ಬೆಂಗಳೂರು: (Rain in Bangalore) ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ಮೇಲ್ಮೈ ಸುಳಿಗಾಳಿ, ತೇವಾಂಶ ಭರಿತ ಮೋಡ ಹಿನ್ನೆಲೆಯಲ್ಲಿ ರಾಜಧಾನಿಯ ಹಲವೆಡೆ ಸೋಮವಾರ ಮಧ್ಯಾಹ್ನ ವರ್ಷಧಾರೆಯಾಗಿತ್ತು.
ನಗರದ ಇತರೆ ಭಾಗಗಳಕ್ಕಿಂತ ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿ ಅತಿ ಹೆಚ್ಚು 52 ಮಿಮೀ ಮಳೆ ಸುರಿದಿತ್ತು. ಬೆಂಗಳೂರು ಗಾಲ್ಫ್ ಕ್ಲಬ್ ರಸ್ತೆ ಜಲಾವೃತವಾಗಿತ್ತು. ಸಚಿವರಾದ ಬಿ.ಝಡ್. ಜಮೀರ್ ಅಹ್ಮದ್ ಮತ್ತು ಯು.ಟಿ. ಖಾದರ್ ಅವರ ಸರ್ಕಾರಿ ನಿವಾಸದ ಮುಂಭಾಗ 2 ಅಡಿ ನೀರು ನಿಂತಿತ್ತು. ಹೆಬ್ಬಾಳ ಮತ್ತು ಸಿಬಿಐ ಜಂಕ್ಷನ್‌ನಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಕಡೆಗೆ ಸಾಗುವ ರಸ್ತೆಯಲ್ಲಿ ವಾಹನಗಳ ಸಂಚಾರ ಸಿಕ್ಕು ಉಂಟಾಗಿತ್ತು.
ಮಳೆ ಪರಿಣಾಮ ನಗರದ ಕೆಲವೆಡೆ ರಸ್ತೆ, ಮೇಲ್ಸೇತುವೆಗಳು ಜಲಾವೃತಗೊಂಡಿದ್ದು, ಇನ್ನೂ ಕೆಲವೆಡೆ ಮರಗಳು ಉರುಳಿ ಬಿದ್ದಿವೆ. ಎಂ.ಜಿ.ರಸ್ತೆ, ಕಬ್ಬನ್ ರಸ್ತೆ, ಹಲಸೂರು, ಇಂದಿರಾ ನಗರ, ಕೆ.ಆರ್. ಪುರ, ಹೆಬ್ಬಾಳ, ಜಕ್ಕೂರು, ಟಿಸಿ ಪಾಳ್ಯ, ಬೈಯಪ್ಪನಹಳ್ಳಿ, ಶಿವಾಜಿನಗರ, ಗಾಂಧಿನಗರ, ಕೆಂಪೇಗೌಡ ಬಸ್ ನಿಲ್ದಾಣ ಮತ್ತು ವಿಧಾನಸೌಧದ ಸುತ್ತಮುತ್ತ ಮಳೆಯ ಪ್ರಮಾಣ ಹೆಚ್ಚಿತ್ತು.
ಮಳೆಯಿಂದ ಶಿವಾನಂದ ವೃತ್ತ, ಎಂ.ಜಿ.ರಸ್ತೆ ಸುತ್ತಮುತ್ತ ಮತ್ತು ಹಲಸೂರು ಸೇರಿ ಹಲವೆಡೆ ರಸ್ತೆ ದಾಟಲು ಪ್ರಯಾಣಿಕರು ಪರದಾಡಿದರು. ನೀರಿನ ರಭಸಕ್ಕೆ ಕಾರು, ಬೈಕ್ ಸವಾರರು ತೊಂದರೆ ಅನುಭವಿಸಿದರು. ರಸ್ತೆಗಳ ಮೇಲೆ ನೀರು ಹರಿದ ಪರಿಣಾಮ ವಾಹನ ಚಲಾಯಿಸಲು ಕೆಲಕಾಲ ಪರದಾಡಿದರು.
ಕೆ.ಆರ್. ಮಾರುಕಟ್ಟೆ, ಶಾಂತಿನಗರ, ಜಯನಗರ, ಜೆ.ಪಿ. ನಗರ, ಜೆ.ಸಿ. ನಗರ, ಬನಶಂಕರಿ, ವಿಜಯನಗರ, ನಂದಿನಿ ಲೇಔಟ್, ಮಹಾಲಕ್ಷ್ಮೀ ಲೇಔಟ್, ಸುಬ್ರಹ್ಮಣ್ಯನಗರ, ನಾಗರಬಾವಿ, ಮೂಡಲಪಾಳ್ಯ, ಗಿರಿನಗರ, ಬಸವನಗುಡಿ, ಶೇಷಾದ್ರಿಪುರದಲ್ಲಿ ಸಾಧಾರಣ ಪ್ರಮಾಣದಲ್ಲಿ ಮಳೆಯಾಯಿತು. ಅಂಡರ್‌ಪಾಸ್, ಜಂಕ್ಷನ್‌ಗಳಲ್ಲಿ ನೀರು ನಿಂತಿತ್ತು. ರಸ್ತೆ ಬದಿಗಳಲ್ಲಿ ಬೈಕ್ ನಿಲ್ಲಿಸಿ ಬಸ್ ನಿಲ್ದಾಣ, ಅಂಗಡಿ ಮುಂಗಟ್ಟು ಮುಂಭಾಗ ಆಶ್ರಯ ಪಡೆದರು. ತಗ್ಗು ಪ್ರದೇಶಗಳಲ್ಲಿ ನೀರು ನುಗ್ಗಿತ್ತು. ಕಾಮಗಾರಿ ನಡೆಯುತ್ತಿದ್ದ ಸ್ಥಳಗಳಲ್ಲಿ ನೀರು ನಿಂತಿರುವುದು ಕಂಡುಬಂತು.
ಎಲ್ಲೆಲ್ಲಿ ಎಷ್ಟು ಮಳೆ?
ಎಚ್‌ಎಂಟಿ 44, ವಿದ್ಯಾರಣ್ಯಪುರ 44, ರಾಜಗೋಪಲ ನಗರ 41, ಹೆಗ್ಗೆನಹಳ್ಳಿ 41, ಸುಬ್ರಹ್ಮಣ್ಯ ನಗರ 39, ನಾಗಪುರ 39, ಮಹಾಲಕ್ಷ್ಮಿಪುರ 39, ಹುಡಿ 34, ಜೆ.ಪಿ.ಪಾರ್ಕ್ 33, ಯಶವಂತಪುರ 32, ಮಾರಪ್ಪನಪಾಳ್ಯ 32 ಮತ್ತು ಮಲ್ಲೇಶ್ವರದಲ್ಲಿ 32 ಮಿಮೀ ಮಳೆಯಾಯಿತು.
2 ದಿನ ಸಾಧಾರಣ ಮಳೆ
ಸಿಲಿಕಾನ್ ಸಿಟಿಯಲ್ಲಿ ಮುಂದಿನ 2 ದಿನ ಗುಡುಗು ಸಹಿತ ಸಾಧಾರಣ ಮಳೆಯಾಗಲಿದೆ. ಕೆಲ ಪ್ರದೇಶಗಳಲ್ಲಿ ಗಂಟೆಗೆ 40 ಕಿ.ಮೀ ವೇಗದಲ್ಲಿ ಬಿರುಗಾಳಿ ಬೀಸಲಿದೆ. ಗರಿಷ್ಠ, ಕನಿಷ್ಠ ತಾಪಮಾನ ಕ್ರಮವಾಗಿ 31 ಮತ್ತು 21 ಡಿ. ಸೆ. ಅಸುಪಾಸಿನಲ್ಲಿ ಉಷ್ಣಾಂಶ ದಾಖಲಾಗಬಹುದು ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.