

ಚೆನ್ನೈ: ಕೇಂದ್ರ ಸರ್ಕಾರದ ಪರಿಷ್ಕೃತ ಕ್ಷೇತ್ರ ಮರುವಿಂಗಡಣಾ ಮಸೂದೆಗೆ (Delimitation Bill) ಬೆಂಬಲ ನೀಡಲು ಎಂ.ಕೆ.ಸ್ಟಾಲಿನ್ ನೇತೃತ್ವದ ಡಿಎಂಕೆ ಪಕ್ಷ ಮುಂದಾಗಿದ್ದು, ಈ ನಿರ್ಧಾರಕ್ಕೆ ಆಡಳಿತರೂಢ ಟಿವಿಕೆ ಪಕ್ಷ ವಿರೋಧ ವ್ಯಕ್ತಪಡಿಸಿದೆ.
ಎಂ.ಕೆ. ಸ್ಟಾಲಿನ್ ಕೇಂದ್ರ ಸರ್ಕಾರದ ಈ ಮಸೂದೆಗೆ ಬೆಂಬಲ ನೀಡಿದ ಹಿನ್ನಲೆ, ಸಿಎಂ ಜೋಸೆಫ್ ವಿಜಯ್ ಅವರ 'ತಮಿಳಗ ವೆಟ್ರಿ ಕಳಗಂ' (TVK) ಪಕ್ಷ ಮಾಜಿ ಸಿಎಂ ಸ್ಟಾಲಿನ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದೆ. ಶನಿವಾರದಂದು ಟಿವಿಕೆ ಐಟಿ ವಿಭಾಗವು ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ಸ್ಟಾಲಿನ್ ಅವರು ಆರ್‌ಎಸ್‌ಎಸ್ (RSS) ಸಮವಸ್ತ್ರ ಧರಿಸಿರುವ ಎಡಿಟೆಡ್ ಫೋಟೋವೊಂದನ್ನು ಹಂಚಿಕೊಂಡಿದ್ದು, ಅದಕ್ಕೆ "ಸ್ಟಾಲಿನ್, ಅಲಿಯಾಸ್ ಸಾವರ್ಕರ್ 2.0" ಎಂದು ಕ್ಯಾಪ್ಷನ್ ನೀಡಿದೆ.
ಅಷ್ಟಕ್ಕೇ ಸುಮ್ಮನಾಗದ ವಿಜಯ್ ಪಡೆ, ಡಿಎಂಕೆಯ ಈ ದಿಢೀರ್ ನಿಲುವು ಬದಲಾವಣೆಯನ್ನು ವ್ಯಂಗ್ಯವಾಡಿದೆ. ಮತ್ತೊಂದು ಪೋಸ್ಟ್‌ನಲ್ಲಿ, "ಸನಾತನವಲ್ಲ... ಮಗನ ಸಂಪತ್ತು (Son-dhanam)..." ಎಂಬ ತಮಿಳು ನುಡಿಗಟ್ಟಿನ ಮೂಲಕ ಡಿಎಂಕೆ ನಾಯಕತ್ವದ ರಾಜಕೀಯ ಲೆಕ್ಕಾಚಾರವನ್ನು ಕುಟುಕಿದೆ.
ಕಳೆದ ಏಪ್ರಿಲ್‌ನಲ್ಲಿ ಇದೇ ಮಸೂದೆಯನ್ನು ವಿರೋಧಿಸಿದ್ದ ಡಿಎಂಕೆ, ಈಗ ತನ್ನ ಸ್ವಂತ ರಾಜಕೀಯ ಲಾಭಕ್ಕಾಗಿ ಯೂ-ಟರ್ನ್ ಹೊಡೆದಿದೆ ಎಂಬುದು ಟಿವಿಕೆ ಆರೋಪವಾಗಿದೆ. ಮಸೂದೆಯ ವಿರುದ್ಧ ಸಂಸದರು ಮತ ಹಾಕುತ್ತಾರೆ ಎಂದು ಬಹಿರಂಗವಾಗಿ ಘೋಷಿಸುವಂತೆ ಈ ಹಿಂದೆ ಸವಾಲು ಹಾಕಿದ್ದ ಟಿವಿಕೆ, ಮತದಾನದಿಂದ ದೂರ ಉಳಿಯುವುದು ಅಥವಾ ಸಭಾತ್ಯಾಗ ಮಾಡುವುದು ಒಂದರ್ಥದಲ್ಲಿ ಬಿಜೆಪಿಗೆ ಶರಣಾದಂತೆ ಎಂದು ಟೀಕಿಸಿದೆ.
ಟಿವಿಕೆಯ ಈ ಟೀಕಾಪ್ರಹಾರದ ನಡುವೆಯೇ ಸ್ಟಾಲಿನ್ ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ. ಏಪ್ರಿಲ್‌ನಲ್ಲಿ ನಾವು ಮಸೂದೆ ವಿರೋಧಿಸಿದಾಗ ಮುಂದಿಟ್ಟಿದ್ದ ಎರಡು ಪ್ರಮುಖ ಬೇಡಿಕೆಗಳನ್ನು ಕೇಂದ್ರ ಸರ್ಕಾರ ಈಗ ಲಿಖಿತ ರೂಪದಲ್ಲಿ ಮಸೂದೆಯಲ್ಲಿ ಸೇರಿಸಿದೆ.
ಇದು 2024ರಿಂದ ಡಿಎಂಕೆ ನಡೆಸಿದ ನಿರಂತರ ಹೋರಾಟಕ್ಕೆ ಸಿಕ್ಕ ಗೆಲುವು ಮತ್ತು ದಕ್ಷಿಣದ ಎಲ್ಲಾ ರಾಜ್ಯಗಳಿಗೆ ಸಂದ ಜಯ ಎಂದು ಅವರು ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ. ಜನರು ಭಾವನಾತ್ಮಕವಾಗಿ ಯೋಚಿಸದೆ ಶಾಂತವಾಗಿ ಅರ್ಥಮಾಡಿಕೊಳ್ಳಬೇಕು. ಈ ಪ್ರಸ್ತಾವನೆ ಪ್ರಾಯೋಗಿಕವಾಗಿದೆ ಮತ್ತು ನಮಗೆ ಲಾಭದಾಯಕವಾಗಿದೆ ಎಂದು ಸ್ಟಾಲಿನ್ ಹೇಳಿದ್ದಾರೆ.
ಡಿಎಂಕೆ ಮೂಲಗಳ ಪ್ರಕಾರ, ಪರಿಷ್ಕೃತ ಸೂತ್ರವನ್ನು ಬೆಂಬಲಿಸುವಂತೆ ಬಿಜೆಪಿ ಮನವಿ ಮಾಡಿತ್ತು. ಒಂದು ವೇಳೆ ಒಪ್ಪದಿದ್ದರೆ, 84ನೇ ಸಾಂವಿಧಾನಿಕ ತಿದ್ದುಪಡಿಯ ಅಡಿಯಲ್ಲಿ ಕೇವಲ ಸರಳ ಬಹುಮತದ ಮೂಲಕ ಜನಸಂಖ್ಯೆಯ ಆಧಾರದ ಮೇಲೆ ಮರುವಿಂಗಡಣೆ ಮಾಡುವುದಾಗಿ ಬಿಜೆಪಿ ಹೇಳಿತ್ತು ಎನ್ನಲಾಗಿದೆ.
ಹೊಸ ಪರಿಷ್ಕೃತ ಸೂತ್ರದ ಪ್ರಕಾರ, ರಾಜ್ಯಗಳ ನಡುವಿನ ಪ್ರಸ್ತುತ ಪ್ರಾತಿನಿಧ್ಯದ ಅನುಪಾತಕ್ಕೆ ಯಾವುದೇ ಧಕ್ಕೆಯಾಗದಂತೆ, ಪ್ರತಿ ರಾಜ್ಯದ ಲೋಕಸಭಾ ಸ್ಥಾನಗಳನ್ನು ಶೇಕಡಾ 50ರಷ್ಟು ಹೆಚ್ಚಿಸಲು ನಿರ್ಧರಿಸಲಾಗಿದೆ. 1971ರ ಜನಸಂಖ್ಯೆಯ ಆಧಾರದಲ್ಲೇ ಈ ಪ್ರಮಾಣವನ್ನು ಉಳಿಸಿಕೊಳ್ಳಲಾಗುತ್ತಿದೆ. ಇದರಿಂದ ತಮಿಳುನಾಡಿನ ಲೋಕಸಭಾ ಸ್ಥಾನಗಳು 39ರಿಂದ ಸುಮಾರು 59ಕ್ಕೆ ಏರಿಕೆಯಾಗಲಿದ್ದು, ರಾಷ್ಟ್ರೀಯ ಮಟ್ಟದಲ್ಲಿ ತಮಿಳುನಾಡಿನ ಶೇಕಡಾ 7.18ರಷ್ಟು ಪಾಲು ಹಾಗೆಯೇ ಮುಂದುವರಿಯಲಿದೆ.
2029ರಿಂದ ಮಹಿಳಾ ಮೀಸಲಾತಿ ಜಾರಿಗೆ ತರುವ ಉದ್ದೇಶದಿಂದ, ನವೆಂಬರ್ 30ರಿಂದ ಶುರುವಾಗುವ ಸಂಸತ್ ಅಧಿವೇಶನದಲ್ಲಿ ಎನ್‌ಡಿಎ ಸರ್ಕಾರ ಈ ಮಸೂದೆ ಮಂಡಿಸಲು ಸಜ್ಜಾಗಿದೆ. ಈ ಮಸೂದೆ ಜಾರಿಯಾದರೆ ಲೋಕಸಭೆಯ ಒಟ್ಟು ಸದಸ್ಯ ಬಲ 850ಕ್ಕೆ ಏರಿಕೆಯಾಗುವ ಸಾಧ್ಯತೆಯಿದೆ ಎನ್ನಲಾಗಿದೆ, (ಏಜೆನ್ಸೀಸ್).