76 ವರ್ಷಗಳ ಹಳೆಯ ESIC ನಿಯಮ ಬದಲಿಸಿದ ಸರ್ಕಾರ: ಕ್ಲೈಮ್ ಮಾಡದೆಯೇ ಸಿಗಲಿದೆ ಪರಿಹಾರದ ಹಣ...! ESIC New Rules

ಈ ಹೊಸ ನಿಯಮದ ಪ್ರಕಾರ, ಅರ್ಹ ವಿಮಾದಾರ ನೌಕರರು ಇನ್ಮುಂದೆ ಅನಾರೋಗ್ಯ ಮತ್ತು ಹೆರಿಗೆ ಸೌಲಭ್ಯಗಳನ್ನು ಪಡೆಯಲು ಪ್ರತ್ಯೇಕವಾಗಿ ಅರ್ಜಿ ಅಥವಾ ಕ್ಲೈಮ್ ಸಲ್ಲಿಸುವ ಅಗತ್ಯವಿಲ್ಲ. ಬದಲಾಗಿ, ನೇರವಾಗಿ ನೌಕರರ ಬ್ಯಾಂಕ್ ಖಾತೆಗೆ ESIC ವತಿಯಿಂದ ಹಣ ಜಮೆಯಾಗಲಿದೆ.
ESIC New Rules
76 ವರ್ಷಗಳ ಹಳೆಯ ESIC ನಿಯಮ ಬದಲಿಸಿದ ಸರ್ಕಾರ: ಕ್ಲೈಮ್ ಮಾಡದೆಯೇ ಸಿಗಲಿದೆ ಪರಿಹಾರದ ಹಣ...!
Published on: 

ನವದೆಹಲಿ: ನೌಕರರ ರಾಜ್ಯ ವಿಮಾ ನಿಗಮದ (ESIC) ಅಡಿಯಲ್ಲಿ ನೋಂದಾಯಿಸಲ್ಪಟ್ಟಿರುವ ದೇಶದ ಕೋಟ್ಯಂತರ ನೌಕರರಿಗೆ ಕೇಂದ್ರ ಸರ್ಕಾರವು ಭರ್ಜರಿ ಸಿಹಿಸುದ್ದಿ ನೀಡಿದೆ. ಬರೋಬ್ಬರಿ 76 ವರ್ಷಗಳಷ್ಟು ಹಳೆಯದಾದ 'ನೌಕರರ ರಾಜ್ಯ ವಿಮಾ (ಸಾಮಾನ್ಯ) ನಿಯಮಗಳು, 1950'ಕ್ಕೆ ( ESIC New Rules ) ಸರ್ಕಾರ ಮಹತ್ವದ ತಿದ್ದುಪಡಿ ತಂದಿದ್ದು, ಅದರ ಬದಲಾಗಿ ಹೊಸ 'ನೌಕರರ ರಾಜ್ಯ ವಿಮಾ (ಸಾಮಾನ್ಯ) ನಿಯಮಗಳು, 2026' ಅನ್ನು ಜಾರಿಗೊಳಿಸಿದೆ.

ಈ ಹೊಸ ನಿಯಮದ ಪ್ರಕಾರ, ಅರ್ಹ ವಿಮಾದಾರ ನೌಕರರು ಇನ್ಮುಂದೆ ಅನಾರೋಗ್ಯ ಮತ್ತು ಹೆರಿಗೆ ಸೌಲಭ್ಯಗಳನ್ನು ಪಡೆಯಲು ಪ್ರತ್ಯೇಕವಾಗಿ ಅರ್ಜಿ ಅಥವಾ ಕ್ಲೈಮ್ ಸಲ್ಲಿಸುವ ಅಗತ್ಯವಿಲ್ಲ. ಬದಲಾಗಿ, ನೇರವಾಗಿ ನೌಕರರ ಬ್ಯಾಂಕ್ ಖಾತೆಗೆ ESIC ವತಿಯಿಂದ ಹಣ ಜಮೆಯಾಗಲಿದೆ.

ಹೊಸದಾಗಿ ಜಾರಿಗೆ ಬಂದಿರುವ 2026ರ ನಿಯಮಗಳ ಅಡಿಯಲ್ಲಿ, ಅನಾರೋಗ್ಯ ಮತ್ತು ಹೆರಿಗೆ ಸೌಲಭ್ಯದ ಕ್ಲೈಮ್‌ಗಳನ್ನು ಸ್ವಯಂಚಾಲಿತವಾಗಿ ವಿಲೇವಾರಿ ಮಾಡುವ ವ್ಯವಸ್ಥೆಯನ್ನು ತರಲಾಗಿದೆ. ಅರ್ಹ ನೌಕರರಿಗೆ ನೇರ ನಗದು ವರ್ಗಾವಣೆ (DBT) ಮೂಲಕ ಹಣ ತಲುಪಿಸಲಾಗುವುದು. ಇದರಿಂದ ನೌಕರರು ಕಚೇರಿಗಳಿಗೆ ಅಲೆಯುವುದು ತಪ್ಪಲಿದ್ದು, ಅನಗತ್ಯ ಕಾಗದಪತ್ರಗಳ ಹೊರೆ ಕಡಿಮೆಯಾಗಲಿದೆ.

Also Read
ಭಾರತಕ್ಕೆ ಮರಳಿದರೆ ಧ್ರುವ್ ರಾಠಿಗೆ ಕಾದಿದೆ ಸಂಕಷ್ಟ: ದೆಹಲಿ ಕೋರ್ಟ್‌ನಿಂದ ಹೊರಬಿತ್ತು ಮೂರನೇ ಶಾಕ್...! Dhruv Rathee
ESIC New Rules

ಆದಾಗ್ಯೂ, ಈ ಸ್ವಯಂಚಾಲಿತ ಸೌಲಭ್ಯವನ್ನು ಪಡೆಯಲು ಮೂರು ಪ್ರಮುಖ ಷರತ್ತುಗಳನ್ನು ಕಡ್ಡಾಯಗೊಳಿಸಲಾಗಿದೆ. ಮೊದಲನೆಯದಾಗಿ ವೈದ್ಯಕೀಯ ಪ್ರಮಾಣಪತ್ರವನ್ನು ESIC ಮಾಹಿತಿ ವ್ಯವಸ್ಥೆಯ ಮೂಲಕವೇ ಜನರೇಟ್ ಮಾಡಿರಬೇಕು, ಎರಡನೆಯದಾಗಿ ಉದ್ಯೋಗದಾತರು ಪೋರ್ಟಲ್ ಮೂಲಕ ಮಾಸಿಕ ವಿವರಗಳನ್ನು (Monthly Returns) ಸಲ್ಲಿಸಿರಬೇಕು ಮತ್ತು ಮೂರನೆಯದಾಗಿ ನೌಕರರ ವಿಮಾ ಸಂಖ್ಯೆಯು ಆಧಾರ್‌ನೊಂದಿಗೆ ಲಿಂಕ್ ಆಗಿದ್ದು, ಆಧಾರ್-ಲಿಂಕ್ಡ್ ಬ್ಯಾಂಕ್ ಖಾತೆಯನ್ನು ಹೊಂದಿರಬೇಕು.

ಇದೇ ವೇಳೆ, ESIC ಸದಸ್ಯತ್ವ ಪಡೆಯಲು ಇರುವ ವೇತನ ಮಿತಿಯನ್ನು ಕೂಡ ಸರ್ಕಾರ ಅಧಿಕೃತವಾಗಿ ಅಧಿಸೂಚಿಸಿದೆ. ಇದರ ಪ್ರಕಾರ, ಸಾಮಾನ್ಯ ನೌಕರರಿಗೆ ಮಾಸಿಕ 21,000 ರೂ. ವೇತನ ಮಿತಿಯನ್ನು ನಿಗದಿಪಡಿಸಲಾಗಿದ್ದು, ಅಂಗವಿಕಲ ನೌಕರರಿಗೆ ಈ ಮಿತಿಯನ್ನು ಮಾಸಿಕ 25,000 ರೂ.ಗೆ ನಿಗದಿಪಡಿಸಲಾಗಿದೆ. ಈ ವೇತನ ಮಿತಿಯೊಳಗೆ ಬರುವ ಎಲ್ಲಾ ಅರ್ಹ ನೌಕರರು ESIC ಯೋಜನೆಯ ಸಂಪೂರ್ಣ ವೈದ್ಯಕೀಯ ಮತ್ತು ಆರ್ಥಿಕ ಸೌಲಭ್ಯಗಳನ್ನು ಪಡೆಯಲು ಅರ್ಹರಾಗಿರುತ್ತಾರೆ.

ಕೆಲಸದ ಅವಧಿಯಲ್ಲಿ ಸಂಭವಿಸುವ ಅಪಘಾತ ಅಥವಾ ಗಾಯಗಳಿಗೆ ಪರಿಹಾರ ಪಡೆಯುವ ಪ್ರಕ್ರಿಯೆಯನ್ನು ಸಹ ಹೊಸ ನಿಯಮದಲ್ಲಿ ಅತ್ಯಂತ ಸರಳಗೊಳಿಸಲಾಗಿದೆ. ಈ ಹಿಂದೆ ಗಾಯಗೊಂಡ ನೌಕರರು ಪರಿಹಾರಕ್ಕಾಗಿ ಪ್ರತ್ಯೇಕ ಅರ್ಜಿಗಳನ್ನು ಸಲ್ಲಿಸಬೇಕಿತ್ತು. ಆದರೆ ಇನ್ಮುಂದೆ, ಘಟನೆಯ ಕುರಿತು ಉದ್ಯೋಗದಾತರ ಸಲ್ಲಿಸುವ ವರದಿಯನ್ನೇ ಅಧಿಕೃತ ಕ್ಲೈಮ್ ಎಂದು ಪರಿಗಣಿಸಲಾಗುತ್ತದೆ. ಇದರಿಂದ ಕೆಲಸದ ಸ್ಥಳದಲ್ಲಿ ಗಾಯಗೊಂಡು ಶಾಶ್ವತ ಅಥವಾ ತಾತ್ಕಾಲಿಕ ಅಂಗವೈಕಲ್ಯಕ್ಕೆ ತುತ್ತಾಗುವ ನೌಕರರಿಗೆ ತ್ವರಿತವಾಗಿ ಆರ್ಥಿಕ ನೆರವು ಸಿಗಲಿದೆ.

ಉದ್ಯೋಗದಾತರು ಸಲ್ಲಿಸುವ ವರದಿಯ ಆಧಾರದ ಮೇಲೆಯೇ ನೌಕರರಿಗೆ ಶಾಶ್ವತ ಅಥವಾ ತಾತ್ಕಾಲಿಕ ಅಂಗವೈಕಲ್ಯದ ಸೌಲಭ್ಯಗಳನ್ನು ನೀಡಲಾಗುತ್ತದೆ. ಒಂದು ವೇಳೆ ಕೆಲಸದ ವೇಳೆ ಸಂಭವಿಸಿದ ದುರ್ಘಟನೆಯಲ್ಲಿ ನೌಕರ ಮೃತಪಟ್ಟರೆ, ಅವರ ಅವಲಂಬಿತರಿಗೆ ಸಿಗಬೇಕಾದ ಪಿಂಚಣಿ ಮತ್ತು ಇತರ ಸೌಲಭ್ಯಗಳನ್ನು ಕೂಡ ಇದೇ ವರದಿಯ ಆಧಾರದ ಮೇಲೆ ನೀಡಲಾಗುತ್ತದೆ. ಈ ಹೊಸ ವ್ಯವಸ್ಥೆಯಡಿ ನೌಕರರಾಗಲಿ ಅಥವಾ ಅವರ ಕುಟುಂಬಸ್ಥರಾಗಲಿ ಪರಿಹಾರಕ್ಕಾಗಿ ಪ್ರತ್ಯೇಕವಾಗಿ ಅರ್ಜಿ ಸಲ್ಲಿಸಿ ಕಾಯುವ ಪರಿಸ್ಥಿತಿ ಇರುವುದಿಲ್ಲ.

Also Read
ಅನಿರುದ್ಧ್ ಮದ್ವೆ ಆರತಕ್ಷತೆಯಲ್ಲಿ ನಟ ಧನುಷ್ ಗೈರು: ಏನಿದು ಜೈಲರ್ ಎಂಟ್ರಿಯ ಕಥೆ? ಜಾಲತಾಣದಲ್ಲಿ ಹೀಗೊಂದು ಚರ್ಚೆ ಶುರು! Anirudh Ravichander
ESIC New Rules

ಇನ್ನು, ಹೊಸ ESIC ನಿಯಮಗಳಲ್ಲಿ ನೌಕರರು ಮತ್ತು ಉದ್ಯೋಗದಾತರ ವಂತಿಗೆ ದರ ಅಥವಾ ವಂತಿಗೆ ಅವಧಿಯಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ಪ್ರಸ್ತುತ ಇರುವಂತೆಯೇ ನೌಕರರು ತಮ್ಮ ಒಟ್ಟು ವೇತನದ ಶೇ. 0.75 ರಷ್ಟು ಮತ್ತು ಉದ್ಯೋಗದಾತರು ಶೇ. 3.25 ರಷ್ಟು ವಂತಿಗೆಯನ್ನು ಪಾವತಿಸುವುದನ್ನು ಮುಂದುವರಿಸಲಿದ್ದಾರೆ. ವಂತಿಗೆ ಅವಧಿ ಮತ್ತು ಅದಕ್ಕೆ ಸಂಬಂಧಿಸಿದ ಸೌಲಭ್ಯದ ಅವಧಿಗಳು ಕೂಡ ಯಥಾವತ್ತಾಗಿ ಮುಂದುವರಿಯಲಿದ್ದು, ನೌಕರರು ಮತ್ತು ಉದ್ಯೋಗದಾತರ ಹೆಚ್ಚಿನ ಪ್ರಕ್ರಿಯೆಗಳನ್ನು ಸಂಪೂರ್ಣವಾಗಿ ಆನ್‌ಲೈನ್ ಮೂಲಕವೇ ಸುಲಭವಾಗಿ ಪೂರ್ಣಗೊಳಿಸಲು ಅವಕಾಶ ಕಲ್ಪಿಸಲಾಗಿದೆ, (ಏಜೆನ್ಸೀಸ್​).