

ಮುಂಬೈ: ಕನ್ನಡಿಗರ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಾರೆ, ಫಹಲ್ಗಾಮ್ ಘಟನೆ ಮತ್ತು ಕನ್ನಡಿಗರನ್ನು ಹೋಲಿಸಿ ನಾಲಿಗೆ ಹರಿಬಿಟ್ಟಿದ್ದಾರೆಂಬ ಕಾರಣಕ್ಕೆ ಅಕ್ಟೋಬರ್ 24 ರಂದು ಬೆಂಗಳೂರಿನಲ್ಲಿ ನಡೆಯಲಿರುವ ಗಾಯಕ ಸೋನು ನಿಗಮ್ ಅವರ ಕಾರ್ಯಕ್ರಮಕ್ಕೆ ಅನುಮತಿ ನೀಡಿದಂತೆ ಕನ್ನಡ ರಕ್ಷಣಾ ವೇದಿಕೆ ಆಗ್ರಹಿಸಿ, ಅನುಮತಿ ನೀಡಿದರೆ ಪ್ರತಿಭಟನೆ ನಡೆಸುವ ಎಚ್ಚರಿಕೆಯನ್ನು ನೀಡಿತ್ತು.
ಈ ವಿಷಯ ಗಂಭೀರ ಸ್ವರೂಪ ಪಡೆದುಕೊಂಡ ಹಿನ್ನಲೆ ಕೊನೆಗೂ ಗಾಯಕ ಸೋನು ನಿಗಮ್, ಕನ್ನಡಿಗರಲ್ಲಿ ಕ್ಷಮೆ ಕೇಳಿ, ಆ ದಿನ ನಡೆದ ಘಟನೆ ಹಾಗೂ ಫಹಲ್ಗಾಮ್ ಮತ್ತು ಕನ್ನಡಿಗರ ನಡುವಿನ ಹೋಲಿಕೆಯ ತಪ್ಪುಮಾಹಿತಿ ಬಗ್ಗೆ ಸ್ಪಷ್ಟಿಕರಣ ನೀಡಿದ್ದಾರೆ.
ಕನ್ನಡಿಗರನ್ನು ಹಾಗೂ ಕನ್ನಡ ರಕ್ಷಣಾ ವೇದಿಕೆಯನ್ನು ಉದ್ದೇಶಿಸಿ ಮಾತನಾಡಿರುವ ಸೋನು ನಿಗಮ್, ನನಗೆ ಕನ್ನಡಿಗರ ಬಳಿ ಸಾವಿರ ಸಲ ಕ್ಷಮೆ ಕೇಳಲು ಮುಜುಗರವಿಲ್ಲ. ಕಳೆದ ಹಲವು ದಶಕಗಳಿಂದ ನನ್ನ ಹಾಡನ್ನು ಕೇಳಿಸಿಕೊಳ್ಳುತ್ತಾ, ನನ್ನನ್ನು ಬೆಳೆಸಿದವರಲ್ಲಿ ನೀವು ಒಬ್ಬರಾಗಿದ್ದಿರಿ. ಆದರೆ ನನ್ನ ಜತೆ ನಡೆದಿರುವ ಅಥವಾ ನನ್ನ ಮಾತಿಗೆ ಬೇರೆ ಅರ್ಥವನ್ನು ಕಲ್ಪಿಸಿಕೊಂಡು ನನ್ನ ವಿರುದ್ಧ ಕಿಡಿಕಾರುವುದು ಸರಿಯಲ್ಲ ಎಂದಿದ್ದಾರೆ. ಇಷ್ಟಾದರೂ ನನ್ನ ಕಾರ್ಯಕ್ರಮದ ಎಲ್ಲಾ ಟಿಕೆಟ್ಗಳನ್ನು ಹಣಕೊಟ್ಟು ಖರೀದಿಸದಕ್ಕಾಗಿ ಧನ್ಯವಾದ ತಿಳಿಸಿದ್ದಾರೆ.
ಕಳೆದ ಹಲವು ತಿಂಗಳುಗಳಿಂದ ನಾನು ಕಾಶ್ಮೀರದ ಫಹಲ್ಗಾಮ್ ಘಟನೆ ಹಾಗೂ ಕನ್ನಡಿಗರ ಬಗ್ಗೆ ಮಾತನಾಡಿದ್ದ ಮಾತನ್ನು ತಪ್ಪಾಗಿ ಪ್ರಚಾರ ಪಡಿಸಲಾಯಿತು. ಆದರೆ ನಾನು ಹೇಳಿದ್ದು ಏನಾಗಿತ್ತೆಂದರೆ, ಅಲ್ಲಿ ಭಯೋತ್ಪಾದನಾ ದಾಳಿ ನಡೆಯುವ ಮೊದಲು ಆ ವ್ಯಕ್ತಿ, ನಾನು ಕರ್ನಾಟಕದಿಂದ ಬಂದಿದ್ದೇನೆ, ನಾನು ಹೆಮ್ಮೆಯ ಕನ್ನಡಿಗ ಎಂದು ವಿಡಿಯೋ ಹಂಚಿಕೊಂಡಿದ್ದರು. ಆದರೆ ಅದಾದ ಕೆಲವೇ ನಿಮಿಷದಲ್ಲಿ ಆ ವ್ಯಕ್ತಿ 'ಹಿಂದೂ' ಎನ್ನುವು ಒಂದೇ ಕಾರಣಕ್ಕೆ ಗುಂಡಿಟ್ಟು ಕೊಂದರು. ನಾನು ಅಲ್ಲಿ ಏನು ಹೇಳಿದೆ ಎಂದರೆ, ಅವನನ್ನು ಕೊಲ್ಲುವಾಗ, ಅವನ ಕನ್ನಡ, ಕರ್ನಾಟಕ ಎನ್ನುವುದು ಯಾವ ಉಪಯೋಗಕ್ಕೂ ಬಂದಿಲ್ಲ. ಅವನನ್ನು ಅವನ ಧರ್ಮದ ಆಧಾರದಲ್ಲಿ ಸಾಯಿಸಿಬಿಟ್ಟರು. ಈ ಮಾತನ್ನು ನಾನು ನೆರೆದಿದ್ದ ಜನರಿಗೆ ಹೇಳ ಬಯಸಿದ್ದೆ, ಆದರೆ ಅದನ್ನು ತಪ್ಪಾಗಿ ಪ್ರಚಾರ ಮಾಡಲಾಯಿತು ಎಂದಿದ್ದಾರೆ.
ಇದಾದ ಕೆಲವೇ ದಿನದಲ್ಲಿ ಬೆಂಗಳೂರಿನ ಕಾಲೇಜೊಂದರಲ್ಲಿ ನಡೆದಿದ್ದ ಕಾರ್ಯಕ್ರಮದಲ್ಲಿ ನಡೆದ ಗಲಾಟೆ ಬಗ್ಗೆ ಮಾತನಾಡಿದ ಸೋನು, ನಾನು ಒಬ್ಬ ಮನುಷ್ಯನೇ, ನನಗೂ ಸಹ ಕೋಪ ಎನ್ನುವುದು ಬರುತ್ತದೆ. ಅಷ್ಟಕ್ಕೂ ಆ ದಿನ ನಡೆದ ಕಾರ್ಯಕ್ರಮದಲ್ಲಿ ನನ್ನ ಜೊತೆ ಆ ವ್ಯಕ್ತಿ ಸರಿಯಾಗಿ ನಡೆದುಕೊಳ್ಳಲಿಲ್ಲ. ಯಾರೆ ಆಗಲೀ, ಅಮ್ಮ.. ಅಕ್ಕ.. ಎಂಬ ಬೈಗುಳವನ್ನು ಎಷ್ಟು ಅಂತಾ ಕೇಳಿಸಿಕೊಳ್ಳುತ್ತಾರೆ. ನನ್ನ ತಾಳ್ಮೆ ಕಟ್ಟೆ ಒಡೆಯಿತು, ಹೀಗಾಗಿ ನಾನು ವಾಗ್ದಾಳಿ ನಡೆದಿದೆ. ಆದರೆ ಇದು ನಾನು ಕನ್ನಡಿಗರಿಗೆ ಮಾಡಿದ ಅವಮಾನ ಎಂದು ಭಾವಿಸುವುದು ತಪ್ಪಾಗುತ್ತದೆ ಎಂದಿದ್ದಾರೆ.
ನಾನು ಕರ್ನಾಟಕದಲ್ಲಿ, ಅದರಲ್ಲೂ ಬೆಂಗಳೂರಿನಲ್ಲಿ ನನ್ನ ಕಾರ್ಯಕ್ರಮ ನಡೆಯುತ್ತದೆ ಎಂದತೆ, ಒಂದುವರೆ ಗಂಟೆ ಹಾಡಲು ಸಿದ್ಧವಾಗಿಯೇ ಬರುತ್ತೇನೆ. ಇಲ್ಲಿಯ ಜನ ನನ್ನ ಗಾಯನವನ್ನು ಎಷ್ಟು ಇಷ್ಟಪಡುತ್ತಾರೆಂದು ನನಗೆ ಗೊತ್ತಿದೆ. ಆದರೆ ಆ ಒಂದು ದಿನ ನಡೆದ ಘಟನೆಯನ್ನು ತಪ್ಪಾಗಿ ಅರ್ಥೈಸಿಕೊಂಡು, ನನ್ನನ್ನು ಬೈಕಾಟ್ ಮಾಡುವುದು ಸರಿಯಲ್ಲ. ಇಷ್ಟಾಗಿಯೂ ನನ್ನಿಂದ, ನನ್ನ ಮಾತಿನಿಂದ ಬೇಸರವೆನಿಸಿದರೆ ಕ್ಷಮೆ ಇರಲಿ ಎಂದು ಸೋನು ನಿಗಮ್ ಹೇಳಿದ್ದಾರೆ.
ಇನ್ನು ಸೋನಿ ನಿಗಮ್ ಕನ್ನಡಿಗರಲ್ಲಿ ಕ್ಷಮೆ ಕೇಳಿದ ನಂತರ ಕರವೇ ಅಧ್ಯಕ್ಷ ನಾರಾಯಣ ಗೌಡ ಟ್ವಿಟರ್ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಗಾಯಕ ಸೋನು ನಿಗಮ್ ಇಂದು ನನ್ನೊಂದಿಗೆ ಮಾತಾಡಿದರು. ತಾವು ಹಿಂದೆ ಮಾಡಿದ ಮಾತು ಕನ್ನಡಿಗರನ್ನು ಹೇಗೆ ನೋಯಿಸಿದೆ ಎಂಬುದು ಅವರಿಗೆ ಅರ್ಥವಾಗಿದೆ. ಬೇಷರತ್ತಾಗಿ ಕ್ಷಮೆ ಯಾಚಿಸುವುದಾಗಿ ಅವರು ಹೇಳಿದ್ದಾರೆ.
ನಾನು ಹಿಂದೆಯೂ ಹೇಳಿದ್ದೇನೆ. ನಾವೆಲ್ಲರೂ ಸೋನು ನಿಗಮ್ ಅವರ ಹಾಡುಗಳನ್ನು ಇಷ್ಟಪಟ್ಟವರು. ಅವರ ಕುರಿತು ವೈಯಕ್ತಿಕವಾಗಿ ಯಾವ ದ್ವೇಷ, ಮುನಿಸು ನಮಗೆ ಇರಲಿಲ್ಲ. ಆ ಒಂದು ಮಾತನ್ನು ಅರಗಿಸಿಕೊಳ್ಳಲು ನಮ್ಮಿಂದ ಆಗಿರಲಿಲ್ಲ. ಅದಕ್ಕಾಗಿ ನಮ್ಮ ಪ್ರತಿಭಟನೆ, ಆಕ್ರೋಶ ಸಹಜವಾಗಿತ್ತು.
ಇದೀಗ ಅವರು ಕ್ಷಮೆ ಯಾಚಿಸಿದ್ದಾರೆ. ಇಲ್ಲಿಗೆ ಇದನ್ನು ಮುಗಿಸುವುದು ಒಳ್ಳೆಯದು. ಕ್ಷಮೆ ಕೇಳಿದವರನ್ನು ಕ್ಷಮಿಸುವುದು ಕನ್ನಡಿಗರ ಔದಾರ್ಯ, ಸಂಸ್ಕಾರ ಎಂದು ನಾರಾಯಣ ಗೌಡ ಬರೆದುಕೊಂಡಿದ್ದಾರೆ, (ಏಜೆನ್ಸೀಸ್).