

ನವದೆಹಲಿ: ಉತ್ತರ ಪ್ರದೇಶದಲ್ಲಿ ಸೋನಾಭದ್ರ ಜಿಲ್ಲೆಯಲ್ಲಿ ಪತ್ತೆಯಾಗಿರುವ ಚಿನ್ನದ ನಿಕ್ಷೇಪದ ಪ್ರಮಾಣ ಮತ್ತು ಅದರ ಮೌಲ್ಯದ ಬಗ್ಗೆ ಈಗ ಚರ್ಚೆಗಳು ಗರಿಗೆದರಿವೆ. ಸೋನಾಭದ್ರ ಜಿಲ್ಲೆಯ ಸೋನ್ ಪಹಾಡಿ ಮತ್ತು ಹರ್ಡಿ ಗ್ರಾಮಗಳಲ್ಲಿ ತಲಾ ಒಂದು ನಿಕ್ಷೇಪಗಳಿದ್ದು, ಇಲ್ಲಿ ಅಂದಾಜು 3,350 ಟನ್ ಚಿನ್ನದ ನಿಕ್ಷೇಪ ಇರುವುದಾಗಿ ಅಂದಾಜಿಸಲಾಗಿದೆ.
ಉತ್ತರ ಪ್ರದೇಶ ಭೂಗರ್ಭಶಾಸ್ತ್ರ ನಿರ್ದೇಶನಾಲಯ ಮತ್ತು ಭಾರತದ ಗಣಿ ಮತ್ತು ಭೂಗರ್ಭಶಾಸ್ತ್ರ ಸರ್ವೇಕ್ಷಣಾಲಯದ ಅಧಿಕಾರಿಗಳು ಸತತ ಎರಡು ದಶಕಗಳ ಕಾಲದ ಬಹಳ ನೋವಿನ ಪರಿಶ್ರಮದ ಫಲವಾಗಿ ಈ ಚಿನ್ನದ ನಿಕ್ಷೇಪ ಪತ್ತೆಯಾಗಿದೆ.
ಅಧಿಕಾರಿಗಳು ನೀಡಿರುವ ಮಾಹಿತಿ ಪ್ರಕಾರ, ಸೋನ್ ಪಹಾಡಿಯಲ್ಲಿ 2,943.5 ಟನ್ ಚಿನ್ನದ ನಿಕ್ಷೇಪ ವಿದ್ದರೆ, ಹರ್ಡಿ ಗಣಿಯಲ್ಲಿ 646.15 ಟನ್ ಚಿನ್ನದ ನಿಕ್ಷೇಪವಿದೆ. ಈ ಬೃಹತ್ ಚಿನ್ನದ ನಿಕ್ಷೇಪದ ಮೌಲ್ಯ ಮತ್ತು ಪ್ರಮಾಣ ಗಮನಿಸಿದರೆ ಇದು ಭಾರತದ ಮೀಸಲು ಚಿನ್ನದ ಪ್ರಮಾಣಕ್ಕಿಂತ ಕನಿಷ್ಠ 5-6 ಪಟ್ಟು ಹೆಚ್ಚು ಇದೆ. ಪ್ರಸ್ತುತ ಭಾರತದ ಮೀಸಲು ಚಿನ್ನ(ಗೋಲ್ಡ್ ರಿಸರ್ವ್) ಪ್ರಮಾಣ 626 ಟನ್ ಇದೆ. ಇದೇ ರೀತಿ ರೂಪಾಯಿಯಲ್ಲಿ ಈ ಎರಡೂ ನಿಕ್ಷೇಪಗಳ ಮೌಲ್ಯ ಅಂದಾಜಿಸುವುದಾದರೆ, 12 ಲಕ್ಷ ಕೋಟಿ ರೂಪಾಯಿ ಅಧಿಕ ಎನ್ನಲಾಗುತ್ತಿದೆ.(ಏಜೆನ್ಸೀಸ್)