ಪಡಿತರಕ್ಕೆ ಸರ್ವರ್ ಸಂಕಟ! ರಾಜ್ಯದಲ್ಲಿ ಶೇ.50ರಷ್ಟು ರೇಷನ್ ವಿತರಣೆ ಬಾಕಿ

ಪಡಿತರಕ್ಕೆ ಸರ್ವರ್ ಸಂಕಟ! ರಾಜ್ಯದಲ್ಲಿ ಶೇ.50ರಷ್ಟು ರೇಷನ್ ವಿತರಣೆ ಬಾಕಿ
Published on: 

ಬೆಂಗಳೂರು: ಸರ್ವರ್ ಸಮಸ್ಯೆಯಿಂದಾಗಿ ಪಡಿತರ ವಿತರಣೆಗೆ ಅಡ್ಡಿಯಾಗಿದ್ದು, ರಾಜ್ಯದ ನ್ಯಾಯಬೆಲೆ ಅಂಗಡಿಗಳು ಹೈರಾಣಾಗಿವೆ. ಇನ್ನೊಂದೆಡೆ, ಪಡಿತರ ಪಡೆಯಲಾಗದೆ ಸಾರ್ವಜನಿಕರು ಕಷ್ಟ ಅನುಭವಿಸುವಂತಾಗಿದೆ. ಕಳೆದ ನಾಲ್ಕೈದು ದಿನಗಳಿಂದ ಸರ್ವರ್ ಸಮಸ್ಯೆ ಹೆಚ್ಚಾಗಿದ್ದು, ಕಾರ್ಡ್​ದಾರರಿಗೆ ಬೆರಳಚ್ಚು ಕೊಡಲು ಸಾಧ್ಯವಾಗದ ಸ್ಥಿತಿ ಇದೆ. ರಾಜ್ಯಾದ್ಯಂತ ಈವರೆಗೆ ಶೇ.50 ರೇಷನ್ ಹಂಚಿಕೆ ಮಾಡಲಾಗಿದ್ದು, ಮುಂದಿನ 5 ದಿನಗಳಲ್ಲಿ ಇನ್ನುಳಿದ ಶೇ.50 ಪಡಿತರ ನೀಡಬೇಕಿದೆ. ಸರ್ವರ್ ಸಮಸ್ಯೆಯಿಂದ ಪ್ರತಿ ತಿಂಗಳು ಪಡಿತರ ವಿತರಣೆಗೆ ತೊಂದರೆಯಾಗುತ್ತಿದೆ. ಹೀಗಾಗಿ ಶೀಘ್ರ ಶಾಶ್ವತ ಪರಿಹಾರ ಕಂಡುಕೊಳ್ಳುವಂತೆ ರಾಜ್ಯ ಸರ್ಕಾರಿ ಪಡಿತರ ವಿತರಕರ ಕ್ಷೇಮಾಭಿವೃದ್ಧಿ ಸಂಘ ಸರ್ಕಾರವನ್ನು ಒತ್ತಾಯಿಸಿದೆ.

ರಾಜ್ಯದ 22 ಸಾವಿರ ನ್ಯಾಯಬೆಲೆ ಅಂಗಡಿಗಳಲ್ಲಿ ಅನ್ನಭಾಗ್ಯದ ಅಕ್ಕಿಯನ್ನು ಜನರಿಗೆ ತಲುಪಿಸಲು ಸರ್ವರ್ ಅಡ್ಡಿಯಾಗುತ್ತಿದೆ. ಕೇಂದ್ರದ ‘ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆ’ ಮತ್ತು ರಾಜ್ಯದ ‘ಅನ್ನಭಾಗ್ಯ’ಯೋಜನೆಯಡಿ 10,47,080 ಅಂತ್ಯೋದಯ ಮತ್ತು 1,14,38,886 ಬಿಪಿಎಲ್ ಚೀಟಿಗಳಿಗೆ ಪ್ರತಿ ತಿಂಗಳು ನ್ಯಾಯಬೆಲೆ ಅಂಗಡಿಗಳ ಮೂಲಕ 4.70 ಲಕ್ಷ ಮೆಟ್ರಿಕ್ ಟನ್ ಪಡಿತರ ವಿತರಿಸಲಾಗುತ್ತಿದೆ. ಎರಡೂ ಯೋಜನೆಗಳಡಿ ಬಿಪಿಎಲ್ ಕಾರ್ಡ್ ಹೊಂದಿರುವ ಪ್ರತಿ ಸದಸ್ಯನಿಗೆ ಅಕ್ಕಿ, ರಾಗಿ ಸೇರಿ 10 ಕೆಜಿ ಆಹಾರ ಧಾನ್ಯ ವಿತರಿಸಬೇಕು. ಪ್ರತಿ ಅಂತ್ಯೋದಯ ಕಾರ್ಡ್ಗೆ 35 ಕೆಜಿ ನೀಡಬೇಕು. ಆದರೆ, ಪಡಿತರ ಪಡೆಯಲು ಬೆರಳಚ್ಚು (ಬಯೋಮೆಟ್ರಿಕ್) ನೀಡಬೇಕಿದೆ. ತಮ್ಮ ಪಾಲಿನ ಅಕ್ಕಿ ಪಡೆಯಲು ಹಿರಿಯ ನಾಗರಿಕರು, ಅಂಗವಿಕಲರು ಸೇರಿದಂತೆ ನೂರಾರು ಕಾರ್ಡ್ದಾರರು ಬಯೋಮೆಟ್ರಿಕ್ ನೀಡಲು ಪ್ರತಿನಿತ್ಯ ಬೆಳಗ್ಗೆಯಿಂದ ಸಂಜೆವರೆಗೆ ನ್ಯಾಯಬೆಲೆ ಅಂಗಡಿಗಳ ಮುಂಭಾಗ ಸರದಿ ಸಾಲಿನಲ್ಲಿ ನಿಂತು ಕಾಯುವಂತಾಗಿದೆ. ಬಡಜನರು ಕೂಲಿ ಕೆಲಸ ಬಿಟ್ಟು ಪಡಿತರಕ್ಕಾಗಿ ನಿಲ್ಲುವಂತಾಗಿದೆ.

ಕಮಿಷನ್ ಹೆಚ್ಚಳಕ್ಕೆ ಮನವಿ

ತಮ್ಮನ್ನು ಡಿ ದರ್ಜೆ ನೌಕರರರೆಂದು ಪರಿಗಣಿಸ ಬೇಕು, ಈಗಿರುವ ಕಮಿಷನ್ ಹಣವನ್ನು ಕ್ವಿಂಟಾಲ್ಗೆ 150 ರೂ. ಬದಲಿಗೆ 250 ರೂ.ಗೆ ಹೆಚ್ಚಿಸಬೇಕು ಎಂದು ನ್ಯಾಯಬೆಲೆ ಅಂಗಡಿ ಮಾಲೀಕರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಪ್ರಮುಖ ಸಮಸ್ಯೆಗಳೇನು?

  • ಪಡಿತರ ವಿತರಣೆಗೆ ಮತ್ತೆ ಸರ್ವರ್ ಸಮಸ್ಯೆ ಕಾಟ

  • ರೇಷನ್ ಪಡೆಯಲು ಕಾರ್ಡ್​​ದಾರರ ಪರದಾಟ

  • ದಿನಗಟ್ಟಲೆ ಸರದಿ ಸಾಲಲ್ಲಿ ನಿಂತು ಕಾಯುವ ಶಿಕ್ಷೆ

  • ನಿತ್ಯ 7-8 ಕಾರ್ಡ್ದಾರರದಷ್ಟೇ ಬಯೋ ಸ್ವೀಕಾರ

  • ಪ್ರತಿ ತಿಂಗಳು ಶೇ.100 ಪಡಿತರ ಎತ್ತುವಳಿ ಕಷ್ಟ

  • ಗ್ರಾಮೀಣ ಪ್ರದೇಶಗಳಲ್ಲಿ ಸರ್ವರ್ ಸಮಸ್ಯೆ ತೀವ್ರ

  • ಮಾಸಿಕ 4.34 ಲಕ್ಷ ಮೆ.ಟನ್ ಆಹಾರ ವಿತರಣೆ

ಸರ್ಕಾರದ 21 ಇಲಾಖೆಗಳು ಆಹಾರ ಇಲಾಖೆ ಸರ್ವರ್ ಮೇಲೆ ಅವಲಂಬಿತವಾಗಿವೆ. ಹೀಗಾಗಿ, ಪಡಿತರ ವಿತರಣೆಗೆ ಪದೇಪದೆ ಸರ್ವರ್ ಸಮಸ್ಯೆ ಎದುರಾಗುತ್ತಿದೆ. ಈ ಸಮಸ್ಯೆ ಬಗೆಹರಿಯುವರೆಗೆ ಮೊಬೈಲ್ ಒಟಿಪಿ ಇಲ್ಲವೆ ಚೆಕ್ಲೀಸ್ಟ್ ಮೂಲಕ ವಿತರಣೆಗೆ ಅವಕಾಶ ನೀಡಬೇಕು. ಆಹಾರ ಇಲಾಖೆ ಆಯುಕ್ತರು ಸೇರಿ ಸಂಬಂಧಪಟ್ಟವರನ್ನು ಭೇಟಿ ಮಾಡಿ ಸರ್ವರ್ ಸಮಸ್ಯೆ ಗಮನಕ್ಕೆ ತಂದರೂ ಬಗೆಹರಿದಿಲ್ಲ. ಪಡಿತರ ವಿತರಣೆಗೆ ಪ್ರತ್ಯೇಕ ಸರ್ವರ್ ಕೇಂದ್ರ ಸ್ಥಾಪಿಸಬೇಕು. ಪ್ರತಿನಿತ್ಯ ನ್ಯಾಯಬೆಲೆ ಅಂಗಡಿಗಳ ಮುಂಭಾಗ ನಿಲ್ಲುವ ಕಾರ್ಡ್ದಾರರು ನಮಗೆ ಶಾಪ ಹಾಕುತ್ತಿದ್ದಾರೆ.
| ಟಿ.ಕೃಷ್ಣಪ್ಪ ಅಧ್ಯಕ್ಷ, ರಾಜ್ಯ ಸರ್ಕಾರಿ ಪಡಿತರ ವಿತರಕರ ಸಂಘ

ಸರ್ವರ್ ಸಮಸ್ಯೆಯಿಂದ 7-8 ಕಾರ್ಡ್ ದಾರರ ಬಯೋಮೆಟ್ರಿಕ್ ಮಾತ್ರ ತೆಗೆದುಕೊಳ್ಳಲಾಗುತ್ತಿದ್ದು, ಉಳಿದವರು ಮನೆಗೆ ವಾಪಸ್ ತೆರಳುತ್ತಿದ್ದಾರೆ. ಆಹಾರ ಇಲಾಖೆ ಹೆಣಗಾಟ: ಸರ್ವರ್ ಡೌನ್ ಸಮಸ್ಯೆ ನಿರಂತರವಾಗಿ ಕಾಡುತ್ತಿದ್ದರೂ ಶಾಶ್ವತ ಪರಿಹಾರ ಕಂಡುಕೊಳ್ಳಲು ಆಹಾರ ಇಲಾಖೆ ಹೆಣಗಾಡುವಂತಾಗಿದೆ. ಸರ್ವರ್ ಮೇಲ್ವಿಚಾರಣೆ ನಡೆಸುವವರು ಇಲಾಖೆಯಿಂದ ಸಮರ್ಪಕವಾಗಿ ಹಣ ಪಾವತಿಸದಿದ್ದರೆ ಬೇಕಂತಲೇ ಕೆಲವೊಮ್ಮೆ ಸರ್ವರ್ ಡೌನ್ ಮಾಡುತ್ತಿದ್ದಾರೆಂಬ ಆರೋಪವೂ ಇದೆ. ಗ್ರಾಮೀಣ ಭಾಗ ಸೇರಿ ನಗರ ಪ್ರದೇಶಗಳಲ್ಲಿ ಸರ್ವರ್ ಸಮಸ್ಯೆ ಜಾಸ್ತಿಯಾಗಿದ್ದು, ನ್ಯಾಯಬೆಲೆ ಅಂಗಡಿ ಮಾಲೀಕರು ‘ಸರ್ವರ್ ಸಮಸ್ಯೆ’ ಎಂದು ಉತ್ತರ ಕೊಟ್ಟು ರೋಸಿ ಹೋಗಿದ್ದಾರೆ.

ಬೆಳಗಾವಿ ಜಿಲ್ಲೆಯಲ್ಲಿ ಪಡಿತರ ಅಂಗಡಿಗಳಿಗೆ ಪಡಿತರ ಪೂರೈಕೆ ಈ ತಿಂಗಳು ತಡವಾಗಿದೆ. ಜತೆಗೆ ಸರ್ವರ್ ಸಮಸ್ಯೆಯಿಂದ ದಿನವಿಡಿ ಜನರು ಪಡಿತರಕ್ಕಾಗಿ ಕಾಯುವಂತಾಗಿದೆ. ಆಹಾರ ಇಲಾಖೆ ತಾಂತ್ರಿಕ ವಿಭಾಗ ಕೂಡಲೇ ಸಮಸ್ಯೆ ನಿವಾರಿಸಬೇಕು. ಇಲ್ಲವಾದಲ್ಲಿ ದೊಡ್ಡ ಮಟ್ಟದ ಹೋರಾಟ ಮಾಡಬೇಕಾಗುತ್ತದೆ.
| ರಾಜಶೇಖರ ತಳವಾರ ಉಪಾಧ್ಯಕ್ಷರು, ಸರ್ಕಾರಿ ಪಡಿತರ ವಿತರಕರ ಕ್ಷೇಮಾಭಿವೃದ್ಧಿ ಸಂಘ