

ಬೆಂಗಳೂರು : ಜನಪದ ಕಲೆ, ಸಂಸ್ಕೃತಿ ಮತ್ತು ಪರಂಪರೆಯನ್ನು ಉಳಿಸಿ ಬೆಳೆಸುವುದು ಕೇವಲ ಸಾಂಸ್ಕೃತಿಕ ಸಂಸ್ಥೆಗಳ ಜವಾಬ್ದಾರಿಯಲ್ಲ. ಅದಕ್ಕೆ ಸರ್ಕಾರಗಳೂ ಆದ್ಯತೆ ನೀಡಬೇಕು. ಒಂದು ಸಂಸ್ಕೃತಿಯನ್ನು ಉಳಿಸುವುದೆಂದರೆ ನಾಡಿನ ಅಸ್ಮಿತೆಯನ್ನು ಉಳಿಸಿದಂತೆ ಎಂದು ಮಾಜಿ ವಿಧಾನ ಪರಿಷತ್ ಸಭಾಪತಿ ಬಿ.ಎಲ್.ಶಂಕರ್ ಹೇಳಿದರು.
ಕರ್ನಾಟಕ ಜಾನಪದ ಪರಿಷತ್ತು ಆಯೋಜಿಸಿದ್ದ ನಾಡೋಜ ಎಚ್.ಎಲ್. ನಾಗೇಗೌಡ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.
ನಾಗೇಗೌಡರು ಜನಪದ ಪರಿಷತ್ತನ್ನು ಕಟ್ಟಿಬೆಳೆಸಲು ತಮ್ಮ ಇಡೀ ಬದುಕು, ಅನುಭವ ಮತ್ತು ಸಂಪನ್ಮೂಲಗಳನ್ನು ಧಾರೆ ಎರೆದಿದ್ದಾರೆ. ಸರ್ಕಾರಿ ಅಧಿಕಾರಿಯಾಗಿ ನಿವೃತ್ತರಾದ ಬಳಿಕ ಜನಪದ ಕ್ಷೇತ್ರದ ಉಳಿವಿಗೆ ತಪಸ್ಸಿನಂತೆ ದುಡಿದಿದ್ದಾರೆ. ಜನಪದ ಪರಿಷತ್ತಿನ ಮೂಲಕ ಇತಿಹಾಸ ನಿರ್ಮಿಸಿದ್ದಾರೆ. ಇಂತಹ ಸಾಂಸ್ಕೃತಿಕ ಸಂಸ್ಥೆಗಳಿಗೆ ಸರ್ಕಾರದ ಆರ್ಥಿಕ ನೆರವು ಅತ್ಯಗತ್ಯ. ಆದರೆ ಶಿಕ್ಷಣ ಮತ್ತು ಸಂಸ್ಕೃತಿಯಂತಹ ಕ್ಷೇತ್ರಗಳಿಗೆ ಸರ್ಕಾರಗಳು ನಿರೀಕ್ಷಿತ ಆದ್ಯತೆ ನೀಡುತ್ತಿಲ್ಲ. ಆದಾಯ ತರುವ ಇಲಾಖೆಗಳಿಗೆ ಸಿಗುವ ಪ್ರಾಮುಖ್ಯತೆ ಸಾಂಸ್ಕೃತಿಕ ಕ್ಷೇತ್ರಗಳಿಗೆ ಸಿಗುತ್ತಿಲ್ಲ. ಗ್ರಾಮೀಣ ಬದುಕಿನೊಂದಿಗೆ ಬೆಸೆದುಕೊಂಡಿರುವ ಜನಪದ ಕಲೆ, ಭಾಷೆ ಮತ್ತು ಪರಂಪರೆಯನ್ನು ಉಳಿಸುವ ನಿಟ್ಟಿನಲ್ಲಿ ಸಂಘ-ಸಂಸ್ಥೆಗಳು ಹಾಗೂ ಸರ್ಕಾರಗಳು ಒಟ್ಟಾಗಿ ಕಾರ್ಯನಿರ್ವಹಿಸಬೇಕು.
ಸುಮಾರು ನಾಲ್ಕು ಸಾವಿರ ವರ್ಷಗಳ ಇತಿಹಾಸ ಹೊಂದಿರುವ ಡೋಕ್ರಾ ಕಲಾಪ್ರಕಾರವನ್ನು ಉಳಿಸಿಕೊಂಡು ಬಂದಿರುವುದು ಅಸಾಧಾರಣ ಸಾಧನೆ. ಇಂತಹ ಅಪರೂಪದ ಕಲಾವಿದರನ್ನು ಗುರುತಿಸಿ ಗೌರವಿಸಿರುವ ಕರ್ನಾಟಕ ಜಾನಪದ ಪರಿಷತ್ತಿನ ಕಾರ್ಯವನ್ನು ಶಂಕರ್ ಶ್ಲಾಸಿದರು.
ಸಮಾರಂಭದಲ್ಲಿ ಪಶ್ಚಿಮ ಬಂಗಾಳದ ಪ್ರಾಚೀನ ಡೋಕ್ರಾ ಕಲೆಯ ಶಿಲ್ಪಿ ಸುಭಾಷ್ ಮಂಡಲ್ ಅವರಿಗೆ ನಾಡೋಜ ಎಚ್.ಎಲ್. ನಾಗೇಗೌಡ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪ್ರಶಸ್ತಿಯು 1 ಲಕ್ಷ ನಗದ ಹಾಗೂ ಸ್ಮರಣಿಕೆಯನ್ನು ಒಳಗೊಂಡಿದೆ. ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಶಾಖಾ ಮಠದ ಶ್ರೀ ಸೌಮ್ಯನಾಥ ಸ್ವಾಮೀಜಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕಿ ಡಾ.ಕೆ.ಎಂ.ವಸುಂಧರಾ, ಕರ್ನಾಟಕ ಜಾನಪದ ಪರಿಷತ್ತು ಅಧ್ಯಕ್ಷ ಪ್ರೊ.ಬೋರಲಿಂಗಯ್ಯ, ಮ್ಯಾನೇಜಿಂಗ್ ಟ್ರಸ್ಟಿ ಆದಿತ್ಯ ನಂಜರಾಜ ಮತ್ತಿತರರಿದ್ದರು.