More

    ಚಿಕಿತ್ಸೆಯ ನಿರೀಕ್ಷೆಯಲ್ಲಿ ನಿಡಗುಂದಿ ಪಶು ಆಸ್ಪತ್ರೆ

    ವಿಜಯವಾಣಿ ವಿಶೇಷ ನರೇಗಲ್ಲ

    ನಿಡಗುಂದಿ ಗ್ರಾಮದ ಜನರು ಕೃಷಿ, ಹಸು, ಮೇಕೆ, ಕುರಿ ಸಾಕಾಣಿಕೆ ಮಾಡಿ ಹೈನುಗಾರಿಕೆ ಮೂಲಕ ಜೀವನ ಸಾಗಿಸುತ್ತಿದ್ದಾರೆ. ಆದರೆ, ಜಾನುವಾರು ಆರೋಗ್ಯ ರಕ್ಷಣೆಯ ಹೊಣೆ ಹೊತ್ತಿರುವ ಸರ್ಕಾರಿ ಪಶು ಆಸ್ಪತ್ರೆ ಅವ್ಯವಸ್ಥೆಯ ಆಗರವಾಗಿದೆ. ರೈತರ ಪಾಲಿಗೆ ಆಸ್ಪತ್ರೆ ಇದ್ದೂ ಇಲ್ಲದಂತಾಗಿದೆ.

    ನಿಡಗುಂದಿ ಪಶು ಆಸ್ಪತ್ರೆ ವ್ಯಾಪ್ತಿಯಲ್ಲಿ ಮಾರನಬಸರಿ, ಕಳಕಾಪುರ ಗ್ರಾಮಗಳಿದ್ದು, 18 ಸಾವಿರ ಎಮ್ಮೆ- ಆಕಳು, 4 ರಿಂದ 5 ಸಾವಿರ ಕುರಿ- ಆಡುಗಳು ಸೇರಿ ಇತರ ಪ್ರಾಣಿಗಳಿವೆ. ಆದರೆ, ಪ್ರಾಣಿಗಳ ಆರೋಗ್ಯದಲ್ಲಿ ವ್ಯತ್ಯಾಸವಾದರೆ ಚಿಕಿತ್ಸೆಗಾಗಿ ರೈತರು ಪರದಾಡುವ ಸ್ಥಿತಿ ನಿರ್ವಣವಾಗಿದೆ.

    ಆಸ್ಪತ್ರೆಯಲ್ಲಿ ಕಳೆದ ಆರು ತಿಂಗಳಿನಿಂದ ಒಬ್ಬರೇ ಒಬ್ಬರು ಕಾಯಂ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿಲ್ಲ. ಪಶು ಚಿಕಿತ್ಸೆ ಕೇಂದ್ರ ವಾರದಲ್ಲಿ ಒಂದೆರಡು ದಿನ ಮಾತ್ರ ಬಾಗಿಲು ತೆರೆದಿರುತ್ತದೆ. ದನಕರುಗಳನ್ನು ಚಿಕಿತ್ಸೆಗೆಂದು ಆಸ್ಪತ್ರೆಗೆ ಕರೆದೊಯ್ದರೆ ಯಾರೂ ಇರುವುದಿಲ್ಲ. ಹೀಗಾಗಿ, ಎಲ್ಲಿ ಚಿಕಿತ್ಸೆ ಕೊಡಿಸಬೇಕು ಎಂಬುದು ರೈತರ ಪ್ರಶ್ನೆಯಾಗಿದೆ.

    ಪಶು ಆಸ್ಪತ್ರೆಯಲ್ಲಿ ಒಂದು ವೈದ್ಯಾಧಿಕಾರಿ, ಒಂದು ಪಶು ವೈದ್ಯಕೀಯ ನಿರೀಕ್ಷಕ ಹಾಗೂ ಎರಡು ಡಿ ಗ್ರೂಪ್ ಸೇರಿ ನಾಲ್ಕು ಹುದ್ದೆಗಳು ಮಂಜೂರಾಗಿವೆ. ಆದರೆ, ಎಲ್ಲ ನಾಲ್ಕೂ ಹುದ್ದೆಗಳು ಖಾಲಿಯಿದ್ದು, ವೈದ್ಯಾಧಿಕಾರಿ ಲಿಂಗಯ್ಯ ಗೌರಿಮಠ ಪ್ರಭಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ಮೊದಲಿದ್ದ ಪಶು ವೈದ್ಯಾಧಿಕಾರಿಗಳನ್ನು ಸೂಡಿ ಪಶು ಆಸ್ಪತ್ರೆಗೆ ವರ್ಗಾವಣೆ ಮಾಡಲಾಗಿದೆ. ನರೇಗಲ್ಲನ ಪಶು ಕೇಂದ್ರದ ಸಿಬ್ಬಂದಿಗೆ ವಾರದಲ್ಲಿ ಮೂರು ದಿನ ನಿಡಗುಂದಿ ಆಸ್ಪತ್ರೆಗೆ ಪ್ರಭಾರಿಯಾಗಿ ನೇಮಿಸಲಾಗಿದೆ. ನರೇಗಲ್ಲನ ವೈದ್ಯಾಧಿಕಾರಿಗಳಿಗೆ ಡ.ಸ. ಹಡಗಲಿ, ಹುಲ್ಲೂರ ಗ್ರಾಮಗಳ ಪಶು ಆಸ್ಪತ್ರೆಗಳ ಪ್ರಭಾರ ವಹಿಸಿದ್ದರಿಂದ ಕಾರ್ಯಭಾರ ಹೆಚ್ಚಾಗಿದೆ.

    ಇದರಿಂದಾಗಿ ರೈತರು ಪಶುಗಳ ಚಿಕಿತ್ಸೆಗಾಗಿ ವೈದ್ಯರು ಲಭ್ಯವಿರುವ ಗಜೇಂದ್ರಗಡ, ಅಬ್ಬಿಗೇರಿ, ನರೇಗಲ್ಲ ಅಲ್ಲದೆ, ಪಕ್ಕದ ಜಿಲ್ಲೆಯಾದ ಕೊಪ್ಪಳದ ಕರಮುಡಿ, ಯಲಬುರ್ಗಾ, ಕುಕನೂರಿಗೆ ತೆರಳಬೇಕಾದ ಅನಿವಾರ್ಯತೆ ಎದುರಾಗಿದೆ. ಮುಂಗಾರು ಹಂಗಾಮಿನ ಕೃಷಿ ಚಟುವಟಿಕೆ ಭರದಿಂದ ಸಾಗಿದ್ದು, ರೈತರ ಜೀವನಾಡಿಯಾಗಿರುವ ಜಾನುವಾರು ಚಿಕಿತ್ಸೆ ಅತಿ ಅವಶ್ಯವಾಗಿದೆ. ಆಸ್ಪತ್ರೆಗಳಲ್ಲಿ ವೈದ್ಯರಿಲ್ಲದೆ ರೈತ ಸಮುದಾಯ ಸಮಸ್ಯೆ ಎದುರಿಸುವಂತಾಗಿದೆ.

    ಪಟ್ಟಣದ ಆಸ್ಪತ್ರೆಗೆ ತೆರಳುವ ಸ್ಥಿತಿ: ಗ್ರಾಮದ ಜಾನುವಾರುಗಳಿಗೆ ಸಣ್ಣ ಪುಟ್ಟ ಕಾಯಿಲೆ ಬಂದರೆ ಪಕ್ಕದ ಪಟ್ಟಣದ ಪಶು ಆಸ್ಪತ್ರೆಗಳಿಗೆ ವಾಹನಗಳನ್ನು ಬಾಡಿಗೆ ಮಾಡಿಕೊಂಡು ಹೋಗಿ ಚಿಕಿತ್ಸೆ ಕೊಡಿಸಬೇಕಾಗಿದೆ ಎಂದು ರೈತರಾದ ಪರಪ್ಪ ಅಣಗೌಡ್ರ, ವೀರೇಶ ಗಡಾದ, ಪ್ರವೀಣ ಲಘುಬಗಿ, ರಮೇಶ ಮಳ್ಳಿ, ಹನುಮಂತ ಬಿಚ್ಚೂರ, ಕುಮಾರ ದೇಸಾಯಿ, ನೀಲಪ್ಪ ಕುರಿ, ಭೀಮಪ್ಪ ಗಡಾದ, ಶರಣಪ್ಪಗೌಡ ರೊಟ್ಟಿಗವಾಡ ಅಳಲು ತೋಡಿಕೊಂಡರು.

    ರೋಣ ತಾಲೂಕಿನಲ್ಲಿ 22 ಪಶು ವೈದ್ಯರ ಅವಶ್ಯಕತೆಯಿದೆ. ಆದರೆ, ಸದ್ಯ 6 ಜನ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರೇ ನಾಲ್ಕೈದು ಆಸ್ಪತ್ರೆಗಳಲ್ಲಿ ವಾರದ ಎರಡ್ಮೂರು ದಿನ ಪ್ರಭಾರಿಯಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಹೆಚ್ಚಿನ ಸಿಬ್ಬಂದಿ ನೇಮಕ ಮಾಡಿಕೊಳ್ಳುವಂತೆ ಮೇಲಧಿಕಾರಿಗಳಿಗೆ ಈಗಾಗಲೇ ತಿಳಿಸಲಾಗಿದೆ.

    | ಲಿಂಗಯ್ಯ ಗೌರಿಮಠ, ನರೇಗಲ್ಲ ಪಶು ಆಸ್ಪತ್ರೆ ವೈದ್ಯಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts