ಮನೆಗಳಲ್ಲಿ ಕಳವು ಮಾಡುವ ಕುಖ್ಯಾತ ಚಡ್ಡಿಗ್ಯಾಂಗ್ ಜಿಗಣಿ ಠಾಣೆ ವ್ಯಾಪ್ತಿಯಲ್ಲಿ ಸಕ್ರಿಯವಾಗಿರುವುದು ಸ್ಥಳಿಯರಲ್ಲಿ ಆತಂಕ ಹೆಚ್ಚಿಸಿದೆ.
ರಾತ್ರಿ ವೇಳೆ ಮನೆಗಳನ್ನೇ ಗುರಿಯಾಗಿಸಿಕೊಂಡು ಕಳವಿಗೆ ಯತ್ನಿಸಿರುವ ನಾಲ್ವರು ಕಳ್ಳರ ಚಲನವಲನಗಳು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿವೆ.
ಜಿಗಣಿ ಸಮೀಪದ ಕುಂಬಾರನಹಳ್ಳಿ ಸಿಲಿಕಾನ್ ಎಕ್ಸ್ಪೋರ್ಟ್ ಬಡಾವಣೆಯಲ್ಲಿ ಶನಿವಾರ ಮಧ್ಯರಾತ್ರಿ ನಾಲ್ವರು ಕಳ್ಳರು ಬಟ್ಟೆಯಿಂದ ಮುಖ ಮುಚ್ಚಿಕೊಂಡು ಓಡಾಡಿದ್ದು, ಮನೆಗಳ ಸುತ್ತಮುತ್ತ ಪರಿಶೀಲನೆ ನಡೆಸಿದ್ದಾರೆ. ಬಳಿಕ ಮನೆಯ ಗೇಟ್ ಮುರಿದು ಒಳನುಗ್ಗಲು ಯತ್ನಿಸಿರುವ ದೃಶ್ಯ ಕೂಡಾ ಕ್ಯಾಮರಾದಲ್ಲಿ ಸೆರೆಯಾಗಿದೆ.
ಮೊದಲಿಗೆ ಬಡಾವಣೆ ನಿವಾಸಿ ಚಂದ್ರಶೇಖರ್ ಅವರ ಮನೆ ಗೇಟ್ ಮುರಿದು ಒಳನುಗ್ಗಲು ಕಳ್ಳರು ಪ್ರಯತ್ನಿಸಿದ್ದಾರೆ. ಆದರೆ, ಪ್ರಯತ್ನ ವಿಫಲವಾದ್ದರಿಂದ ಅಲ್ಲಿಂದ ತೆರಳಿ, ಸಮೀಪದಲ್ಲೆ ಇದ್ದ ಮತ್ತೊಂದು ಮನೆ ಗುರಿಯಾಗಿಸಿಕೊಂಡಿದ್ದಾರೆ. ಕಳ್ಳರು ಬಡಾವಣೆಯಲ್ಲಿ ಸುತ್ತಾಡುತ್ತಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಇದೇ ಬಡಾವಣೆಯ ನಿವಾಸಿ ಶ್ರೀರಾಮರೆಡ್ಡಿ ಅವರ ಮನೆಯ ಗೇಟ್ ಮುರಿಯಲು ಕೂಡ ಕಳ್ಳರು ಪ್ರಯತ್ನಿಸಿದ್ದಾರೆ. ಗ್ಯಾಂಗ್ನ ಇಬ್ಬರು ರಸ್ತೆಯಲ್ಲಿ ನಿಂತು ಜನರ ಓಡಾಟದ ಬಗ್ಗೆ ನಿಗಾ ವಹಿಸುತ್ತಿದ್ದರೆ, ಮತ್ತಿಬ್ಬರು ಮನೆ ಗೇಟ್ ಮುರಿದು ಒಳನುಗ್ಗಲು ಯತ್ನಿಸುತ್ತಿದ್ದರು ಎನ್ನಲಾಗಿದೆ.
ಕಳ್ಳರು ಮನೆಯ ಸುತ್ತಮುತ್ತ ಓಡಾಡುತ್ತಿದ್ದ ಸಂದರ್ಭದಲ್ಲಿ ಮಹಿಳೆಯೊಬ್ಬರು ಕಳ್ಳರ ಚಲನವಲನ ಗಮನಿಸಿ ಕಿರುಚಾಡಿದ್ದಾರೆ. ಇದರಿಂದ ಎಚ್ಚೆತ್ತ ಕಳ್ಳರು ಗಾಬರಿಗೊಂಡು ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಮಹಿಳೆಯ ಕೂಗಿನಿಂದಾಗಿ ಕಳ್ಳತನದ ಯತ್ನ ವಿಫಲವಾಗಿದೆ.
ಟನೆ ಬಳಿಕ ಬಡಾವಣೆ ನಿವಾಸಿಗಳು ಆತಂಕಗೊಂಡಿದ್ದು, ರಾತ್ರಿ ವೇಳೆ ಪೊಲೀಸ್ ಗಸ್ತು ಹೆಚ್ಚಿಸುವಂತೆ ಪೊಲೀಸರಿಗೆ ಮನವಿ ಮಾಡಿದ್ದಾರೆ. ಬಡಾವಣೆಯ ನಿವಾಸಿಗಳು ಜಿಗಣಿ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ಜಿಗಣಿ ಪೊಲೀಸರು, ಸಿಸಿ ಕ್ಯಾಮರಾ ದೃಶ್ಯಗಳನ್ನು ವಶಕ್ಕೆ ಪಡೆದು ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.