

ನವದೆಹಲಿ: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎ14 ಆರೋಪಿ ಪ್ರದೋಶ್ನನ್ನು ಮಾಫಿ ಸಾಕ್ಷಿಯನ್ನಾಗಿ ಪರಿಗಣಿಸುವುದನ್ನು ಪ್ರಶ್ನಿಸಿ ಪ್ರಮುಖ ಆರೋಪಿ ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಿದ್ದು, ನಾಳೆ(ಅ. 08) ಕೋರ್ಟ್ ವಿಚಾರಣೆ ನೆಡಸಲಿದೆ.
ಬುಧವಾರ(ಅ. 07) ನ್ಯಾ. ಪರ್ದಿವಾಲ ನೇತೃತ್ವದ ಪೀಠದಲ್ಲಿ ಅರ್ಜಿ ವಿಚಾರಣೆ ಆರಂಭವಾಗಿದ್ದು, ಈ ವೇಳೆ ದರ್ಶನ್ ಪರ ವಕೀಲರು ಮಾಫಿ ಸಾಕ್ಷಿ ಕುರಿತ ಸುಪ್ರೀಂಕೋರ್ಟ್ನ ಎರಡು ಹಳೆಯ ತೀರ್ಪು ಉಲ್ಲೇಖಿಸಿದ್ದಾರೆ. ಈ ಹಿನ್ನೆಲೆ ನ್ಯಾಯಾಧೀಶರು, ನೀವು ಹೇಳಿದ ಇತರ ತೀರ್ಪುಗಳನ್ನು ಪರಿಶೀಲಿಸಿ ಬಳಿಕ ವಿಚಾರಣೆ ನಡೆಸುವುದಾಗಿ ಹೇಳಿದ್ದು, ನಾಳೆಗೆ ವಿಚಾರಣೆಗೆ ಮುಂದೂಡಿದ್ದಾರೆ.
ಎ14 ಆರೋಪಿ ಪ್ರದೋಶ್ ತನ್ನನ್ನು ಮಾಫಿ ಸಾಕ್ಷಿಯನ್ನಾಗಿ ಪರಿಗಣಿಸಬೇಕೆಂದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು 59ನೇ ಸಿಸಿಎಚ್ ನ್ಯಾಯಾಲಯ ಇಂದು (ಆಗಸ್ಟ್ 25) ಅಂಗೀಕರಿಸಿದೆ. ನ್ಯಾಯಾಧೀಶರಾದ ಸುಜಾತಾ ಮಡಿವಾಳಪ್ಪ ಸಾಂಬ್ರಾಣಿ ಅವರು ಕೆಲವು ಕಟ್ಟುನಿಟ್ಟಿನ ಶರತ್ತುಗಳನ್ನು ವಿಧಿಸಿ ಅನುಮೋದನೆ ನೀಡಿದ್ದಾರೆ.
ಅದೇನೆಂದರೆ, ಪ್ರದೋಶ್ ಅವರು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತನಗೆ ತಿಳಿದಿರುವ ಪ್ರತಿಯೊಂದು ಸತ್ಯಾಂಶವನ್ನು ಯಾವುದೇ ಮುಚ್ಚುಮರೆಯಿಲ್ಲದೆ ನ್ಯಾಯಾಲಯದ ಮುಂದೆ ಬಾಯಿಬಿಡಬೇಕು. ಅಲ್ಲದೆ, ವಿಚಾರಣೆಯ ಪ್ರಕ್ರಿಯೆ ಸಂಪೂರ್ಣವಾಗಿ ಮುಗಿಯುವವರೆಗೆ ಪ್ರದೋಷ್ ಕಡ್ಡಾಯವಾಗಿ ಜೈಲುವಾಸ ಅನುಭವಿಸಬೇಕಾಗುತ್ತದೆ. ಒಂದು ವೇಳೆ ನ್ಯಾಯಾಲಯದ ಮುಂದೆ ಸುಳ್ಳು ಹೇಳಿಕೆಗಳನ್ನು ನೀಡಿದರೆ ಅಥವಾ ತಪ್ಪು ಮಾಹಿತಿ ಒದಗಿಸಿದರೆ, ಆತನನ್ನು ಮತ್ತೆ ನೇರವಾಗಿ ಆರೋಪಿಯನ್ನಾಗಿಯೇ ಪರಿಗಣಿಸಿ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಹಾಗೂ ಪ್ರಾಸಿಕ್ಯೂಷನ್ ಅಗತ್ಯ ತೀರ್ಮಾನ ಕೈಗೊಳ್ಳಲಿದೆ ಎಂದು ಕೋರ್ಟ್ ಹೇಳಿದೆ.
ಪ್ರದೋಶ್ ಸಲ್ಲಿಸಿರುವ ಮಾಫಿ ಸಾಕ್ಷಿ ಅರ್ಜಿಯ ಪ್ರಕಾರ, ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ, ನಟ ದರ್ಶನ್ ಅವರ ಆಪ್ತ ಸ್ನೇಹಿತೆ ಪವಿತ್ರಾ ಗೌಡಗೆ ಅಶ್ಲೀಲ ಮೆಸೇಜ್ಗಳನ್ನು ಕಳುಹಿಸಿದ್ದಾನೆ ಎಂಬ ಕಾರಣಕ್ಕೆ ಆತನನ್ನು ಅಪಹರಿಸಿ ಕರೆತಂದು ಪಟ್ಟಣಗೆರೆ ಶೆಡ್ನಲ್ಲಿ ಬಂಧಿಸಿ, ಹಲ್ಲೆ ನಡೆಸಲಾಯಿತು. ಈ ವೇಳೆ ರೇಣುಕಾಸ್ವಾಮಿಯ ತಲೆಯಿಂದ ರಕ್ತಸುರಿಯುತ್ತಿತ್ತು ಎಂದು ಪ್ರದೋಶ್ ತಿಳಿಸಿದ್ದಾನೆ. ಅಷ್ಟೇ ಅಲ್ಲದೆ, ಪವಿತ್ರಾ ಗೌಡ ಕೂಡ ಸ್ಥಳಕ್ಕೆ ಬಂದಿದ್ದಳು ಹಾಗೂ ತನ್ನ ಚಪ್ಪಲಿಯಿಂದ ರೇಣುಕಾಸ್ವಾಮಿಗೆ ಹೊಡೆದಿದ್ದಳು ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.
ಇದಿಷ್ಟೇ ಅಲ್ಲದೆ, ಇತರೆ ಆರೋಪಿಗಳು ರೇಣುಕಾಸ್ವಾಮಿಯ ಒಳಉಡುಪನ್ನು ಕೆಳಗಿಳಿಸಿ, ಆತನ ಮೇಲೆ ಭೀಕರವಾಗಿ ಹಲ್ಲೆ ನಡೆಸಿದರು. ನಂದೀಶ್, ಪವನ್ ಮತ್ತು ನಾಗರಾಜ್ ಅವರು ಮರದ ತುಂಡುಗಳು ಹಾಗೂ ನೈಲಾನ್ ಹಗ್ಗದಿಂದ ಹಲ್ಲೆ ನಡೆಸಿದ್ದು, ನಂದೀಶ್ ಅವರು ರೇಣುಕಾಸ್ವಾಮಿಯನ್ನು ಟಾಟಾ ಏಸ್ ವಾಹನಕ್ಕೆ ನೇಣುಹಾಕಲು ಯತ್ನಿಸಿದರೆ, ನಾಗರಾಜ್ ನೈಲಾನ್ ಹಗ್ಗದಿಂದ ಹಾಗೂ ಇತರೆ ಆರೋಪಿಗಳು ಮರದ ತುಂಡುಗಳಿಂದ ನಿರಂತರವಾಗಿ ಹೊಡೆದಿದ್ದಾರೆ ಎಂದು ಪ್ರದೋಶ್ ತನ್ನ ಅರ್ಜಿಯಲ್ಲಿ ಆರೋಪಿಸಿದ್ದಾರೆ.
ಪ್ರದೋಶ್ ತನ್ನ ಅರ್ಜಿಯಲ್ಲಿ ಮತ್ತಷ್ಟು ಗಂಭೀರ ಆರೋಪಗಳನ್ನು ಮಾಡಿದ್ದು, ಸಂತ್ರಸ್ತನ ಮೊಬೈಲ್‌ನಲ್ಲಿದ್ದ ಸಂದೇಶಗಳನ್ನು ಜೋರಾಗಿ ಓದುತ್ತಿದ್ದ ಸಮಯದಲ್ಲಿ ದರ್ಶನ್ ಅವರೇ ನೈಲಾನ್ ಹಗ್ಗವನ್ನು ತೆಗೆದುಕೊಂಡು ರೇಣುಕಾಸ್ವಾಮಿ ಅವರ ಕೈ ಹಾಗೂ ಬೆನ್ನಿನ ಮೇಲೆ ಹಲವು ಬಾರಿ ಹೊಡೆದಿದ್ದಾರೆ. ಮತ್ತೊಂದು ಹಂತದಲ್ಲಿ ರೇಣುಕಾಸ್ವಾಮಿಯನ್ನು ಸಂಪೂರ್ಣವಾಗಿ ನಗ್ನಗೊಳಿಸಿ, ದರ್ಶನ್ ಅವರೇ ಆತನ ಗುಪ್ತಾಂಗಗಳಿಗೆ ಪದೇಪದೆ ಒದ್ದಿದ್ದಾರೆ ಎಂದು ಉಲ್ಲೇಖಿಸಲಾಗಿದೆ.