ಇಂದು ರಾತ್ರಿ-ಹಗಲು ಸಮಾನ ಅವಧಿ; ವಸಂತ ವಿಷುವತ್ ಸಂಕ್ರಾಂತಿಯಂದು ವಿಶೇಷ ವಿದ್ಯಮಾನ

Day Night
Published on

| ಅತುಲ್ ಭಟ್

ವಸಂತ ವಿಷುವತ್ ಸಂಕ್ರಾಂತಿ ಒಂದು ವಿಶೇಷ ಖಗೋಳ ವಿದ್ಯಮಾನ. ಈ ದಿನ ಭೂಮಿಯ ಮೇಲೆ ಹಗಲು ಹಾಗೂ ರಾತ್ರಿಯ ಅವಧಿ ಸಮನಾಗಿರುತ್ತದೆ. ವರ್ಷಕ್ಕೆ ಎರಡು ಬಾರಿ, ಮಾರ್ಚ್ ಮತ್ತು ಸೆಪ್ಟೆಂಬರ್ ತಿಂಗಳಲ್ಲಿ ಈ ವಿದ್ಯಮಾನ ಸಂಭವಿಸುತ್ತದೆ. ಪ್ರತೀ ವರ್ಷ ಭೂಮಿ-ಸೂರ್ಯನ ಬಂಧನದಿಂದ ಸಂಭವಿಸುವ ಈ ವಿದ್ಯಮಾನ, ಮಾ.21ರಂದು ನಡೆಯದೆ.

ವಿಷುವತ್ ಸಂಕ್ರಾಂತಿಯಂದು ಸೂರ್ಯನು ನಿಖರವಾಗಿ ಪೂರ್ವ ದಿಕ್ಕಿನಲ್ಲಿ ಉದಯಿಸಿ, ಪಶ್ಚಿಮ ದಿಕ್ಕಿನಲ್ಲಿ ಅಸ್ತಮಿಸುತ್ತಾನೆ. ಈ ದಿನ ಸೂರ್ಯನ ಬೆಳಕು ಭೂಮಿಯ ಸಮಭಾಜಕ ವೃತ್ತದ ಮೇಲೆ ನೇರ ಬೀಳುತ್ತದೆ. ಸೂರ್ಯನು ಉತ್ತರ ದಿಕ್ಕಿನಿಂದ ದಕ್ಷಿಣ ದಿಕ್ಕಿನೆಡೆಗೆ ಚಲಿಸಲು ಪ್ರಾರಂಭಿಸುವುದರಿಂದ, ಉತ್ತರ ಗೋಳಾರ್ಧದಲ್ಲಿ ವಸಂತ ಋತು ಆರಂಭವಾಗುತ್ತದೆ. ಈ ದಿನ ಸೂರ್ಯನ ಕೇಂದ್ರ ಬಿಂದು ದಿಗಂತದ ಮೇಲೆ 12 ಗಂಟೆಗಳ ಕಾಲ ಮತ್ತು ದಿಗಂತದ ಕೆಳಗೆ 12 ಗಂಟೆಗಳ ಕಾಲ ಇರುತ್ತದೆ. ವಿಷುವತ್ ದಿನದಂದು ನಾವಿರುವ ಸ್ಥಳದ ಅಕ್ಷಾಂಶವನ್ನು ಕಂಡು ಹಿಡಿಯಬಹುದು. ಈ ಪ್ರಯೋಗವನ್ನು ವಿದ್ಯಾರ್ಥಿಗಳು ಸುಲಭವಾಗಿ ಮಾಡಬಹುದು.

ಮೇಲಿನಿಂದ ಕೆಳಕ್ಕೆ ಸಮಾನ ಗಾತ್ರ ಹೊಂದಿರುವ ವಸ್ತುವನ್ನು ನೆಲದ ಮೇಲೆ ನೇರವಾಗಿ ಇರಿಸಿ, ಆ ವಸ್ತುವಿನ (ಉದಾ: ಮೇಣದ ಬತ್ತಿ ಅಥವಾ ಕೋಲು) ಅತೀ ಸಣ್ಣ ನೆರಳಿನ ಉದ್ದವನ್ನು ಅಳೆಯುವ ಮೂಲಕ ನಮ್ಮ ನೆರಳನ್ನೂ ಅಳೆಯಬಹುದು. ವಸ್ತು ಹಾಗೂ ಅದರ ನೆರಳಿನಿಂದ ಉಂಟಾಗುವ ಲಂಬಕೋನ ತ್ರಿಭುಜದಲ್ಲಿ ವಸ್ತುವು ತ್ರಿಭುಜದ ಅಡಿಪಾಯ ಎಂದು ಪರಿಗಣಿಸಿದರೆ, ಅದರ ನೆರಳು ತ್ರಿಭುಜದ ಅಭಿಮುಖ ಬಾಹು ಆಗಿರುತ್ತದೆ. ಈ ಎರಡು ಬಾಹುಗಳಿಂದಾದ ಕೋನವು ಸ್ಥಳದ ಅಕ್ಷಾಂಶವನ್ನು ನೀಡುತ್ತದೆ. ಖಗೋಳ ಸಮಭಾಜಕ ವೃತ್ತವನ್ನು ಕ್ರಾಂತಿವೃತ್ತ ಎರಡು ಬಿಂದುಗಳಲ್ಲಿ ಛೇದಿಸುತ್ತದೆ. ಈ ಬಿಂದುಗಳೇ ವಿಷುವದ್ಬಿಂದುಗಳು. ಸೂರ್ಯನು ಈ ಬಿಂದುವನ್ನು ಸಂಕ್ರಮಿಸಿ, ಪ್ರತೀ ದಿನ ಆಕಾಶದಲ್ಲಿ ಉತ್ತರದ ಕಡೆ ಚಲಿಸುವುದನ್ನು ನೋಡಬಹುದು.

(ಲೇಖಕರು: ಸಂಯೋಜಕರು, ಪೂರ್ಣಪ್ರಜ್ಞ ಹವ್ಯಾಸಿ ಖಗೋಳ ವೀಕ್ಷಕರ ಸಂಘ, ಉಡುಪಿ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net