ಯೋಗೀಶ್​ ಗೌಡ ಕೊಲೆ ಕೇಸ್​: ವಿನಯ್ ಕುಲಕರ್ಣಿ ಜಾಮೀನು ಪ್ರಶ್ನಿಸಿ ಸುಪ್ರೀಂಗೆ ಸಲ್ಲಿಸಿದ್ದ ಅರ್ಜಿ ಅ.27ಕ್ಕೆ ಮುಂದೂಡಿಕೆ | Yogesh Gowda Case

ವಿನಯ್​ಗೆ ಕೊಟ್ಟಿರುವ ಜಾಮೀನನ್ನು ನಿರಾಕರಿಸುವಂತೆ ಸರ್ಕಾರ ಹಾಗೂ ಯೋಗೇಶ್ ಗೌಡ ಸಹೋದರರು ಮನವಿ ಸಲ್ಲಿಸಿದರು. ಇದಕ್ಕೆ ಉತ್ತರಿಸಿದ ಪೀಠವು, ದಸರಾ ಬಳಿಕ ವಿಚಾರಣೆ ಅಂತಿಮಗೊಳಿಸುವುದಾಗಿ ದಿನಾಂಕವನ್ನು ತಿಳಿಸಿದೆ.
ಧಾರವಾಡ ಜಿಲ್ಲಾ ಪಂಚಾಯತ್ ಸದಸ್ಯರಾಗಿದ್ದ ಯೋಗೀಶ್ ಗೌಡ ಮತ್ತು ಮಾಜಿ ಸಚಿವ ವಿನಯ್​ ಕುಲಕರ್ಣಿ
ಧಾರವಾಡ ಜಿಲ್ಲಾ ಪಂಚಾಯತ್ ಸದಸ್ಯರಾಗಿದ್ದ ಯೋಗೀಶ್ ಗೌಡ ಮತ್ತು ಮಾಜಿ ಸಚಿವ ವಿನಯ್​ ಕುಲಕರ್ಣಿ
Published on: 

ಬೆಂಗಳೂರು: ಧಾರವಾಡ ಜಿಲ್ಲಾ ಪಂಚಾಯತ್ ಸದಸ್ಯ ಹಾಗೂ ಬಿಜೆಪಿ ಮುಖಂಡ ಯೋಗೀಶ್ ಗೌಡ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್​ ಶಾಸಕ ವಿನಯ್​ ಕುಲಕರ್ಣಿ ಅವರಿಗೆ ನೀಡಲಾಗಿರುವ ಜಾಮೀನು ಪ್ರಶ್ನಿಸಿ ಸುಪ್ರೀಂಕೋರ್ಟ್​ನಲ್ಲಿ ಮೇಲ್ಮನವಿ ಸಲ್ಲಿಸಿದ್ದ ಅರ್ಜಿಯನ್ನು ಇದೀಗ ಮುಂದೂಡಲಾಗಿದೆ.

ವಿನಯ್ ಕುಲಕರ್ಣಿ ಜಾಮೀನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ, ಒಟ್ಟು ನಾಲ್ಕು ಕೇಸ್​ಗಳಿವೆ. ಒಟ್ಟಿಗೆ ವಿಚಾರಣೆ ನಡೆಸುವುದಾಗಿ ಹೇಳಿ, ವಿಚಾರಣೆಯನ್ನು ಅಕ್ಟೋಬರ್ 27ಕ್ಕೆ ಮುಂದೂಡಿದೆ. ಈ ಸಮಯದಲ್ಲಿ, ವಿನಯ್​ಗೆ ಕೊಟ್ಟಿರುವ ಜಾಮೀನನ್ನು ನಿರಾಕರಿಸುವಂತೆ ಸರ್ಕಾರ ಹಾಗೂ ಯೋಗೇಶ್ ಗೌಡ ಸಹೋದರರು ಮನವಿ ಸಲ್ಲಿಸಿದರು. ಇದಕ್ಕೆ ಉತ್ತರಿಸಿದ ಪೀಠವು, ದಸರಾ ಬಳಿಕ ವಿಚಾರಣೆ ಅಂತಿಮಗೊಳಿಸುವುದಾಗಿ ದಿನಾಂಕವನ್ನು ತಿಳಿಸಿದೆ.

ಪ್ರಕರಣದ ಹಿನ್ನೆಲೆ ಏನು?

ಧಾರವಾಡ ಜಿಲ್ಲಾ ಪಂಚಾಯತ್ ಸದಸ್ಯರಾಗಿದ್ದ ಯೋಗೀಶ್ ಗೌಡ ಅವರ ಹತ್ಯೆ ಪ್ರಕರಣವು ಕರ್ನಾಟಕ ರಾಜಕೀಯದಲ್ಲಿ ಸಾಕಷ್ಟು ಸಂಚಲನ ಮೂಡಿಸಿದ ಘಟನೆಯಾಗಿದೆ. 2016ರ ಜೂನ್ 15ರಂದು ಧಾರವಾಡದ ಸಪ್ತಾಪುರದಲ್ಲಿರುವ ತಮ್ಮದೇ ಜಿಮ್‌ನಲ್ಲಿ ಯೋಗೀಶ್ ಗೌಡ ಅವರನ್ನು ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ಮಾಡಿದ್ದರು. ಈ ಕೊಲೆಗೆ ರಾಜಕೀಯ ದ್ವೇಷವೇ ಮುಖ್ಯ ಕಾರಣ ಎಂಬ ಆರೋಪಗಳು ಆರಂಭದಿಂದಲೂ ಕೇಳಿಬಂದಿದ್ದವು.

ಈ ಪ್ರಕರಣದ ಪ್ರಮುಖ ತಿರುವು ಎಂದರೆ ಕಾಂಗ್ರೆಸ್ ಪ್ರಭಾವಿ ನಾಯಕ ವಿನಯ್ ಕುಲಕರ್ಣಿ ಅವರ ಬಂಧನ. ಆರಂಭದಲ್ಲಿ ಸ್ಥಳೀಯ ಪೊಲೀಸರು ತನಿಖೆ ನಡೆಸುತ್ತಿದ್ದ ಈ ಪ್ರಕರಣವನ್ನು, ನಂತರ ಬಿಜೆಪಿ ಸರ್ಕಾರದ ಅವಧಿಯಲ್ಲಿ ಸಿಬಿಐ (CBI) ತನಿಖೆಗೆ ವಹಿಸಲಾಯಿತು. ಸಿಬಿಐ ತನಿಖೆಯ ವೇಳೆ ವಿನಯ್ ಕುಲಕರ್ಣಿ ಅವರು ಕೊಲೆಯ ಸಂಚು ರೂಪಿಸಿದ ಪ್ರಮುಖ ಆರೋಪಿಯಾಗಿದ್ದಾರೆ ಎಂದು ಉಲ್ಲೇಖಿಸಿ, 2020ರಲ್ಲಿ ಅವರನ್ನು ಬಂಧಿಸಲಾಯಿತು. ಸುಮಾರು ಒಂಬತ್ತು ತಿಂಗಳುಗಳ ಕಾಲ ಅವರು ಜೈಲು ಶಿಕ್ಷೆ ಅನುಭವಿಸಿದ್ದರು.

ಸಿಬಿಐ ಸಲ್ಲಿಸಿರುವ ದೋಷಾರೋಪ ಪಟ್ಟಿಯ ಪ್ರಕಾರ, ಯೋಗೀಶ್ ಗೌಡ ಮತ್ತು ವಿನಯ್ ಕುಲಕರ್ಣಿ ನಡುವೆ ಜಮೀನು ವಿಚಾರ ಹಾಗೂ ರಾಜಕೀಯ ಪ್ರಾಬಲ್ಯಕ್ಕೆ ಸಂಬಂಧಿಸಿದಂತೆ ತೀವ್ರ ಭಿನ್ನಾಭಿಪ್ರಾಯಗಳಿದ್ದವು. ಇದೇ ದ್ವೇಷದಿಂದಾಗಿ ಯೋಗೇಶ್ ಗೌಡ ಅವರನ್ನು ಹತ್ಯೆ ಮಾಡಲು ವಿನಯ್ ಕುಲಕರ್ಣಿ ಸುಪಾರಿ ನೀಡಿದ್ದರು ಮತ್ತು ಸಾಕ್ಷ್ಯ ನಾಶಪಡಿಸಲು ಯತ್ನಿಸಿದ್ದರು ಎಂಬ ಗಂಭೀರ ಆರೋಪಗಳನ್ನು ಹೊರಿಸಲಾಯಿತು.

ಈ ಘಟನೆಗೆ ಮುನ್ನ ಮತ್ತು ಘಟನೆ ನಂತರ ವಿನಯ್​ ಕುಲಕರ್ಣಿ ದೆಹಲಿಗೆ ಪ್ರವಾಸ ಮಾಡಿದ್ದರು. ಘಟನೆ ವೇಳೆ ತಾನು ಜಿಲ್ಲಾ ಕೇಂದ್ರದಲ್ಲಿ ಇರಲೇ ಇಲ್ಲ. ರಾಜಧಾನಿ ಮತ್ತು ದೆಹಲಿ ಮಧ್ಯೆ ಪ್ರವಾಸ ಮಾಡುತ್ತಾ ಏನೋ ಪ್ರಮುಖ ಕೆಲಸದಲ್ಲಿ ತೊಡಗಿಕೊಂಡಿದ್ದೆ ಎಂದು ಬಿಂಬಿಸಲು ಪ್ರಯತ್ನಿಸಿದ್ದರು ಎಂಬ ಆರೋಪವಿದೆ. 2016ರ ಜೂ. 12ರಂದು ದೆಹಲಿಗೆ ತೆರಳಿದ್ದ ಕುಲಕರ್ಣಿ 13ರಂದು ಬೆಂಗಳೂರಿಗೆ ವಾಪಸಾಗಿದ್ದರು. ಜೂ. 16ರಂದು ಪುನಃ ದೆಹಲಿಗೆ ತೆರಳಿ 18ರಂದು ರಾಜಧಾನಿಗೆ ವಾಪಸಾಗಿದ್ದರು. ಪ್ರಯಾಣದ ದಿನವೇ ವಿಮಾನ ಟಿಕೆಟ್​ ಪಡೆಯಲಾಗಿತ್ತು ಎಂಬುದನ್ನು ಸಿಬಿಐ ದಾಖಲೆ ಸಹಿತವಾಗಿ ಖಚಿತ ಪಡಿಸಿಕೊಂಡಿರುವುದಾಗಿ ನ್ಯಾಯಾಲಯಕ್ಕೆ ತಿಳಿಸಿತ್ತು.

ಸಿಬಿಐ ತನಿಖೆಯ ನಂತರ 2020ರಲ್ಲಿ ಬಂಧನವಾಗಿ ಜೈಲು ಸೇರಿದ ವಿನಯ್​ ಕುಲಕರ್ಣಿ ಅವರು, 2021ರ ಆಗಸ್ಟ್‌ ತಿಂಗಳಲ್ಲಿ ಸುಪ್ರೀಂ ಕೋರ್ಟ್‌ನಿಂದ ಜಾಮೀನು ಪಡೆದು ಹೊರಬಂದಿದ್ದರು. ಆದರೆ, ಸಾಕ್ಷಿಗಳ ಮೇಲೆ ಪ್ರಭಾವ ಬೀರಲು ಪ್ರಯತ್ನಿಸಿದ ಆರೋಪದ ಮೇಲೆ ಸಿಬಿಐ, ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ಇದಾದ ಬಳಿಕ 2025ರ ಜೂನ್ 6ರಂದು ಸುಪ್ರೀಂ ಕೋರ್ಟ್ ಜಾಮೀನು ರದ್ದುಗೊಳಿಸಿ ಒಂದು ವಾರದೊಳಗೆ ಶರಣಾಗುವಂತೆ ಆದೇಶಿಸಿತು. ಅದರಂತೆ ಜೂನ್ 14ರಂದು ವಿನಯ್ ಕುಲಕರ್ಣಿ ಬೆಂಗಳೂರಿನ ವಿಶೇಷ ನ್ಯಾಯಾಲಯಕ್ಕೆ ಶರಣಾದರು.

Also Read
ಜೂ.​ ಆರ್ಟಿಸ್ಟ್​ ಆಗಿ ಎಂಟ್ರಿಕೊಟ್ಟ ಮಮಿತಾ ಇಂದು ಬ್ಲಾಕ್​ಬಸ್ಟರ್​ ಚಿತ್ರಗಳ ಸ್ಟಾರ್​ ಹೀರೋಯಿನ್​! ಜೋರಾಯ್ತು ಯುವ ನಟಿಯ ಕ್ರೇಜ್​ | Mamitha Baiju
ಧಾರವಾಡ ಜಿಲ್ಲಾ ಪಂಚಾಯತ್ ಸದಸ್ಯರಾಗಿದ್ದ ಯೋಗೀಶ್ ಗೌಡ ಮತ್ತು ಮಾಜಿ ಸಚಿವ ವಿನಯ್​ ಕುಲಕರ್ಣಿ

ಇನ್ನು, ಈ ಪ್ರಕರಣದಲ್ಲಿ ಒಟ್ಟು 21 ಆರೋಪಿಗಳ ಪೈಕಿ 17 ಜನರನ್ನು ಅಪರಾಧಿಗಳು ಎಂದು ತೀರ್ಪು ನೀಡಿದ ಜನಪ್ರತಿನಿಧಿಗಳ ವಿಶೇಷ ಕೋರ್ಟ್​, 2026ರ ಏಪ್ರಿಲ್ 17ರಂದು 16 ಮಂದಿಗೆ ಜೀವಾವಧಿ ಶಿಕ್ಷೆ ಪ್ರಕಟಿಸಿ ಆದೇಶ ಹೊರಡಿಸಿತು. ಪ್ರಕರಣದ ಪ್ರಮುಖ ಆರೋಪಿಯಾಗಿದ್ದ ವಿನಯ್ ಕುಲಕರ್ಣಿ ಅವರ ವಿರುದ್ಧದ ಆದೇಶವನ್ನು ಅಮಾನತ್ತಿನಲ್ಲಿಟ್ಟು, ನ್ಯಾಯಾಲಯ ಜಾಮೀನು ಮಂಜೂರು ಮಾಡಿತ್ತು. ಅದೇ ಆದೇಶದಂತೆ ಇತರ ಆರೋಪಿಗಳಿಗೂ ಜಾಮೀನು ಮಂಜೂರು ಮಾಡಿ ಆದೇಶಿಸಿತು. ಈಗ ಇದನ್ನು ಪ್ರಶ್ನಿಸಿ, ಸುಪ್ರೀಂಕೋರ್ಟ್​ಗೆ ಬೇಲ್​ ಅನ್ನು ರದ್ದುಗೊಳಿಸುವಂತೆ ಮೇಲ್ಮನವಿ ಸಲ್ಲಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net