ಅ.22ರವರೆಗೂ ಮಳೆಯಾಗುವ ಮುನ್ಸೂಚನೆ; ಬೆಂಗಳೂರು ಸೇರಿದಂತೆ ಈ ಜಿಲ್ಲೆಗಳಿಗೆ ಹವಾಮಾನ ಇಲಾಖೆ ಅಲರ್ಟ್..Karnataka Rain Alert

ಮಳೆ
ಬೆಂಗಳೂರಲ್ಲಿ ಮಳೆ
Published on: 
  • ಕರಾವಳಿ, ದಕ್ಷಿಣ ಮತ್ತು ಉತ್ತರ ಒಳನಾಡಿನಲ್ಲಿ ಅಕ್ಟೋಬರ್ 22ರವರೆಗೆ ಮಳೆಯಾಗುವ ಮುನ್ಸೂಚನೆ.

  • ಅಕ್ಟೋಬರ್ 18ರಂದು ಕರಾವಳಿಯ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಮಳೆಯಾಗಲಿದೆ.

  • ಕರ್ನಾಟಕದಲ್ಲಿ ಈಶಾನ್ಯ ಮಾರುತಗಳು ಹಾಗೂ ವಾಯುಭಾರ ಕುಸಿತದ ಪ್ರಭಾವ, ಮಳೆ ಅಲರ್ಟ್.

ಬೆಂಗಳೂರು: ಕರ್ನಾಟಕದಲ್ಲಿ ಈಶಾನ್ಯ ಮಾರುತಗಳು ಹಾಗೂ ವಾಯುಭಾರ ಕುಸಿತದ ಪ್ರಭಾವದಿಂದಾಗಿ, ಬೆಂಗಳೂರು ಸೇರಿದಂತೆ ಕರ್ನಾಟಕದ ವಿವಿಧ ಜಿಲ್ಲೆಯಲ್ಲಿ ಅಕ್ಟೋಬರ್ 22ರವರೆಗೆ ವ್ಯಾಪಕ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಅ.16ರಂದು ಸಂಜೆ ಐದು ಗಂಟೆಗೆ ಶುರುವಾದ ಮಳೆಯು ಇಡೀ ರಾತ್ರಿ ಧೋ ಎಂದು ಸುರಿಯಿತು. ಬೆಂಗಳೂರಿನ ಕೆಆರ್​ ಮಾರುಕಟ್ಟೆ, ವಿಧಾನಸೌಧ, ಕಬ್ಬನ ಪಾರ್ಕ್​ ರಸ್ತೆ, ಮೆಜಸ್ಟಿಕ್​, ವಿಜಯನಗರ, ಚಾಮರಾಜಪೇಟೆ, ಬಸವನಗುಡಿ, ಜಾಲಹಳ್ಳಿ, ಪೀಣ್ಯ, ಅತ್ತಿಗುಪ್ಪೆ, ಮೈಸೂರು ಸ್ಯಾಟಲೈಟ್​ ರಸ್ತೆ, ಉತ್ತರ ಹಳ್ಳಿ, ಬನಶಂಕರಿ ಸೇರಿದಂತೆ ನಾನಾ ಕಡೆ ಮಳೆಯಾಗಿದೆ. ನಿರಂತರ ಸುರಿದ ಮಳೆಗೆ ರಸ್ತೆಗಳು ಜಲಾವೃತಗೊಂಡವು. ವಾಹನ ಸವಾರರು ಟ್ರಾಫಿಕ್​ನಲ್ಲಿ ನಿಲ್ಲಬೇಕಾದ ಪರಿಸ್ಥಿತಿ ಎದುರಾಯಿತು.

ಎಲ್ಲೆಲ್ಲಿ ಮಳೆಯಾಗಲಿದೆ?

ಭಾರತೀಯ ಹವಮಾನ ಇಲಾಖೆಯು ಸದ್ಯ ಅ.22ರವರೆಗೂ ಮಳೆಯಾಗುವ ಮುನ್ಸೂಚನೆ ಕೊಟ್ಟಿದೆ. ದಕ್ಷಿಣ ಒಳನಾಡು, ಕರಾವಳಿ ಹಾಗೂ ಉತ್ತರ ಒಳನಾಡಿನ ಹಲವು ಜಿಲ್ಲೆಯಲ್ಲಿ ಗುಡುಗು ಸಹಿತ ಭಾರಿ ಮಳೆಯಾಗುವ ಅಲರ್ಟ್​ ಕೊಟ್ಟಿದೆ. ಜೊತೆಗೆ ಮುಂಜಾಗ್ರತಾ ಕ್ರಮವಾಗಿ ವಿವಿಧ ಕಡೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

ಕರಾವಳಿ ಪ್ರದೇಶದಲ್ಲಿ ಮಳೆಯಾಗುವ ಮುನ್ಸೂಚನೆ

ಉತ್ತರ ಕನ್ನಡ, ಉಡುಪಿ,ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆಯಾಗುವ ಮುನ್ಸೂಚನೆ ಕೊಟ್ಟಿದೆ. ಕಡಲ ತೀರದ ಈ ಭಾಗಗಳಲ್ಲಿ ಆಗಾಗ್ಗೆ ಬಿರುಗಾಳಿ ಬೀಸುವ ಸಾಧ್ಯತೆಯಿದೆ ಎಂದು ಹವಮಾನ ಇಲಾಖೆ ತಿಳಿಸಿದೆ.

ಇನ್ನೂ ಬೆಂಗಳೂರು ನಗರ, ದಕ್ಷಿಣ ಒಳನಾಡಿನ ಚಾಮರಾಜನಗರಮೈಸೂರು ಮತ್ತು ಕೊಡಗು ಜಿಲ್ಲೆಗಳಲ್ಲಿ ಮಳೆಯಾಗಲಿದೆ ಎನ್ನಲಾಗಿದೆ. ರಾಮನಗರ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ ಜಿಲ್ಲೆಗಳಲ್ಲಿಯೂ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ ಇದ್ದು, ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

ಬೆಳಗಾವಿ, ಹಾವೇರಿ, ಗದಗ, ಧಾರವಾಡ ಬಾಗಲಕೋಟೆ ಜಿಲ್ಲೆಗಳಲ್ಲಿ ಸಾಧಾರಣದಿಂದ ಭಾರಿ ಮಳೆಯಾಗುವ ಸಂಭವವಿದೆ. ಈ ಪ್ರದೇಶಗಳಲ್ಲಿ ಮಳೆಯೊಂದಿಗೆ ಗಂಟೆಗೆ 30 ರಿಂದ 40 ಕಿ.ಮೀ ವೇಗದಲ್ಲಿ ಬಿರುಗಾಳಿ ಬೀಸುವ ಸಾಧ್ಯತೆಯಿದೆ ಎಂದು ಹವಾಮಾನ ಕೇಂದ್ರ ತಿಳಿಸಿದೆ.

ನಾಳೆ ಮಳೆಯಾಗಲಿದ್ಯಾ?

ಕರಾವಳಿಯ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಹಾಗೂ ಕೊಡಗು, ಚಿಕ್ಕಮಗಳೂರು, ಹಾಸನ, ಶಿವಮೊಗ್ಗ,ಮೈಸೂರು, ಮಂಡ್ಯ - ಬೆಂಗಳೂರಿನಲ್ಲಿ ಅಕ್ಟೋಬರ್ 18ರಂದು ಗುಡುಗು, ಬಿರುಗಾಳಿ ಸಹಿತ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಸೂಚನೆ ಕೊಟ್ಟಿದೆ, (ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net