

ಬೆಂಗಳೂರು: ವಿಶ್ವಪ್ರಸಿದ್ಧ ಮೈಸೂರು ದಸರಾ ಮಹೋತ್ಸವದ ಸಂದರ್ಭದಲ್ಲಿ ಮುಖ್ಯಮಂತ್ರಿಗಳ ಶಿಷ್ಟಾಚಾರ ಪಾಲನೆ ವೇಳೆ ನಡೆದ ಸಣ್ಣಪುಟ್ಟ ಘಟನೆಗಳು ನಡೆಯುತ್ತವೆ, ಅವುಗಳಿಗೆಲ್ಲಾ ಜಾತಿ ಬಣ್ಣ ಬಳಿಯುವುದು ಅತ್ಯಂತ ಕೀಳುಮಟ್ಟದ ಆಲೋಚನೆಯಾಗಿದೆ ಎಂದು ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಅಸಮಾಧಾನ ವ್ಯಕ್ತಪಡಿಸಿದ್ದು, ಇಂತಹ ಸೂಕ್ಷ್ಮ ವಿಚಾರಗಳನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
ನಿನ್ನೆ ಮೈಸೂರು ದಸರಾ ಜಂಬೂ ಸವಾರಿ ಮೆರವಣಿಗೆಯ ವೇಳೆ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರ ಜೊತೆ ಹೊರಟಿದ್ದ ಮೂವರು ಸಚಿವರನ್ನು ಪೊಲೀಸ್ ವರಿಷ್ಠಾಧಿಕಾರಿಗಳು ತಡೆದ ವಿಷಯವಾಗಿ ಮಾಧ್ಯಮಗಳೊಂದಿಗೆ ಮಾತನಾಡಿದ ಡಿಸಿಎಂ ಪರಮೇಶ್ವರ್, ಬೃಹತ್ ಜನದಟ್ಟಣೆಯಿರುವ ಕಾರ್ಯಕ್ರಮಗಳಲ್ಲಿ ಪೊಲೀಸರ ಪಾತ್ರ ಮತ್ತು ಭದ್ರತಾ ನಿಯಮಗಳ ಕುರಿತು ಸ್ಪಷ್ಟನೆ ನೀಡಿದ್ದಾರೆ.
ಮುಖ್ಯಮಂತ್ರಿಗಳಿಗೆ ಅವರದ್ದೇ ಆದ ಕಟ್ಟುನಿಟ್ಟಾದ ಶಿಷ್ಟಾಚಾರಗಳಿರುತ್ತವೆ ಮತ್ತು ಅದನ್ನು ಪೊಲೀಸರು ಕಟ್ಟುನಿಟ್ಟಾಗಿ ಪಾಲಿಸಬೇಕಾಗುತ್ತದೆ ಎಂದು ಡಿಸಿಎಂ ಸಮರ್ಥಿಸಿಕೊಂಡಿದ್ದಾರೆ. ಅಪಾರ ಜನಸಂದಣಿ ಸೇರುವ ಇಂತಹ ಪ್ರತಿಷ್ಠಿತ ವೇದಿಕೆಗಳಲ್ಲಿ ಭದ್ರತೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಮುಖ್ಯಮಂತ್ರಿಗಳನ್ನು ಹೊರತುಪಡಿಸಿ ಬೇರೆ ಯಾರನ್ನೂ ಒಳಗೆ ಬಿಡಬಾರದು ಎಂಬ ಸ್ಪಷ್ಟ ಸೂಚನೆ ಮೇಲಧಿಕಾರಿಗಳಿಂದ ಪೊಲೀಸರಿಗೆ ಇದ್ದಿರಬಹುದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಮುಖ್ಯಮಂತ್ರಿಗಳು ಮುಂದೆ ಸಾಗುತ್ತಿದ್ದ ವೇಳೆ ಸಚಿವರನ್ನು ಪೊಲೀಸರು ತಡೆದಿದ್ದರೂ, ನಂತರ ಸ್ವತಃ ಮುಖ್ಯಮಂತ್ರಿಗಳೇ ಹಿಂದಿರುಗಿ ಬಂದು ಅವರನ್ನು ಕರೆದುಕೊಂಡು ಹೋಗಿದ್ದಾರೆ. ಪೊಲೀಸರು ತಮ್ಮ ಕರ್ತವ್ಯ ಮಾಡಿದ್ದಾರೆ ಬಿಟ್ಟರೆ ಇದರಲ್ಲಿ ಉದ್ದೇಶಪೂರ್ವಕ ತಪ್ಪು ಏನೂ ಇಲ್ಲ. ಈ ಸಣ್ಣ ವಿಷಯವನ್ನು ದೊಡ್ಡ ವಿವಾದವನ್ನಾಗಿ ಮಾಡುವುದು ತಪ್ಪು ಎಂದು ಪರಮೇಶ್ವರ್ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಇಡೀ ಘಟನೆಯನ್ನು ಮುಂದಿಟ್ಟುಕೊಂಡು ಕೆಲವರು ದಲಿತ ಸಚಿವರು ಎಂಬ ಪದವನ್ನು ಪದೇಪದೆ ಬಳಕೆ ಮಾಡುತ್ತಿರುವುದನ್ನು ಡಾ. ಪರಮೇಶ್ವರ್ ಅವರು ಪ್ರಶ್ನಿಸಿದ್ದು, ಮಂತ್ರಿಗಳು ಅಂತ ಕರೆದರೆ ಸಾಕಾಗಲ್ವಾ..? ಪ್ರತಿಯೊಬ್ಬರನ್ನೂ ಅವರ ಜಾತಿಯ ಹೆಸರಿನಿಂದಲೇ ಗುರುತಿಸುವುದು ಎಷ್ಟು ಸರಿ..? ಬೇರೆ ಸಚಿವರನ್ನು ಕರೆಯುವಾಗ ಅವರ ಜಾತಿಯ ಹೆಸರನ್ನು ಬಳಸಲಾಗುತ್ತದೆಯೇ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಲಕ್ಷಾಂತರ ಜನರು ಸೇರುವ ಇಂತಹ ಬೃಹತ್ ಹಬ್ಬಗಳಲ್ಲಿ ಸಣ್ಣಪುಟ್ಟ ಸಂವಹನ ದೋಷಗಳು ಅಥವಾ ಪಾಸ್ಗಳ ಹಂಚಿಕೆಯಲ್ಲಿ ಲೋಪಗಳು ಸಹಜವಾಗಿ ನಡೆಯಬಹುದು. ಎಷ್ಟೇ ಮುನ್ನೆಚ್ಚರಿಕೆ ವಹಿಸಿದರೂ ಕೆಲವರಿಗೆ ಪಾಸ್ ತಲುಪದೇ ಇರಬಹುದು. ಆದರೆ ಅದನ್ನೇ ದೊಡ್ಡ ವೈಫಲ್ಯವೆಂಬಂತೆ ಬಿಂಬಿಸುವುದು ಅಕ್ಷಮ್ಯ. ಹತ್ತು ದಿನಗಳ ದಸರಾ ಉತ್ಸವದ ಅವಧಿಯಲ್ಲಿ ಸುಮಾರು 15 ರಿಂದ 20 ಲಕ್ಷಕ್ಕೂ ಅಧಿಕ ಜನರು ಭಾಗವಹಿಸಿದ್ದು, ಇಷ್ಟು ದೊಡ್ಡ ಜನಸಂದಣಿಯನ್ನು ಪೊಲೀಸ್ ಇಲಾಖೆ ಹಾಗೂ ಜಿಲ್ಲಾಡಳಿತ ಅತ್ಯಂತ ಸಮರ್ಥವಾಗಿ ನಿರ್ವಹಿಸಿವೆ ಎಂದು ಉಪಮುಖ್ಯಮಂತ್ರಿಗಳು ಪ್ರಶಂಸಿಸಿದರು.
ತುಮಕೂರು ದಸರಾದಲ್ಲೂ ನಿರೀಕ್ಷೆಗೂ ಮೀರಿ ಜನಸಂದಣಿ ಸೇರಿದ್ದನ್ನು ಉದಾಹರಿಸಿದ ಅವರು, ಬೃಹತ್ ಕಾರ್ಯಕ್ರಮಗಳ ನಿರ್ವಹಣೆ ಸುಲಭವಲ್ಲ. ಸಣ್ಣಪುಟ್ಟ ಲೋಪಗಳನ್ನೇ ದೊಡ್ಡದು ಮಾಡಿ ಒಟ್ಟಾರೆ ಆಡಳಿತ ವ್ಯವಸ್ಥೆ ಮತ್ತು ದಸರಾ ಯಶಸ್ಸನ್ನು ಕಡೆಗಣಿಸುವುದು ಸರಿಯಲ್ಲ ಎಂದು ಡಾ. ಜಿ. ಪರಮೇಶ್ವರ್ ಅಭಿಪ್ರಾಯಪಟ್ಟಿದ್ದಾರೆ.