ಮೈಸೂರು: ನಾಡಿನ ಕಲೆ, ಸಂಸ್ಕೃತಿ, ಪರಂಪರೆ, ಶಕ್ತಿ & ಭಕ್ತಿಯ ಸಮ್ಮಿಲನವಾಗಿರುವ ವಿಶ್ವಪ್ರಸಿದ್ಧ ಮೈಸೂರು ದಸರಾ ಮಹೋತ್ಸವಕ್ಕೆ ಭಾನುವಾರ (ಅ. 11) ಚಾಲನೆ ಸಿಗಲಿದೆ. ಚಾಮುಂಡಿ ಬೆಟ್ಟದಲ್ಲಿರುವ ಶ್ರೀ ಚಾಮುಂಡೇಶ್ವರಿ ದೇವಿಯ ಸನ್ನಿಧಿಯಲ್ಲೂ ಸಕಲ ತಯಾರಿ ಪೂರ್ಣಗೊಂಡಿದ್ದು, ಬೆಳಗ್ಗೆ 11.50ರಿಂದ ಮಧ್ಯಾಹ್ನ 12.13ರ ಒಳಗೆ ಸಲ್ಲುವ ಶುಭ ಧನುರ್ ಲಗ್ನದಲ್ಲಿ ಕೊಪ್ಪಳದ ಗವಿಮಠದ ಶ್ರೀ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ಸಾಂಪ್ರದಾಯಿಕವಾಗಿ ಚಾಲನೆ ನೀಡಲಿದ್ದಾರೆ.
ಮುಖ್ಯಮಂತ್ರಿ ಆಗಿ ಡಿ.ಕೆ. ಶಿವಕುಮಾರ್ ಅವರಿಗೆ ಇದು ಮೊದಲ ದಸರಾ ಆಗಿರುವುದು ವಿಶೇಷ. ಬರಗಾಲದ ನಡುವೆಯೂ ನಾಡಹಬ್ಬಕ್ಕಾಗಿ ಸಾಂಸ್ಕೃತಿಕ ನಗರಿ ಅದ್ದೂರಿಯಾಗಿ ಸಜ್ಜಾಗುತ್ತಿದೆ. ಮದುವಣಗಿತ್ತಿಯಂತೆ ಇಡೀ ಅರಮನೆ ನಗರ ದೀಪಾಲಂಕಾರಗಳಿಂದ ಥಳಥಳಿಸುತ್ತಿದೆ. ರಾಜ್ಯದ ವಿವಿಧೆಡೆಯ 200 ಮಠಾಧೀಶರು ದಸರಾ ಉದ್ಘಾಟನೆಗೆ ಸಾಕ್ಷಿಯಾಗುತ್ತಿರುವುದು ಈ ಸಲದ ಮತ್ತೊಂದು ವೈಶಿಷ್ಟ್ಯ. ದಸರಾದಲ್ಲಿ ಇದೇ ಮೊದಲ ಬಾರಿ ಕಂಬಳ ಪರಿಚಯಿಸಲಾಗುತ್ತಿದ್ದು, ದೇಶವಿದೇಶಗಳಿಂದ ಆಗಮಿಸುವ ಲಕ್ಷಾಂತರ ಪ್ರವಾಸಿಗರನ್ನು ಸೆಳೆಯಲು ಫಲಪುಷ್ಪ ಪ್ರದರ್ಶನ, ಆಹಾರ ಮೇಳ, ಕುಸ್ತಿ, ಕವಿಗೋಷ್ಠಿ, ಮಹಿಳಾ ದಸರಾ, ರೈತ ದಸರಾ... ಹೀಗೆ ವೈವಿಧ್ಯಮಯ ಸಾಂಸ್ಕೃತಿಕ ಲೋಕ ತೆರೆದುಕೊಳ್ಳಲು ಸಜ್ಜಾಗಿದೆ.