ಕೇವಲ 1 ಗಂಟೆ 10 ನಿಮಿಷದಲ್ಲಿ ಜೀವಂತ ಹೃದಯ ಸಾಗಿಸಿ ಜೀವ ಉಳಿಸಿದ 'ನಮ್ಮ ಮೆಟ್ರೋ'! Namma Metro

ಬೆಂಗಳೂರು: ಸಿಲಿಕಾನ್ ಸಿಟಿಯ ವಿಪರೀತ ಟ್ರಾಫಿಕ್ ನಡುವೆ ಅಮೂಲ್ಯ ಜೀವವೊಂದನ್ನು ಉಳಿಸಲು 'ನಮ್ಮ ಮೆಟ್ರೋ' ಮತ್ತೊಮ್ಮೆ ಆಪದ್ಬಾಂಧವನಂತೆ ನಿಂತಿದೆ. ಮಂಗಳವಾರ (ನ.24) ಮಧ್ಯಾಹ್ನ ಗೋರಗುಂಟೆಪಾಳ್ಯ ಮೆಟ್ರೋ ನಿಲ್ದಾಣದಿಂದ ಬೊಮ್ಮಸಂದ್ರದವರೆಗೆ ಜೀವಂತ ಹೃದಯವೊಂದನ್ನು ಕೇವಲ 1 ಗಂಟೆ 10 ನಿಮಿಷಗಳಲ್ಲಿ ಅತ್ಯಂತ ವೇಗವಾಗಿ ಮತ್ತು ಸುರಕ್ಷಿತವಾಗಿ ಸಾಗಿಸುವ ಮೂಲಕ ಬಿಎಂಆರ್‌ಸಿಎಲ್ (BMRCL) ಮಾನವೀಯತೆ ಮೆರೆದಿದೆ.

ಕಾರ್ಯಾಚರಣೆ ನಡೆದಿದ್ದು ಹೇಗೆ?

ಅಂಗಾಂಗ ಕಸಿ ಶಸ್ತ್ರಚಿಕಿತ್ಸೆಯಲ್ಲಿ ಪ್ರತಿಯೊಂದು ನಿಮಿಷವೂ ಅತ್ಯಂತ ಮುಖ್ಯವಾಗಿರುತ್ತದೆ. ರಸ್ತೆ ಮಾರ್ಗವಾಗಿ ಆಂಬ್ಯುಲೆನ್ಸ್‌ನಲ್ಲಿ ಹೋದರೆ ಬೆಂಗಳೂರಿನ ಟ್ರಾಫಿಕ್‌ನಲ್ಲಿ ಸಮಯ ವ್ಯರ್ಥವಾಗುವ ಆತಂಕವಿತ್ತು. ಹೀಗಾಗಿ, ವೈದ್ಯಕೀಯ ತಂಡವು ನಮ್ಮ ಮೆಟ್ರೋ ನೆರವು ಕೋರಿತ್ತು.

ಮಧ್ಯಾಹ್ನ 12:20ಕ್ಕೆ ಸ್ಪರ್ಶ್ ಆಸ್ಪತ್ರೆಯ ಐವರು ತಜ್ಞ ವೈದ್ಯಕೀಯ ಸಿಬ್ಬಂದಿ, ಜೀವಂತ ಹೃದಯವಿದ್ದ ವಿಶೇಷ ಪೆಟ್ಟಿಗೆಯೊಂದಿಗೆ ಗೋರಗುಂಟೆಪಾಳ್ಯ ನಿಲ್ದಾಣ ಪ್ರವೇಶಿಸಿದರು. ಮೆಟ್ರೋ ಸಿಬ್ಬಂದಿಯ ಸಂಪೂರ್ಣ ಸಹಕಾರದೊಂದಿಗೆ ಯಾವುದೇ ಅಡೆತಡೆಯಿಲ್ಲದೆ ರೈಲಿನ ಮೂಲಕ ಬೊಮ್ಮಸಂದ್ರ ನಿಲ್ದಾಣವನ್ನು ಕೇವಲ 70 ನಿಮಿಷಗಳಲ್ಲಿ ತಲುಪಲಾಯಿತು.

Also Read
ಸೂರ್ಯವಂಶಿ ಸಿಕ್ಸರ್​ ಸುನಾಮಿಗೆ ಕೊಚ್ಚಿ ಹೋದ UAE: 28 ಸಿಕ್ಸರ್​, 204 ರನ್, ದೋಹಾ ಮೈದಾನದಲ್ಲಿ ಬ್ಯಾಟಿಂಗ್​ "ವೈಭವ"​ Vaibhav Suryavanshi
A team of doctors from Sparsh Hospital and BMRCL staff safely transported a living heart from the Goraguntepalya Metro station in Bengaluru to Bommasandra in just 1 hour and 10 minutes.

ಬಿಎಂಆರ್‌ಸಿಎಲ್‌ನ 8ನೇ ಯಶಸ್ವಿ ಕಾರ್ಯಾಚರಣೆ!

ನಮ್ಮ ಮೆಟ್ರೋ ಇಂತಹ ಪುಣ್ಯದ ಕೆಲಸಕ್ಕೆ ಕೈಜೋಡಿಸುತ್ತಿರುವುದು ಇದೇ ಮೊದಲಲ್ಲ. ಬಿಎಂಆರ್‌ಸಿಎಲ್ ನೆರವು ನೀಡಿದ ಮಾನವ ಅಂಗಾಂಗ ಸಾಗಣೆಯ 8ನೇ ಪ್ರಕರಣ ಇದಾಗಿದ್ದು, ಜೀವಂತ ಹೃದಯ ಸಾಗಣೆಯ 5ನೇ ಯಶಸ್ವಿ ಕಾರ್ಯಾಚರಣೆಯಾಗಿದೆ. ಲಕ್ಷಾಂತರ ಪ್ರಯಾಣಿಕರನ್ನು ದಿನನಿತ್ಯ ಸಾಗಿಸುವುದರ ಜೊತೆಗೆ, ಇಂತಹ ತುರ್ತು ವೈದ್ಯಕೀಯ ಸಂದರ್ಭಗಳಲ್ಲಿ ಜೀವ ಉಳಿಸಲು ಸದಾ ಸಿದ್ಧವಿರುವುದಾಗಿ ಬಿಎಂಆರ್‌ಸಿಎಲ್ ತಿಳಿಸಿದೆ. ಮೆಟ್ರೋ ಸಿಬ್ಬಂದಿ ಹಾಗೂ ವೈದ್ಯರ ಈ ಸಮಯಪ್ರಜ್ಞೆಗೆ ಬೆಂಗಳೂರಿಗರಿಂದ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.