

ನವದೆಹಲಿ: ಜಾಗತಿಕ ಸಮತೋಲನದಲ್ಲಿ ಆಗುತ್ತಿರುವ ಬದಲಾವಣೆ ಮತ್ತು ಚೀನಾದ ಏರು ಗತಿಯನ್ನು ಉಲ್ಲೇಖಿಸಿರುವ ವಿದೇಶಾಂಗ ವ್ಯವಹಾರಗಳ ಸಚಿವ ಡಾ. ಎಸ್. ಜೈಶಂಕರ್ (S Jaishankar) ಅವರು, ಅಮೆರಿಕವು ಕೇವಲ ಅವಕಾಶಗಳ ಕೊರತೆಯಿಂದಲ್ಲ, ಬದಲಿಗೆ ತನ್ನ ಸ್ವಂತ ಆಯ್ಕೆಯ ಮೂಲಕವೇ ಒಂಟಿ ಶಕ್ತಿಯಾಗಿ ಬದಲಾಗುತ್ತಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಹೊಸದಿಲ್ಲಿಯಲ್ಲಿ ನಡೆದ 62ನೇ ಮ್ಯೂನಿಚ್ ಭದ್ರತಾ ಸಮ್ಮೇಳನದಲ್ಲಿ ಮಾತನಾಡಿದ ವಿದೇಶಾಂಗ ಸಚಿವ ಎಸ್. ಜೈಶಂಕರ್, ಅಮೆರಿಕದ ನೀತಿಗಳಲ್ಲಿ ದೊಡ್ಡ ಬದಲಾವಣೆಯಾಗುತ್ತಿದೆ ಎಂದು ತಿಳಿಸಿದ್ದಾರೆ. ಈ ತೀವ್ರ ಸ್ಪರ್ಧೆಯು ಕೇವಲ ಅಮೆರಿಕ ಮತ್ತು ಚೀನಾ ನಡುವೆ ಮಾತ್ರ ಉಳಿದಿಲ್ಲ. ಬದಲಾಗಿ, ಇದು ದೇಶಗಳು ತಮ್ಮ ಬಳಿ ಇರುವ ಪ್ರತಿಯೊಂದು ಬಲ ಅಥವಾ ಅವಕಾಶವನ್ನು ಪರಸ್ಪರ ವಿರುದ್ಧವಾಗಿ ಅಸ್ತ್ರದಂತೆ ಬಳಸಿಕೊಳ್ಳಲು ಕಾರಣವಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಅಮೆರಿಕದ ಈ ಬದಲಾವಣೆಯು ತನ್ನಷ್ಟಕ್ಕೆ ತಾನೇ ಮಾಡಿಕೊಂಡ ಆಯ್ಕೆಯಾಗಿದ್ದು, ಇದು ಉದ್ದೇಶಪೂರ್ವಕವಾಗಿಯೇ ತನ್ನನ್ನು ತಾನು ಹೆಚ್ಚು ಒಂಟಿ ಶಕ್ತಿಯನ್ನಾಗಿ ಮಾಡಿಕೊಳ್ಳುತ್ತಿದೆ ಎಂದು ಜೈಶಂಕರ್ ವಿವರಿಸಿದರು. ಮುಂದುವರಿದು ಮಾತನಾಡುತ್ತಾ, ಇಂದಿನ ಜಾಗತಿಕ ಪರಿಸ್ಥಿತಿಯ ಎರಡನೇ ಪ್ರಮುಖ ಅಂಶವೆಂದರೆ ಚೀನಾದ ಬಲವಾದ ಏರಿಕೆ. ಚೀನಾ ತನ್ನನ್ನು ತಾನು ಇಡೀ ಜಗತ್ತಿನಲ್ಲಿ ಅತ್ಯಂತ ವಿಶಿಷ್ಟ ದೇಶವೆಂದು ಭಾವಿಸುತ್ತದೆ. ಇದು ಒಂದು ರೀತಿಯಲ್ಲಿ ಅದರ ಸ್ವಂತ ಯೋಚನೆಯೂ ಹೌದು ಹಾಗೂ ಹಲವು ದಿಕ್ಕುಗಳಲ್ಲಿ ಇದು ನೈಜ ಸತ್ಯವೂ ಹೌದು ಎಂದರು.
ಬೆಳೆಯುತ್ತಿರುವ ಹಾಗೂ ಮಧ್ಯಮ ಶ್ರೇಣಿಯ ದೇಶಗಳು ತಮ್ಮ ತಮ್ಮಲ್ಲಿ ಪರಸ್ಪರ ಸಹಕಾರವನ್ನು ಹೊಂದಿರುತ್ತವೆ, ಆ ದೇಶಗಳು ಅಮೆರಿಕ ಮತ್ತು ಚೀನಾದೊಂದಿಗೂ ಸಹಕರಿಸುವುದು ಅನಿವಾರ್ಯ ಎಂದು ಅವರು ಒತ್ತಿ ಹೇಳಿದರು. ಇದಕ್ಕಾಗಿ ಅವರು ಕ್ವಾಡ್ (Quad), ಭಾರತ-ಮಧ್ಯಪ್ರಾಪ್ಯ-ಯುರೋಪ್ ಆರ್ಥಿಕ ಕಾರಿಡಾರ್ ಹಾಗೂ ಬ್ರಿಕ್ಸ್ ಸಂಘಟನೆಗಳ ಉದಾಹರಣೆಗಳನ್ನು ನೀಡಿದರು.
ಬ್ರಿಕ್ಸ್ ಎನ್ನುವುದು ದೇಶಗಳು ತಮ್ಮ ಪ್ರತ್ಯೇಕ ಧ್ವನಿಗಿಂತ ಸಾಮೂಹಿಕ ಧ್ವನಿಯು ಹೆಚ್ಚು ಬಲವಾಗಿದೆ ಎಂದು ಭಾವಿಸುವ ವೇದಿಕೆಯಾಗಿದೆ ಎಂದು ಅವರು ಹೇಳಿದರು.
ಹೀಗಾಗಿ, ಜಗತ್ತಿನಲ್ಲಿ ಕೇವಲ ದೊಡ್ಡ ಮತ್ತು ಪ್ರಮುಖ ದೇಶಗಳು ಮಾತ್ರವಲ್ಲದೆ, ಇತರೆ ಅನೇಕ ದೇಶಗಳು ಕೂಡ ತಮ್ಮ ಹಿತಾಸಕ್ತಿಗಳಿಗೆ ಒಪ್ಪುವ ಸಂದರ್ಭದಲ್ಲಿ ಒಟ್ಟಿಗೆ ಸೇರುವಂತಹ ವಾತಾವರಣ ನಿರ್ಮಾಣವಾಗಿದೆ. ಅಂತಹ ದೇಶಗಳು ತಮ್ಮಿಚ್ಛೆಯಂತೆ ಪರಸ್ಪರ ಕೆಲಸದ ವ್ಯವಸ್ಥೆಗಳನ್ನು ಮಾಡಿಕೊಳ್ಳುತ್ತವೆ, ಹೊಸ ಕಾರ್ಯಸೂಚಿಗಳನ್ನು ರೂಪಿಸುತ್ತವೆ, ಅಗತ್ಯ ಸಂಸ್ಥೆಗಳನ್ನು ಕಟ್ಟಿಕೊಳ್ಳುತ್ತವೆ ಹಾಗೂ ಪರಸ್ಪರ ಸಹಕರಿಸುವ ಅಭ್ಯಾಸಗಳನ್ನು ಬೆಳೆಸಿಕೊಳ್ಳುತ್ತವೆ. ಇದುವೇ ಇಂದಿನ ಬದಲಾಗುತ್ತಿರುವ ಜಾಗತಿಕ ವ್ಯವಸ್ಥೆಯ ಸತ್ಯವಾಗಿದೆ ಎಂದು ಸಚಿವ ಜೈಶಂಕರ್ ಹೇಳಿದರು(ಏಜೆನ್ಸೀಸ್).