

ಬೆಂಗಳೂರು: ಪಶು ವೈದ್ಯಾಧಿಕಾರಿಗಳ ಹುದ್ದೆಗಳ ನೇಮಕಾತಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮ ಹಣ ವರ್ಗಾವಣೆ ಮತ್ತು ಕೋಟ್ಯಂತರ ರೂಪಾಯಿಗಳ ಲಂಚದ ಹಗರಣದ ತನಿಖೆಯನ್ನು ತೀವ್ರಗೊಳಿಸಿರುವ ಇಡಿ ಅಧಿಕಾರಿಗಳು, ಮಂಗಳವಾರ(ಅ. 06) ಕೆಪಿಎಸ್ಸಿ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಮತ್ತು ಆಯೋಗದ ಹಾಲಿ ಸದಸ್ಯೆ ಬಿ.ವಿ. ಗೀತಾ ಅವರನ್ನು ಬಂಧಿಸಿದೆ.
ಬೆಂಗಳೂರಿನ ಸಂಜಯನಗರ ಸಮೀಪದ ಡಾಲರ್ಸ್ ಕಾಲೋನಿಯಲ್ಲಿರುವ ಶಿವಶಂಕರಪ್ಪ ಸಾಹುಕಾರ್ ಅವರ ಅಪಾರ್ಟ್‌ಮೆಂಟ್ ಮೇಲೆ ದಾಳಿ ಮಾಡಿದ್ದ ಇಡಿ ಅಧಿಕಾರಿಗಳು, ನೇಮಕಾತಿಗೆ ಸಂಬಂಧಿಸಿದ ರಹಸ್ಯ ಕಡತಗಳು, ಬ್ಯಾಂಕ್ ಖಾತೆಗಳ ಎಂಟ್ರಿಗಳು ಹಾಗೂ ಅಕ್ರಮವಾಗಿ ಸಂಪಾದಿಸಿರುವ ಸ್ಥಿರ-ಚರಾಸ್ತಿಗಳ ವಿವರಗಳನ್ನು ಕಲೆಹಾಕಿದರು. ಬಳಿಕ ಗಂಟೆಗಟ್ಟಲೆ ಸುದೀರ್ಘ ವಿಚಾರಣೆ ನಡೆಸಿ ಕೊನೆಗೆ ಸಾಹುಕಾರ್ ಅವರನ್ನು ಬಂಧಿಸಿತ್ತು.
ಪಶುವೈದ್ಯಾಧಿಕಾರಿ ನೇಮಕದಲ್ಲಿಅತ್ಯಧಿಕ ಅಂಕ ಪಡೆದಿದ್ದ ಸುಗುರೇಶ್ ಜಕಾ ಎಂಬ ಅಭ್ಯರ್ಥಿಯನ್ನು ಇ.ಡಿ ಅಧಿಕಾರಿಗಳು ವಿಚಾರಣೆ ನಡೆಸಿದ್ದರು. ಈ ಅಭ್ಯರ್ಥಿ ಸಾಹುಕರ್ ಅವರ ನಿಕಟ ಸಂಬಂಧಿಯಾಗಿದ್ದು, ಆತ ಪರೀಕ್ಷೆಯಲ್ಲಿ ಪಡೆದಿದ್ದ ಅಂಕಗಳು ಅಸಹಜವಾಗಿದ್ದವು ಎನ್ನಲಾಗಿದೆ. ಈ ಕುರಿತು ವಿಚಾರಣೆ ನಡೆಸಿದಾಗ , ತನಗೆ ಪರೀಕ್ಷಾ ಹಿಂದಿನ ದಿನ ಉತ್ತರ ಸಹಿತ ಪ್ರಶ್ನೆಪತ್ರಿಕೆ ಸಿಕ್ಕಿದ್ದು, ಇದಕ್ಕೆ ತನ್ನ ಸಂಬಂಧಿ ಅಧ್ಯಕ್ಷ ಸಾಹುಕಾರ್ ಕಾರಣ ಎಂದು ತಪ್ಪೊಪ್ಪಿಕೊಂಡಿದ್ದಾನೆ ಎನ್ನಲಾಗಿದೆ.
ಜ.7ರಂದು ನೇಮಕಾತಿ ಪರೀಕ್ಷೆಗೆ ಕೆಲವು ಗಂಟೆಗಳ ಮೊದಲು ಸಾಹುಕಾರ್ ಶಿವಶಂಕರಪ್ಪ ಅವರು, ಐಎಎಸ್ ಅಧಿಕಾರಿ ಮತ್ತು ಕೆಪಿಎಸ್ಸಿ ಪರೀಕ್ಷಾ ನಿಯಂತ್ರಕರಾಗಿದ್ದ ಜ್ಞಾನೇಂದ್ರ ಕುಮಾರ್ ಗಂಗ್ವಾರ್ ಅವರಿಗೆ ಎರಡು ಬಾರಿ ಕರೆ ಮಾಡಿದ್ದರು ತನಿಖೆಯಲ್ಲಿ ತಿಳಿದು ಬಂದಿದೆ. ಇದಾದ ಬಳಿಕ ಗಂಗ್ವಾರ್ ಅವರು ಸುಗುರೇಶ್ಗೆ ಉತ್ತರ ಸಹಿತ ಪ್ರಶ್ನೆಪತ್ರಿಕೆ ಹಂಚಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ. ಬಳಿಕ ಅದನ್ನು ಸುಗುರೇಶ್ ಕೆಪಿಎಸ್‌ಸಿ ಸದಸ್ಯೆ ಬಿ.ವಿ. ಗೀತಾ ಅವರಿಗೆ ಅದನ್ನು ಹಂಚಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.
ಸುಗುರೇಶ್ ತಪ್ಪೊಪ್ಪಿಗೆ ಹೇಳಿಕೆ ಮತ್ತು ಈ ಪೂರಕ ದಾಖಲೆಗಳ ಅನ್ವಯವೇ ಇಬ್ಬರನ್ನೂ ಇ.ಡಿ ಅಧಿಕಾರಿಗಳು ಬಂಧಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇನ್ನೂ ತನಿಖೆ ಮುಂದುವರೆದಿದ್ದು, ಇಡಿ ಕೂಲಂಕುಷವಾಗಿ ವಿಚಾರಣೆ ನಡೆಸುತ್ತಿದೆ.
ಮೂಲತಃ ರಾಯಚೂರು ಜಿಲ್ಲೆ ದೇವದುರ್ಗ ತಾಲೂಕು ಮೂಲದರಾಗಿರುವ ಶಿವಶಂಕರಪ್ಪ ಸಾಹುಕಾರ್ ಅವರು ಕೃಷಿಯಲ್ಲಿ ಇಂಜಿನಿಯರಿಂಗ್ ಪದವಿ ಪಡೆದಿದ್ದಾರೆ. ಸೆಪ್ಟೆಂಬರ್ 2019ರಲ್ಲಿ ಅವರನ್ನು ಕೆಪಿಎಸ್ಸಿ ಸದಸ್ಯರಾಗಿ ನೇಮಕ ಮಾಡಲಾಗಿತ್ತು. 2021ರ ಏಪ್ರಿಲ್ನಲ್ಲಿ ರಾಜ್ಯ ಸರ್ಕಾರದ ಶಿಫಾರಸ್ಸಿನ ಮೇರೆಗೆ ರಾಜ್ಯಪಾಲರು ಕೆಪಿಎಸ್ಸಿ ಅಧ್ಯಕ್ಷರನ್ನಾಗಿ ನೇಮಕ ಮಾಡಿದ್ದರು.
ಕೈಗಾರಿಕಾ ವಿಸ್ತರಣಾಧಿಕಾರಿ ಹುದ್ದೆ ಪಡೆಯಲು ಎಸ್. ಸಾಹುಕಾರ್ ಅವರ ಮಗಳು ಸುಮಾ ಅವರು ವಾರ್ಷಿಕ ಕುಟುಂಬದ ಆದಾಯ ₹40,000 ಎಂದು ಘೋಷಿಸುವ ನಕಲಿ ಆದಾಯ ಪ್ರಮಾಣಪತ್ರವನ್ನು ಸಲ್ಲಿಸಿದ್ದು ಬಯಲಿಗೆ ಬಂದ ಬಳಿಕ ರಾಜ್ಯಪಾಲರು ಅವರನ್ನು ಅಮಾನತು ಮಾಡಿದ್ದರು (ಏಜೆನ್ಸೀಸ್).