

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಚುನಾವಣಾ ಅಕ್ರಮಗಳ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಗಳು ಮತ್ತು ಪ್ರತಿಭಟನಾಕಾರರ ಬಂಧನವು ಸದ್ಯ ರಾಷ್ಟ್ರ ರಾಜಕಾರಣದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಅದರಲ್ಲೂ ಕಾಕ್ರೋಚ್ ಜನತಾ ಪಾರ್ಟಿ (CJP) ಸಂಸ್ಥಾಪಕ ಅಭಿಜಿತ್ ದಿಪ್ಕೆ ಅವರು ಶನಿವಾರ ಜಾಮೀನಿನ ಮೇಲೆ ಯಾವುದೇ ಷರತ್ತಿಲ್ಲದೇ ಬಿಡುಗಡೆಯಾಗಿದ್ದಾರೆ. ಆದರೆ, ಅವರ ಸಹೋದ್ಯೋಗಿಗಳಾದ ಸೌರಭ್ ದಾಸ್ ಮತ್ತು ಅಶುತೋಷ್ ರಂಕಾ ಮಾತ್ರ ಇನ್ನೂ ಜೈಲಿನಲ್ಲಿಯೇ ಉಳಿಯುವಂತಾಗಿದೆ. ಈ ರೀತಿ ಆಗಲು ಕಾರಣವೇನು? ಈ ಇಬ್ಬರು ನಾಯಕರು ಜೈಲಿನಲ್ಲಿರುವಾಗ ಅಭಿಜಿತ್ ದಿಪ್ಕೆಗೆ ಮಾತ್ರ ಜಾಮೀನು ಸಿಕ್ಕಿದ್ದೇಕೆ? ಈ ಪ್ರಶ್ನೆಗೆ ಉತ್ತರ ಇಲ್ಲಿದೆ.
ಅಂದಹಾಗೆ, ವೋಟರ್ ಲಿಸ್ಟ್ನ ವಿಶೇಷ ತೀವ್ರ ಪರಿಷ್ಕರಣೆ (SIR) ಹಾಗೂ ಮುಖ್ಯ ಚುನಾವಣಾ ಆಯುಕ್ತರ ರಾಜೀನಾಮೆ ಆಗ್ರಹಿಸಿ ಕಳೆದ ಕೆಲವು ದಿನಗಳಿಂದ ಸಿಜೆಪಿ ನಾಯಕರು ನಿರಂತರವಾಗಿ ಬೀದಿಗಿಳಿದು ಪ್ರತಿಭಟನೆಗಳನ್ನು ನಡೆಸುತ್ತಾ ಬಂದಿದ್ದಾರೆ. ಪ್ರತಿಭಟನಾಕಾರರು ಕನ್ನೌಟ್ ಪ್ಯಾಲೆಸ್ನಲ್ಲಿ ಹಮ್ಮಿಕೊಂಡಿದ್ದ 'ಲೇಹ್ರಾ ದೋ ತಿರಂಗಾ' ಮಾರ್ಚ್ನಲ್ಲಿ ಭಾಗವಹಿಸುವ ಮುನ್ನವೇ ಅಭಿಜಿತ್ ದಿಪ್ಕೆ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಆದರೆ, ಸೌರಭ್ ದಾಸ್ ಮತ್ತು ಅಶುತೋಷ್ ರಂಕಾ ಅವರು ನಿಷೇಧಾಜ್ಞೆಗಳನ್ನು ಉಲ್ಲಂಘಿಸಿ ನೇರವಾಗಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಈ ಕಾರಣಕ್ಕೆ ಅವರಿಬ್ಬರಿಗೂ ಇನ್ನೂ ಬಿಡುಗಡೆ ಭಾಗ್ಯ ಸಿಕ್ಕಿಲ್ಲ ಅನ್ನೋದು ಅಧಿಕಾರಿಗಳ ವಾದವಾಗಿದೆ.
ಶನಿವಾರ ಮಂದಿರ್ ಮಾರ್ಗ್ನ ವಿಶೇಷ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಿದ ನಂತರ, ಅಭಿಜಿತ್ ದಿಪ್ಕೆ ಅವರಿಗೆ 50,000 ರೂಪಾಯಿಗಳ ಬಾಂಡ್ ಹಾಗೂ ಶಾಂತಿ ಕದಡುವುದಿಲ್ಲ ಎಂಬ ಮುಚ್ಚಳಿಕೆಯ ಮೇಲೆ ಬಿಡುಗಡೆ ಭಾಗ್ಯ ಸಿಕ್ಕಿತು. ವಿಚಾರಣೆ ಮುಗಿದ ಕೂಡಲೇ ದೀಪ್ಕೆ ಅವರು ಮಂದಿರ್ ಮಾರ್ಗ್ ಪೊಲೀಸ್ ಠಾಣೆಯಿಂದ ಹೊರಬಂದರು. ತಮ್ಮ ಬಿಡುಗಡೆ ಬೆನ್ನಲ್ಲೇ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ದೀಪ್ಕೆ, ನನ್ನ ಸಹೋದರರು ಬಂಧನಮುಕ್ತರಾಗುವುದನ್ನು ಕಾಯುತ್ತಿದ್ದೇನೆ ಎಂದು ಫೋಟೋ ಹಂಚಿಕೊಂಡು ಭಾವನಾತ್ಮಕ ಸಂದೇಶ ಬರೆದುಕೊಂಡಿದ್ದಾರೆ.
ಅಂದಹಾಗೆ, ಅಭಿಜಿತ್ ದಿಪ್ಕೆ ಬಂಧನದಿಂದ ಬಿಡುಗಡೆಯಾಗಲು ಪ್ರಮುಖ ಕಾರಣವೇನೆಂದರೆ, ಅವರು ನಿಗದಿತ ಪ್ರತಿಭಟನಾ ಸ್ಥಳ ತಲುಪಲೇ ಇಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ. ಆದರೆ, ಇದಕ್ಕೆ ವಿರುದ್ಧವಾಗಿ ಸೌರಭ್ ದಾಸ್ ಮತ್ತು ಅಶುತೋಷ್ ರಂಕಾ ಅವರು ಪೊಲೀಸರ ಕಣ್ಣುತಪ್ಪಿಸಿ ರಹಸ್ಯವಾಗಿ ಜಂತರ್ ಮಂತರ್ ತಲುಪಿ, ಸಾರ್ವಜನಿಕ ಶಾಂತಿಭಂಗ ಮಾಡಲು ಯತ್ನಿಸಿದ್ದರು ಎಂದು ಅಧಿಕಾರಿಗಳು ಆರೋಪಿಸಿದ್ದಾರೆ. ಇದೇ ಕಾರಣಕ್ಕಾಗಿ ಅವರನ್ನು ಐದು ದಿನಗಳ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದ್ದು, ಅವರ ಮುಂದಿನ ಭವಿಷ್ಯದ ಬಗ್ಗೆ ಭಾನುವಾರ ನಿರ್ಧಾರ ಹೊರಬರುವ ಸಾಧ್ಯತೆಯಿದೆ.
ಈ ಎಲ್ಲಾ ಪ್ರಕರಣಗಳೂ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (BNSS) ಯ ಒಂದೇ ರೀತಿಯ ಕಾನೂನು ಸೆಷನ್ಗಳ ಅಡಿಯಲ್ಲಿ ದಾಖಲಾಗಿವೆ. ಸೆಕ್ಷನ್ 170 ರ ಪ್ರಕಾರ ಸಂಭವನೀಯ ಅಪರಾಧ ತಡೆಯಲು ವ್ಯಕ್ತಿಯನ್ನು ವಶಕ್ಕೆ ಪಡೆಯಬಹುದು ಮತ್ತು ಸೆಕ್ಷನ್ 126 ರ ಅಡಿಯಲ್ಲಿ ಶಾಂತಿ ಕಾಪಾಡುವಂತೆ ಮುಚ್ಚಳಿಕೆ ಬರೆಸಿಕೊಳ್ಳಬಹುದು. ಇದು ಯಾವುದೇ ಗಂಭೀರ ಅಪರಾಧದಡಿ ಶಿಕ್ಷೆಗೆ ಗುರಿಪಡಿಸುವ ಪ್ರಕ್ರಿಯೆಯಲ್ಲ, ಬದಲಿಗೆ ಮುನ್ನೆಚ್ಚರಿಕೆ ಕ್ರಮವಾಗಿದೆ. ಆದರೆ ನಿಯಮ ಉಲ್ಲಂಘನೆ ಮತ್ತು ಪುನರಾವರ್ತಿತ ಪ್ರತಿಭಟನೆಗಳ ಹಿನ್ನೆಲೆಯಲ್ಲಿ ದಾಸ್ ಮತ್ತು ರಂಕಾ ಅವರಿಗೆ ಕಠಿಣ ನಿಲುವು ಎದುರಾಗಿದೆ.
ಪೊಲೀಸರ ಪ್ರಕಾರ, ಅಕ್ಟೋಬರ್ 13 ರಂದು ದಾಸ್, ರಂಕಾ ಮತ್ತು ಇತರೆ ಸಿಜೆಪಿ ಸದಸ್ಯರು ಖಾಸಗಿ ಆಸ್ತಿಯ ಮೂಲಕ ಜಂತರ್ ಮಂತರ್ಗೆ ನುಗ್ಗಿದ್ದರು. ದೆಹಲಿ ಪೊಲೀಸ್ ಕಮಿಷನರ್ ಜಂತರ್ ಮಂತರ್ ಅನ್ನು ಅಧಿಕೃತ ಪ್ರತಿಭಟನಾ ಸ್ಥಳಗಳ ಪಟ್ಟಿಯಿಂದ ತೆಗೆದುಹಾಕಿದ್ದರೂ, ಅದನ್ನು ಧಿಕ್ಕರಿಸಿ ಪ್ರತಿಭಟನೆ ನಡೆಸಲಾಗಿದೆ. ಅಲ್ಲದೆ, ಕರ್ತವ್ಯದಲ್ಲಿದ್ದ ಪೊಲೀಸ್ ಅಧಿಕಾರಿಗಳಿಗೆ ಅಡ್ಡಿಪಡಿಸಿದ ಆರೋಪವೂ ಇವರ ಮೇಲಿದೆ. ಈ ಹಿಂದೆ ಅಕ್ಟೋಬರ್ 10 ರಂದೇ ಇವರು ಶಾಂತಿ ಬಾಂಡ್ಗೆ ಸಹಿ ಹಾಕಿದ್ದರೂ, ಪುನಃ ನಿಯಮ ಉಲ್ಲಂಘಿಸಿರುವುದು ಜೈಲುಪಾಲಾಗುವುದಕ್ಕೆ ಪ್ರಮುಖ ಕಾರಣವಾಗಿದೆ.
ಇದೇ ವೇಳೆ, ಅಖಿಲ ಭಾರತ ವಿದ್ಯಾರ್ಥಿ ಸಂಘಟನೆಯ (AISA) ಅಧ್ಯಕ್ಷೆ ನೇಹಾ ಬೋರಾ ಅವರನ್ನು ಸಹ ಶುಕ್ರವಾರ ಮುನ್ನೆಚ್ಚರಿಕೆ ಕ್ರಮವಾಗಿ ವಶಕ್ಕೆ ಪಡೆಯಲಾಗಿತ್ತು. ಆದರೆ, ದೆಹಲಿ ಪೊಲೀಸ್ ಕಾಯ್ದೆಯ ಸೆಕ್ಷನ್ 65ರ ಅಡಿಯಲ್ಲಿ ಯಾವುದೇ ಔಪಚಾರಿಕ ಪ್ರಕರಣ ದಾಖಲಿಸದೆ ಅವರನ್ನು ಶನಿವಾರ ಮುಂಜಾನೆ ಬಿಡುಗಡೆ ಮಾಡಲಾಯಿತು. ಬಂಧನದ ಅವಧಿಯು ಮುಗಿದ ನಂತರ ಯಾವುದೇ ದೀರ್ಘಕಾಲದ ಪ್ರಕರಣವಿರದೆ ವ್ಯಕ್ತಿಗಳನ್ನು ಬಿಡುಗಡೆ ಮಾಡಲು ಈ ಕಾನೂನು ಅವಕಾಶ ನೀಡುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ. ಇಂತಹ ಕಾನೂನು ಬಾಹಿರ ಬಂಧನಗಳು ದೇಶದಲ್ಲಿ ಹೆಚ್ಚುತ್ತಿವೆ ಎಂದು ನೇಹಾ ಬೋರಾ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಚುನಾವಣಾ ಆಯೋಗದ ನಿರ್ಧಾರಗಳು ಮತ್ತು ಎಸ್ಐಆರ್ (SIR) ವಿರೋಧಿಸಿ ನಡೆಯುತ್ತಿರುವ ಈ ಪ್ರತಿಭಟನೆಗಳು ದೆಹಲಿಯಲ್ಲಿ ತೀವ್ರಗೊಂಡಿವೆ. ಸುಮಾರು 150ಕ್ಕೂ ಹೆಚ್ಚು ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಕನ್ನೌಟ್ ಪ್ಲೇಸ್ನ ಸೆಂಟ್ರಲ್ ಪಾರ್ಕ್ ಬಳಿ ಬಿಗಿ ಪೊಲೀಸ್ ಭದ್ರತೆ ಕಲ್ಪಿಸಲಾಗಿದೆ, (ಏಜೆನ್ಸೀಸ್).