ಬೆಂಗಳೂರು ನಗರ ಪೊಲೀಸ್ ವ್ಯವಸ್ಥೆಯ ಬೃಹತ್ ಪುನರ್‌ಸಂಘಟನೆಗೆ ಸಚಿವ ಸಂಪುಟ ಒಪ್ಪಿಗೆ
5 ಪ್ರತ್ಯೇಕ ಕಮಿಷನರೇಟ್‌ಗಳ ಸ್ಥಾಪನೆ
1,022 ಹೊಸ ಹುದ್ದೆಗಳ ಸೃಷ್ಟಿ
ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ರಚನೆಯಾಗಿರುವ ಹಿನ್ನೆಲೆಯಲ್ಲಿ, ನಗರದಲ್ಲಿ ಕಾನೂನು ಮತ್ತು ಸುವ್ಯವಸ್ಥೆ, ಅಪರಾಧ ನಿಯಂತ್ರಣ, ಸಂಚಾರ ನಿರ್ವಹಣೆ ಹಾಗೂ ಸಾರ್ವಜನಿಕ ಸುರಕ್ಷತೆಯನ್ನು ಮತ್ತಷ್ಟು ಪರಿಣಾಮಕಾರಿಯಾಗಿ ನಿರ್ವಹಿಸಲು ಬೆಂಗಳೂರು ನಗರ ಪೊಲೀಸ್ ಆಯುಕ್ತಾಲಯವನ್ನು ಸಮಗ್ರವಾಗಿ ಪುನರ್‌ಸಂಘಟಿಸಲು ಇಂದು ಸಿಎಂ ಡಿಕೆ ಶಿವಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯ ಸಚಿವ ಸಂಪುಟ ಸಭೆಯು ಅನುಮೋದನೆ ನೀಡಿದೆ.
ಈ ಕುರಿತು ಮಾತನಾಡಿದ ಗೃಹ ಸಚಿವ ಪ್ರಿಯಾಂಕ್ ಖರ್ಗೆ, ಐದು ಪ್ರತ್ಯೇಕ ಕಮಿಷನರೇಟ್‌ಗಳ ರಚನೆ ಆಗಲಿದೆ. ಸದ್ಯ ಚಾಲ್ತಿಯಲ್ಲಿರುವ ಬೆಂಗಳೂರು ನಗರ ಪೊಲೀಸ್ ಆಯುಕ್ತಾಲಯವನ್ನು ಮುಖ್ಯ ಪೊಲೀಸ್ ಆಯುಕ್ತರ ಒಟ್ಟಾರೆ ಮೇಲ್ವಿಚಾರಣೆಯಡಿಯಲ್ಲಿ ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣ ಮತ್ತು ಕೇಂದ್ರ ಎಂಬ ಐದು ಪ್ರತ್ಯೇಕ ಪೊಲೀಸ್ ಆಯುಕ್ತಾಲಯಗಳಾಗಿ ವಿಭಜಿಸಿ ಪುನರ್ ರಚಿಸಲಾಗುವುದು ಎಂದು ಹೇಳಿದರು.
ಪ್ರಸ್ತುತ ಪೊಲೀಸ್ ಆಯುಕ್ತರ ಹುದ್ದೆಯನ್ನು 'ಮುಖ್ಯ ಪೊಲೀಸ್ ಆಯುಕ್ತರು' ಎಂದು ಉನ್ನತೀಕರಿಸಲಾಗುವುದು. ಜಂಟಿ ಅಥವಾ ಅಪರ ಪೊಲೀಸ್ ಆಯುಕ್ತರು (ಸಂಚಾರ) ಹುದ್ದೆಯನ್ನು 'ಪೊಲೀಸ್ ಆಯುಕ್ತರು (ಸಂಚಾರ)' ಎಂದು ಮರುಪದನಾಮೀಕರಿಸಲಾಗುವುದು. ಈ ಯೋಜನೆಗೆ ಅಗತ್ಯವಿರುವಂತೆ ಒಟ್ಟು 1,022 ಹೊಸ ಹುದ್ದೆಗಳನ್ನು ಸೃಜಿಸಲು ಆರ್ಥಿಕ ಇಲಾಖೆಯು ಸಹಮತಿ ನೀಡಿದ್ದು, ಸಚಿವ ಸಂಪುಟ ಅನುಮೋದಿಸಿದೆ ಎಂದರು.
ಪ್ರಸ್ತಾವಿತ ಘಟಕಗಳಲ್ಲಿ ಅಪರಾಧ ಪ್ರಕರಣಗಳ ನಿರ್ವಹಣೆ, ಸಂಚಾರ ದಟ್ಟಣೆ ನಿಯಂತ್ರಣ ಹಾಗೂ ಸಾರ್ವಜನಿಕ ಭದ್ರತೆಗಾಗಿ ಒಟ್ಟು 6,550 ಹುದ್ದೆಗಳ ಅಗತ್ಯವಿದ್ದು, ಹೊಸ ಹುದ್ದೆಗಳ ಜೊತೆಗೆ ಪ್ರಸ್ತುತ ಚಾಲ್ತಿಯಲ್ಲಿರುವ ಹುದ್ದೆಗಳನ್ನು ಮರುನಿಯೋಜಿಸಿ ವ್ಯವಸ್ಥೆಯನ್ನು ಬಲಪಡಿಸಲಾಗುವುದು ಎಂದು ಸಚಿವರು ತಿಳಿಸಿದರು.
ಸಂಚಾರ ನಿರ್ವಹಣೆಗೆ ಅನುಕೂಲವಾಗುವಂತೆ ಕೇಂದ್ರ ಸಂಚಾರ ವಿಭಾಗಕ್ಕೆ 2, ಪಶ್ಚಿಮ ಸಂಚಾರ ವಿಭಾಗಕ್ಕೆ 1, ಉತ್ತರ ಸಂಚಾರ ವಿಭಾಗಕ್ಕೆ 1 ಮತ್ತು ಪಶ್ಚಿಮ ಕಾನೂನು ಸುವ್ಯವಸ್ಥೆ ವಿಭಾಗಕ್ಕೆ 2ರಂತೆ ಒಟ್ಟು 6 ಹೊಸ ಎಸಿಪಿ (ACP) ಹುದ್ದೆಗಳನ್ನು ಸೃಷ್ಟಿಸಲಾಗುವುದು. ಪ್ರತಿಯೊಂದು ಎಸಿಪಿ ಕಚೇರಿಗೆ ತಲಾ 5 ಕಾರ್ಯಕಾರಿ ಹುದ್ದೆಗಳನ್ನು ಹೊಸದಾಗಿ ನೀಡಲಾಗುವುದು. ಆಡಳಿತಾತ್ಮಕ ವೆಚ್ಚವನ್ನು ಸರಳೀಕರಿಸಲು, ಪ್ರಸ್ತುತವಿರುವ ಸಿಎಆರ್ (CAR) ಘಟಕಗಳಿಂದಲೇ ಹುದ್ದೆಗಳನ್ನು ಮರುನಿಯೋಜಿಸಿ, ಪೂರ್ವ ವಿಭಾಗಕ್ಕಾಗಿ ಹೊಸ ಸಿಎಆರ್ ಘಟಕವನ್ನು ರಚಿಸಲಾಗುವುದು ಎಂದರು.
ನಗರದ ಹೊರವಲಯದ ಪೊಲೀಸ್ ಠಾಣೆಗಳು ಸೇರಿ ಒಟ್ಟು 11 ಠಾಣೆಗಳಿಗೆ ಪ್ರಸ್ತುತ ಹಂತದಲ್ಲಿ 276 ಹೊಸ ಸಿಬ್ಬಂದಿ ಸೃಜನೆಗೆ ಸಮ್ಮತಿಸಲಾಗಿದೆ. ಪ್ರಸ್ತುತ ನಡೆಯುತ್ತಿರುವ ನೇಮಕಾತಿ ಪ್ರಕ್ರಿಯೆಗಳು ಪೂರ್ಣಗೊಂಡ ನಂತರ, ಹೊಸ ಪೊಲೀಸ್ ಠಾಣೆಗಳ ಸ್ಥಾಪನೆ ಹಾಗೂ ಹಂತ ಹಂತವಾಗಿ ಸಿಬ್ಬಂದಿ ನಿಯೋಜನೆ ಪ್ರಕ್ರಿಯೆಯನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ತಿಳಿಸಿದರು.
ಬೆಳೆಯುತ್ತಿರುವ ಬೆಂಗಳೂರು ನಗರದ ಜನಸಂಖ್ಯೆ (ಸುಮಾರು 1.56 ಕೋಟಿ) ಮತ್ತು ವಿಸ್ತಾರವನ್ನು ಗಮನದಲ್ಲಿಟ್ಟುಕೊಂಡು ನಾಗರಿಕರಿಗೆ ತ್ವರಿತ ಸ್ಪಂದನೆ ಹಾಗೂ ದಕ್ಷ ಪೊಲೀಸ್ ಆಡಳಿತ ನೀಡುವುದು ಸರ್ಕಾರದ ಪ್ರಮುಖ ಆದ್ಯತೆಯಾಗಿದೆ. ಈ ಹಿನ್ನೆಲೆಯಲ್ಲಿ ತೆಗೆದುಕೊಂಡಿರುವ ಈ ಐತಿಹಾಸಿಕ ತೀರ್ಮಾನವು ನಗರದ ಶಾಂತಿ-ಸುವ್ಯವಸ್ಥೆ ಮತ್ತು ಸಂಚಾರ ನಿರ್ವಹಣೆಗೆ ಹೊಸ ವೇಗ ನೀಡಲಿದೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.