

ನವದೆಹಲಿ: ಅಮೆರಿಕಾದ ವಿರೋಧದ ನಡುವೆಯೂ ರಷ್ಯಾದೊಂದಿಗೆ ಭಾರತ ಹೊಂದಿರುವ ಬಾಂಧವ್ಯವನ್ನು ವಿದೇಶಾಂಗ ಸಚಿವ ಎಸ್. ಜೈಶಂಕರ್ (S Jaishankar) ಬಲವಾಗಿ ಸಮರ್ಥಿಸಿಕೊಂಡಿದ್ದು, ಭಾರತದ ಭದ್ರತೆ ಮತ್ತು ಪ್ರಾದೇಶಿಕ ಸಮಗ್ರತೆಗೆ ಬೆದರಿಕೆ ಎದುರಾದಾಗ ಮಾಸ್ಕೋ ಯಾವಾಗಲೂ ದೇಶದ ಬೆಂಬಲಕ್ಕೆ ನಿಂತಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ನವದೆಹಲಿಯಲ್ಲಿ ನಡೆದ ಮ್ಯೂನಿಚ್ ಭದ್ರತಾ ಸಮ್ಮೇಳನದಲ್ಲಿ ಮಾತನಾಡಿದ ಜೈಶಂಕರ್, ಉಭಯ ದೇಶಗಳು ಐತಿಹಾಸಿಕವಾಗಿ ಉತ್ತಮ ಸಂಬಂಧವನ್ನು ಹೊಂದಿದ್ದು, ಆ ಅನುಭವವೇ ಇಂದಿಗೂ ತಮ್ಮ ಬಾಂಧವ್ಯವನ್ನು ರೂಪಿಸುತ್ತ ಮುಂದುವರಿಯುತ್ತಿದೆ ಎಂದರು.
ಜನರು ಒಳ್ಳೆಯ ಇತಿಹಾಸವನ್ನಾಗಲಿ ಅಥವಾ ಕೆಟ್ಟ ಇತಿಹಾಸವನ್ನಾಗಲಿ ಮರೆಯುವುದಿಲ್ಲ, 1950ರ ದಶಕದಿಂದಲೂ, ವಿಶೇಷವಾಗಿ ವಿಶ್ವದ ಬಹುಪಾಲು ದೇಶಗಳು ಪಾಕಿಸ್ತಾನದ ಸೇನಾ ಆಡಳಿತವನ್ನು ಬೆಂಬಲಿಸಿದಾಗ ರಷ್ಯಾ ಮತ್ತು ಸೋವಿಯತ್ ಒಕ್ಕೂಟ ನೀಡಿದ ಬೆಂಬಲವನ್ನು ಅವರು ಈ ವೇಳೆ ಸ್ಮರಿಸಿಕೊಂಡರು.
ಪಾಕಿಸ್ತಾನದೊಂದಿಗೆ 1971ರ ಯುದ್ಧ ನಡೆದಾಗ ಪಾಕಿಸ್ತಾನವನ್ನು ಬೆಂಬಲಿಸಲು ಅಮೆರಿಕಾ ಬಂಗಾಳ ಕೊಲ್ಲಿಗೆ ನೌಕಾಪಡೆಯನ್ನು ಕಳುಹಿಸಿತ್ತು, ಆ ಸಂದರ್ಭದಲ್ಲಿ ಸೋವಿಯತ್ ಒಕ್ಕೂಟ ಭಾರತಕ್ಕೆ ನೀಡಿದ ಬೆಂಬಲವನ್ನು ಈ ಮಾತುಗಳು ಸೂಚಿಸುತ್ತವೆ. ರಷ್ಯಾದೊಂದಿಗಿನ ಭಾರತದ ಸ್ವಂತ ಅನುಭವದ ಕುರಿತು ಮಾತನಾಡುತ್ತಾ, ಮಾಸ್ಕೋದೊಂದಿಗೆ ಭಾರತದ ಸಂಬಂಧವನ್ನು ಪಾಶ್ಚಿಮಾತ್ಯ ದೇಶಗಳು ಪ್ರಶ್ನಿಸುತ್ತಿರುವುದಕ್ಕೆ ಪರೋಕ್ಷವಾಗಿ ತಿರುಗೇಟು ನೀಡಿದ ಜೈಶಂಕರ್, ಪ್ರತಿ ದೇಶವು ತನ್ನದೇ ಆದ ಅನುಭವದ ಮೂಲಕ ಸಂಬಂಧಗಳನ್ನು ಅಳೆಯುತ್ತದೆ ಎಂದರು.
ಯುರೋಪ್ ದೇಶಗಳು ರಷ್ಯಾದ ಕುರಿತು ಭಾರತದ ದೃಷ್ಟಿಕೋನವನ್ನು ಅಳವಡಿಸಿಕೊಳ್ಳುತ್ತದೆ ಎಂದು ನಿರೀಕ್ಷಿಸಲು ಸಾಧ್ಯವಿಲ್ಲದಂತೆಯೇ, ದೇಶದ ನಿರ್ಧಾರಗಳು ಮಾಸ್ಕೋದೊಂದಿಗಿನ ಅದರ ಸ್ವಂತ ಇತಿಹಾಸವನ್ನು ಪ್ರತಿಬಿಂಬಿಸುತ್ತವೆ ಎಂದು ಅವರು ವಾದಿಸಿದರು. ಭಾರತದ ಅನುಭವವು ಸದ್ಯ ಸಕಾರಾತ್ಮಕವಾಗಿದ್ದು, ಅದು ನಿರಂತರವಾಗಿ ಮುಂದುವರೆಯಲಿದೆ. ಮಿಲಿಟರಿ ಮತ್ತು ಪರಮಾಣು ಸಹಕಾರದ ಜೊತೆಗೆ ವ್ಯಾಪಾರ, ಇಂಧನ ಮತ್ತು ಸಂಪನ್ಮೂಲಗಳು ಪ್ರಮುಖ ಪಾತ್ರ ವಹಿಸುವುದರೊಂದಿಗೆ 1970 ಮತ್ತು 1980ರ ದಶಕದಿಂದಲೂ ಈ ಪಾಲುದಾರಿಕೆ ವಿಕಸನಗೊಂಡಿದೆ ಎಂದು ಜೈಶಂಕರ್ ತಿಳಿಸಿದರು.
ಉಕ್ರೇನ್ ಯುದ್ಧದ ಸಮಯದಲ್ಲಿ ರಷ್ಯಾದಿಂದ ತೈಲ ಖರೀದಿಸುತ್ತಿರುವುದನ್ನು ಮುಂದುವರಿಸಿರುವುದಕ್ಕೆ ಅಮೆರಿಕ ಮತ್ತು ಯುರೋಪ್ ದೇಶಗಳ ಟೀಕೆಗಳು ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಅವರ ಈ ಹೇಳಿಕೆಗಳು ಬಂದಿವೆ. ಜಾಗತಿಕ ಮಾರುಕಟ್ಟೆಗಳನ್ನು ಸ್ಥಿರಗೊಳಿಸಲು ರಷ್ಯಾದಿಂದ ತೈಲವನ್ನು ಖರೀದಿಸುವಂತೆ ವಾಷಿಂಗ್ಟನ್ ಆರಂಭದಲ್ಲಿ ಭಾರತವನ್ನು ಉತ್ತೇಜಿಸಿತ್ತು ಎಂದು ತಿಳಿಸಿರುವ ವಿದೇಶಾಂಗ ವ್ಯವಹಾರಗಳ ಸಚಿವಾಲಯ, ಈ ಟೀಕೆಗಳನ್ನು ಅನ್ಯಾಯ ಮತ್ತು ಅವಿವೇಕದ ನಿರ್ಧಾರ ಎಂದು ಕರೆದಿದೆ.
ರಷ್ಯಾದೊಂದಿಗೆ ವ್ಯಾಪಾರ, ಹೂಡಿಕೆ ಮತ್ತು ಇಂಧನ ಸಹಕಾರವನ್ನು ವಿಸ್ತರಿಸುವ ಯೋಜನೆಗಳ ಕುರಿತು ಸಂಸದೀಯ ಸಲಹಾ ಸಮಿತಿಗೆ ಜೈಶಂಕರ್ ವಿವರಣೆ ನೀಡಿದ ದಿನವೇ ಈ ಹೇಳಿಕೆಗಳು ಹೊರಬಂದಿವೆ. ಗ್ರಾಹಕರ ಹಿತಾಸಕ್ತಿಗಳನ್ನು ಕಾಪಾಡುವುದೇ ಭಾರತದ ಆದ್ಯತೆಯಾಗಿದೆ ಎಂದು ಅವರು ಸಮಿತಿಗೆ ತಿಳಿಸಿದ್ದು, ನಮ್ಮ ವಿಧಾನವು ಪೂರೈಕೆಯ ಬಹು ಮೂಲಗಳನ್ನು ಕಾಪಾಡಿಕೊಳ್ಳುವುದಾಗಿದೆ ಎಂದು ಸಭೆಯ ಬಗ್ಗೆ ತಿಳಿದಿರುವ ವ್ಯಕ್ತಿಗಳು ಉಲ್ಲೇಖಿಸಿದ್ದಾರೆ.
ಉಕ್ರೇನ್ ವಿಚಾರವಾಗಿ ಮಾತನಾಡಿರುವ ಜೈಶಂಕರ್, ಸಂಭಾಷಣೆ, ರಾಜತಾಂತ್ರಿಕತೆ ಮತ್ತು ಮಾತುಕತೆಗಳ ಮೂಲಕ ಯುದ್ಧವನ್ನು ಅಂತ್ಯಗೊಳಿಸಬೇಕು ಎಂಬ ಭಾರತದ ನಿಲುವನ್ನು ಮತ್ತೊಮ್ಮೆ ಪುನರುಚ್ಚರಿಸಿದ್ದಾರೆ. ಇತ್ತೀಚಿನ ತಿಂಗಳುಗಳಲ್ಲಿ ದೇಶವು ಕೇವಲ ಶಾಂತಿಯನ್ನು ಪ್ರತಿಪಾದಿಸುವುದನ್ನು ಮೀರಿ ರಷ್ಯಾ ಮತ್ತು ಉಕ್ರೇನ್ ಜೊತೆ ಮಾತುಕತೆ ನಡೆಸಿದೆ ಎಂದು ಹೇಳಿದರು. ಕಪ್ಪು ಸಮುದ್ರದ ನೌಕಾಪಡೆ ಮೇಲಿನ ದಾಳಿಗಳು, ಧಾನ್ಯಗಳ ಆಮದು, ಇಂಧನ ರಫ್ತು ಮತ್ತು ಪ್ರಮುಖ ಮೂಲಸೌಕರ್ಯಗಳ ಮೇಲಿನ ದಾಳಿಗಳ ಕುರಿತು ಈ ಚರ್ಚೆಗಳು ನಡೆದಿವೆ.
ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ ನಿಲುವನ್ನು ಪುನರಾವರ್ತಿಸಿ, 2022ರಲ್ಲಿ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರಿಗೆ ಇಂದಿನ ಯುಗವು ಯುದ್ಧದ ಯುಗವಲ್ಲ ಎಂದು ಹೇಳಿರುವುದನ್ನು ಜೈಶಂಕರ್ ಸ್ಮರಿಸಿಕೊಂಡರು. ಸಮಿತಿಯ ಸಭೆಯಲ್ಲಿ ಮಾತನಾಡುತ್ತಾ, ಪ್ರಧಾನಿ ಮೋದಿಯವರ ಇತ್ತೀಚಿನ ಸಂದೇಶವನ್ನು ಉಲ್ಲೇಖಿಸಿದ ಅವರು, ಅಂತ್ಯವಿಲ್ಲದ ಯುದ್ಧವು ಈಗ ಯುದ್ಧದ ಅಂತ್ಯಕ್ಕೆ ದಾರಿ ಮಾಡಿಕೊಡಬೇಕು ಎಂದು ಪುಟಿನ್ ಅವರಿಗೆ ತಿಳಿಸಿರುವುದಾಗಿ ಹೇಳಿದರು(ಏಜೆನ್ಸೀಸ್).