

ಬೆಳ್ಳಂ ಬೆಳ್ಳಿಗೆ ಕೆಮಿಕಲ್ ಕಂಪನಿಯಲ್ಲಿ ಸ್ಫೋಟ.
ಅತ್ತಿಬೆಲೆ ಸಮೀಪದ ಕೆಮಿಕಲ್ ಕಂಪನಿಯಲ್ಲಿ ಭೀಕರ ಬ್ಲಾಸ್, ಮೂವರಿಗೆ ಗಂಭೀರ ಗಾಯ.
ಯುವಕರ ಮುಖ ಹಾಗೂ ಕೈಗಳಿಗೆ ಗಾಯ.
ಆನೇಕಲ್: ಬೆಂಗಳೂರು ಹೊರವಲಯದ ಆನೇಕಲ್ ಬಳಿಯ ಅತ್ತಿಬೆಲೆ ಸಮೀಪವಿರುವ ಕೆಮಿಕಲ್ ಕಂಪನಿಯಲ್ಲಿ ಭೀಕರ ಸ್ಫೋಟಗೊಂಡ ಘಟನೆ ನಡೆದಿದ್ದು, ತಮಿಳುನಾಡಿನ ಮೂವರು ಯುವಕರಿಗೆ ಗಂಭೀರ ಗಾಯವಾಗಿದೆ.
ಅತ್ತಿಬೆಲೆ ಪೊಲೀಸ್ ಠಾಣೆ ವ್ಯಾಪ್ತಿಯ ಇಂಡಸ್ಟ್ರಿಯಲ್ ಏರಿಯಾದಲ್ಲಿರುವ ಇಚ್ಚಂಗೂರು ಗ್ರಾಮದಲ್ಲಿ ಲೇಕ್ ಕೆಮಿಕಲ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿಯಲ್ಲಿ ಈ ಘಟನೆ ನಡೆದಿದೆ. ಸ್ಫೋಟದ ತೀವ್ರತೆಗೆ ಮನೆಯ ಮೇಲ್ಛಾವಣಿ, ಕಟ್ಟಡಗಳ ಕಿಟಕಿ, ಗಾಜುಗಳು ಒಡೆದು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಗ್ರಾಮಸ್ಥರಲ್ಲಿ ಸಾಕಷ್ಟು ಆತಂಕ ಮನೆ ಮಾಡಿದೆ.
ಕೆಮಿಕಲ್ ಕಂಪನಿಯಲ್ಲಿ ಸ್ಫೋಟಗೊಂಡಿರುವ ಪರಿಣಾಮ ತಮಿಳುನಾಡು ಮೂಲದ ಮೂವರು ಯುವಕರ ಮುಖ, ಕೈ ಕಾಲು ತೀವ್ರವಾಗಿ ಸುಟ್ಟು ಹೋಗಿದ್ದು, ಅವರನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ತುರ್ತು ಚಿಕಿತ್ಸೆ ಮುಂದುವರೆದಿದೆ ಎಂದು ಮಾಹಿತಿ ನೀಡಲಾಗಿದೆ.
ಇದನ್ನೂ ಓದಿ: ಆನೇಕಲ್ನಲ್ಲಿ ಚಡ್ಡಿಗ್ಯಾಂಗ್ ಸಕ್ರಿಯ!
ಇಚ್ಚಂಗೂರು ಗ್ರಾಮದಲ್ಲಿರುವ ಲೇಕ್ ಕೆಮಿಕಲ್ ಕಂಪನಿಯಲ್ಲಿ ಇದೇ ಮೊದಲ ಬಾರಿಗೆ ಈ ಅವಘಡ ನಡೆಯುತ್ತಿಲ್ಲ. ಈ ಹಿಂದೆಯೂ ಇಂತದ್ದೇ ಸ್ಫೋಟದ ಪ್ರಕರಣ ಸಂಭವಿಸಿತ್ತು. ಇಷ್ಟಾದರೂ ಇಲ್ಲಿಯವರೆಗೂ ಕಾರ್ಖಾನೆಯ ಆಡಳಿತ ಮಂಡಳಿ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳದೆ ನಿರ್ಲಕ್ಷ್ಯವಹಿಸುತ್ತಿದೆ. ಅವರ ಈ ಸ್ವಭಾವವೇ ಇಂದಿನ ಅವಘಡಕ್ಕೆ ಕಾರಣ ಎಂದು ಸ್ಥಳೀಯರು ಆರೋಪಿದ್ದಾರೆ.
ಸ್ಫೋಟದ ಮಾಹಿತಿ ಪಡೆದುಕೊಂಡ ಅತ್ತಿಬೆಲೆ ಪೊಲೀಸರು ಘಟನಾ ಸ್ಥಳಕ್ಕೆ ದೌಡಾಯಿಸಿ, ಪರಿಶೀಲನೆ ನಡೆಸಿದ್ದಾರೆ. ಅಗ್ನಿ ಶಾಮಕದಳವು ಪರಿಸ್ಥಿತಿಯನ್ನು ಹತೋಟಿಗೆ ತಂದಿದೆ. ಕೆಮಿಕಲ್ ಕಂಪನಿಯಲ್ಲಿ ಸ್ಫೋಟ ಸಂಭವಿಸಲು ಕಾರಣವೇನು?, ಸ್ಫೋಟದ ಹಿಂದಿನ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಬ್ಲಾಸ್ನ ಸುತ್ತ ತನಿಖೆ ಶುರುವಿಟ್ಟುಕೊಂಡಿದ್ದಾರೆ.
ಲೇಕ್ ಕೆಮಿಕಲ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿಯು ಔಷಧೀಯ ರಾಸಾಯನಿಕ ತಯಾರಿಸುತ್ತದೆ ಎನ್ನಲಾಗಿದೆ. ಇಲ್ಲಿಂದ ಪ್ರಪಂಚದ 65ಕ್ಕೂ ಹೆಚ್ಚು ದೇಶಗಳಿಗೆ ತನ್ನ ಉತ್ಪನ್ನಗಳನ್ನು ರಫ್ತು ಮಾಡಲಾಗುತ್ತದೆ ಎನ್ನುವ ಮಾಹಿತಿ ಇದೆ, (ಏಜೆನ್ಸೀಸ್).