More

    ಮುಂಬರುವ ವರ್ಷ ಮೂಡಿಗೆರೆ ಪಪಂ ಮೇಲ್ದರ್ಜೆಗೆ

    ಮೂಡಿಗೆರೆ: ಪಟ್ಟಣ ಪಂಚಾಯಿತಿಯಿಂದ ಪುರಸಭೆ ಮೇಲ್ದರ್ಜೆಗೇರಿಸುವ ಪ್ರಕ್ರಿಯೆ ಚುರುಕುಗೊಳಿಸಲಾಗಿದೆ. ಮುಂದಿನ ವರ್ಷದ ಬಜೆಟ್‌ನಲ್ಲಿ ಪುರಸಭೆಯಾಗಿ ಅಧಿಕೃತವಾಗಿ ಘೋಷಣೆಯಾಗಲಿದೆ ಎಂದು ಶಾಸಕಿ ನಯನಾ ಮೋಟಮ್ಮ ತಿಳಿಸಿದರು.

    ಭಾನುವಾರ ತಾಲೂಕಿನ ವಿವಿಧ ಗ್ರಾಮಗಳಲ್ಲಿ ರಸ್ತೆ ಸೇರಿದಂತೆ ಹಲವಾರು ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿ, ಪಟ್ಟಣದ ಕೆಲ ಮುಖ್ಯ ರಸ್ತೆಗಳನ್ನು ಕಾಂಕ್ರಿಟೀಕರಣಗೊಳಿಸಲಾಗಿದೆ. ಉಳಿದ ಕೆಲ ರಸ್ತೆಗಳು ಸಂಪೂರ್ಣ ಗುಂಡಿಯಾಗಿವೆ. ನಗರೋತ್ಥಾನದ 3.25 ಕೋಟಿ ರೂ. ಅನುದಾನ ಬಳಸಿ ಸಿಮೆಂಟ್ ರಸ್ತೆ, ಇನ್ನೂ ಕೆಲ ರಸ್ತೆಗಳಿಗೆ ಡಾಂಬರೀಕರಣ ಮಾಡಲಾಗುವುದು. ಪಟ್ಟಣದ ರಸ್ತೆಗಳನ್ನು ಮೇಲ್ದರ್ಜೆಗೇರಿಸಲು ಪುರಸಭೆ ಘೋಷಣೆಯಾದ ಬಳಿಕ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು. ಪುರಸಭೆಗೆ ಹೆಸಗಲ್ ಹಾಗೂ ಹಳೇಮೂಡಿಗೆರೆ ಗ್ರಾಪಂ ವ್ಯಾಪ್ತಿಯನ್ನು ಸೇರ್ಪಡೆಗೊಳಿಸಲು ತಯಾರಿ ನಡೆದಿದೆ ಎಂದು ತಿಳಿಸಿದರು.
    ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಸರ್ಕಾರದಿಂದ 25 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ. ಅದರಲ್ಲಿ ರಸ್ತೆ, ಕುಡಿಯುವ ನೀರು, ಸಮುದಾಯ ಭವನ, ಬಾಕ್ಸ್ ಚರಂಡಿ, ತಡೆಗೋಡೆ ಸೇರಿದಂತೆ ಹಲವು ಯೋಜನೆಗಳಿಗೆ ವಿನಿಯೋಗಿಸಲಾಗುವುದು. ಅಲ್ಲದೆ ಲೋಕೋಪಯೋಗಿ ಇಲಾಖೆಗೆ ಸೇರಿದ ರಸ್ತೆಗಳ ಅಭಿವೃದ್ಧಿಗೆ 1.5 ಕೋಟಿ ರೂ., ಮುಜರಾಯಿಗೆ ಸಂಬಂಧಿಸಿದಂತೆ 3 ಕೋಟಿ, ಸಣ್ಣ ನೀರಾವರಿಗೆ 5 ಕೋಟಿ, ಎಸ್‌ಸಿಪಿಗೆ 1.75 ಕೋಟಿ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ 5 ಕೋಟಿ ರೂ. ಬಿಡುಗಡೆಯಾಗಿದೆ ಎಂದು ಮಾಹಿತಿ ನೀಡಿದರು.
    ಪಟ್ಟಣದ ಬದ್ರಿಯಾ ಪ್ಲಾಜಾ ರಸ್ತೆ, ಮೈಸೂರು ಬ್ಯಾಂಕ್ ರಸ್ತೆ, ಬಿಳಗುಳದ ಖಬರಸ್ಥಾನ ರಸ್ತೆ, ಕಸ್ಕೆಬೈಲ್‌ನಿಂದ ಕಲ್ಲಗುಡ್ಡದವರೆಗೆ, ಬಿದರಹಳ್ಳಿಯಿಂದ ಮುಗ್ರಳ್ಳಿವರೆಗೆ, ಚಕ್ಕಮಕ್ಕಿಯಿಂದ ಭಾರತಿಬೈಲ್ ರಸ್ತೆ, ಗೌಡನಹಳ್ಳಿ ಅಂಗನವಾಡಿ ನೂತನ ಕಟ್ಟಡ, ಬಿ.ಹೊಸಹಳ್ಳಿ ಗ್ರಾಪಂ ನೂತನ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದರು.
    ಪಪಂ ಸದಸ್ಯರಾದ ಎಚ್.ಪಿ.ರಮೇಶ್, ಎಂ.ಎ.ಹಂಝ, ನಗರಾಭಿವೃದ್ಧಿ ಇಲಾಖೆ ಕಾರ್ಯಪಾಲ ಇಂಜಿನಿಯರ್ ಎಸ್.ಎಸ್.ಮತ್ತಿಕಟ್ಟಿ, ಎಇಇ ಝರೀನಾ, ಪಪಂ ಮುಖ್ಯಾಧಿಕಾರಿ ರಂಗಸ್ವಾಮಿ, ಪಪಂ ಇಂಜಿನಿಯರ್ ಇರ್ಷಾದ್, ಆರೋಗ್ಯ ನಿರೀಕ್ಷಕ ಕೃಷ್ಣಯ್ಯ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಜಿ.ಸುರೇಂದ್ರ, ಮುಖಂಡರಾದ ಮಂಚೇಗೌಡ, ಸಿ.ಬಿ.ಶಂಕರ್, ಯಾಕೂಬ್ ಗೋಣಿಗದ್ದೆ, ಇಸ್ಮಾಯಿಲ್ ಆಜಾದ್, ಕೆ.ಎ.ರವಿ, ದೀಕ್ಷಿತ್ ಕಣಚೂರು, ಖಾಲಿದ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts