ಚೆನ್ನೈ: ಮಧುರೈನ ತಿರುಪರಂಕುಂದ್ರಂ ಬೆಟ್ಟದ ಮೇಲಿರುವ ದೀಪಸ್ತಂಭದಲ್ಲಿಯೇ ಕಾರ್ತಿಕ ದೀಪ ಬೆಳಗಿಸುವ ಕುರಿತು ಸುಪ್ರೀಂ ಕೋರ್ಟ್ ನೀಡಿರುವ ಆದೇಶ ತಮಿಳುನಾಡು ರಾಜಕೀಯದಲ್ಲಿ ಭಾರಿ ಬಿರುಗಾಳಿ ಎಬ್ಬಿಸಿದೆ. ನಟ ವಿಜಯ್ ನೇತೃತ್ವದ ಟಿವಿಕೆ ಸರ್ಕಾರದ ಮಿತ್ರಪಕ್ಷಗಳಾದ ತಮಿಳುನಾಡು ಕಾಂಗ್ರೆಸ್ ಮತ್ತು ಎಂಡಿಎಂಕೆ ಸುಪ್ರೀಂ ಕೋರ್ಟ್ ಆದೇಶದ ವಿರುದ್ಧ ಬಹಿರಂಗವಾಗಿ ಅಸಮಾಧಾನ ಹೊರಹಾಕಿವೆ.
ಮತ್ತೊಂದೆಡೆ, ಸುಪ್ರೀಂ ಕೋರ್ಟ್‌ನಿಂದ ತೀವ್ರ ತರಾಟೆಗೆ ಒಳಗಾದ ವಿಜಯ್ ಸರ್ಕಾರದ ವಿರುದ್ಧ ಪ್ರತಿಪಕ್ಷ ಎಐಎಡಿಎಂಕೆ ತೀವ್ರ ವಾಗ್ದಾಳಿ ನಡೆಸಿದ್ದು, ಇತ್ತ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ನಾಯಕರು ಈ ಆದೇಶವನ್ನು ಸ್ವಾಗತಿಸಿದ್ದು, ಇದು ಸುಬ್ರಹ್ಮಣ್ಯ ಸ್ವಾಮಿಗೆ ಸಿಕ್ಕ ಜಯ ಎಂದು ಬಣ್ಣಿಸಿದ್ದಾರೆ.
ಈ ತೀರ್ಪಿನ ಬಗ್ಗೆ ಪ್ರತಿಕ್ರಿಯಿಸಿರುವ ತಮಿಳುನಾಡು ಕಾಂಗ್ರೆಸ್ ಸಮಿತಿ ಅಧ್ಯಕ್ಷ ಮಾಣಿಕಂ ಟ್ಯಾಗೋರ್, ದೀಪಸ್ತಂಭದಲ್ಲಿ ದೀಪ ಬೆಳಗಿಸಲು ನಿರ್ದೇಶಿಸಿರುವ ಆದೇಶವನ್ನು ಸುಪ್ರೀಂ ಕೋರ್ಟ್ ಮರುಪರಿಶೀಲಿಸಬೇಕು ಎಂದು ಒತ್ತಾಯಿಸಿದ್ದಾರೆ. ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, ಒಕ್ಕೂಟ ತತ್ವಗಳು, ಧಾರ್ಮಿಕ ಸಾಮರಸ್ಯ ಮತ್ತು ದೇವಾಲಯದ ಆಡಳಿತದಲ್ಲಿ ನ್ಯಾಯಾಂಗ ಹಾಗೂ ರಾಜ್ಯ ಸರ್ಕಾರದ ಅಧಿಕಾರ ವ್ಯಾಪ್ತಿಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.
ರಾಜ್ಯದಲ್ಲಿರುವ ವಿವಿಧ ಸಮುದಾಯಗಳ ನಡುವಿನ ಸಾಮರಸ್ಯ ಮತ್ತು ಶಾಂತಿಯುತ ವಾತಾವರಣವನ್ನು ಕಾಪಾಡುವುದು ಎಲ್ಲರ ಪ್ರಮುಖ ಜವಾಬ್ದಾರಿಯಾಗಿದೆ. ದೇವಾಲಯದ ಆಡಳಿತದಲ್ಲಿ ನ್ಯಾಯಾಲಯದ ಹಸ್ತಕ್ಷೇಪ, ನಿವೃತ್ತ ನ್ಯಾಯಮೂರ್ತಿಗಳ ಸಮಿತಿ ನೇಮಕ ಮತ್ತು ಭದ್ರತೆಗಾಗಿ ಕೇಂದ್ರ ಅರೆಸೇನಾ ಪಡೆಗಳನ್ನು ನಿಯೋಜಿಸಿರುವುದು ನ್ಯಾಯಾಂಗ, ರಾಜ್ಯ ಆಡಳಿತ ಮತ್ತು ದೇವಾಲಯದ ಆಡಳಿತ ಮಂಡಳಿಯ ವ್ಯಾಪ್ತಿಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ ಎಂದು ಟ್ಯಾಗೋರ್ ಹೇಳಿದ್ದಾರೆ.
ಇದಕ್ಕೆ ತಿರುಗೇಟು ನೀಡಿರುವ ಬಿಜೆಪಿ ನಾಯಕ ವಿನೋಜ್ ಸೆಲ್ವಂ, ಬೆಟ್ಟದ ತುದಿಗೆ ಹತ್ತಿ ಕೆಳಗೆ ನೋಡಿ, ನಿಮ್ಮ ಎಲ್ಲಾ ಚಿಂತೆಗಳು ಮಾಯವಾಗುತ್ತವೆ ಎಂದು ವ್ಯಂಗ್ಯವಾಡಿದ್ದಾರೆ.
ಸರ್ಕಾರದ ಮತ್ತೊಂದು ಮಿತ್ರಪಕ್ಷ ಎಂಡಿಎಂಕೆ ಪ್ರಧಾನ ಕಾರ್ಯದರ್ಶಿ ವೈಕೋ ಸಹ ತೀರ್ಪನ್ನು ಟೀಕಿಸಿದ್ದು, ಸುಪ್ರೀಂ ಕೋರ್ಟ್ ತನ್ನ ಮಿತಿಯನ್ನು ಮೀರಿದೆ. ಸಂವಿಧಾನದ ಮೂಲಭೂತ ತತ್ವ ಜಾತ್ಯತೀತತೆ. ಆದರೆ, ತಿರುಪರಂಕುಂದ್ರಂನಲ್ಲಿ ಶತಮಾನಗಳಿಂದ ನಡೆದುಕೊಂಡು ಬಂದಿದ್ದ ಸಂಪ್ರದಾಯವನ್ನು ಸುಪ್ರೀಂ ಕೋರ್ಟ್ ತೀರ್ಪು ಉಲ್ಲಂಘಿಸಿದೆ ಎಂದು ಆರೋಪಿಸಿದ್ದಾರೆ.
ನವೆಂಬರ್ 24ರಂದು ನಡೆದ ವಾರ್ಷಿಕ ಕಾರ್ತಿಕ ದೀಪ ಉತ್ಸವದ ಸಂದರ್ಭದಲ್ಲಿ, ಸುಪ್ರೀಂ ಕೋರ್ಟ್‌ನ ಮಧ್ಯಂತರ ನಿರ್ದೇಶನದ ಹೊರತಾಗಿಯೂ ದೀಪಸ್ತಂಭದ ಬದಲಿಗೆ ಬೇರೆ ಕಡೆ ಮಹಾದೀಪವನ್ನು ಬೆಳಗಿಸಲಾಗಿತ್ತು. ತನ್ನ ಹಿಂದಿನ ಆದೇಶದ ಉಲ್ಲಂಘನೆಯಿಂದ ತೀವ್ರ ಅಸಮಾಧಾನಗೊಂಡ ಸುಪ್ರೀಂ ಕೋರ್ಟ್, ಶುಕ್ರವಾರ ದೇವಾಲಯದ ಆಡಳಿತ ಮಂಡಳಿಯನ್ನು ವಜಾಗೊಳಿಸಿ, ದೀಪ ಬೆಳಗಿಸುವ ಪ್ರಕ್ರಿಯೆಯ ಮೇಲ್ವಿಚಾರಣೆಗಾಗಿ ಮಾಜಿ ನ್ಯಾಯಮೂರ್ತಿಗಳ ಸಮಿತಿಯನ್ನು ನೇಮಿಸಿತ್ತು. ಅಲ್ಲದೆ, ಶಾಂತಿ ಕಾಪಾಡಲು ಕೇಂದ್ರ ಪಡೆಗಳನ್ನು ನಿಯೋಜಿಸಲು ಆದೇಶಿಸಿತ್ತು.
ಈ ಬೆಳವಣಿಗೆಯ ಬೆನ್ನಲ್ಲೇ ವಿಜಯ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿರುವ ಎಐಎಡಿಎಂಕೆ ಮುಖ್ಯಸ್ಥ ಎಡಪ್ಪಾಡಿ ಪಳನಿಸ್ವಾಮಿ, ಸುಪ್ರೀಂ ಕೋರ್ಟ್ ಬಳಸಿರುವ ಕಠಿಣ ಪದಗಳು ರಾಜ್ಯಕ್ಕೆ ಅಪಖ್ಯಾತಿ ತಂದಿವೆ. ನಮ್ಮ ರಾಜ್ಯಕ್ಕೆ ಇಂತಹ ಮುಜುಗರ ಬೇಕಿತ್ತೇ? ತಮಿಳುನಾಡಿಗೆ ಸರಿಪಡಿಸಲಾಗದ ಅವಮಾನ ತಂದಿರುವ ಟಿವಿಕೆ ಸರ್ಕಾರವನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದು, ಕೂಡಲೇ ಸೂಕ್ತ ಪರಿಹಾರ ಕಂಡುಕೊಳ್ಳುವಂತೆ ಆಗ್ರಹಿಸಿದ್ದಾರೆ(ಏಜೆನ್ಸೀಸ್).