ಕೇಂದ್ರ ಶಿಕ್ಷಣ ಸಚಿವ ಪೊಖ್ರಿಯಾಲ್ ಅಭಿಪ್ರಾಯ

    ಸುರತ್ಕಲ್: ಹೊಸ ಶಿಕ್ಷಣ ನೀತಿಯಿಂದ ಇಂಜಿನಿಯರಿಂಗ್ ಸಂಶೋಧನೆ ಜತೆಗೆ ಸಂಗೀತ ಮೊದಲಾದವುಗಳನ್ನು ಕಲಿಯುವ ಅವಕಾಶ ವಿದ್ಯಾರ್ಥಿಗಳಿಗೆ ದೊರೆಯಲಿದೆ ಎಂದು ಕೇಂದ್ರ ಶಿಕ್ಷಣ ಸಚಿವ ಡಾ.ರಮೇಶ್ ಪೊಖ್ರಿಯಾಲ್ ನಿಶಾಂಕ್ ತಿಳಿಸಿದರು.

    ಎನ್‌ಐಟಿಕೆಯಲ್ಲಿ ಸೋಮವಾರ ಸಂಸ್ಥೆಯ 18ನೇ ಘಟಿಕೋತ್ಸವದಲ್ಲಿ ಆನ್‌ಲೈನ್ ಮೂಲಕ ಘಟಿಕೋತ್ಸವ ಭಾಷಣ ಮಾಡಿದ ಅವರು, ರಾಷ್ಟ್ರೀಯ ಶಿಕ್ಷಣ ಸಂಸ್ಥೆಗಳ ರ‌್ಯಾಂಕಿಂಗ್(ಎನ್‌ಐಆರ್‌ಎಫ್)ನಲ್ಲಿ ಎನ್‌ಐಟಿಕೆ 21ರಿಂದ 13ನೇ ಸ್ಥಾನಕ್ಕೇರಿರುವುದು ಶ್ಲಾಘನೀಯ. ವಿದ್ಯಾರ್ಥಿಗಳು ದೇಶಕ್ಕೆ ಸೇವೆ ಸಲ್ಲಿಸುವ ಮೂಲಕ ತಾವು ಕಲಿತ ಶಿಕ್ಷಣ ಸಂಸ್ಥೆಗೆ ಕೊಡುಗೆ ನೀಡಬೇಕು ಎಂದರು.

    ಎನ್‌ಐಟಿಕೆ ವಜ್ರಮಹೋತ್ಸವ ಸಮಾರೋಪದ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿದ ಸಚಿವರು, ಎನ್‌ಐಟಿಕೆಯ ಪೂರ್ವ ಭಾಗ ಮತ್ತು ಪಶ್ಚಿಮ ಭಾಗವನ್ನು ಸಂಪರ್ಕಿಸುವ ಫುಟ್ ಓವರ್ ಬ್ರಿಜ್‌ಗೆ ಶಿಲಾನ್ಯಾಸ ನೆರವೇರಿಸಿದರು. ಡಿಆರ್‌ಡಿಒ ಅಧ್ಯಕ್ಷ ಡಾ.ಜಿ.ಸತೀಶ್ ರೆಡ್ಡಿ ಆನ್‌ಲೈನ್ ಮೂಲಕ ಮಾತನಾಡಿ, ಭಾರತ ಗನ್, ರಾಕೆಟ್, ಕ್ಷಿಪಣಿ ಟ್ಯಾಂಕ್ ಮೊದಲಾದ ರಕ್ಷಣಾ ಸಾಮಗ್ರಿ ತಾನೇ ತಯಾರಿಸುವ ಮೂಲಕ ನಿಜ ಅರ್ಥದಲ್ಲಿ ಆತ್ಮನಿರ್ಭರವಾಗಿದೆ. ಡಿಆರ್‌ಡಿಒ, ಎನ್‌ಐಟಿಕೆ ಸೇರಿದಂತೆ ಹಲವು ಶಿಕ್ಷಣ ಸಂಸ್ಥೆಗಳ ಜತೆಗೆ ಸಹಭಾಗಿತ್ವದಲ್ಲಿ ಕೆಲಸ ಮಾಡುತ್ತಿದೆ ಎಂದರು.

    ಎನ್‌ಐಟಿಕೆ ಆಡಳಿತ ಮಂಡಳಿ ಅಧ್ಯಕ್ಷ ಡಾ.ಬಲವೀರ ರೆಡ್ಡಿ ಮಾತನಾಡಿದರು. ಎನ್‌ಐಟಿಕೆ ನಿರ್ದೇಶಕ ಡಾ.ಉಮಾಮಹೇಶ್ವರ ರಾವ್, ಉಪನಿರ್ದೇಶಕ ಅನಂತ ನಾರಾಯಣ ವಿ.ಎಸ್, ಅಕಾಡೆಮಿಕ್ ಡೀನ್ ಡಾ.ನಿತ್ಯಾನಂದ ಶೆಟ್ಟಿ, ರಿಜಿಸ್ಟ್ರಾರ್ ಕೆ.ರವೀಂದ್ರ ನಾಥ್ ಉಪಸ್ಥಿತರಿದ್ದರು. 1549 ವಿದ್ಯಾರ್ಥಿಗಳಿಗೆ ವಿವಿಧ ಪದವಿ, 763 ಮಂದಿಗೆ ಬಿಟೆಕ್, 648 ಮಂದಿಗೆ ಮಾಸ್ಟರ್ ಡಿಗ್ರಿ, 17 ಮಂದಿಗೆ ಎಂಟೆಕ್, 121 ಮಂದಿಗೆ ಡಾಕ್ವರೆಟ್ ಪದವಿ ನೀಡಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts