

ನವದೆಹಲಿ: ಬಹುಪಥ ಮುಕ್ತ ಸಂಚಾರ ಟೋಲ್ ವ್ಯವಸ್ಥೆಯಲ್ಲಿ (MLFF) ಶುಲ್ಕ ಪಾವತಿ ತಪ್ಪಿಸಲು ವಾಹನದ ನೋಂದಣಿ ಸಂಖ್ಯೆ ನಂಬರ್ ಪ್ಲೇಟ್ ಯನ್ನು ಉದ್ದೇಶಪೂರ್ವಕವಾಗಿ ಮುಚ್ಚುವ ಅಥವಾ ತಿರುಚುವ ವಾಹನ ಸವಾರರಿಗೆ ಬಳಕೆದಾರ ಶುಲ್ಕದ ಐದು ಪಟ್ಟು ದಂಡ ವಿಧಿಸಲು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ನಿರ್ಧರಿಸಿದೆ. ಈ ದಂಡದ ಜತೆಗೆ ಮೂಲ ಟೋಲ್ ಶುಲ್ಕವನ್ನೂ ವಸೂಲಿ ಮಾಡಿ ಒಟ್ಟು ಮೊತ್ತವನ್ನು ಸಂಬಂಧಿಸಿದ ಪ್ರಾಧಿಕಾರಕ್ಕೆ ಪಾವತಿಸಲಾಗುತ್ತದೆ ಎಂದು ತಿಳಿಸಿದೆ.
ವಾಹನದ ಮುಂಭಾಗ ಅಥವಾ ಹಿಂಭಾಗದ ನಂಬರ್ ಪ್ಲೇಟ್ ಮುಚ್ಚುವುದು, ನೋಂದಣಿ ಸಂಖ್ಯೆಯನ್ನು ತಿರುಚುವುದು ಅಥವಾ ಮರೆಮಾಚುವುದು ಹಾಗೂ ಟೋಲ್ ಶುಲ್ಕ ತಪ್ಪಿಸುವ ಉದ್ದೇಶದಿಂದ ಫಾಸ್ಟ್‌ಟ್ಯಾಗ್ ಅಳವಡಿಸದಿರುವುದು ಈ ಕ್ರಮದ ವ್ಯಾಪ್ತಿಗೆ ಬರಲಿದೆ.
ಆದರೆ, ಶುಲ್ಕ ತಪ್ಪಿಸುವ ಉದ್ದೇಶದಿಂದಲೇ ಇಂತಹ ಕೃತ್ಯ ಎಸಗಿರುವುದು ದೃಢಪಟ್ಟ ಪ್ರಕರಣಗಳಲ್ಲಿ ಮಾತ್ರ ದಂಡ ವಿಧಿಸಲಾಗುತ್ತದೆ. ಫಾಸ್ಟ್‌ಟ್ಯಾಗ್ ಪತ್ತೆಯಾಗದಿರುವ ಸಂದರ್ಭದಲ್ಲೂ ನಂಬರ್ ಪ್ಲೇಟ್ ಮರೆಮಾಚಿರುವುದು ಕಂಡುಬಂದರೆ ಕ್ರಮ ಕೈಗೊಳ್ಳಲಾಗುತ್ತದೆ. ಇಂತಹ ವಾಹನಗಳನ್ನು ತಂತ್ರಜ್ಞಾನ ಆಧಾರಿತ ವ್ಯವಸ್ಥೆಯ ಮೂಲಕ ಗುರುತಿಸಲಾಗುತ್ತದೆ ಎಂದು ಸಚಿವಾಲಯ ತಿಳಿಸಿದೆ.
ಎಂಎಲ್‌ಎಫ್‌ಎಫ್ ಎಂದರೆ ಅಡೆತಡೆರಹಿತ ಎಲೆಕ್ಟ್ರಾನಿಕ್ ಟೋಲ್ ಸಂಗ್ರಹ ವ್ಯವಸ್ಥೆ. ಹೆದ್ದಾರಿಗಳ ಮೇಲಿನ ಗ್ಯಾಂಟ್ರಿಗಳಲ್ಲಿ ಅಳವಡಿಸಿರುವ ಫಾಸ್ಟ್‌ಟ್ಯಾಗ್ ರೀಡರ್‌ಗಳು ಹಾಗೂ ಸ್ವಯಂಚಾಲಿತ ನಂಬರ್ ಪ್ಲೇಟ್ ಗುರುತಿಸುವ ಕ್ಯಾಮೆರಾಗಳು ವಾಹನಗಳನ್ನು ಪತ್ತೆ ಹಚ್ಚಿ, ಟೋಲ್ ಶುಲ್ಕವನ್ನು ಸ್ವಯಂಚಾಲಿತವಾಗಿ ಕಡಿತಗೊಳಿಸುತ್ತವೆ. ಇದರಿಂದ ವಾಹನಗಳು ಟೋಲ್ ಪಾವತಿಗಾಗಿ ನಿಲ್ಲುವ ಅಗತ್ಯವಿರುವುದಿಲ್ಲ.
ಕಾಯುವ ಸಮಯ, ಸಂಚಾರ ದಟ್ಟಣೆ, ಇಂಧನ ಬಳಕೆ ಮತ್ತು ಮಾಲಿನ್ಯವೂ ಕಡಿಮೆಯಾಗುತ್ತದೆ. ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ಎಲ್ಲ ಎಂಎಲ್‌ಎಫ್‌ಎಫ್ ಕೇಂದ್ರಗಳಲ್ಲಷ್ಟೇ ಅಲ್ಲದೆ, ಮುಂದಿನ ದಿನಗಳಲ್ಲಿ ಹೊಸದಾಗಿ ಆರಂಭವಾಗುವ ಕೇಂದ್ರಗಳಲ್ಲೂ ಈ ದಂಡದ ನಿಯಮ ಅನ್ವಯವಾಗಲಿದೆ, (ಏಜೆನ್ಸೀಸ್).