ತಾಯಿ-ತಂಗಿಯ ಜಗಳದಿಂದ ಬೇಸತ್ತು ಇಬ್ಬರನ್ನೂ ಕೊಂದ ಮಗ! ಬಳಿಕ ತಾನೂ ಆತ್ಮಹತ್ಯೆ | Crime News

ಮನೆಯಲ್ಲಿ ನಡೆಯುತ್ತಿದ್ದ ತಾಯಿ ಮತ್ತು ತಂಗಿಯ ನಡುವಿನ ನಿರಂತರ ಜಗಳದಿಂದ ಬೇಸತ್ತಿದ್ದ 27 ವರ್ಷದ ಯುವಕನೊಬ್ಬ ಇಬ್ಬರನ್ನೂ ಹತ್ಯೆ ಮಾಡಿ ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ರಾಜಸ್ಥಾನದ ಜೈಪುರದಲ್ಲಿ ಬೆಳಕಿಗೆ ಬಂದಿದೆ. ಶುಕ್ರವಾರ ಬೆಳಗ್ಗೆ ಒಂದೇ ಕುಟುಂಬದ ಮೂವರು ಮೃತಪಟ್ಟಿರುವುದು ಪತ್ತೆಯಾಗಿದ್ದು, ಸ್ಥಳಕ್ಕೆ ಧಾವಿಸಿದ ಪೊಲೀಸರಿಗೆ ಯುವಕನ ಮೊಬೈಲ್‌ನಲ್ಲಿ ಸಿಕ್ಕ ಆತ್ಮಹತ್ಯೆ ಪತ್ರ ಪ್ರಕರಣದ ಹಲವು ಸಂಗತಿಗಳನ್ನು ಬಯಲು ಮಾಡಿದೆ.Suicide
ತಾಯಿ-ತಂಗಿಯ ಜಗಳದಿಂದ ಬೇಸತ್ತು ಇಬ್ಬರನ್ನೂ ಕೊಂದ ಮಗ
ತಾಯಿ-ತಂಗಿಯ ಜಗಳದಿಂದ ಬೇಸತ್ತು ಇಬ್ಬರನ್ನೂ ಕೊಂದ ಮಗWEB
Published on: 

ಜೈಪುರ: ಮನೆಯಲ್ಲಿ ನಡೆಯುತ್ತಿದ್ದ ತಾಯಿ ಮತ್ತು ತಂಗಿಯ ನಡುವಿನ ನಿರಂತರ ಜಗಳದಿಂದ ಬೇಸತ್ತಿದ್ದ 27 ವರ್ಷದ ಯುವಕನೊಬ್ಬ ಇಬ್ಬರನ್ನೂ ಹತ್ಯೆ ಮಾಡಿ ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ರಾಜಸ್ಥಾನದ ಜೈಪುರದಲ್ಲಿ ಬೆಳಕಿಗೆ ಬಂದಿದೆ. ಶುಕ್ರವಾರ ಬೆಳಗ್ಗೆ ಒಂದೇ ಕುಟುಂಬದ ಮೂವರು ಮೃತಪಟ್ಟಿರುವುದು ಪತ್ತೆಯಾಗಿದ್ದು, ಸ್ಥಳಕ್ಕೆ ಧಾವಿಸಿದ ಪೊಲೀಸರಿಗೆ ಯುವಕನ ಮೊಬೈಲ್‌ನಲ್ಲಿ ಸಿಕ್ಕ ಆತ್ಮಹತ್ಯೆ ಪತ್ರ ಪ್ರಕರಣದ ಹಲವು ಸಂಗತಿಗಳನ್ನು ಬಯಲು ಮಾಡಿದೆ.

ಪ್ರತ್ಯೇಕ ಕೊಠಡಿಗಳಲ್ಲಿ ಮೂವರ ಶವ ಪತ್ತೆ

ಮೃತರನ್ನು ಸರೋಜ್ ತಿವಾರಿ (50), ಅವರ ಮಗ ಲಕ್ಕಿ (27) ಮತ್ತು ಮಗಳು ಶಿವಾಂಗಿ (25) ಎಂದು ಗುರುತಿಸಲಾಗಿದೆ. ಮನೆಯ ಪ್ರತ್ಯೇಕ ಕೊಠಡಿಗಳಲ್ಲಿ ಮೂವರ ಶವಗಳು ಪತ್ತೆಯಾಗಿವೆ. ವಿಷಯ ತಿಳಿಯುತ್ತಿದ್ದಂತೆ ಪೊಲೀಸರು ಹಾಗೂ ವಿಧಿವಿಜ್ಞಾನ ಪ್ರಯೋಗಾಲಯದ (FSL) ತಂಡ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದೆ. ಘಟನಾ ಸ್ಥಳದಿಂದ ಅಗತ್ಯ ಸಾಕ್ಷ್ಯಗಳನ್ನು ಸಂಗ್ರಹಿಸಲಾಗಿದೆ.

ಮೊಬೈಲ್ ಪಿನ್ ಬರೆದಿದ್ದ ಚೀಟಿಯಿಂದ ಬಯಲಾದ ರಹಸ್ಯ

ತನಿಖೆ ನಡೆಸುತ್ತಿದ್ದ ಪೊಲೀಸರಿಗೆ ಲಕ್ಕಿ ವಾಸಿಸುತ್ತಿದ್ದ ಕೊಠಡಿಯ ಸಮೀಪ ಒಂದು ಚೀಟಿ ಸಿಕ್ಕಿದೆ. ಅದರಲ್ಲಿ ಮೊಬೈಲ್ ಫೋನ್‌ನ ಪಿನ್ ಸಂಖ್ಯೆಯನ್ನು ಬರೆಯಲಾಗಿತ್ತು. ಅದರ ಸಹಾಯದಿಂದ ಮೊಬೈಲ್ ತೆರೆದಾಗ ಇಂಗ್ಲಿಷ್‌ನಲ್ಲಿ ಬರೆಯಲಾಗಿದ್ದ ಆತ್ಮಹತ್ಯೆ ಪತ್ರ ಪತ್ತೆಯಾಗಿದೆ.

Also Read
APK ಫೈಲ್ ಡೌನ್‌ಲೋಡ್ ಎಡವಟ್ಟು: ಖಾತೆಯಿಂದ 10 ಲಕ್ಷ ರೂ. ಗುಳುಂ| APK File
ತಾಯಿ-ತಂಗಿಯ ಜಗಳದಿಂದ ಬೇಸತ್ತು ಇಬ್ಬರನ್ನೂ ಕೊಂದ ಮಗ

ಪೊಲೀಸರ ಪ್ರಕಾರ, ಗುರುವಾರ ಮಧ್ಯಾಹ್ನ ಸುಮಾರು 2.30ಕ್ಕೆ ಮನೆಗೆ ಮರಳಿದ್ದ ಲಕ್ಕಿಗೆ ತಾಯಿ ಮತ್ತು ತಂಗಿ ಜಗಳವಾಡುತ್ತಿರುವುದು ಕಂಡುಬಂದಿತ್ತು. ಅವರಿಬ್ಬರ ನಡುವಿನ ನಿರಂತರ ವಾಗ್ವಾದದಿಂದ ತೀವ್ರವಾಗಿ ಮಾನಸಿಕವಾಗಿ ನೊಂದಿದ್ದಾಗಿ ಆತ ಪತ್ರದಲ್ಲಿ ಬರೆದಿದ್ದಾನೆ ಎನ್ನಲಾಗಿದೆ.

ಮೊದಲು ತಾಯಿಯ ಮೇಲೆ, ನಂತರ ತಂಗಿಯ ಮೇಲೆ ಭಾರವಾದ ವಸ್ತುವಿನಿಂದ ತಲೆಗೆ ಹೊಡೆದು ಹಲ್ಲೆ ನಡೆಸಿದ್ದಾಗಿ ಪತ್ರದಲ್ಲಿ ಉಲ್ಲೇಖಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಇಬ್ಬರ ಸಾವಿನ ಬಳಿಕ ಮತ್ತೊಂದು ಕೊಠಡಿಗೆ ತೆರಳಿ ಲಕ್ಕಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

ಕುಟುಂಬದ ಪರಿಸ್ಥಿತಿಯ ಬಗ್ಗೆಯೂ ತನಿಖೆ

ಪೊಲೀಸರ ಮಾಹಿತಿ ಪ್ರಕಾರ, ಕುಟುಂಬದ ಮೂವರೂ ಆಟಿಸಂ ಸ್ಪೆಕ್ಟ್ರಮ್ ಡಿಸಾರ್ಡರ್‌ನಿಂದ ಬಳಲುತ್ತಿದ್ದರು ಎನ್ನಲಾಗಿದೆ. ಲಕ್ಕಿಗೆ ಖಾಯಂ ಉದ್ಯೋಗವಿರಲಿಲ್ಲ. ಆನ್‌ಲೈನ್ ವ್ಯವಹಾರ ನಡೆಸುತ್ತಿದ್ದರೂ ಅದರಿಂದ ಹೆಚ್ಚಿನ ಆದಾಯ ಬರುತ್ತಿರಲಿಲ್ಲ ಎಂದು ತಿಳಿದುಬಂದಿದೆ. ಕುಟುಂಬವು ನೆರೆಹೊರೆಯವರೊಂದಿಗೆ ಹೆಚ್ಚಿನ ಸಂಪರ್ಕ ಹೊಂದಿರಲಿಲ್ಲ. ಸಾಮಾಜಿಕ ಚಟುವಟಿಕೆಗಳಲ್ಲಿಯೂ ಭಾಗವಹಿಸುವುದು ಕಡಿಮೆಯಾಗಿತ್ತು. ಬಹುತೇಕ ಸಮಯವನ್ನು ಮನೆಯಲ್ಲಿಯೇ ಕಳೆಯುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಮನೆಯ ಸ್ವಚ್ಛತೆಯ ಕೊರತೆ, ಧೂಳು ಹಾಗೂ ಸುತ್ತಮುತ್ತ ಬೆಳೆದಿದ್ದ ಗಿಡಗಂಟಿಗಳು ಕುಟುಂಬದ ಪರಿಸ್ಥಿತಿಯ ಕುರಿತು ತನಿಖಾಧಿಕಾರಿಗಳ ಗಮನ ಸೆಳೆದಿವೆ. ಕುಟುಂಬದ ಆರ್ಥಿಕ ಮತ್ತು ಕೌಟುಂಬಿಕ ಹಿನ್ನೆಲೆಯನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.

Also Read
ರಾಮಾಯಣ ಚಿತ್ರಕ್ಕೆ ತಡೆ ಕೋರಿದವರಿಗೆ ಸುಪ್ರೀಂ ಶಾಕ್ ; ನಮ್ಮ ಸಮಯ ಹಾಳು ಮಾಡಬೇಡಿ ಎಂದ ನ್ಯಾಯಾಲಯ | Ramayana Movie
ತಾಯಿ-ತಂಗಿಯ ಜಗಳದಿಂದ ಬೇಸತ್ತು ಇಬ್ಬರನ್ನೂ ಕೊಂದ ಮಗ

ತಂದೆಯೂ ಕೆಲ ವರ್ಷಗಳ ಹಿಂದೆ ಆತ್ಮಹತ್ಯೆ

ಈ ಕುಟುಂಬದಲ್ಲಿ ಈ ಹಿಂದೆಯೂ ದುರಂತ ಸಂಭವಿಸಿತ್ತು. ಅನಾರೋಗ್ಯದಿಂದ ಬಳಲುತ್ತಿದ್ದ ಲಕ್ಕಿಯ ತಂದೆ ಕೆಲ ವರ್ಷಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡಿದ್ದರು ಎಂದು ತನಿಖೆಯಿಂದ ತಿಳಿದುಬಂದಿದೆ. ಸದ್ಯ ವಿಧಿವಿಜ್ಞಾನ ತಂಡವು ಮನೆಯ ಮೂರು ಕೊಠಡಿಗಳಿಂದ ಸಾಕ್ಷ್ಯಗಳನ್ನು ಸಂಗ್ರಹಿಸಿದೆ. ಮೃತರ ಸಂಬಂಧಿಕರಿಗೆ ಮಾಹಿತಿ ನೀಡಲಾಗಿದ್ದು, ಅವರು ಆಗಮಿಸಿದ ಬಳಿಕ ಮರಣೋತ್ತರ ಪರೀಕ್ಷೆ ನಡೆಸಲಾಗುತ್ತದೆ. ಆತ್ಮಹತ್ಯೆ ಪತ್ರ, ಮೊಬೈಲ್‌ನಲ್ಲಿರುವ ಮಾಹಿತಿ, ವಿಧಿವಿಜ್ಞಾನ ವರದಿ ಹಾಗೂ ಮರಣೋತ್ತರ ಪರೀಕ್ಷೆಯ ಫಲಿತಾಂಶಗಳ ಆಧಾರದ ಮೇಲೆ ಪೊಲೀಸರು ಮುಂದಿನ ತನಿಖೆ ಮುಂದುವರಿಸಿದ್ದಾರೆ.