More

    ನಿಪ್ಪಾಣಿ ನಗರಸಭೆಯೂ ಬಿಜೆಪಿ ತೆಕ್ಕೆಗೆ

    ನಿಪ್ಪಾಣಿ: ಸ್ಥಳೀಯ ನಗರಸಭೆ ಗದ್ದುಗೆ ಬಿಜೆಪಿಗೆ ಒಲಿದಿದೆ. ಶನಿವಾರ ಜರುಗಿದ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಯಲ್ಲಿ ಬಿಜೆಪಿ ಸದಸ್ಯ ಜಯವಂತ ಭಾಟಲೆ, ವಿರೋಧ ಪಕ್ಷದ ಸದಸ್ಯೆ ಅನಿತಾ ಪಠಾಡೆ ವಿರುದ್ಧ 19-13 ಮತಗಳ ಅಂತರದಿಂದ ಗೆಲುವು ಸಾಧಿಸಿ, ಅಧ್ಯಕ್ಷ ಸ್ಥಾನ ಗಿಟ್ಟಿಸಿಕೊಂಡರು. ಬಿಜೆಪಿ ಬೆಂಬಲಿತ ನೀತಾ ಬಾಗಡೆ ಉಪಾಧ್ಯಕ್ಷೆಯಾಗಿ ಅವಿರೋಧ ಆಯ್ಕೆಯಾದರು.

    ಅಧ್ಯಕ್ಷ ಜಯವಂತ ಭಾಟಲೆ (ಸಾಮಾನ್ಯ ಮೀಸಲಾತಿ) ನಾಮಪತ್ರಕ್ಕೆ ಸದಸ್ಯ ಸದ್ದಾಂ ನಗಾರಜಿ, ರಾಜು ಗುಂಡೇಶಾ ಹಾಗೂ ಉಪಾಧ್ಯಕ್ಷೆ ನೀತಾ ಬಾಗಡೆ (ಹಿಂದುಳಿದ ವರ್ಗ ಮಹಿಳೆ) ನಾಮಪತ್ರಕ್ಕೆ ಸದಸ್ಯೆ ಕಾವೇರಿ ಮಿರ್ಜೆ, ಪ್ರಭಾವತಿ ಸೂರ್ಯವಂಶಿ ಸೂಚಕರಾಗಿದ್ದರು.

    ಕಾಂಗ್ರೆಸ್ ಸದಸ್ಯ ಬಿಜೆಪಿಗೆ ಬೆಂಬಲ: ನಗರಸಭೆ ವ್ಯಾಪ್ತಿಯ ಒಟ್ಟು 31 ವಾರ್ಡ್‌ಗಳಲ್ಲಿ ಬಿಜೆಪಿ ಹಾಗೂ ಬೆಂಬಲಿತರ ಸಂಖ್ಯೆ 16 ಇತ್ತು. ಹಾಗೂ ಕಾಂಗ್ರೆಸ್ ಬೆಂಬಲಿತರ ಸಂಖ್ಯೆ 14 (ಎರಡು ವಾರ್ಡ್‌ಗಳಲ್ಲಿ ಒಬ್ಬ ಸದಸ್ಯ ಚುನಾಯಿತ ಸೇರಿ) ಇತ್ತು. ಆದರೆ, ಕಾಂಗ್ರೆಸ್ ಸದಸ್ಯ ಸಂತೋಷ ಮಾನೆ ಬಿಜೆಪಿ ಪರ ಕೈ ಎತ್ತುವ ಮೂಲಕ ಎಲ್ಲರಿಗೂ ಅಚ್ಚರಿ ಮೂಡಿಸಿದರು. ಸಂಸದ ಅಣ್ಣಾಸಾಹೇಬ ಜೊಲ್ಲೆ ಹಾಗೂ ಸಚಿವೆ ಶಶಿಕಲಾ ಜೊಲ್ಲೆ ಮತ್ತು 17 ಸದಸ್ಯರು ಅಧ್ಯಕ್ಷ ಭಾಟಲೆ ಪರ ಕೈ ಎತ್ತಿದರು. ವಿರೋಧ ಪಕ್ಷದ ಅನಿತಾ ಬಾಗಡೆ ಪರ 13 ಸದಸ್ಯರು ಕೈ ಎತ್ತಿದರು.

    ಚುನಾವಣಾಧಿಕಾರಿ, ಚಿಕ್ಕೋಡಿ ಉಪವಿಭಾಗಾಧಿಕಾರಿ ಯುಕೇಶಕುಮಾರ ಎಸ್. ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಘೋಷಣೆ ಮಾಡುತ್ತಿದ್ದಂತೆ ನಗರಸಭೆ ಎದುರು ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರು. ಜೊಲ್ಲೆ ದಂಪತಿಗೆ ಜೈಕಾರ ಹಾಕಿದರು. ಬಳಿಕ ನಗರದ ಪ್ರಮುಖ ಬೀದಿಗಳಲ್ಲಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಮೆರವಣಿಗೆ ನಡೆಯಿತು. ಹಾಲಸಿದ್ಧನಾಥ ಸಹಕಾರಿ ಸಕ್ಕರೆ ಕಾರ್ಖಾನೆ ಚೇರ್ಮನ್ ಚಂದ್ರಕಾಂತ ಕೋಠಿವಾಲೆ, ಉಪ ಕಾರ್ಯಾಧ್ಯಕ್ಷ ಎಂ.ಪಿ.ಪಾಟೀಲ, ಸಂಚಾಲಕ ಪಪ್ಪು ಪಾಟೀಲ, ಅಭಯ ಮಾನವಿ, ನಗರಸಭೆ, ಎಪಿಎಂಸಿ ಸದಸ್ಯರು, ಕಾರ್ಯಕರ್ತರು ನೂತನ ಪದಾಧಿಕಾರಿಗಳನ್ನು ನಗರಸಭೆಯಲ್ಲಿ ಸತ್ಕರಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts