

ಬೆಂಗಳೂರು : ಉತ್ತರ ಕರ್ನಾಟಕದ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಮತ್ತು ಯುವ ಪೀಳಿಗೆಗೆ ಪರಿಚಯಿಸುವ ಉದ್ದೇಶದಿಂದ ಉತ್ತರ ಕರ್ನಾಟಕ ಸಂಘ-ಸಂಸ್ಥೆಗಳ ಮಹಾಸಂಸ್ಥೆ ‘ಉತ್ತರ ಕರ್ನಾಟಕ ಉತ್ಸವ’ ಹಮ್ಮಿಕೊಂಡಿದೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಸಂಸ್ಥೆಯ ಅಧ್ಯಕ್ಷ ಶಿವಕುಮಾರ್ ಆರ್.ಮೇಟಿ, ಅರಮನೆ ಮೈದಾನದ ಗೇಟ್ ನಂ.7ರ ಶೀಶ್ ಮಹಲ್‌ನಲ್ಲಿ ಆಯೋಜಿಸಿರುವ ಉತ್ಸವಕ್ಕೆ ಭಾನುವಾರ (ನ.29) ಬೆಳಗ್ಗೆ 11 ಗಂಟೆಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಚಾಲನೆ ನೀಡಲಿದ್ದಾರೆ. ಸಂಸ್ಥೆಯ ಗೌರವಾಧ್ಯಕ್ಷ ಶಂಕರ್ ಬಿದರಿ, ವಿಪಕ್ಷ ನಾಯಕ ಆರ್.ಅಶೋಕ್, ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಸಚಿವರಾದ ಲಕ್ಷ್ಮಣ ಸವದಿ, ಶಿವರಾಜ್ ತಂಗಡಗಿ, ಎಸ್.ಎಸ್.ಮಲ್ಲಿಕಾರ್ಜುನ್, ಡಾ.ಅಜಯ್ ಸಿಂಗ್ ಮತ್ತು ವಿಜಯಾನಂದ ಕಾಶಪ್ಪನವರ್ ಮತ್ತಿತರರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಸಂಜೆ 5ಕ್ಕೆ ಸಮಾರೋಪ ಸಮಾರಂಭ ನಡೆಯಲಿದ್ದು, ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮತ್ತಿತರರು ಆಗಮಿಸಲಿದ್ದಾರೆ. ಉತ್ತರ ಕರ್ನಾಟಕ ಭಾಗದವರು ಮಾತ್ರವಲ್ಲದೆ ಬೆಂಗಳೂರಿಗರಿಗೂ ಉತ್ಸವಕ್ಕೆ ಮುಕ್ತ ಅವಕಾಶವಿದೆ. ದಿನಪೂರ್ತಿ ಉತ್ತರ ಕರ್ನಾಟಕದ ವಿವಿಧ ಕ್ರೀಡೆ, ಕಲೆ, ಸಾಂಸ್ಕೃತಿಕ ಕಾರ್ಯಕ್ರಮಗಳು, ಸ್ಪರ್ಧೆಗಳು ನಡೆಯಲಿವೆ. ಉತ್ತರ ಕರ್ನಾಟಕದ ಜನಜೀವನವನ್ನು ಬಿಂಬಿಸುವ ಮಳಿಗೆಗಳು ಉತ್ಸವದಲ್ಲಿದ್ದು, ಪ್ರದರ್ಶನ ಮತ್ತು ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ಮೇಟಿ ವಿವರಿಸಿದರು. ಪ್ರತ್ಯೇಕ ರಾಜ್ಯದ ಬೇಡಿಕೆ ಬದಲಾಗಿ ಉತ್ತರ ಕರ್ನಾಟಕದ ಜ್ವಲಂತ ಸಮಸ್ಯೆಗಳನ್ನು ಪರಿಹರಿಸುವಂತೆ ಸಿಎಂಗೆ ಮನವಿ ಸಲ್ಲಿಸುವುದಾಗಿ ಪ್ರಶ್ನೆಯೊಂದಕ್ಕೆ ಮೇಟಿ ಉತ್ತರಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಪದಾಧಿಕಾರಿಗಳಾದ ಬಸವರಾಜ್ ಬೀಳೂರು, ಬಸಯ್ಯ ನಂದಿಕೋಲ, ಶೇಖರ್ ಗೌಡ್ರು, ದೇವರಾಜ ಕವಳಿಕಾಯಿ ಮತ್ತಿತರರಿದ್ದರು.