

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರ್ಕಾರದ ಮೂರನೇ ಅವಧಿಯ ಚೊಚ್ಚಲ ಬಜೆಟ್ನಲ್ಲಿ ಭರಪೂರ ಘೋಷಣೆಗಳನ್ನು ಮಾಡಲಾಗಿದ್ದು, ವಿತ್ತ ಸಚಿವರು ಕ್ಷೇತ್ರ ವಲಯಕ್ಕೆ ಅನುಗುಣವಾಗಿ ಬಜೆಟ್ ಮಂಡನೆ ಮಾಡಿದ್ದು, ಶಿಕ್ಷಣ, ಉದ್ಯೋಗ, ಕೈಗಾರಿಕೆ, ಮಹಿಳೆ, ಕೃಷಿ, ಸೇರಿದಂತೆ ಅನೇಕ ಕ್ಷೇತ್ರಗಳಿಗೆ ನಿರ್ಣಾಯಲ ಘೋಷಣೆಗಳನ್ನು ಮಾಡಿದ್ದಾರೆ. ಆದರೆ, ಮೋದಿ ಸರ್ಕಾರದ ಬಜೆಟ್ ಕುರಿತು ಮಾತನಾಡಿರುವ ವಿಪಕ್ಷ ನಾಯಕರು ಇದು ಕುರ್ಚಿ ಉಳಿಸಿಕೊಳ್ಳಲು ಮಾಡಲಾಗಿರುವ ಬಜೆಟ್ ಎಂದು ಟೀಕಿಸಿದ್ದಾರೆ.
ಬಜೆಟ್ ಕುರಿತು ಮಾತನಾಡಿದ ಎಸ್ಪಿ ಸಂಸದ ಅಖಿಲೇಶ್ ಯಾದವ್, ಕಳೆದ 10 ವರ್ಷಗಳಲ್ಲಿ ನಿರುದ್ಯೋಗ ಹೆಚ್ಚಿದ್ದು, ಸರ್ಕಾರ ಆಂಧ್ರಪ್ರದೇಶ ಹಾಗೂ ಬಿಹಾರಕ್ಕೆ ವಿಶೇಷ ಸ್ಥಾನಮಾನ ನೀಡಿರುವುದು ಸ್ವಾಗತಾರ್ಹ. ಸರ್ಕಾರವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಬಜೆಟ್ನಲ್ಲಿ ಯೋಜನೆಗಳನ್ನು ರೂಪಿಸಲಾಗಿದ್ದು, ಪ್ರತಿಬಾರಿಯಂತೆ ಈ ಬಾರಿಯೂ ನೀರಸವಾಗಿದೆ ಎಂದು ಹೇಳಿದ್ದಾರೆ.
ಶಿರೋಮಣಿ ಅಕಾಲಿದಳದ ಸಂಸದೆ, ಮಾಜಿ ಕೇಂದ್ರ ಸಚಿವೆ ಹರ್ಸಿಮ್ರತ್ ಕೌರ್ ಮಾತನಾಡಿ, ರೈತರ ಸಾಲಮನ್ನಾ ಹಾಗೂ ಎಂಎಸ್ಪಿಗೆ ಕಾನೂನು ಮಾನ್ಯತೆ ನೀಡಲಾಗುವುದು ಎಂದು ನಿರೀಕ್ಷಿಸಲಾಗಿತ್ತು. ಆರ್ಥಿಕ ಸಮೀಕ್ಷೆಯ ಪ್ರಕಾತ ಶೇ. 50ರಷ್ಟು ಯುವಕರು ಯುವಕರು ನಿರುದ್ಯೋಗ, ಹಣದುಬ್ಬರ, ರೈತರ ಸಮಸ್ಯೆಗಳಿಗೆ ಪರಿಹಾರ ನೀಡುವ ನಿರೀಕ್ಷೆಯಲ್ಲಿದ್ದೆವು. ಆದರೆ, ಅದ್ಯಾವುದು ಆಗಿಲ್ಲ ಎಂದು ಹೇಳಿದ್ದಾರೆ.
ಈ ಕುರಿತು ಮಾತನಾಡಿರುವ ಟಿಎಂಸಿ ಸಂಸದ ಕಲ್ಯಾಣ್ ಬ್ಯಾನರ್ಜಿ, ಸರ್ಕಾರವು ಈ ಕ್ಷಣದಲ್ಲಿ ತನಗೆ ಯಾರನ್ನು ಮುದ್ದು ಮಾಡಬೇಕು ಅನ್ನಿಸುತ್ತಿದೆಯೋ ಅಂತಹವರಿಗಾಗಿ ಈ ಬಜೆಟ್ಅನ್ನು ಮಂಡಿಸಿದೆ. ಈ ಬಜೆಟ್ ರಾಜಕೀಯ ಲಾಭಕ್ಕಾಗಿ ಮಾಡಲಾಗಿದ್ದು, ಪಶ್ಚಿಮ ಬಂಗಾಳಕ್ಕೆ ವಿಶೇಷ ಅನುದಾನವನ್ನು ನೀಡಲಾಗಿಲ್ಲ. ಕೇಂದ್ರ ಸರ್ಕಾರದ ಈ ಬಜೆಟ್ಅನ್ನು ನೋಡಿದರೆ ಇವರು ಬಂಗಾಳಿಗರನ್ನು ಕಂಡರೆ ಆಗುವುದಿಲ್ಲ ಎಂದು ಸ್ಪಷ್ಟವಾಗಿ ಕಾಣುತ್ತದೆ. ಮುಂದಿನ ದಿನಗಳಲ್ಲಿ ಬಂಗಾಳದಲ್ಲಿ ಬಿಜೆಪಿಯನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲಾಗುವುದು.
ಈ ಕುರಿತು ಮಾತನಾಡಿರುವ ಸಂಸದ ಪಪ್ಪು ಯಾದವ್, ಇಂದು ಮಂಡಿಸಿದ ಬಜೆಟ್ನಲ್ಲಿ ನಾಲ್ಕು ಉದ್ಯೋಗಗಳನ್ನು ಸೃಷ್ಟಿಸಲಾಗುವುದು ಎಂದು ಹೇಳಿದ್ದಾರೆ. ಆದರೆ, ಕಳೆದ 10 ವರ್ಷಗಳಲ್ಲಿ ಇವರು ಎಷ್ಟು ಕೋಟಿ ಉದ್ಯೋಗ ನೀಡಿದ್ದಾರೆ ಎಂಬುದಾಗಿ ಮೊದಲು ತಿಳಿಸಬೇಕು. ಮೋದಿ ಸರ್ಕಾರದ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿರುವ ನಿತೀಶ್ ಕುಮಾರ್ ಅವರ ಮಾತಿಗೆ ಬೆಲೆ ಕೊಡಲಾಗಿಲ್ಲ. ಬಿಹಾರಕ್ಕೆ ಯಾವುದೇ ಅನುದಾನವನ್ನು ಘೋಷಿಸಲಾಗಿಲ್ಲ. ಯಾವುದೇ ಕೇಂದ್ರೀಯ ವಿಶ್ವವಿದ್ಯಾಲಯಗಳನ್ನು ಘೋಷಿಸಲಾಗಿಲ್ಲ. ಹಿಂದಿನಂತೆ ಈ ಬಜೆಟ್ ಕೂಡ ನೀರಸವಾಗಿತ್ತು ಎಂದು ಸಂಸದ ಪಪ್ಪು ಯಾದವ್ ಕಿಡಿಕಾರಿದ್ದಾರೆ.