

ಪಟನಾ: ಬಿಹಾರದ ಮೊಕಾಮಾ ಕ್ಷೇತ್ರದ ಪ್ರಭಾವಿ ಶಾಸಕ ಅನಂತ್ ಸಿಂಗ್ ಅವರ ಕಿರಿಯ ಪುತ್ರಿ ಶಿವಾಂಗಿ ಸಿಂಗ್ ಮತ್ತು ಹೃಷಿಕೇಶ್ ಕುಮಾರ್ ಅವರ ವಿವಾಹ ಮಹೋತ್ಸವ ಬುಧವಾರ (ನವೆಂಬರ್ 25) ಅತ್ಯಂತ ಅದ್ಧೂರಿಯಾಗಿ ನೆರವೇರಿತು. ಮಾಜಿ ಜೆಡಿಯು ನಾಯಕನ ಮಗಳ ಮದುವೆ ಈಗಾಗಲೇ ರಾಜ್ಯದಾದ್ಯಂತ ಭಾರಿ ಸುದ್ದಿಯಾಗಿದ್ದು, ಇದೀಗ ಮತ್ತೊಂದು ಅಚ್ಚರಿ ಸಂಗತಿ ಗಮನ ಸೆಳದಿದೆ. ಅದೇನೆಂದರೆ, ಈ ಸಂಭ್ರಮದ ನಡುವೆಯೇ ವಿವಾಹ ಮಂಟಪದೊಳಗೆ ಏಕಾಏಕಿ ಹಾವೊಂದು ( Snake Interrupts ) ನುಗ್ಗಿ ಬರುವ ಮೂಲಕ ಅತಿಥಿಗಳಲ್ಲಿ ಕೆಲಕಾಲ ಆತಂಕ ಸೃಷ್ಟಿಸಿತು. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಸದ್ಯ ಭಾರಿ ವೈರಲ್ ಆಗುತ್ತಿರುವ ವಿಡಿಯೋದಲ್ಲಿ, ಮದುವೆ ಪೆಂಡಾಲ್‌ನಲ್ಲಿ ಹಾಸಲಾಗಿದ್ದ ಗುಲಾಬಿ ಬಣ್ಣದ ಕಾರ್ಪೆಟ್ ಮೇಲೆ ಕಂದು ಬಣ್ಣದ ಹಾವೊಂದು ವೇಗವಾಗಿ ಹರಿದಾಡುತ್ತಿರುವುದು ಕಂಡುಬಂದಿದೆ. ಹಾವನ್ನು ಕಂಡ ತಕ್ಷಣ ಅಲ್ಲಿದ್ದ ಅತಿಥಿಗಳು ಭಯಭೀತರಾಗಿ ದಿಕ್ಕಾಪಾಲಾಗಿ ದೂರ ಸರಿಯಲು ಆರಂಭಿಸಿದರು. ಇನ್ನೂ ಕೆಲವರು ಗಾಬರಿಯ ನಡುವೆಯೂ ತಮ್ಮ ಮೊಬೈಲ್ ಫೋನ್‌ಗಳನ್ನು ತೆಗೆದು ಈ ವಿಚಿತ್ರ ದೃಶ್ಯವನ್ನು ಸೆರೆಹಿಡಿಯಲು ಮುಂದಾದರು.
ಮದುವೆ ಮನೆಯಲ್ಲಿ ಉಂಟಾದ ಈ ಗೊಂದಲ ಮತ್ತು ಆತಂಕದ ನಡುವೆಯೇ, ಯುವಕನೊಬ್ಬ ಧೈರ್ಯ ಮಾಡಿ ಹಾವನ್ನು ನಿಯಂತ್ರಿಸಲು ಮುಂದಾದನು. ಹಾವಿನ ಬಳಿಗೆ ಹೋದ ಆತ, ಹಲವು ಬಾರಿ ಪ್ರಯತ್ನಿಸಿದ ನಂತರ ಕೊನೆಗೂ ಅದರ ಬಾಲವನ್ನು ಗಟ್ಟಿಯಾಗಿ ಹಿಡಿಯುವಲ್ಲಿ ಯಶಸ್ವಿಯಾದನು. ಬಳಿಕ ಹಾವನ್ನು ತನ್ನ ತಲೆಯ ಮೇಲೆ ಗಿರಕಿ ಹೊಡೆಸಿದ ಆ ಯುವಕ, ಪೆಂಡಾಲ್‌ನಿಂದ ಬಹಳ ದೂರಕ್ಕೆ ಎಸೆದನು. ಈ ವಿಡಿಯೋ ಅಂತರ್ಜಾಲದಲ್ಲಿ ಹರಿದಾಡುತ್ತಿದ್ದು, ನೆಟ್ಟಿಗರ ಗಮನ ಸೆಳೆಯುತ್ತಿದೆ.
ಆದರೆ, ಯಾವುದೇ ಸೂಕ್ತ ತರಬೇತಿಯಿಲ್ಲದೆ ಹಾವನ್ನು ಈ ರೀತಿ ಬರಿಗೈಯಲ್ಲಿ ಹಿಡಿಯುವುದು ಅತ್ಯಂತ ಅಪಾಯಕಾರಿ ಎಂದು ವನ್ಯಜೀವಿ ತಜ್ಞರು ಎಚ್ಚರಿಸಿದ್ದಾರೆ. ಕೇವಲ ನೋಡಿದ ಮಾತ್ರಕ್ಕೆ ಹಾವು ವಿಷಕಾರಿಯೇ ಅಥವಾ ವಿಷರಹಿತವೇ ಎಂಬುದನ್ನು ಗುರುತಿಸುವುದು ಕಷ್ಟಕರವಾಗಿರುತ್ತದೆ. ಇಂತಹ ಸಂದರ್ಭಗಳಲ್ಲಿ ಸಾರ್ವಜನಿಕರು ಸಾಹಸ ಮಾಡಲು ಹೋಗದೆ ಸುರಕ್ಷಿತ ಅಂತರವನ್ನು ಕಾಯ್ದುಕೊಳ್ಳಬೇಕು ಮತ್ತು ತರಬೇತಿ ಪಡೆದ ಉರಗ ತಜ್ಞರ ಸಹಾಯ ಪಡೆಯುವುದು ಉತ್ತಮ ಎಂದು ತಜ್ಞರು ಸಲಹೆ ನೀಡಿದ್ದಾರೆ.
ಅಂದಹಾಗೆ, 'ಛೋಟೆ ಸರ್ಕಾರ್' ಎಂದೇ ಜನಪ್ರಿಯರಾಗಿರುವ ಮೊಕಾಮಾದ ಪ್ರಭಾವಿ ನಾಯಕ ಅನಂತ್ ಸಿಂಗ್, ತಮ್ಮ ಮಗಳ ಮದುವೆಗಾಗಿ ನೀರಿನಂತೆ ಹಣ ಖರ್ಚು ಮಾಡಿದ್ದಾರೆ. ಬಿಹಾರದ ಪಟನಾ ಜಿಲ್ಲೆಯ ಲಾಡ್ಮಾ (ನದ್ವಾ) ಗ್ರಾಮದಲ್ಲಿರುವ ಅನಂತ್ ಸಿಂಗ್ ಅವರ ಪೂರ್ವಜರ ಮನೆಯಲ್ಲಿ ನಡೆದ ಈ ವಿವಾಹ ಮಹೋತ್ಸವಕ್ಕೆ ಸುಮಾರು ಐದು ಲಕ್ಷಕ್ಕೂ ಅಧಿಕ ಅತಿಥಿಗಳು ಸಾಕ್ಷಿಯಾಗಿದ್ದರು.
ವಿಶೇಷ ಅತಿಥಿಗಳನ್ನು ವಿವಾಹ ಸ್ಥಳಕ್ಕೆ ಕರೆತರಲು ಹೆದ್ದಾರಿಯ ಪಕ್ಕದಲ್ಲೇ ಪ್ರತ್ಯೇಕ ಹೆಲಿಪ್ಯಾಡ್ ಅನ್ನು ಸಹ ನಿರ್ಮಿಸಲಾಗಿತ್ತು. ಅಲ್ಲದೆ, ಅತಿಥಿಗಳ ಮನರಂಜನೆಗಾಗಿ ಸುಮಾರು 12 ಬಿಘಾ ವಿಸ್ತೀರ್ಣದ ಮೈದಾನದಲ್ಲಿ ಕುದುರೆ ಓಟದ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು, ಆದರೆ ಸ್ಥಳೀಯರು ಟ್ರ್ಯಾಕ್ ಒಳಗೆ ನುಗ್ಗಿದ ಕಾರಣ ಬುಧವಾರ ಆ ಸ್ಪರ್ಧೆಯನ್ನು ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ.
ಇನ್ನು ವರ ಹೃಷಿಕೇಶ್ ಕುಮಾರ್ ಅವರು ಸಿಆರ್‌ಪಿಎಫ್ ಕಮಾಂಡೆಂಟ್ ರಣವಿಜಯ್ ಕುಮಾರ್ ಅವರ ಪುತ್ರರಾಗಿದ್ದಾರೆ. ಅಟ್ಲಾಂಟಾದ ಜಾರ್ಜಿಯಾ ಸ್ಟೇಟ್ ಯೂನಿವರ್ಸಿಟಿಯಿಂದ ಎಂಬಿಎ ಪದವಿ ಪಡೆದಿರುವ ಇವರ ಹೆಸರಿನ ಪಕ್ಕದಲ್ಲೇ ಪದವಿ ಮತ್ತು ವಿಶ್ವವಿದ್ಯಾಲಯದ ಹೆಸರನ್ನು ಮದುವೆ ಆಮಂತ್ರಣ ಪತ್ರಿಕೆಯಲ್ಲಿ ಮುದ್ರಿಸಲಾಗಿತ್ತು. ವರದಕ್ಷಿಣೆ ಅಥವಾ ಉಡುಗೊರೆಯ ರೂಪದಲ್ಲಿ ನಡೆದ ತಿಲಕ ಶಾಸ್ತ್ರದ ಸಮಾರಂಭದಲ್ಲಿ ವರನಿಗೆ ಸುಮಾರು 3 ಕೋಟಿ ರೂಪಾಯಿ ಮೌಲ್ಯದ ಬಿಳಿ ಬಣ್ಣದ ಲ್ಯಾಂಡ್ ರೋವರ್ ಡಿಫೆಂಡರ್ ಕಾರು, 100 ಗ್ರಾಂ ತೂಕದ ಚಿನ್ನದ ಸರ ಹಾಗೂ 80 ಗ್ರಾಂ ತೂಕದ ಚಿನ್ನದ ಬ್ರೇಸ್ಲೆಟ್ ಅನ್ನು ಉಡುಗೊರೆಯಾಗಿ ನೀಡಲಾಗಿದೆ ಎಂದು ವರದಿಯಾಗಿದೆ, (ಏಜೆನ್ಸೀಸ್).